ಚಂದನವನದ ತೆರೆಗಳಲ್ಲಿ ಸ್ಟಾರ್ ನಟರ ಸಿನಿಮಾಗಳಿಲ್ಲ ಎನ್ನುವಾಗಲೇ ‘ದುನಿಯಾ’ ವಿಜಯ್ ನಟನೆಯ ‘ಭೀಮ’ ಸಿನಿಮಾ ತೆರೆಕಂಡಿದೆ. ಇಂದು(ಆಗಸ್ಟ್ 9) ‘ಭೀಮ’ ಸೇರಿ ನಾಲ್ಕು ಸಿನಿಮಾಗಳು ತೆರೆಕಾಣುತ್ತಿವೆ.
ಭೀಮ: ‘ಸಲಗ’ ಸಿನಿಮಾ ಮೂಲಕ ನಿರ್ದೇಶಕನಾಗಿ ತೆರೆಯಲ್ಲಿ ಮಿಂಚಿದ ‘ದುನಿಯಾ’ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ‘ಭೀಮ’. ಸೆಟ್ಟೇರಿದ ಎರಡು ವರ್ಷಗಳ ಬಳಿಕ ಸಿನಿಮಾ ತೆರೆಕಾಣುತ್ತಿದೆ. ರೌಡಿಸಂ, ಮಾದಕ ವಸ್ತು, ಪ್ರೀತಿ ಹೀಗೆ ಹಲವು ವಸ್ತು ವಿಷಯಗಳನ್ನು ಇಟ್ಟುಕೊಂಡು ಚಿತ್ರದ ಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ‘ಭೀಮ’ನಿಗೆ ಜೋಡಿಯಾಗಿ ಅಶ್ವಿನಿ ನಟಿಸಿದ್ದು, ರಂಗಾಯಣ ರಘು, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ, ಕಲ್ಯಾಣಿ ಮತ್ತಿತರರು ತಾರಾಬಳಗದಲ್ಲಿದ್ದಾರೆ. ಮಾಸ್ತಿ ಸಂಭಾಷಣೆ ಚಿತ್ರಕ್ಕಿದ್ದು, ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಪ್ರಸಾದ್ ವಶಿಷ್ಠ, ಪ್ರಿಯಾಂಕ
ಕಬಂಧ
ಕುಂಜಾರ ಫಿಲಂಸ್ ಲಾಂಛನದಲ್ಲಿ ಸಿದ್ಧಗೊಂಡಿರುವ ಈ ಸಿನಿಮಾವನ್ನು ಸತ್ಯನಾಥ್ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಕಿಶೋರ್, ಪ್ರಸಾದ್ ವಶಿಷ್ಠ, ಪ್ರಿಯಾಂಕ ಮುಖ್ಯಭೂಮಿಕೆಯಲ್ಲಿದ್ದಾರೆ. ‘ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ಪ್ರಕರಣವೊಂದನ್ನು ಬಳಸಿಕೊಂಡು ಒಂದಷ್ಟು ಹಾರರ್ ರೂಪಕೊಟ್ಟು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ವ್ಯವಸಾಯದಲ್ಲಿಯೂ ಸಮಸ್ಯೆಗಳು ಹಲವು ವರ್ಷಗಳಿಂದ ಇವೆ. ಇಂತಹ ವಿಚಾರ, ವಿಷಯಗಳನ್ನು ಹೆಕ್ಕಿ ಮನರಂಜನೆ ಮೂಲಕ ಕಥೆ ಹೇಳಿದ್ದೇನೆ’ ಎಂದಿದ್ದಾರೆ ನಿರ್ದೇಶಕರು. ಅವಿನಾಶ್, ನಿರ್ದೇಶಕ ಯೋಗರಾಜ್ ಭಟ್, ವಂದನ, ವಚನ, ವಿಶಾಲ್, ನಾಗಾರ್ಜುನ ಸ್ವಾಮಿ, ಚಂದ್ರು, ಛಾಯಾಶ್ರೀ, ಪ್ರಶಾಂತ್ ಸಿದ್ದಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದು ಎಂಥಾ ಲೋಕವಯ್ಯಾ
ಸಿತೇಶ್ ಸಿ ಗೋವಿಂದ್ ನಿರ್ದೇಶನದ ಈ ಚಿತ್ರ ಕರ್ನಾಟಕ ಮತ್ತು ಕೇರಳ ಗಡಿಯಲ್ಲಿನ ಹಳ್ಳಿಗಳಲ್ಲಿ ನಡೆಯುವ ಕಥೆ ಹೊತ್ತು ಬಂದಿದೆ. ಈ ಚಿತ್ರವನ್ನು ಮಲಯಾಳ ನಿರ್ದೇಶಕ ಜಿಯೋ ಬೇಬಿ ಪ್ರಸ್ತುತಪಡಿಸುತ್ತಿದ್ದಾರೆ. ಕಡ್ಲೆಕಾಯಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ದೇಶಕನಾಗಿ ಸಿತೇಶ್ ಅವರಿಗೆ ಇದು ಮೊದಲ ಸಿನಿಮಾ. ಅನುರಾಜ್ ಕಕ್ಯಪದವ್, ಮೈತ್ರಿ, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಸುಕನ್ಯಾ, ವಿಶ್ವನಾಥ್ ಅಸೈಗೋಳಿ, ಚಂದ್ರಹಾಸ ಉಳ್ಳಾಲ್, ದೀಪಕ್ ರೈ, ಪ್ರಕಾಶ್ ತುಮ್ಮಿನಾಡ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಜೀನಿಯಸ್ ಮುತ್ತ
ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ಪತ್ನಿ ನಾಗಿಣಿ ಭರಣ ನಿರ್ದೇಶನದ ಚಿತ್ರವಿದು. ಇದು ಇವರ ನಿರ್ದೇಶನದ ಚೊಚ್ಚಲ ಸಿನಿಮಾ. ಜಿ.ಎಸ್. ಲತಾ ಜೈಪ್ರಕಾಶ್ ನಿರ್ಮಾಣದ ಈ ಚಿತ್ರದಲ್ಲಿ ‘ಜೀನಿಯಸ್ ಮುತ್ತ’ನಾಗಿ ಶ್ರೇಯಸ್ ಜೈಪ್ರಕಾಶ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ವಿಜಯ ರಾಘವೇಂದ್ರ ನಟಿಸಿದ್ದಾರೆ. ಟಿ.ಎಸ್.ನಾಗಾಭರಣ, ಗಿರಿಜಾ ಲೋಕೇಶ್, ಸುಂದರರಾಜ್, ಪನ್ನಗಾಭರಣ ಮುಂತಾದವರು ತಾರಾಬಳಗದಲ್ಲಿದ್ದಾರೆ.
ನಾಗಿಣಿ ಭರಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.