ಬುಧವಾರ, ಸೆಪ್ಟೆಂಬರ್ 22, 2021
27 °C

ಲಾಕ್‌ಡೌನ್‌ ಬಳಿಕ ಬಿಡುಗಡೆ ಆಗುತ್ತಿರುವ ಮೊದಲ ಚಿತ್ರ ‘ಕಲಿವೀರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ ನಿರ್ಬಂಧ ಸಡಿಲಿಸಿ ಚಿತ್ರಮಂದಿರಗಳನ್ನು ತೆರೆಯಲು ಎರಡು ವಾರದ ಹಿಂದೆಯೇ ಸರ್ಕಾರ ಅನುಮತಿ ನೀಡಿದರೂ, ಹೊಸ ಚಿತ್ರಗಳಿಲ್ಲದ ಕಾರಣ ಚಿತ್ರಮಂದಿರಗಳು ಲಾಕ್‌ಡೌನ್‌ ಸ್ಥಿತಿಯಲ್ಲೇ ಇವೆ. ಪ್ರೇಕ್ಷಕರ ಸಂಖ್ಯೆ ನಿರ್ಬಂಧದಿಂದ ಆಗುವ ನಷ್ಟದ ಭೀತಿ ಹಾಗೂ ಕೋವಿಡ್‌ ಮೂರನೇ ಅಲೆಯ ಆತಂಕದ ನಡುವೆಯೇ ಕ್ರಮೇಣ ಹೊಸ ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ. ಈ ಸಾಲಿನಲ್ಲಿ ಮೊದಲನೇ ಚಿತ್ರವಾಗಿ ಆ.6ರಂದು ‘ಕಲಿವೀರ’ ತೆರೆಕಾಣಲಿದೆ.

ಈ ಹಿಂದೆ ‘ಕನ್ನಡ ದೇಶದೊಳ್’ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಅವಿ ಅವರು ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಆಟೊ ಚಾಲಕನಾಗಿ ಕೆಲಸ ಮಾಡುತ್ತಿದ್ದ ಏಕಲವ್ಯ ಎನ್ನುವವರು ಚಿತ್ರದ ನಾಯಕ. ‘ನಾಯಕ ಕಲಿ ಆದಿವಾಸಿ ಜನಾಂಗದವನು. ತನ್ನ ಸಮುದಾಯಕ್ಕೆ ಆಗುವ ಅನ್ಯಾಯದ ವಿರುದ್ಧ ಸಿಡಿದು ದ್ವೇಷ ತೀರಿಸಿಕೊಳ್ಳುವ ರೋಚಕ ಕಥಾಹಂದರವನ್ನು ಕಲಿವೀರ ಹೊಂದಿದೆ’ ಎನ್ನುತ್ತಾರೆ ನಿರ್ದೇಶಕ ಅವಿ. ಚಿತ್ರದಲ್ಲಿ ಪಾವನ ಗೌಡ ಹಾಗೂ ಚಿರಶ್ರೀ ಅಂಚನ್‌ ನಾಯಕಿಯರಾಗಿ ಅಭಿನಯಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವಿ, ‘ಎರಡನೇ ಲಾಕ್‌ಡೌನ್‌ ಬಳಿಕ ಮೊದಲ ಚಿತ್ರವಾಗಿ ಕಲಿವೀರ ಬಿಡುಗಡೆಯಾಗುತ್ತಿದೆ. ಮುಂದೆ ಸಾಲುಸಾಲು ಸಿನಿಮಾಗಳು ಬಿಡುಗಡೆಗೆ ಕಾದಿರುವ ಕಾರಣ ನಾವು ಮುಂಚಿತವಾಗಿ ಬಂದರೆ ಸ್ವಲ್ಪ ಕಾಲಾವಕಾಶ ಸಿಗುತ್ತದೆ, ಇನ್ನಷ್ಟು ಜನರನ್ನು ತಲುಪಬಹುದೆಂದು ಬೇಗ ಚಿತ್ರಬಿಡುಗಡೆ ಮಾಡುತ್ತಿದ್ದೇವೆ. ಮೊದಲಿಗೆ ಉತ್ತರ ಕರ್ನಾಟಕದಲ್ಲಿ ಮಾತ್ರ ಚಿತ್ರಬಿಡುಗಡೆಗೆ ನಿರ್ಧರಿಸಿದ್ದೆವು. ಇದೀಗ ರಾಜ್ಯದಾದ್ಯಂತ ಇರುವ 40ಕ್ಕೂ ಅಧಿಕ ಏಕಪರದೆ ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣಲಿದೆ. ಮುಂದೆ ಜನರ ಪ್ರತಿಕ್ರಿಯೆ ನೋಡಿಕೊಂಡು ಮತ್ತಷ್ಟು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ. ಚಿತ್ರಕಥೆಯಲ್ಲಿ ಹೊಸತನವಿದೆ. ದಾಂಡೇಲಿ ಕಾಡಿನಲ್ಲಿ 20 ದಿನ, ಶಿವಮೊಗ್ಗ, ಬೆಂಗಳೂರು, ಮುತ್ತತ್ತಿಯಂಥ ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣವಾಗಿದೆ. ಒಂದು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಈಗಾಗಲೇ ಹಿಂದಿ ಡಬ್ಬಿಂಗ್ ಹಕ್ಕು ಉತ್ತಮ ಬೆಲೆಗೆ ಮಾರಾಟವಾಗಿದೆ’ ಎಂದರು.

ನಿರ್ಮಾಪಕ ಕೆಎಂಪಿ ಶ್ರೀನಿವಾಸ್ ಮಾತನಾಡಿ, ‘ಏಕಲವ್ಯ ಅವರನ್ನು ಹಲವಾರು ವರ್ಷಗಳಿಂದ ನಾನು ನೋಡುತ್ತಿದ್ದೆ. ಆತನಲ್ಲಿ ಒಳ್ಳೆಯ ಕಲೆ, ಪ್ರತಿಭೆಯಿದ್ದರೂ ಪ್ರೋತ್ಸಾಹ ನೀಡುವವರಿದ್ದಿಲ್ಲ. ಆ ಕೆಲಸವನ್ನು ನಾನು ಮಾಡಿದ್ದೇನೆ. ಮುಂದೆ ಏನಾಗುತ್ತೋ ನೋಡೋಣ. ಪರಿಸ್ಥಿತಿ ಹೀಗೇ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಚಿತ್ರವನ್ನು ಎಷ್ಟು ದಿನ ಎಂದು ಬತ್ತಳಿಕೆಯಲ್ಲಿಟ್ಟುಕೊಂಡು ಕೂರಲು ಸಾಧ್ಯ. ಕಳೆದ ಮಾರ್ಚ್‌ನಲ್ಲೇ ಚಿತ್ರ ಬಿಡುಗಡೆಯಾಗಬೇಕಿತ್ತು. ಇನ್ನಷ್ಟು ದಿನ ಕಾಯದೆ ಚಿತ್ರ ಬಿಡುಗಡೆಗೆ ಧೈರ್ಯ ಮಾಡಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು