ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯವಾದವನ ಕಥೆ

Last Updated 13 ಸೆಪ್ಟೆಂಬರ್ 2019, 12:27 IST
ಅಕ್ಷರ ಗಾತ್ರ

ಹಲವು ದಿನಗಳ ಹಿಂದೆಯೇ ‘ಕಾಣದಂತೆ ಮಾಯವಾದನು’ ಚಿತ್ರ ಸೆಟ್ಟೇರಿತ್ತು. ಆದರೆ, ವಿವಿಧ ಕಾರಣಗಳಿಂದ ಥಿಯೇಟರ್‌ಗೆ ಬರಲು ತಡವಾಗಿತ್ತು. ಎಲ್ಲಾ ಅಡೆತಡೆ ದಾಟಿಕೊಂಡು ಈಗ ಚಿತ್ರಮಂದಿರದ ಮುಂದೆ ಪ್ರತ್ಯಕ್ಷವಾಗಲು ಚಿತ್ರತಂಡ ಸಿದ್ಧವಾಗಿದೆ.

ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ನಾಯಕ ಕೊಲೆಯಾಗುತ್ತಾನೆ. ಬಳಿಕ ಆತ್ಮವಾಗಿ ತೆರೆಯ ಮೇಲೆ ಏನೆಲ್ಲಾ ಚಮತ್ಕಾರ ಮಾಡುತ್ತಾನೆ ಎನ್ನುವುದೇ ಇದರ ಕಥಾಹಂದರ.

ಈ ಹಿಂದೆ ‘ಜಯಮ್ಮನ ಮಗ’ ಚಿತ್ರ ನಿರ್ದೇಶಿಸಿದ್ದ ವಿಕಾಸ್ ಈ ಸಿನಿಮಾ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ‘ದೊಡ್ಡ ಸ್ಟಾರ್‌ ನಟರ ಚಿತ್ರಗಳು ಥಿಯೇಟರ್‌ನಲ್ಲಿ ಮೊದಲ ವಾರವೇ ಉತ್ತಮ ಪ್ರದರ್ಶನ ಕಾಣುತ್ತವೆ. ಹಾಗಾಗಿ, ಆ ಚಿತ್ರಗಳ ನಿರ್ಮಾಪಕರು ಆರ್ಥಿಕವಾಗಿ ಸದೃಢರಾಗುತ್ತಾರೆ. ಸಣ್ಣ ಬಜೆಟ್‌ನ ಸಿನಿಮಾಗಳು ಕನಿಷ್ಠ ಮೂರು ವಾರಗಳ ಕಾಲ ಚಿತ್ರಮಂದಿರದಲ್ಲಿ ಉಳಿಯಬೇಕು. ಆಗಷ್ಟೇ ಲಾಭಗಳಿಸಲು ಸಾಧ್ಯ’ ಎಂದರು ವಿಕಾಸ್‌.

‘ಮಾಸ್ತಿಗುಡಿ’ ಚಿತ್ರದ ಶೂಟಿಂಗ್‌ ವೇಳೆ ಆಕಸ್ಮಿಕವಾಗಿ ಸಾವು ಕಂಡ ನಟ ಉದಯ್ ಅವರು ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರಂತೆ. ‘ಚಿತ್ರದ ಮೊದಲಾರ್ಧದವರೆಗೆ ಅವರೇ ನಟಿಸಿದ್ದಾರೆ. ದ್ವಿತೀಯಾರ್ಧದಲ್ಲಿ ಅವರ ಪಾತ್ರವನ್ನು ಭಜರಂಗಿ ಲೋಕಿ ಮುಂದುವರಿಸಿದ್ದಾರೆ’ ಎಂದು ವಿವರಿಸಿದರು.

ರಾಜ್ ಪತ್ತಿಪಾಟಿ ಈ ಚಿತ್ರ ನಿರ್ದೇಶಿಸಿದ್ದಾರೆ. ಕಥೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ. ಛಾಯಾಗ್ರಹಣಸುಜ್ಞಾನ್ ಅವರದು. ವಿಜಯ್ ಗುಮೆನೇನಿ ಸಂಗೀತ ಸಂಯೋಜಿಸಿದ್ದಾರೆ. ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್ ಹಾಗೂ ಪುಷ್ಪಾ ಸೋಮ್ ಸಿಂಗ್ ಬಂಡವಾಳ ಹೂಡಿದ್ದಾರೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.

ಸಿಂಧು ಲೋಕನಾಥ್ ಇದರ ನಾಯಕಿ. ಮತ್ತೊಂದು ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರಿಂದ ಅವರು ಸುದ್ದಿಗೋಷ್ಠಿಗೆ ಗೈರುಹಾಜರಾಗಿದ್ದರು. ಅಚ್ಯುತ್‌ ಕುಮಾರ್, ವಿನಯಪ್ರಸಾದ್, ಸುಚೇಂದ್ರ ಪ್ರಸಾದ್, ‘ಭಜರಂಗಿ’ ಲೋಕಿ, ಧರ್ಮಣ್ಣ, ಸೀತಾ ಕೋಟೆ, ಸನ್ನಿ ಮಹಿಪಾಲ್, ಬಾಬು ಹಿರಣ್ಣಯ್ಯ, ಹೊನ್ನವಳ್ಳಿ ಕೃಷ್ಣ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT