ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾರ್ಲಿಂಗ್‌ ಕೃಷ್ಣ ನಟನೆಯ ‘ದಿಲ್‌ಪಸಂದ್‌’ ನವೆಂಬರ್‌ 11ಕ್ಕೆ ತೆರೆಗೆ

Last Updated 12 ಸೆಪ್ಟೆಂಬರ್ 2022, 6:44 IST
ಅಕ್ಷರ ಗಾತ್ರ

ಈ ಬಾರಿ ವರ್ಷಾಂತ್ಯಕ್ಕೆ ಕನ್ನಡದ ಪ್ರೇಕ್ಷಕರಿಗೆ ಸಿನಿಮಾ ಹಬ್ಬ. ಈಗಾಗಲೇ ಸಾಲು ಸಾಲು ಕನ್ನಡ ಚಿತ್ರಗಳು ವರ್ಷಾಂತ್ಯದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಈ ಸಾಲಿಗೆ ಇನ್ನೆರಡು ಚಿತ್ರಗಳು ಸೇರ್ಪಡೆಯಾಗಿವೆ. ಡಾರ್ಲಿಂಗ್‌ ಕೃಷ್ಣ ನಟನೆಯ ‘ದಿಲ್‌ಪಸಂದ್‌’ ಹಾಗೂ ಶ್ರೇಯಸ್ ಕೆ. ಮಂಜು ನಟನೆಯ ‘ರಾಣ’ ಸಿನಿಮಾ ನವೆಂಬರ್‌ 11ಕ್ಕೆ ಬಿಡುಗಡೆಯಾಗಲಿವೆ.

ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ಅವರು ನಿರ್ಮಿಸಿರುವ ‘ದಿಲ್‌ಪಸಂದ್‌’ ಚಿತ್ರವನ್ನು ಶಿವತೇಜಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣ ಅವರಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಮೇಘ ಶೆಟ್ಟಿ ಬಣ್ಣಹಚ್ಚಿದ್ದಾರೆ. ಪ್ರೇಮಕಥೆಯೊಂದಿಗೆ, ಕೌಟುಂಬಿಕ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಬೆಂಗಳೂರಿನಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಚಿತ್ರವು ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದ್ದು, ಮಾಸಾಂತ್ಯಕ್ಕೆ ಟೀಸರ್ ಬಿಡುಗಡೆಯಾಗುವ ಸಾಧ್ಯತೆಯಿದೆ.

ಚಿತ್ರದಲ್ಲಿನ ನಾಲ್ಕು ಹಾಡುಗಳಿಗೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸಾಧು ಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಅರುಣಾ ಬಾಲರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಗುಜ್ಜಲ್ ಟಾಕೀಸ್ ಲಾಂಛನದಲ್ಲಿ ಗುಜ್ಜಲ್ ಪುರುಷೋತ್ತಮ್ ನಿರ್ಮಿಸಿರುವ, ನಂದಕಿಶೋರ್ ನಿರ್ದೇಶನದ ‘ರಾಣ’ ಸಿನಿಮಾ ಕೂಡಾ ಬಿಡುಗಡೆಗೆ ಸಜ್ಜಾಗಿದೆ. ಶ್ರೇಯಸ್‌ ಅವರಿಗೆ ಜೋಡಿಯಾಗಿ ಈ ಸಿನಿಮಾದಲ್ಲಿ ‘ಏಕ್‌ ಲವ್‌ ಯಾ’ ಖ್ಯಾತಿಯ ರೀಷ್ಮಾ ನಾಣಯ್ಯ ಬಣ್ಣಹಚ್ಚಿದ್ದಾರೆ.

ಆ್ಯಕ್ಷನ್‌ ಥ್ರಿಲ್ಲರ್ ಕಥಾಹಂದರದ ಈ ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿವೆ. ರವಿವರ್ಮ, ಚೇತನ್ ಡಿಸೋಜ ಡಿಫರೆಂಟ್ ಡ್ಯಾನಿ ಹಾಗೂ ಗಣೇಶ್ ಈ ದೃಶ್ಯಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನಿರ್ದೇಶನವಿದೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಇಮ್ರಾನ್ ಸರ್ದಾರಿಯಾ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ರಜನಿ ಭಾರದ್ವಾಜ್, ಅಶೋಕ್, ಗಿರಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಕುಮಾರ್, ನಯನ, ರಘು, ಮೋಹನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ರಾಣ ಚಿತ್ರದಲ್ಲಿ ರೀಷ್ಮಾ ನಾಣಯ್ಯ ಹಾಗೂ ಶ್ರೇಯಸ್‌
ರಾಣ ಚಿತ್ರದಲ್ಲಿ ರೀಷ್ಮಾ ನಾಣಯ್ಯ ಹಾಗೂ ಶ್ರೇಯಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT