ಗುರುವಾರ , ಆಗಸ್ಟ್ 22, 2019
27 °C

ಕನ್ನಡ್‌ ಗೊತ್ತಿಲ್ಲ..

Published:
Updated:
Prajavani

ಅಣ್ಣಾವ್ರ ‘ಬಂಗಾರದ ಮನುಷ್ಯ’ ಚಿತ್ರ ನಾಡಿನಲ್ಲಿ ದೊಡ್ಡ ಬದಲಾವಣೆಗೆ ನಾಂದಿಹಾಡಿತು. ಎಷ್ಟೋ ಜನರು ತಮ್ಮ ಹಳ್ಳಿಗಳಿಗೆ ಮರಳಿ, ಪುನಃ ಕೃಷಿಯಲ್ಲಿ ತೊಡಗಿಕೊಂಡು ಕ್ರಾಂತಿ ಮಾಡಿರುವುದನ್ನು ಕೇಳಿದ್ದೇವೆ. ‘ಕನ್ನಡ್‌ ಗೊತ್ತಿಲ್ಲ’ ಸಿನಿಮಾ ಬಿಡುಗಡೆಯ ನಂತರ ನಾಡಿನಲ್ಲಿ ಅದೇ ರೀತಿಯಲ್ಲಿ ಬದಲಾವಣೆ ತರಲಿದೆ ಎನ್ನುವುದು ನಟಿ ಹರಿಪ್ರಿಯಾ ಅವರ ಆತ್ಮವಿಶ್ವಾಸದ ನುಡಿ.

ತೆರೆಗೆ ಬರಲು ಸಜ್ಜಾಗಿರುವ ‘ಕನ್ನಡ್‌ ಗೊತ್ತಿಲ್ಲ’ ಸಿನಿಮಾದಲ್ಲಿ ನಾಯಕಿಯಾಗಿರುವ ಅವರು, ಚಿತ್ರದ ಟ್ರೇಲರ್‌ ಬಿಡುಗಡೆಯ ನಂತರ ವಿಸ್ತೃತ ಮಾತಿಗೆ ಇಳಿದರು.

ಸಿನಿಮಾ ರಂಗಕ್ಕೆ ಕಾಲಿಟ್ಟ ಮೇಲೆ, ಹೊಸ ತಂಡದ ಜತೆಗೆ, ಹೊಸಬರ ಜತೆಗೂ ಕೆಲಸ ಮಾಡುತ್ತಾ ಬಂದಿದ್ದೇನೆ. ರೇಡಿಯೊ ಜಾಕಿಯಾಗಿದ್ದ ಮಯೂರ ರಾಘವೇಂದ್ರ ಅವರು ‘ಹೊಸಬರು ಸಿನಿಮಾ ಮಾಡಲು ಅವಕಾಶ ಕೇಳಿದರೆ ಅಂತಹವರ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಳ್ತೀರಾ’ ಎಂದು ಸಂದರ್ಶನವೊಂದರಲ್ಲಿ ಕೇಳಿದ್ದರು. ಆಗ ಖಂಡಿತಾ ಒಪ್ಪಿಕೊಳ್ಳುವೆ ಎಂದಿದ್ದೆ. ಅದನ್ನೇ ಮನಸಿನಲ್ಲಿ ಇಟ್ಟುಕೊಂಡು, ಕಥೆ ಸಿದ್ಧಪಡಿಸಿಕೊಂಡು ರಾಘವೇಂದ್ರ ಬಂದಾಗ, ನಾಯಕಿ ಪ್ರಧಾನ ಚಿತ್ರಗಳಾದ ‘ಡಾಟರ್‌ ಆಫ್‌ ಪಾರ್ವತಮ್ಮ’ ಮತ್ತು ‘ಸೂಜಿದಾರ’ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದೆ. ಇದೇನಪ್ಪಾ ಮತ್ತೆ ನಾಯಕಿ ಪ್ರಧಾನ ಮತ್ತೊಂದು ಚಿತ್ರ ಎನ್ನುವ ಅಳುಕು ಕಾಡಿತು. ಆದರೆ, ಕಥೆ ಕೇಳಿದ ನಂತರ, ಅಳುಕು–ಅಂಜಿಕೆ ಬಿಟ್ಟು, ಈ ಸಿನಿಮಾ ಬೇಗ ಶುರು ಮಾಡಿ ಎಂದಿದ್ದೆ ಎಂದು ನೆನಪಿಸಿಕೊಂಡರು.

ಸಿನಿಮಾದ ಕಥೆಯೇ ಪಾತ್ರಗಳಿಗೆ ಬೇಕಾದ ಕಲಾವಿದರನ್ನು ಗುರುತಿಸಿಕೊಳ್ಳುತ್ತದೆ. ಹಾಗೆಯೇ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಈ ಸಿನಿಮಾವನ್ನು ಬೇರೆ ಯಾರೋ ನಿರ್ಮಿಸಬೇಕಾಗಿತ್ತು. ಈಗ ಸೂಕ್ತ ವ್ಯಕ್ತಿಯೇ ಅದನ್ನು ನಿರ್ಮಿಸಿದ್ದಾರೆ. ನನ್ನ ಸಿನಿ ಜರ್ನಿಯಲ್ಲಿ ಇಂತಹ ಫ್ಯಾಷನೇಟ್‌ ಆದ ನಿರ್ಮಾಪಕರನ್ನು ನೋಡಿಯೇ ಇರಲಿಲ್ಲ ಎಂದು ನಿರ್ಮಾಪಕ ಕುಮಾರ ಕಂಠೀರವ ಬಗ್ಗೆ ಮೆಚ್ಚುಗೆ ಮಾತು ಹೇಳುವುದನ್ನು ಹರಿಪ್ರಿಯಾ ಮರೆಯಲಿಲ್ಲ.

ಟೀಸರ್‌ ಬಿಡುಗಡೆ ಮಾಡಿದ ನಿರ್ದೇಶಕ ಸಂತೋಷ್‌ ಆನಂದರಾಮ್‌, ಕನ್ನಡ ಗೊತ್ತಿರುವವರು ಕನ್ನಡ ಗೊತ್ತಿಲ್ಲವೆಂಬಂತೆ ನಟಿಸುವುದು ದುಪ್ಪಟ್ಟು ಅಪರಾಧ ಎಸಗಿದಂತೆ. ಕನ್ನಡವನ್ನು ನಾವು ಬಿಟ್ಟುಕೊಡದೇ ಹೊರತು, ಹೊರಗಿನವರು ಬಂದು ಈ ಭಾಷೆಯನ್ನು ಸಾಯಿಸಲು ಸಾಧ್ಯವಿಲ್ಲ. ನಾವು ಮೊದಲು ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಅಂತಹ ಒಳ್ಳೆಯ ಸಂದೇಶವನ್ನು ಈ ಸಿನಿಮಾ ತಂಡ ನೀಡಲು ಹೊರಟಿದೆ ಎಂದು ಪ್ರಶಂಸಿಸಿದರು.

ರೇಡಿಯೊ ಜಾಕಿ ವೃತ್ತಿಗೆ ವಿದಾಯ ಹೇಳಿ, ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿರುವ ಮಯೂರ ರಾಘವೇಂದ್ರ, ಕಥೆ–ಚಿತ್ರಕಥೆಯನ್ನೂ ಹೆಣೆದಿದ್ದಾರೆ. ‘ಇದೊಂದು ವಿಶಿಷ್ಟ ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆಯ ಸಿನಿಮಾ. ನಾಯಕಿ ಪ್ರಧಾನ ಸಿನಿಮಾ, ಹಾಗಾದರೆ, ನಾಯಕ ಯಾರು? ಅಥವಾ ನಾಯಕನೇ ಇಲ್ಲವೇ ಎಂದು ಕೆಲವರು ಕೇಳಿದ್ದುಂಟು. ಆದರೆ, ಈ ಸಿನಿಮಾದಲ್ಲಿ ಕನ್ನಡವೇ ನಾಯಕ. ಚಿತ್ರದ ಶೀರ್ಷಿಕೆಗೆ ‘ಕಣ ಕಣದಲ್ಲಿ ಕನ್ನಡ’ ಎನ್ನುವ ಅಡಿಬರಹ ನೀಡಿದ್ದೇವೆ. ಅತೀ ಶೀಘ್ರದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತೇವೆ’ ಎಂದರು.

‘ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ 15 ಮಂದಿ ಉದ್ಯೋಗಿಗಳು ಇದ್ದೆವು. ಆದರೆ, ಅವರಲ್ಲಿ 14 ಮಂದಿಗೆ ಕನ್ನಡ ಗೊತ್ತಿರಲಿಲ್ಲ. ಅವರು ನಮ್ಮ ಭಾಷೆ ಬಗ್ಗೆ ಅನಾದರ ತೋರುವುದನ್ನು ಕಂಡಿದ್ದೆ. ಇದನ್ನು ಹೇಗಾದರೂ ಮಾಡಿ, ನಿಲ್ಲಿಸಬೇಕು, ಜನರಲ್ಲಿ ಜಾಗೃತಿ ಮೂಡಿಸಬೇಕು. ಅಂತಹ ಸಂದೇಶವನ್ನು ಇಡೀ ಜನ ಸಮೂಹಕ್ಕೆ ತಲುಪಿಸಬೇಕೆಂದು ಸಿನಿಮಾ ಮಾಡಲು ನಿರ್ಧರಿಸಿದ್ದೆ. ಆಗ ಹೊಳೆದದ್ದು ಚಿತ್ರದ ಟೈಟಲ್‌ ‘ಕನ್ನಡ್‌ ಗೊತ್ತಿಲ್ಲ’. ಅದನ್ನು ಒಂದು ಕಡೆ ಬರೆದಿಟ್ಟು, ನಂತರ ಅದಕ್ಕೆ ಬೇಕಾದ ಕಥೆ ಸಿದ್ಧಪಡಿಸಿದೆ’ ಎಂದು ಚಿತ್ರದ ಕಥೆ ಹುಟ್ಟಿದ ಕ್ಷಣವನ್ನು ಅವರು ಮೆಲುಕು ಹಾಕಿದರು.

ರೋಹಿತ್‌ ಪದಕಿ ಸಂಭಾಷಣೆ ಹೊಸೆದಿದ್ದು, ನಕುಲ್‌ ಅಭ್ಯಂಕರ್‌ ಸಂಗೀತ ನಿರ್ದೇಶನ, ಗಿರಿಧರ್‌ ದಿವಾನ್‌ ಛಾಯಾಗ್ರಹಣ ನೀಡಿದ್ದಾರೆ.

Post Comments (+)