ನಗ್ತಾ ನಗ್ತಾ ಕನ್ನಡ್ ಕಲೀರಿ

7

ನಗ್ತಾ ನಗ್ತಾ ಕನ್ನಡ್ ಕಲೀರಿ

Published:
Updated:
Deccan Herald

‘ಕನ್ನಡ್‌ ಗೊತ್ತಿಲ್ಲ’

ಬೆಂಗಳೂರಿನಂಥ ಮಹಾನಗರಗಳಲ್ಲಿ ಇಂಥ ಮಾತುಗಳನ್ನು ಆಗೀಗ ಕೇಳುತ್ತಲೇ ಇರುತ್ತೇವೆ. ಕನ್ನಡದ ನೆಲದಲ್ಲಿಯೇ ಕನ್ನಡ್‌ ಗೊತ್ತಿಲ್ಲ ಎನ್ನುವ ಮಾತು ಕೆಲವೊಮ್ಮೆ ವಿನಯಪೂರ್ವಕವಾಗಿ, ಮತ್ತೊಮ್ಮೆ ಅಪರಾಧಿ ಪ್ರಜ್ಞೆಯಿಂದ ಹಾಗೆಯೇ ಧಿಮಾಕಿನಿಂದ ಹೇಳುವುದೂ ಇದೆ. ಈ ಎಲ್ಲ ಧ್ವನಿಯನ್ನೂ ಒಳಗೊಳ್ಳುವಂತೆ ಒಂದು ಕಥೆ ಹೆಣೆದು ತೆರೆಯ ಮೇಲೆ ತಂದರೆ ಹೇಗಿರುತ್ತದೆ? ಆರ್‌.ಜೆ. ಮಯೂರ ಅವರಿಗೆ ಬಂದಿದ್ದೂ ಇದೇ ಆಲೋಚನೆ. ಹೀಗೆ ಒಂದು ಶೀರ್ಷಿಕೆ ಹೊಳೆದಿದ್ದೇ ಒಂದೇ ವಾರದಲ್ಲಿ ಸ್ಕ್ರಿಪ್ಟ್‌ ಅನ್ನೂ ಸಿದ್ಧಮಾಡಿಬಿಟ್ಟರು. ಹರಿಪ್ರಿಯಾ ಅವರಿಗೆ ಈ ಹೆಸರು ಹೇಳಿದಾಗ ಟೈಟಲ್‌ ಕೇಳಿಯೇ ಫಿದಾ ಆಗಿ ನಟಿಸಲೂ ಒಪ್ಪಿಕೊಂಡರು. ಮತ್ತೊಂದಿಷ್ಟು ದಿನದೊಗಳಗೆ ನಿರ್ಮಾಪಕ ಕುಮಾರ ಕಂಠೀರವ ಜತೆಯಾದರು. 

ಹೀಗೆ ಹಲವು ಸಂಗತಿಗಳು ಏಕತ್ರ ಸಂಭವಿಸಿ, ಹಲವು ವ್ಯಕ್ತಿಗಳು ಏಕಬಿಂದುವಿನಲ್ಲಿ ಕೂಡಿದ ಫಲವಾಗಿ ‘ಕನ್ನಡ್ ಗೊತ್ತಿಲ್ಲ’ ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದೆ. ಇತ್ತೀಚೆಗೆ ಬೆಂಗಳೂರಿನ ಹೊರವಲಯದಲ್ಲಿ  ಚಿತ್ರೀಕರಣ ಸ್ಥಳಕ್ಕೆ ತಂಡ ಪತ್ರಕರ್ತರನ್ನು ಆಹ್ವಾನಿಸಿತ್ತು.

ಒಂದು ಹಂತದ ಚಿತ್ರೀಕರಣ ಮುಗಿಸಿ ಪತ್ರಕರ್ತರ ಎದುರು ಚಿತ್ರತಂಡ ಕೂತಾಗ ಮೊದಲು ಮಾತಿಗಿಳಿದಿದ್ದು ನಿರ್ದೇಶಕ ಮಯೂರ ರಾಘವೇಂದ್ರ ಅವರೇ. 

 ‘ಬೆಂಗಳೂರಿನಲ್ಲಿ ‘ಶಬ್ದ ಕನ್ನಡ್ ಗೊತ್ತಿಲ್ಲ’ ಎಂಬುದನ್ನು ತುಂಬ ಸಲ ಕೇಳಿಸಿಕೊಳ್ಳುತ್ತಲೇ ಇರುತ್ತೇವೆ. ಅದನ್ನೇ ಇಟ್ಟುಕೊಂಡು ಸಿನಿಮಾ ಮಾಡಹೊರಟಿದ್ದೇವೆ. ನೀವು ಯಾವುದೇ ರಾಜ್ಯದಲ್ಲಿ ಇರಿ, ಅಲ್ಲಿನ ಮಾತೃಭಾಷೆಗೆ ಗೌರವ ಕೊಡಿ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು ನಿರ್ದೇಶಕರು.

ನಿರ್ಮಾಪಕ ಕುಮಾರ ಕಂಠೀರವ ಅವರಿಗೂ ಈ ಚಿತ್ರದ ಶೀರ್ಷಿಕೆಯೇ ಮೊದಲು ಇಷ್ಟವಾಗಿದ್ದಂತೆ. ‘ಇಂದಿನ ಕನ್ನಡ ಭಾಷೆಯ ಸ್ಥಿತಿಯನ್ನು ಹೇಳುವ ಕಥೆ ಇದು. ಹಾಗಾಗಿಯೇ ತುಂಬ ಇಷ್ಟವಾಗಿ ಹಣ ಹೂಡಲು ಒಪ್ಪಿದೆ. ಕನ್ನಡ ಅಭಿಮಾನದಿಂದ ನಿರ್ಮಾಣ ಮಾಡುತ್ತಿದ್ದೇನೆ. ಮುಂದಿನದು ಜನರಿಗೆ ಬಿಟ್ಟಿದ್ದು’ ಎಂದರು.

‘ಚಿತ್ರದ ಕಥೆ ಮತ್ತು ಶೀರ್ಷಿಕೆ ಎರಡೂ ಇಂದಿನ ಪರಿಸ್ಥಿತಿಗೆ ಹೊಂದಿಕೊಳ್ಳುವ ಹಾಗಿದೆ. ನಿರ್ಮಾಪಕರನ್ನು ಮೊದಲ ಬಾರಿ ಭೇಟಿಯಾದಾಗ ಒಂದೇ ಒಂದು ಶಬ್ದ ಇಂಗ್ಲಿಷ್ ಬಳಸಲಿಲ್ಲ. ಒಳ್ಳೆಯ ಕಥೆಯ ಮೂಲಕ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎಂದು ಅವರು ಕನಸು ಕಂಡವರು.
ನಾವು ಪ್ಲ್ಯಾನ್ ಮಾಡಿದ ಹಾಗೆಯೇ ಸಿನಿಮಾ ಚೆನ್ನಾಗಿ ಬರುತ್ತಿದೆ. ಸದ್ಯದಲ್ಲಿಯೇ ಟ್ರೇಲರ್ ಲಾಂಚ್ ಮಾಡ್ತೀವಿ. ಕ್ಯಾರೆಕ್ಟರ್ ಇಂಟ್ರೊಡಕ್ಷನ್‌ ಮಾಡ್ತೀವಿ. ಉಪದೇಶ ಮಾಡುವುದಕ್ಕೆ ಹೊರಟಿಲ್ಲ. ಚಿತ್ರಮಂದಿರಕ್ಕೆ ಬರುವ ಜನರು ಖುಷಿಯಿಂದ ಎಂಜಾಯ್ ಮಾಡ್ಕೊಂಡು ಹೋಗ್ತಾರೆ’ ಎಂದರು ಹರಿಪ್ರಿಯಾ.

‘ಒಬ್ಬ ಪೋಲಿಯನ್ನು ಕರ್ಕೊಂಡೋಗಿ ಪೊಲೀಸ್ ಪಾತ್ರ ಮಾಡಿಸಿದ್ದಾರೆ. ಈ ಸಿನಿಮಾ ನೋಡಿದ ಮೇಲೆ ಸಾಕಷ್ಟು ಜನ ಕನ್ನಡದಲ್ಲಿ ಮಾತಾಡಿ ಎಂದು ಬೇರೆಯವರಿಗೆ ಹೇಳುತ್ತಾರೆ ಎಂಬ ನಂಬಿಕೆ ಇದೆ’ ಎಂದರು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಪವನ್‌. 

ಧರ್ಮಣ್ಣ ಕೂಡ ‘ಕನ್ನಡ್‌ ಗೊತ್ತಿಲ್ಲ’ ನೋಡಲು ಬರುವವರಿಗೆ ನಕ್ಕು ನಗಿಸಲು ಸಿದ್ಧರಾಗುತ್ತಿದ್ದಾರೆ. ‘ಎಲ್ಲ ಸಿನಿಮಾಗಳಲ್ಲಿ ನನ್ನ ಪಾತ್ರದ ಕುರಿತು ಮೊದಲೇ ಹೇಳಿಬಿಡುತ್ತಿದ್ದೆ. ಆದರೆ ಈ ಚಿತ್ರದಲ್ಲಿ ಪಾತ್ರದ ಕುರಿತು ಯಾವ ಸುಳಿವೂ ನೀಡಬಾರದು ಎಂದು ಖಡಾಖಂಡಿತವಾಗಿ ನಿರ್ದೇಶಕರು ಹೇಳಿಬಿಟ್ಟಿದ್ದಾರೆ. ಹಾಗಾಗಿ ಏನೂ ಹೇಳಲು ಸಾಧ್ಯವಾಗುತ್ತಿಲ್ಲ. ಆದರೆ ಕಾಮಿಡಿ ಜತೆಗೆ ಒಂದು ಸಸ್ಪೆನ್ಸ್‌ ಎಳೆಯೂ ಇದೆ ಎಂದು ಮಾತ್ರ ಹೇಳುತ್ತೇನೆ’ ಎಂದರು.

ಚಿತ್ರದ ಛಾಯಾಗ್ರಹಣ ಮತ್ತು ಸಂಕಲನದ ಜವಾಬ್ದಾರಿಯನ್ನು ಗಿರಿಧರ್ ದಿವಾನ್‌ ವಹಿಸಿಕೊಂಡಿದ್ದಾರೆ. ಎ.ಆರ್. ರೆಹಮಾನ್‌ ಗರಡಿಯಲ್ಲಿ ಪಳಗಿರುವ ನಕುಲ್‌ ಅಭ್ಯಂಕರ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯನ್ನು ತಂಡ ಹಾಕಿಕೊಂಡಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !