ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರನಿದ್ರೆಗೆ ಜಾರಿದ ‘ಚಿರು’, ಮಗುವಿನ ನಿರೀಕ್ಷೆಯಲ್ಲಿದ್ದ ಮೇಘನಾ–ಚಿರು ಜೋಡಿ

Last Updated 7 ಜೂನ್ 2020, 19:31 IST
ಅಕ್ಷರ ಗಾತ್ರ

ಚಿರಂಜೀವಿ ಸರ್ಜಾ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ಪಾಲಿಗೆ ‘ಚಿರು’ ಎಂದೇ ಚಿರಪರಿಚಿತ. ಅವರ ತಾತ, ಅಪ್ಪ, ಮಾವ, ಅತ್ತೆ, ಸೋದರ ಎಲ್ಲರೂ ಕನ್ನಡ ಚಿತ್ರರಂಗಕ್ಕೆ ದುಡಿದವರೇ. ಸಿನಿಮಾ ಕುಟುಂಬದಲ್ಲಿಯೇ ಜನಿಸಿ, ಸಿನಿಮಾದೊಂದಿಗೆ ಬೆಳೆದು, ಸಿನಿಮಾದಲ್ಲಿ ನಟಿಸುತ್ತಿರುವ ಕಾಲದಲ್ಲೇ ತೀರಿಹೋದ ಚಿರು ಬಿಟ್ಟುಹೋಗಿರುವ ಮಧುರ ನೆನಪುಗಳಿಗೆ ಬರವಿಲ್ಲ. ಚಂದನವನದಲ್ಲಿ ಸದಾ ನೆನಪಿನಲ್ಲಿ ಉಳಿಯುವ ‘ಹಸನ್ಮುಖಿ ಮುಖ’ ಅವರದ್ದು.

ಚಿರು ಹುಟ್ಟಿದ್ದು ಬೆಂಗಳೂರಿನಲ್ಲಿಯೇ (1980ರ ಅಕ್ಟೋಬರ್ 17ರಂದು). ಬಾಲ್ಡ್‌ವಿನ್‌ ಬಾಲಕರ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಪದವಿ ಶಿಕ್ಷಣಗಾಗಿ ವಿಜಯ ಕಾಲೇಜಿಗೆ ಸೇರಿದರು. ಆದರೆ, ಅವರ ಮನಸ್ಸು ಸದಾ ಬಣ್ಣದಲೋಕದತ್ತಲೇ ತುಡಿಯುತ್ತಿತ್ತು. ಮನೆಯಲ್ಲಿದ್ದ ಸಿನಿಮಾದ ವಾತಾವರಣವೇ ಇದಕ್ಕೆ ಕಾರಣವಾಗಿತ್ತು. ತಾನು ಕೂಡ ಬೆಳ್ಳಿತೆರೆಯಲ್ಲಿ ಕೆಲಸ ಮಾಡಬೇಕೆಂದು ಸೋದರ ಮಾವ ಅರ್ಜುನ್‌ ಸರ್ಜಾ ಬಳಿ ಆಸೆ ತೋಡಿಕೊಂಡರು. ಕೊನೆಗೆ, ಅವರೊಟ್ಟಿಗೆ ನಾಲ್ಕು ವರ್ಷಗಳ ಕಾಲ ಸಹ ನಿರ್ದೇಶಕನಾಗಿ ದುಡಿದರು. ಅವರು ನಟನೆಯ ಪಟ್ಟುಗಳನ್ನು ಕಲಿತಿದ್ದು ಅಲ್ಲಿಯೇ.

ವಾಯುಪುತ್ರದಿಂದ ಆರಂಭ

ಚಿರು ಕ್ಯಾಮೆರಾ ಎದುರಿನ ನಟನೆಯ ಪಯಣ ಆರಂಭಿಸಿದ್ದು, ‘ವಾಯುಪುತ್ರ’ ಸಿನಿಮಾದ ಮೂಲಕ. ಇದು ತೆರೆಕಂಡಿದ್ದು2009ರಲ್ಲಿ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರೂ ಅವರಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಹೆಚ್ಚಿನ ಸದ್ದು ಮಾಡಲಿಲ್ಲ. ಆದರೆ, ಅವರ ನಟನೆಯು ಬಹುಬೇಗ ಸಿನಿಪ್ರಿಯರ ಮನ ಸೆಳೆಯಿತು. ಈ ಚಿತ್ರದ ಬಳಿಕ ಅವರು ‘ಗಂಡೆದೆ’ ಚಿತ್ರದಲ್ಲಿ ನಟಿಸಿದರು. ಈ ಸಿನಿಮಾವೂ ಅವರಿಗೆ ಅಷ್ಟೊಂದು ಖ್ಯಾತಿ ತಂದುಕೊಡಲಿಲ್ಲ. ಹಾಗೆಂದು ಅವರು ಸುಮ್ಮನೇ ಕೂರಲಿಲ್ಲ.

2010ರಲ್ಲಿ ತೆರೆಗೆ ಬಂದ ‘ಚಿರು’ ಸಿನಿಮಾ ಅವರೊಳಗಿನ ಪ್ರತಿಭೆಗೆ ಕನ್ನಡಿ ಹಿಡಿಯಿತು. ಆ ಚಿತ್ರದಲ್ಲಿನ ಮನೋಜ್ಞ ನಟನೆಯಿಂದಾಗಿ ಅವರು ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಲ್ಪಟ್ಟರು. ಅದಾದ ಬಳಿಕ ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸಿದರು. ಆರಂಭದಲ್ಲಿ ಅವರು ಲವ್‌ ಸ್ಟೋರಿ ಸಿನಿಮಾಗಳಲ್ಲಿ ನಟಿಸಿದ್ದು ಹೆಚ್ಚು. ಬಳಿಕ ಆ್ಯಕ್ಷನ್‌ ಜಾಡಿಗೆ ಹೊರಳಿದರು. ಸಾಫ್ಟ್‌ ಹಾಗೂ ಅಂಡರ್‌ ಫ್ಲೇ ಇರುವಂತಹ ಪಾತ್ರಗಳಲ್ಲಿಯೇ ನಟಿಸುತ್ತಿದ್ದ ಚಿರು, ಕಳೆದ ವರ್ಷ ‘ಸಿಂಗ’ ಸಿನಿಮಾದ ಮೂಲಕ ಹೈವೋಲ್ಟೇಜ್‌ನ ಪಾತ್ರದತ್ತಲೂ ಹೊರಳಿದರು. ಇದರಲ್ಲಿನ ಅವರ ಆ್ಯಂಗ್ರಿ ಯಂಗ್‌ಮನ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು. ಅವರು ನಟಿಸಿರುವ ‘ರಾಜಮಾರ್ತಾಂಡ’, ‘ರಣಂ’ ಸಿನಿಮಾಗಳು ಬಿಡುಗಡೆಯ ಹಂತದಲ್ಲಿವೆ.

ಸುದೀಪ್‌ ಜೊತೆಗೂ ನಟನೆ

ಅಯ್ಯಪ್ಪ ಪಿ. ಶರ್ಮ ನಿರ್ದೇಶನದ ‘ವರದನಾಯಕ’ ಸಿನಿಮಾ ತೆರೆಕಂಡಿದ್ದು 2013ರಲ್ಲಿ. ಇದರಲ್ಲಿ ನಟ ಸುದೀಪ್‌ ಜೊತೆಗೆ ಚಿರಂಜೀವಿ ಸರ್ಜಾ ಕೂಡ ನಟಿಸಿದ್ದರು. ‘ಹರಿ’ಯ ಪಾತ್ರದ ಮೂಲಕ ಗಮನ ಸೆಳೆದಿದ್ದರು.ಎರಡು ದಿನಗಳ ಹಿಂದೆ ‘ಧೀರಂ’ ಎನ್ನುವ ಹೊಸ ಚಿತ್ರಕ್ಕೆ ಸಹಿ ಹಾಕಿದ್ದರು. ನಾಳೆ ಆ ಚಿತ್ರದ ಇನ್ನಷ್ಟು ವಿವರಗಳ ಕುರಿತು ಮಾತುಕತೆ ನಿಗದಿಯಾಗಿತ್ತು.

ಗಣ್ಯರ ಭೇಟಿ

ಶಿವರಾಜ್ ಕುಮಾರ್, ದರ್ಶನ್, ಸುದೀಪ್, ಸುಮಲತಾ, ದುನಿಯಾ ವಿಜಯ್, ದ್ವಾರಕೀಶ್, ನಾಗತಿಹಳ್ಳಿ ಚಂದ್ರಶೇಖರ್‌, ರಾಕ್ ಲೈನ್ ವೆಂಕಟೇಶ್ ಮುಂತಾಗಿ ಚಿತ್ರರಂಗದ ಹಲವು ಗಣ್ಯರು ರಾತ್ರಿಯೇ ಅಂತಿಮ ದರ್ಶನ ಪಡೆದರು. ಚಿತ್ರನಟಿ ತಾರಾ ಕುಟುಂಬದ ಸದಸ್ಯರನ್ನು ಸಂತೈಸಿದರು.

ಚೆನ್ನೈಯಲ್ಲಿದ್ದ ಅರ್ಜುನ್‌ ಸರ್ಜಾ ಬೆಂಗಳೂರಿಗೆ ತಲುಪಿದಾಗ ರಾತ್ರಿ ತಡವಾಗಿತ್ತು. ಅವರು ಆಗಮಿಸಿದ ಬಳಿಕ ಕುಟುಂಬದ ಸದಸ್ಯರು ಅಂತ್ಯಸಂಸ್ಕಾರದ ಸ್ಥಳವನ್ನು ನಿರ್ಧರಿಸಿದರು.

ಮಗುವಿನ ನಿರೀಕ್ಷೆಯಲ್ಲಿದ್ದ ಮೇಘನಾ–ಚಿರು ಜೋಡಿ

ಕೆ.ಎಂ. ಚೈತನ್ಯ ನಿರ್ದೇಶನದ ‘ಆಟಗಾರ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ಒಟ್ಟಾಗಿ ನಟಿಸಿದ್ದರು. ಈ ಇಬ್ಬರದು ಹಲವು ವರ್ಷಗಳ ಗೆಳೆತನ. ಈ ಸ್ನೇಹ ಪ್ರೀತಿಗೆ ತಿರುಗಿತ್ತು. ಅಂದಹಾಗೆ ಮೇಘನಾ ಅವರು ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಸುಂದರರಾಜ್‌ ಮತ್ತು ಪ್ರಮೀಳಾ ಜೋಷಾಯ್‌ ಅವರ ಪುತ್ರಿ.

ಈ ಇಬ್ಬರ ಪ್ರೀತಿಯನ್ನು ಎರಡೂ ಕುಟುಂಬಗಳು ಒಪ್ಪಿಕೊಂಡಿದ್ದವು. ಹಾಗಾಗಿ, ಚಿರು ಮತ್ತು ಮೇಘನಾ 2017ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2018ರಲ್ಲಿ ಸಪ್ತಪದಿ ತುಳಿದಿದ್ದರು. ಸರ್ಜಾ ಕುಟುಂಬ ಆಂಜನೇಯನ ಭಕ್ತರು. ಹಾಗಾಗಿಯೇ, ಹಿಂದೂ ಸಂಪ್ರದಾಯದಂತೆ ಇಬ್ಬರ ವಿವಾಹ ನಡೆದಿತ್ತು. ಮತ್ತೊಂದು ದಿವಸ ಪ್ರಮೀಳಾ ಜೋಷಾಯ್ ಹಾಗೂ ಸುಂದರರಾಜ್ ಕುಟುಂಬದ ಕ್ರೈಸ್ತ ಸಂಪ್ರದಾಯದಂತೆ ಮದುವೆ ನೆರವೇರಿತ್ತು.

ಮೇಘನಾ ಈಗ ಐದು ತಿಂಗಳ ಗರ್ಭಿಣಿ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ದಂಪತಿ ಮಗುವಿನ ನಿರೀಕ್ಷೆಯಲ್ಲಿತ್ತು. ಇಂತಹ ಸಂಭ್ರಮದಲ್ಲಿ ಇದ್ದಾಗಲೇ ಚಿರು ಅವರ ಅಕಾಲಿಕ ಸಾವು ಸರ್ಜಾ ಮತ್ತು ಸುಂದರರಾಜ್‌ ಕುಟುಂಬವನ್ನು ದುಃಖದ ಮಡುವಿಗೆ ದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT