ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ

ಆರ್‌ಪಿಐ ಅಧ್ಯಕ್ಷ ಪ್ರಕಾಶ ಅಂಬೇಡ್ಕರ್‌ ಹೇಳಿಕೆ
Last Updated 5 ಮೇ 2018, 12:30 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ಸಣ್ಣ ಪಕ್ಷಗಳ ನಾಯಕರನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತ ರಾಜಕೀಯದಲ್ಲಿ ಭೀತಿಯ ವಾತಾವರಣ ನಿರ್ಮಾಣ ಮಾಡಿದೆ. ಆದ್ದರಿಂದ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ರೂಪಿಸುತ್ತಿದ್ದೇವೆ’ ಎಂದು ಭಾರತೀಯ ರಿಪಬ್ಲಿಕ್‌ ಪಕ್ಷ (ಆರ್‌ಪಿಐ)ದ ಅಧ್ಯಕ್ಷ ಪ್ರಕಾಶ ಅಂಬೇಡ್ಕರ್‌ ತಿಳಿಸಿದರು.

‘ಕರ್ನಾಟಕದ ಚುನಾವಣೆಯ ನಂತರ ಇದಕ್ಕೆ ಚಾಲನೆ ದೊರೆಯಲಿದೆ. ಬಿಜೆಪಿ–ಕಾಂಗ್ರೆಸ್‌ ಹೊರತಾದ ಜಾತ್ಯತೀತ ಪಕ್ಷಗಳು ಒಟ್ಟಾಗಿ ಹೊಸ ರಾಜಕೀಯ ಶಕ್ತಿಯನ್ನು ಹುಟ್ಟುಹಾಕುತ್ತೇವೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಮ್ಮ ವಿದೇಶಾಂಗ ನೀತಿ ದೇಶಕ್ಕೆ ಅಪಾಯ ತಂದೊಡ್ಡುತ್ತಿದೆ. ದೇಶದ ಪ್ರಗತಿಯ ಬಗ್ಗೆ ಚಿಂತಿಸುವ ಬದಲು ಪ್ರಧಾನಿ ಮೋದಿ ಅವರು ಕರ್ನಾಟಕದ ಚುನಾವಣೆಯಲ್ಲಿ ತಲ್ಲೀನರಾಗಿದ್ದಾರೆ’ ಎಂದು ಟೀಕಿಸಿದರು.

‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮೊಹ್ಮದ ಅಲಿ ಜಿನ್ನಾ ಅವರ ಹೆಸರು ಹೇಳುವ ಮೂಲಕ ಕೋಮುವಾದ ಸೃಷ್ಟಿಗೆ ಯತ್ನಿಸುತ್ತಿದ್ದಾರೆ. ಜಿನ್ನಾ ವ್ಯಕ್ತಿ ಅಲ್ಲ, ಪಾಕಿಸ್ತಾನದ ರಾಷ್ಟ್ರಪಿತ ’ ಎಂದು ಅವರು ಹೇಳಿದರು.

‘ಆರ್‌ಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಜೆಡಿಎಸ್‌ ರಾಜ್ಯದಲ್ಲಿ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತಿತ್ತು. ಮಾಯಾವತಿ ಅವರ ಶಕ್ತಿ ಕುಂದಿದ್ದು, ಬಿಎಸ್‌ಪಿಯೊಂದಿಗಿನ ಹೊಂದಾಣಿಕೆ ಜೆಡಿಎಸ್‌ಗೆ ಲಾಭ ತಂದುಕೊಡುವುದಿಲ್ಲ’ ಎಂದರು.

‘ಇಂದಿರಾ ಗಾಂಧಿ ಅವರು ಸಂವಿಧಾನಬದ್ಧವಾಗಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಆದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೆ ತಂದಿದ್ದಾರೆ. ಈ ತುರ್ತು ಪರಿಸ್ಥಿತಿ ಹಣಕಾಸು ವಲಯದಲ್ಲಿಯೂ ಜಾರಿಯಾಗಿದೆ. ಬ್ಯಾಂಕ್‌ನಲ್ಲಿ ಜನರು ಇಟ್ಟ ಹಣ ವಾಪಸ್ಸು ಸಿಗದ ಸ್ಥಿತಿ ತಲೆದೋರಿದೆ’ ಎಂದರು.

‘ಆರ್‌ಪಿಐ ಮತ್ತು ಸಹಯೋಗಿ ಪಕ್ಷಗಳ 24 ಅಭ್ಯರ್ಥಿಗಳನ್ನು ರಾಜ್ಯದಲ್ಲಿ ಕಣಕ್ಕಿಳಿಸಲಾಗಿದೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾದರೂ, ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರ ರಚನೆ ಸಾಧ್ಯವಿಲ್ಲ. ಹೀಗಾಗಿ ನಾವು ಯಾರಿಗೆ ಬೆಂಬಲ ನೀಡಬೇಕು ಎಂಬ ಪ್ರಶ್ನೆ ಉದ್ಭವಿಸಲ್ಲ’ ಎಂದರು.

‘ಕಲಬುರ್ಗಿ ಗ್ರಾಮೀಣದಲ್ಲಿ ಎಡಪಕ್ಷಗಳ ಅಭ್ಯರ್ಥಿ ಮಾರುತಿ ಮಾನ್ಪಡೆ, ಆರ್‌ಪಿಐನಿಂದ ಹುಮನಾಬಾದ್‌ನಲ್ಲಿ ಅಂಕುಶ, ಯಾದಗಿರಿಯಲ್ಲಿ ಈರಪ್ಪ, ಕಲಬುರ್ಗಿ ದಕ್ಷಿಣದಲ್ಲಿ ಸೈಯದ್‌ ಅಬ್ದುಲ್‌ ಬಾರಿ ಅವರು ಸ್ಪರ್ಧಿಸಿದ್ದಾರೆ’ ಎಂದರು. ಮಾರುತಿ ಮಾನ್ಪಡೆ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT