ಕನ್ನಡ ಚಿತ್ರರಂಗದ ‘ಅಪ್ಪು’ ಖ್ಯಾತಿಯ ನಟ ಪುನೀತ್ ರಾಜ್ಕುಮಾರ್ (46) ಇನ್ನಿಲ್ಲ.. ನಟ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಅ.29ರಂದು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಶುಕ್ರವಾರ ಮತ್ತು ಶನಿವಾರ ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ಬೆಳಿಗ್ಗೆಯೇ ಕಂಠೀರವ ಸ್ಟುಡಿಯೊಗೆ ಪಾರ್ಥಿವ ಶರೀರ ತರಲಾಯಿತು. ಅಲ್ಲಿಯೇ ಅಪ್ಪುಗೆ ಅಂತಿಮ ವಿದಾಯ... ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
Close

ವಂದಿತಾ ಶರ್ಮಾ ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ News Podcast| ರಾತ್ರಿ ಸುದ್ದಿಗಳು, ಶುಕ್ರವಾರ, ಮೇ 27, 2022 ಭಾರತದಲ್ಲಿ ಗೋಧಿ ಕೊರತೆ ಇಲ್ಲ, ಬೇಕಾಬಿಟ್ಟಿ ರಫ್ತು ತಡೆಯಲು ನಿಷೇಧ ಹೇರಿಕೆ: ತೋಮರ್ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ವಿಸರ್ಜಿಸಿ: ಬಿಜೆಪಿ ಮುಖಂಡ ಎಚ್. ವಿಶ್ವನಾಥ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಎಫ್ಐಆರ್ ಪ್ಲೇ ಆಫ್ಸ್ ತಲುಪದ ಪಂಜಾಬ್ ಕಿಂಗ್ಸ್: ಶಿಖರ್ ಧವನ್ಗೆ ತಂದೆಯಿಂದ ಬಿತ್ತು ಒದೆ! ಎನ್ಸಿಬಿಯ ಮಾಜಿ ಅಧಿಕಾರಿ ಸಮೀರ್ ವಿರುದ್ಧ ಕ್ರಮಕ್ಕೆ ಕೇಂದ್ರ ಸೂಚನೆ ನೌಕಾಪಡೆ ಬಲಗೊಳಿಸುವುದು ಯಾವುದೇ ದೇಶದ ವಿರುದ್ಧವಲ್ಲ: ರಾಜನಾಥ ಸಿಂಗ್ ಈಗ ಶಾರುಖ್ ಖಾನ್ ನಿರಾಳರಾಗಿದ್ದಾರೆ: ವಕೀಲ ಮುಕುಲ್ ರೋಹಟಗಿ ಸಿಬಿಐ ಅಧಿಕಾರಿಗಳ ವಿರುದ್ಧ ಸ್ಪೀಕರ್ಗೆ ದೂರು ನೀಡಿದ ಸಂಸದ ಕಾರ್ತಿ ಚಿದಂಬರಂ ಆರ್ಯನ್ ಖಾನ್ ಅನುಭವಿಸಿದ ಮಾನಸಿಕ ಯಾತನೆಗೆ ಯಾರು ಹೊಣೆ: ಎನ್ಸಿಪಿ ಪ್ರಶ್ನೆ ದೆಹಲಿ ಗಲಭೆ: ಪೊಲೀಸರಿಗೆ ಪಿಸ್ತೂಲ್ ತೋರಿಸಿದ್ದ ವ್ಯಕ್ತಿಗೆ ಅದ್ದೂರಿ ಸ್ವಾಗತ News Podcast | ಮಧ್ಯಾಹ್ನದ ಸುದ್ದಿಗಳು, ಶುಕ್ರವಾರ, ಮೇ 27, 2022 ಇಸ್ಲಾಮಾಬಾದ್ ಗಲಭೆ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರಕರಣ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಹರಿಯಾಣ ಮಾಜಿ ಸಿಎಂ ಚೌಟಾಲಗೆ 4 ವರ್ಷ ಜೈಲು ಮುಂಬೈ ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಆರೋಪ ಮುಕ್ತ, ಎನ್ಸಿಬಿ ಚಾರ್ಜ್ಶೀಟ್ ತಂತ್ರಜ್ಞಾನಕ್ಕೆ ಬಡವರ ವಿರೋಧಿ ಹಣೆಪಟ್ಟಿ ಕಟ್ಟಿದ್ದ ಹಿಂದಿನ ಸರ್ಕಾರಗಳು: ಮೋದಿ ನಿಪ್ಪಾಣಿ: ಲಾರಿ –ಕಾರಿನ ನಡುವೆ ಅಪಘಾತ, ಸ್ಥಳದಲ್ಲೇ ನಾಲ್ವರು ಸಾವು ಶಿವಮೊಗ್ಗ: ಸರ್ಕಾರಿ ಶಾಲೆ ದಾಖಲಾತಿಗೆ ಮುಗಿಬಿದ್ದ ಜನ, 1200 ದಾಟಿದ ಮಕ್ಕಳ ಸಂಖ್ಯೆ ಧಾರವಾಡ: ಐದು ವರ್ಷಗಳಲ್ಲಿ ಬಸವರಾಜ ಹೊರಟ್ಟಿ ಆದಾಯ ದ್ವಿಗುಣ
- ವಂದಿತಾ ಶರ್ಮಾ ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ
- News Podcast| ರಾತ್ರಿ ಸುದ್ದಿಗಳು, ಶುಕ್ರವಾರ, ಮೇ 27, 2022
- ಭಾರತದಲ್ಲಿ ಗೋಧಿ ಕೊರತೆ ಇಲ್ಲ, ಬೇಕಾಬಿಟ್ಟಿ ರಫ್ತು ತಡೆಯಲು ನಿಷೇಧ ಹೇರಿಕೆ: ತೋಮರ್
- ಪಠ್ಯಪುಸ್ತಕ ಪರಿಷ್ಕರಣ ಸಮಿತಿ ವಿಸರ್ಜಿಸಿ: ಬಿಜೆಪಿ ಮುಖಂಡ ಎಚ್. ವಿಶ್ವನಾಥ್
- ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಎಫ್ಐಆರ್
- ಪ್ಲೇ ಆಫ್ಸ್ ತಲುಪದ ಪಂಜಾಬ್ ಕಿಂಗ್ಸ್: ಶಿಖರ್ ಧವನ್ಗೆ ತಂದೆಯಿಂದ ಬಿತ್ತು ಒದೆ!
- ಎನ್ಸಿಬಿಯ ಮಾಜಿ ಅಧಿಕಾರಿ ಸಮೀರ್ ವಿರುದ್ಧ ಕ್ರಮಕ್ಕೆ ಕೇಂದ್ರ ಸೂಚನೆ
- Home
- Entertainment
- cinema
- Kannada actor puneeth rajkumar health heart attack updates bengaluru live
ಪುನೀತ್ ರಾಜ್ಕುಮಾರ್ ಅಂತ್ಯ ಸಂಸ್ಕಾರ
ಅಪ್ಪು ಅಭಿಮಾನಿಗಳನ್ನು ಸ್ಥಳದಿಂದ ಚದುರಿಸಿದ ಪೊಲೀಸರು
ಅಪ್ಪು ನಿಧನದ ನೋವು ಅರಗಿಸಿಕೊಳ್ಳಲು ಆಗುತ್ತಿಲ್ಲ...
ಅಪ್ಪು ನಿಧನದ ನೋವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಮಗನನ್ನು ಕಳೆದುಕೊಂಡಂತಾಗಿದೆ...ಅಂತ್ಯಕ್ರಿಯೆ ಶಾಂತಿಯುತವಾಗಿ ನಡೆಯಲು ವ್ಯವಸ್ಥೆ ಮಾಡಿದ, ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು – ಶಿವರಾಜ್ಕುಮಾರ್, ನಟ
ಮಂಗಳವಾರದವರೆಗೂ ಅಪ್ಪು ಸಮಾಧಿ ಸ್ಥಳಕ್ಕೆ ಅಭಿಮಾನಿಗಳಿಗೆ ಇಲ್ಲ ಪ್ರವೇಶ
'ಮಂಗಳವಾರ ಹಾಲು–ತುಪ್ಪ ಬಿಡುವ ಕಾರ್ಯ ನಡೆಯಲಿದ್ದು, ಇದಾದ ಬಳಿಕ ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೊ ಒಳಗಡೆ ಪುನೀತ್ ಸಮಾಧಿ ನೋಡಲು ಅವಕಾಶ ನೀಡಲಾಗುವುದು. ಈ ಭಾರ ನಮ್ಮ ಕೊನೆಯವರೆಗೂ ಇರಲಿದೆ. ತಂದೆ ತಾಯಿಯನ್ನು ಇಷ್ಟಪಟ್ಟು ಅಪ್ಪು ಬೇಗ ಹೋಗಿದ್ದಾನೆ ಎನಿಸುತ್ತಿದೆ. ಅಭಿಮಾನಿಗಳ ಪ್ರೀತಿಗೆ ಏನೂ ಹೇಳಲು ಸಾಧ್ಯವಿಲ್ಲ. ಇದಕ್ಕಾಗಿಯೇ ಅಪ್ಪಾಜಿ ಅಭಿಮಾನಿ ದೇವರುಗಳು ಎಂದಿದ್ದರು.
ಅಪ್ಪಾಜಿ ನಿಧನರಾದ ಸಂದರ್ಭದಲ್ಲಿ ಜನರೇ ಕಂಠೀರವ ಸ್ಟುಡಿಯೊ ಒಳಗೆ ಹೋಗಿ ಕುಟುಂಬಸ್ಥರಿಗಿಂತ ಮೊದಲೇ ಹಾಲು–ತುಪ್ಪ ಬಿಟ್ಟಿದ್ದರು. ಮಣ್ಣನ್ನೂ ತೋಡಿದ್ದರು. ಹೀಗಾಗಿ ಈ ಬಾರಿ ಹಾಗೆ ಆಗಬಾರದು ಎಂದು ಕುಟುಂಬಸ್ಥರು ಹಾಲು–ತುಪ್ಪ ಬಿಟ್ಟ ಬಳಿಕ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು' ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದರು.
ಅಂತಿಮ ವಿಧಿವಿಧಾನ ನೆರವೇರಿಸಿದ ವಿನಯ್ ರಾಜ್ಕುಮಾರ್
ಅಂತಿಮ ವಿಧಿವಿಧಾನ ನೆರವೇರಿಸಿದ ವಿನಯ್ ರಾಜ್ಕುಮಾರ್
ಭೂಮಿ ತಾಯಿಯ ಮಡಿಲು ಸೇರಿದ ಗಂಧದ ಗುಡಿಯ 'ರಾಜಕುಮಾರ' ಪುನೀತ್
ಬೆಂಗಳೂರು: ಪೂರ್ವದಲ್ಲಿ ಸೂರ್ಯ ಉದಯಿಸುತ್ತಿರುವ ಹೊತ್ತಿನಲ್ಲೇ ಗಂಧದ ಗುಡಿಯ 'ರಾಜಕುಮಾರ' ಪುನೀತ್, ಭೂಮಿ ತಾಯಿಯ ಮಡಿಲಿನೊಳನೆ ಚಿರನಿದ್ರೆಗೆ ಜಾರಿದರು.
ಸರಳತೆಯ ಪ್ರತಿರೂಪದಂತಿದ್ದ ಪ್ರೀತಿಯ ಅಪ್ಪು, ಶ್ವೇತ ವಸ್ತ್ರಧಾರಿಯಾಗಿ ನಿಸ್ತೇಜವಾಗಿ ಮಲಗಿರುವುದನ್ನು ಕಂಡು ರಾಜ್ ಕುಟುಂಬ ಸದಸ್ಯರಲ್ಲಿ ಮಡುಗಟ್ಟಿದ್ದ ದುಃಖ ಕಣ್ಣೀರ ಧಾರೆಯಾಗಿ ಹರಿಯಿತು. ಸ್ಟುಡಿಯೊದ ಹೊರಗೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರೀತಿಯ ಅಪ್ಪು, ಭೌತಿಕವಾಗಿ ಇನ್ನೆಂದೂ ತನ್ನ ಜೊತೆ ಇರಲಾರ ಎಂಬುದನ್ನು ನೆನೆದು ಶಿವರಾಜ್ಕುಮಾರ್ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.
ಅಪ್ಪು ಇನ್ನು ನೆನಪು ಮಾತ್ರ...
ಬೆಂಗಳೂರು: ಮಾನವತೆಯ ಪಡಿಚ್ಚಿನಂತೆ ಬದುಕಿನುದ್ದಕ್ಕೂ ಜೀವಿಸಿದ ನಟ ಪುನೀತ್ ರಾಜ್ಕುಮಾರ್ ಇನ್ನು ನೆನಪು ಮಾತ್ರ.
ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದ ಅಪ್ಪು ಭಾನುವಾರ ಬೆಳಿಗ್ಗೆ ಭೂ ತಾಯಿಯ ಗರ್ಭ ಸೇರಿದರು.
ಅಪ್ಪ ಡಾ.ರಾಜ್ಕುಮಾರ್, ಅಮ್ಮ ಪಾರ್ವತಮ್ಮ ರಾಜ್ಕುಮಾರ್ ಅವರ ಮುದ್ದಿನ ಮಗ, ತಂದೆ ತಾಯಿಯೊಂದಿಗೆ ಕಂಠೀರವ ಸ್ಟುಡಿಯೊದಲ್ಲಿ ಚಿರ ನಿದ್ರೆಗೆ ಜಾರಿದರು.
ಮತ್ತೆ ಹುಟ್ಟಿ ಬನ್ನಿ ಅಪ್ಪು...
ಪ್ರಜಾವಾಣಿ FB Live: ರಾಜ್ ಕುಟುಂಬ ಸದಸ್ಯರಿಂದ ಅಪ್ಪುಗೆ ಅಂತಿಮ ನಮನ
ಬೆಂಗಳೂರು: ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಅವರ ಪತ್ನಿ ಮಂಗಳಾ, ಮಗ ಯುವ ರಾಜ್ಕುಮಾರ್, ಶ್ರೀಮುರಳಿ, ವಿಜಯ ರಾಘವೇಂದ್ರ ಸೇರಿದಂತೆ ರಾಜ್ ಕುಟುಂಬದ ಸದಸ್ಯರು ಪ್ರೀತಿಯ ಅಪ್ಪುಗೆ ಅಂತಿಮ ನಮನ ಸಲ್ಲಿಸಿದರು.
ಪಲ್ಲಕ್ಕಿಯಲ್ಲಿ ತಣ್ಣಗೆ ಮಲಗಿದ್ದ ಪುನೀತ್ಗೆ ಪೂಜೆ ಮಾಡುವ ವೇಳೆ ಮಡುಗಟ್ಟಿದ ದುಃಖ ಉಮ್ಮಳಿಸಿ ಬರುತ್ತಿತ್ತು.
ಪುನೀತ್ ಪತ್ನಿ ಅಶ್ವಿನಿ ಪುತ್ರಿಯರಿಬ್ಬರ ಕೈಗಳನ್ನು ಬಿಗಿಯಾಗಿ ಹಿಡಿದು ಧೈರ್ಯ ತುಂಬುತ್ತಿದ್ದರು.
ಬೆಳಕು ಮೂಡುವ ಮುನ್ನವೇ ಕಂಠೀರವ ಸ್ಟುಡಿಯೊಗೆ ಪುನೀತ್ ಪಾರ್ಥಿವ ಶರೀರ ತರಲಾಯಿತು
ಹೂವಿನ ಪಲ್ಲಕ್ಕಿಯಲ್ಲಿ ಪುನೀತ್
ಬೆಂಗಳೂರು: ಅಂತ್ಯ ಸಂಸ್ಕಾರದ ವೇಳೆ ಪುನೀತ್ ಪಾರ್ಥಿವ ಶರೀರವನ್ನು ಪಲ್ಲಕ್ಕಿಯಲ್ಲಿ ಇಟ್ಟು ವಿಧಿ ವಿಧಾನ ಪೂರೈಸಲಾಯಿತು. ಈ ದೃಶ್ಯ ಕಂಡು ಪುನೀತ್ ಪತ್ನಿ ಅಶ್ವಿನಿ ರೋಧಿಸುತ್ತಿದ್ದರು. ಪುತ್ರಿ ಧೃತಿ ಅಮ್ಮ ಹಾಗೂ ತಂಗಿಯ ಕೈಗಳನ್ನು ಬಿಗಿಯಾಗಿ ಹಿಡಿದು ಧೈರ್ಯ ತುಂಬುತ್ತಿದ್ದರು.
ಬಳಿಕ ಮೂವರೂ ಪುನೀತ್ ಮೃತದೇಹ ಇರಿಸಲಾಗಿದ್ದ ಪಲ್ಲಕ್ಕಿಯನ್ನು ಪ್ರದಕ್ಷಿಣೆ ಹಾಕಿ ಪೂಜೆ ಮಾಡಿದರು.
ಕಂಠೀರವ ಸ್ಟುಡಿಯೊದಲ್ಲಿ ಅಪ್ಪು ಅಂತ್ಯಕ್ರಿಯೆ
Video: ಸಕಲ ಸರ್ಕಾರಿ ಗೌರವಗಳೊಂದಿಗೆ ನಟ ಪುನೀತ್ ರಾಜ್ಕುಮಾರ್ ಅಂತಿಮ ನಮನ
ತ್ರಿವರ್ಣ ಧ್ವಜದ ಹಸ್ತಾಂತರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಪುನೀತ್ ಪತ್ನಿ ಅಶ್ವಿನಿ, ಪುತ್ರಿಯರಾದ ಧೃತಿ ಹಾಗೂ ವಂದಿತಾಗೆ ಹಸ್ತಾಂತರಿಸಿದರು.
ಕಂಠೀರವ ಸ್ಟುಡಿಯೊದಲ್ಲಿ ಮೌನದ ಕಣ್ಣೀರು: ಪುನೀತ್ ಅಂತ್ಯಕ್ರಿಯೆಗೆ ಕ್ಷಣಗಣನೆ
ಬೆಂಗಳೂರು: ಬೆಳಕು ಮೂಡುವ ಮುನ್ನವೇ ನಟ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಮುಗಿದಿದ್ದು, ಕೆಲವೇ ಕ್ಷಣಗಳಲ್ಲಿ 'ವೀರ ಕನ್ನಡಿಗ'ನ ಅಂತ್ಯಕ್ರಿಯೆ ನೆರವೇರಲಿದೆ.
ಇದಕ್ಕೆ ಕಂಠೀರವ ಸ್ಟುಡಿಯೊದಲ್ಲಿ ಸಕಲ ಸಿದ್ಧತೆಗಳು ನಡೆದಿವೆ.
ಈಡಿಗ ಸಮುದಾಯದ ಸಂಪ್ರದಾಯದಂತೆ ಪುನೀತ್ ವಿಧಿ ವಿಧಾನಗಳು ನಡೆಯುತ್ತಿದ್ದು, ರಾಘವೇಂದ್ರ ರಾಜ್ಕುಮಾರ್ ಅವರ ಹಿರಿಯ ಮಗ ವಿನಯ್ ವಿಧಿ ವಿಧಾನ ಪೂರೈಸಲಿದ್ದಾರೆ. ಕಂಠೀರವ ಸ್ಟುಡಿಯೊದಲ್ಲಿ ರಾಜ್ ಕುಟುಂಬದ ಸದಸ್ಯರು, ಆಪ್ತರು ಹಾಗೂ ಗಣ್ಯರಿಗಷ್ಟೇ ಪ್ರವೇಶ ಕಲ್ಪಿಸಲಾಗಿದೆ.
ಎರಡು ನಿಮಿಷಗಳ ಮೌನಾಚರಣೆಯ ಮೂಲಕ ಪುನೀತ್ಗೆ ಅಂತಿಮ ವಿದಾಯ
ಎರಡು ನಿಮಿಷಗಳ ಮೌನಾಚರಣೆಯ ಮೂಲಕ ಪುನೀತ್ಗೆ ಅಂತಿಮ ವಿದಾಯ
ಮೊಳಗಿದ ರಾಷ್ಟ್ರಗೀತೆ: ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ಗೆ ನಮನ
ಕಂಠೀರವ ಸ್ಟುಡಿಯೊದಲ್ಲಿ ಪೊಲೀಸ್ ಬ್ಯಾಂಡ್ಗಳಿಂದ ರಾಷ್ಟ್ರಗೀತೆ ಮೊಳಗಿಸಲಾಯಿತು. ಮೂರು ಸುತ್ತು ಗುಂಡು ಸಿಡಿಸುವ ಮೂಲಕ ಪುನೀತ್ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲಾಯಿತು.
ಕಂಠೀರವ ಸ್ಟುಡಿಯೊದಲ್ಲಿ ಅಪ್ಪುಗೆ ಅಂತಿಮ ನಮನ
ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಪುನೀತ್ ರಾಜ್ಕುಮಾರ್ ಅಂತಿಮ ವಿಧಿವಿಧಾನ ಕಾರ್ಯಗಳು ನಡೆಯುತ್ತಿವೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರಕ್ಕೆ ಮುತ್ತಿಟ್ಟು ಭಾವುಕರಾದರು.
ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಜನಸಾಗರ
ನಟ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಬರುತ್ತಿದ್ದಾರೆ. ಪುನೀತ್ ಅವರ ಪೋಸ್ಟರ್ ಹಿಡಿದು ಬರುತ್ತಿರುವ ಅಭಿಮಾನಿಗಳು ಅಪ್ಪು, ಅಪ್ಪು ಎಂದು ಘೋಷಣೆ ಕೂಗುತ್ತಿದ್ದಾರೆ.
ಪುನೀತ್ ಅಂತಿಮ ದರ್ಶನ ಪಡೆದ ನಟ ಗಣೇಶ್
ನಾನು ಪುನೀತ್ ಎರಡು ತಿಂಗಳ ಹಿಂದಷ್ಟೇ ಭೇಟಿಯಾಗಿದ್ದೆವು. ಪುನೀತ್ ಇಲ್ಲದ ಚಿತ್ರರಂಗ ಪವರ್ ಲೆಸ್ ಇದ್ದಂತೆ. ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ನಟ ಗಣೇಶ್ ತಿಳಿಸಿದರು.
ಅಂತಿಮ ದರ್ಶನ ಪಡೆದ ನಿರ್ದೇಶಕ, ನಟ ರಿಷಭ್ ಶೆಟ್ಟಿ
ಅಂತಿಮ ದರ್ಶನ ಪಡೆದ ನಿರ್ದೇಶಕ, ನಟ ರಿಷಭ್ ಶೆಟ್ಟಿ. ಪುನೀತ್ ಇಲ್ಲವೆನ್ನುವುದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಭಾವುಕರಾದ ರಿಷಭ್.
ಅಪ್ಪು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಟ ಟೆನಿಸ್ ಕೃಷ್ಣ
ನಟ ಟೆನಿಸ್ ಕೃಷ್ಣ ಅವರು ಕಂಠೀರವ ಕ್ರೀಡಾಂಗಣಕ್ಕೆ ತೆರಳಿ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಪುನೀತ್ ಪಾರ್ಥಿವ ಶರೀರದ ಅಂತಿಮ ಯಾತ್ರೆಗೆ ಸಜ್ಜಾಗಿರುವ ವಾಹನ
ಅಂತಿಮ ದರ್ಶನ ಪಡೆದ ನಟಿ, ಸಂಸದೆ ಸುಮಲತಾ, ನಟ ರಕ್ಷಿತ್ ಶೆಟ್ಟಿ
ಕಂಠೀರವ ಸ್ಟೇಡಿಯಂಗೆ ಬಂದ ಮಂಡ್ಯ ಸಂಸದೆ ಸುಮಲತಾ ಅವರು ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಪತ್ನಿ ಅಶ್ವಿನಿ ಅವರ ಬಳಿಗೆ ತೆರಳಿ ಸಾಂತ್ವನ ಹೇಳಿದರು. ಇದರೊಂದಿಗೆ ನಟ ರಕ್ಷಿತ್ ಶೆಟ್ಟಿ ಕೂಡ ಅಂತಿಮ ದರ್ಶನ ಪಡೆದರು.
ಅಪ್ಪನ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ಧೃತಿ
ಬೆಂಗಳೂರು: ಪುನೀತ್ ಪಾರ್ಥಿವ ಶರೀರ ಕಂಡು ಅವರ ಹಿರಿಯ ಪುತ್ರಿ ಧೃತಿ ಕಣ್ಣೀರಿಟ್ಟರು.
ಅಪ್ಪನ ತಲೆಯ ಮೇಲೆ ಕೈ ನೇವರಿಸಿದ ಅವರು ಬಿಕ್ಕಿ ಬಿಕ್ಕಿ ಅತ್ತರು ಈ ದೃಶ್ಯ ನೋಡುಗರ ಮನ ಕಲಕುವಂತಿತ್ತು.
ಪುನೀತ್ ಪತ್ನಿ ಅಶ್ವಿನಿ ಹಾಗೂ ಕಿರಿಯ ಪುತ್ರಿ ಕೂಡ ಗದ್ಗದಿತರಾದರು
ಕಂಠೀರವ ಕ್ರೀಡಾಂಗಣಕ್ಕೆ ಬಂದ ಪುನೀತ್ ಪುತ್ರಿ ಧೃತಿ
ಪುನೀತ್ ಪುತ್ರಿ ಧೃತಿ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ತಂದೆಯ ಅಂತಿಮ ದರ್ಶನ ಪಡೆದರು. ಈ ವೇಳೆ ತಂದೆಯನ್ನು ನೋಡಿ ಭಾವುಕರಾದರು. ತಾಯಿಯನ್ನು ಅಪ್ಪಿಕೊಂಡು ಇಬ್ಬರು ಪುತ್ರಿಯರು ಕಣ್ಣೀರು ಹಾಕಿದರು.
ಪುನೀತ್ ಅಂತಿಮ ದರ್ಶನ ಪಡೆದ ತೆಲುಗು ನಟ ವಿಕ್ಟರಿ ವೆಂಕಟೇಶ್
ಪುನೀತ್ ರಾಜ್ಕುಮಾರ್ ಅಂತಿಮ ದರ್ಶನ ಪಡೆದ ತೆಲುಗು ನಟ ವಿಕ್ಟರಿ ವೆಂಕಟೇಶ್.
ಪುನೀತ್ ನೆನೆದು ಭಾವುಕರಾದ ಮೆಗಾಸ್ಟಾರ್ ಚಿರಂಜೀವಿ
ತೆಲುಗು ಚಲನಚಿತ್ರ ರಂಗದ ಮೆಗಾಸ್ಟಾರ್ ಚಿರಂಜೀವಿ ಅವರು ನಟ ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಭಾವುಕರಾದರು.
ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿ 'ಪುನೀತ್ ಬಹಳ ಒಳ್ಳೆಯ ಹುಡುಗ. ಸರಳ ಜೀವಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಆತ ನಿಧನವಾದ ವಿಷಯ ತಿಳಿದು ಆಘಾತವಾಗಿದೆ' ಎಂದರು.
ಪುನೀತ್ ರಾಜ್ಕುಮಾರ್ ಅಂತಿಮ ದರ್ಶನ ಪಡೆಯಲು ಹರಿದುಬಂದ ಜನಸಾಗರ
ಅಂತಿಮ ದರ್ಶನ ಪಡೆದ ನಟ ಧ್ರುವ ಸರ್ಜಾ
ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಟ ಧ್ರುವ ಸರ್ಜಾ ಮತ್ತು ಪ್ರಶಾಂತ್ ಸಂಬರಗಿ.
ಅಂತಿಮ ದರ್ಶನಕ್ಕೆ ಬಂದ ನಟ ಡಾಲಿ ಧನಂಜಯ
ಪುನೀತ್ ರಾಜ್ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಕಂಠೀರವ ಕ್ರೀಡಾಂಗಣಕ್ಕೆ ಬಂದ ನಟ ಡಾಲಿ ಧನಂಜಯ.
ಪುನೀತ್ ನೆನೆದು ಕಣ್ಣೀರಿಟ್ಟ ಪ್ರಿಯಾಂಕ ಉಪೇಂದ್ರ
ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಕಣ್ಣೀರಿಟ್ಟ ಪ್ರಿಯಾಂಕ ಉಪೇಂದ್ರ
ಪುನೀತ್ ಅಂತಿಮ ದರ್ಶನ ಪಡೆದ ನಟಿ ರಮ್ಯಾ
ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನ ಪಡೆದ ನಟಿ ರಮ್ಯಾ. ಅಭಿ ಸಿನಿಮಾದಲ್ಲಿ ರಮ್ಯಾ, ಪುನೀತ್ ಅವರೊಂದಿಗೆ ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು.
ಅಪ್ಪು ಕುರಿತು ಸುದೀರ್ಘ ಬರಹ ಹಂಚಿಕೊಂಡ ಸುದೀಪ್
ಪುನೀತ್ ರಾಜ್ಕುಮಾರ್ ಅವರ ಸಾವಿನಿಂದ ಕನ್ನಡ ಚಿತ್ರ ಪ್ರಪಂಚಕ್ಕೆ ತುಂಬಲಾರದ ನಷ್ಟವಾಗಿದೆ. ಕಿಚ್ಚ ಸುದೀಪ್ ಅವರು ಅಪ್ಪು ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಅಪ್ಪು ಕುರಿತು ಟ್ವಿಟರ್ನಲ್ಲಿ ಸುದೀರ್ಘ ಬರಹವೊಂದನ್ನು ಹಂಚಿಕೊಂಡಿರುವ ಅವರು, 'ಇದು ಭರಿಸಲಾಗದ ಶೂನ್ಯ' ಎಂದು ತಿಳಿಸಿದ್ದಾರೆ.
'A Born Star' ಎಂಬ ಶೀರ್ಷಿಕೆ ಇರುವ ಬರಹವು ಪುನೀತ್ ಅವರ ಮೊದಲ ಭೇಟಿಯಿಂದ ಆರಂಭವಾಗುತ್ತದೆ.
ಅಭಿಮಾನಿಗಳನ್ನು ಚದುರಿಸಲು ಪೊಲೀಸರಿಂದ ಲಾಠಿ ಪ್ರಹಾರ
ಅಪ್ಪು ನೆನೆದು ಕಣ್ಣೀರಿಟ್ಟ ಅಭಿಮಾನಿ
ಪುನೀತ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಬಂದಿದ್ದ ಅಭಿಮಾನಿಯೊಬ್ಬರು ನೆಚ್ಚಿನ ನಟನನ್ನು ನೆನೆದು ಕಣ್ಣೀರಿಡುತ್ತಿದ್ದರು.
ಪುನೀತ್ ಅಂತಿಮ ಸಂಸ್ಕಾರ ನಾಳೆಗೆ ನಿಗದಿ: ಸಿಎಂ ಬೊಮ್ಮಾಯಿ ಘೋಷಣೆ
ಪುನೀತ್ ಅವರ ಅಂತಿಮ ಸಂಸ್ಕಾರವನ್ನು ನಾಳೆ (ಭಾನುವಾರ) ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪುನೀತ್ ಪುತ್ರಿ ಬೆಂಗಳೂರಿಗೆ ಬರುವುದು ಸಂಜೆ 6 ಆಗಲಿದೆ. ಸಂಜೆಯ ನಂತರ ಅಂತ್ಯಕ್ರಿಯೆ ನಡೆಸುವುದು ಕಷ್ಟವಾಗಬಹುದು. ಅಲ್ಲದೇ, ಅವರ ಅಭಿಮಾನಿಗಳು ಇನ್ನೂ ಬಹಳಷ್ಟು ಸಂಖ್ಯೆಯಲ್ಲಿ ಬರುವವರಿದ್ದಾರೆ. ಹೀಗಾಗಿ ರಾಜಕುಮಾರ್ ಕುಟುಂಬಸ್ಥರ ಜೊತೆ ಚರ್ಚೆ ಮಾಡಿ ನಾಳೆಗೆ ಅಂತ್ಯಕ್ರಿಯೆ ನಿಗದಿ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಂತಿಮ ನಮನ
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪುನೀತ್ ರಾಜಕುಮಾರ್ ಅವರ ಪಾರ್ಥೀವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ ಕುಟುಂಬದವರಿಗೆ ಸಾಂತ್ವನ ಹೇಳಿದರು. ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಹ ಅಂತಿಮ ನಮನ ಸಲ್ಲಿಸಿ ಗೌರವ ಸೂಚಿಸಿದರು.
ಕಂಠೀರವ ಸ್ಟುಡಿಯೋ ಆವರಣದಲ್ಲಿ ಪುನೀತ್ ಅಂತ್ಯಕ್ರಿಯೆ: ಶಾಂತಿಯುತ ನಡವಳಿಕೆಗೆ ಸಿಎಂ ಮನವಿ
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಪುತ್ರಿ ಆಗಮಿಸಿದ ನಂತರ ಕಂಠೀರವ ಸ್ಟುಡಿಯೋದಲ್ಲಿ ಅವರ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿರುವ ನಗರದ ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರ ಇಂದು ಅವರ ಮಗಳು ಬಂದ ನಂತರ ಕಂಠೀರವ ಸ್ಟುಡಿಯೋದಲ್ಲಿ ಅವರ ಕುಟುಂಬದವರು ಮತ್ತು ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಇದನ್ನು ಸುಗಮವಾಗಿ ನಡೆಸಲು ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಯವರು ಕ್ರಮ ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪುನೀತ್ ರಾಜ್ಕುಮಾರ್ ಜನಪ್ರಿಯ ನಟ. ಅವರ ಅಗಲಿಕೆ ನಮಗೆಲ್ಲರಿಗೂ ದುಃಖ ತಂದಿದೆ. ಅವರನ್ನು ಗೌರವದಿಂದ ಶಾಂತಿಯುತವಾಗಿ ನಾವು ಬೀಳ್ಕೊಡಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
ಈ ಸಮಯ- ಈ ಸಂದರ್ಭದಲ್ಲಿ ನಾವು ಸಂಯಮ, ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ಜನರು ಈ ವರೆಗೆ ಅತ್ಯುತ್ತಮವಾಗಿ ಸಹಕರಿಸಿದ್ದಾರೆ. ನಮ್ಮ ಜವಾಬ್ದಾರಿಯುತ ನಡವಳಿಕೆ ಡಾ. ರಾಜ್ ಕುಮಾರ್ ಹಾಗೂ ಪುನೀತ್ ಅವರಿಗೆ ಗೌರವ ಸಲ್ಲಿಸಿದಂತೆ. ಶಾಂತಿ, ಸ್ನೇಹದಿಂದ ಇರುವುದು ಕನ್ನಡಿಗರ ಸಂಸ್ಕೃತಿ. ಇದನ್ನು ನಾವು ಇಂದು ಮೆರೆಯಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಕಂಠೀರವ ಕ್ರೀಡಾಂಗಣ, ಸ್ಟುಡಿಯೊದಲ್ಲಿ ಪೊಲೀಸರ ಬಿಗಿ ಭದ್ರತೆ
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರ ಇರಿಸಿರುವ ಕಂಠೀರವ ಕ್ರೀಡಾಂಗಣ ಹಾಗೂ ಅಂತ್ಯಕ್ರಿಯೆ ನಡೆಯಲಿರುವ ಕಂಠೀರವ ಸ್ಟುಡಿಯೊ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಶುಕ್ರವಾರ ಸಂಜೆಯಿಂದಲೇ ಕ್ರೀಡಾಂಗಣದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್, ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಕಮಿಷನರೇಟ್ ವ್ಯಾಪ್ತಿಯ ಹಾಗೂ ಕೆಎಸ್ಆರ್ಪಿಯ 5,000 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಎಡಿಜಿಪಿಗಳು, ಹೆಚ್ಚುವರಿ ಕಮಿಷನರ್ಗಳು, ಜಂಟಿ ಕಮಿಷನರ್ಗಳು, ಡಿಸಿಪಿಗಳು, ಎಸಿಪಿಗಳು, ಇನ್ಸ್ಪೆಕ್ಟರ್ಗಳು, ಪಿಎಸ್ಐಗಳೂ ಭದ್ರತೆ ನೋಡಿಕೊಳ್ಳುತ್ತಿದ್ದಾರೆ.
ಪಾರ್ಥಿವ ಶರೀರದ ಅಂತಿಮ ಯಾತ್ರೆ ವೇಳೆಯಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ರಸ್ತೆಯುದ್ದಕ್ಕೂ ಪೊಲೀಸರ ಕಾವಲು ಇರಲಿದೆ.
ಕಂಠೀರವ ಸ್ಟುಡಿಯೊ ಬಳಿಯೂ ಈಗಾಗಲೇ ಬ್ಯಾರಿಕೇಡ್ಗಳನ್ನು ನಿಲ್ಲಿಸಲಾಗಿದೆ. ಕರ್ತವ್ಯಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ.
ಹೊರ ವರ್ತುಲ ರಸ್ತೆಗೆ ಹೊಂದಿಕೊಂಡ ಜಾಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸುವ ಸಾಧ್ಯತೆ ಇದೆ.
ರಾಜ್ಯಪಾಲರಿಂದ ಪುನೀತ್ಗೆ ಅಂತಿಮ ನಮನ
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪುನೀತ್ ರಾಜ್ಕುಮಾರ್ಗೆ ಅಂತಿಮನಮನ ಸಲ್ಲಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ . ಮಂಜುನಾಥ್ ಇದ್ದರು.
ರಾಘವೇಂದ್ರ ರಾಜಕುಮಾರ್ ಜೊತೆ ಸಿಎಂ ಸಮಾಲೋಚನೆ
ಸಾರ್ವಜನಿಕರಿಗೆ ನಟ ಪುನೀತ್ ರಾಜಕುಮಾರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿರುವ ಕಂಠೀರವ ಕ್ರೀಡಾಂಗಣಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ ಜೊತೆಗಿದ್ದರು.
ಅಂತಿಮ ದರ್ಶನ ಪಡೆದ ಗಣ್ಯರು
ಬೆಂಗಳೂರು: ಚಲನಚಿತ್ರ, ಕಿರುತೆರೆ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರು ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು.
ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹಾಗೂ ಸುತ್ತೂರು ಮಠದ ಶಿವರಾತ್ರಿ ದೇಶಕೇಂದ್ರ ಸ್ವಾಮೀಜಿ ಅವರು ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದರು.
ವಿಧಾಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ನಟ ದೊಡ್ಡಣ್ಣ, ಕಲಾವಿದ ಶಂಕರ್ ಅಶ್ವತ್ಥ್, ನಟ ಚೇತನ್, ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ, ಗೀತ ರಚನೆಕಾರ ನಾಗೇಂದ್ರ ಪ್ರಸಾದ್, ಗಾಯಕ ರಾಜೇಶ್ ಕೃಷ್ಣನ್ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಅಂತಿಮ ಯಾತ್ರೆಗೆ ಮಾರ್ಗ ನಿಗದಿ
ಬೆಂಗಳೂರು: ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಗೆ ಮಾರ್ಗ ನಿಗದಿ ಮಾಡಲಾಗಿದೆ.
ಕಂಠೀರವ ಸ್ಟುಡಿಯೊದಲ್ಲಿರುವ ಡಾ. ರಾಜ್ಕುಮಾರ್ ಸಮಾಧಿ ಬಳಿಯೇ ಅಂತ್ಯಕ್ರಿಯೆ ನಡೆಯಲಿದೆ. ಕಂಠೀರವ ಕ್ರೀಡಾಂಗಣದಿಂದ ಪಾರ್ಥಿವ ಶರೀರದ ಮೆರವಣಿಗೆ ಹೊರಡಲಿದೆ.
ಕಾರ್ಪೊರೇಷನ್ ವೃತ್ತ, ಬಸವೇಶ್ವರ ವೃತ್ತ (ಚಾಲುಕ್ಯ ವೃತ್ತ), ವಿಂಡ್ಸರ್ ಮ್ಯಾನರ್, ಸ್ಯಾಂಕಿ ಕೆರೆ, ಸರ್ಕಲ್ ಮಾರಮ್ಮ ದೇವಸ್ಥಾನ, ಯಶವಂತಪುರ, ಗೊರಗುಂಟೆಪಾಳ್ಯದ ಮೂಲಕ ಮೆರವಣಿಗೆ ಹೋಗಲಿದೆ.
ಮೆರವಣಿಗೆಯುದ್ದಕ್ಕೂ ಪೊಲೀಸರು ಬಿಗಿ ಭದ್ರತೆ ಕೈಗೊಳ್ಳಲಿದ್ದಾರೆ.
ಪುನೀತ್ರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಜನಸಾಗರ
ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಇರಿಸಲಾದ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಜನ ಸಾಗರವೇ ಹರಿದು ಬರುತ್ತಿದೆ.
ನೆಚ್ಚಿನ ನಟನನ್ನು ಕಳೆದುಕೊಂಡ ದುಃಖದಲ್ಲಿರುವ ಅಭಿಮಾನಿಗಳು, ಕ್ರೀಡಾಂಗಣದತ್ತ ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ಬಂದಿರುವವರು ಬೆಳಿಗ್ಗೆ 6 ಗಂಟೆಯಿಂದಲೆ ಸರತಿ ಸಾಲಿನಲ್ಲಿ ನಿಂತು, ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಮಹಿಳೆಯರು, ಮಕ್ಕಳು ಕೂಡ ಅಂತಿಮ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿದ್ದಾರೆ.
ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದ್ದು, ಅಪ್ಪು ಅಪ್ಪು... ಎಂದು ಘೋಷಣೆ ಕೂಗುತ್ತಿದ್ದಾರೆ. ಇನ್ನೂ ಕೆಲವರು ಕಣ್ಣೀರು ಹಾಕುತ್ತಾ ಹೆಜ್ಜೆ ಹಾಕುತ್ತಿದ್ದಾರೆ. ದರ್ಶನ ಪಡೆಯಲು ಕೆಲವರು ಬ್ಯಾರಿಕೇಡ್ಗಳನ್ನು ಏರಿ, ಕ್ರೀಡಾಂಗಣ ಪ್ರವೇಶಿಸಲು ಮುಂದಾದ ಘಟನೆಯೂ ನಡೆಯಿತು.
ದೊಡ್ಡಣ್ಣ, ವನಿತಾ ವಾಸು, ಟಿ.ಎನ್. ಸೀತಾರಾಮ, ನಾಗೇಂದ್ರ ಪ್ರಸಾದ್, ರಾಜೇಶ್ ಕೃಷ್ಣನ್ ಸೇರಿದಂತೆ ಚಿತ್ರರಂಗದ ಪ್ರಮುಖರು ಬೆಳಿಗ್ಗೆಯೇ ಆಗಮಿಸಿ ದರ್ಶನ ಪಡೆದುಕೊಂಡರು
ಪುನೀತ್ ಅಂತಿಮ ದರ್ಶನ: ವಾಹನ ನಿಲುಗಡೆಗೆ ವ್ಯವಸ್ಥೆ
ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಇರುವ ನಟ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಬರುತ್ತಿರುವ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಸಂಚಾರ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ.
'ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಕಾಲೇಜಿನ ಆಟದ ಮೈದಾನ ಹಾಗೂ ನೃಪತುಂಗ ರಸ್ತೆಯಲ್ಲಿರುವ ವೈ.ಎಂ.ಸಿ.ಎ. ಮೈದಾನದಲ್ಲಿ ವಾಹನ ನಿಲುಗಡೆ ಮಾಡಬಹುದು' ಎಂದು ಸಂಚಾರ ವಿಭಾಗದ (ಪೂರ್ವ) ಡಿಸಿಪಿ ಶಾಂತರಾಜು ತಿಳಿಸಿದ್ದಾರೆ.
ಬೆಳಗಾವಿ: ಪುನೀತ್ ರಾಜ್ಕುಮಾರ್ಗೆ ಪೂಜೆ ಸಲ್ಲಿಸಿ ನೇಣಿಗೆ ಶರಣಾದ ಅಭಿಮಾನಿ
ಬೆಳಗಾವಿ: ಚಲನಚಿತ್ರ ನಟ ಪುನೀತ್ ರಾಜ್ಕುಮಾರ್ ನಿಧನದಿಂದ ನೊಂದ ಅಭಿಮಾನಿ ಹೃದಯಾಘಾತದಿಂದ ಸಾವಿಗೀಡಾದ ಘಟನೆ ತಾಲ್ಲೂಕಿನ ಶಿಂದೊಳ್ಳಿಯಲ್ಲಿ ನಡೆದಿದೆ.
ಆ ಗ್ರಾಮದ ಕನಕದಾಸ ನಗರದ ಪರುಶರಾಮ ಹನುಮಂತ ದೇಮಣ್ಣವರ(33) ಮೃತ. ಪುನೀತ್ ಸಾವಿನ ಸುದ್ದಿ ತಿಳಿದು ಅವರು ಆಘಾತಕ್ಕೆ ಒಳಗಾಗಿದ್ದರು.
ಕೂಲಿ ಮಾಡುತ್ತಿದ್ದ ಪರುಶರಾಮ, ಶಿವರಾಜ್ಕುಕುಮಾರ್ ಹಾಗೂ ಪುನೀತ್ ಅವರ ಅಪ್ಪಟ ಅಭಿಮಾನಿ ಆಗಿದ್ದರು ಎಂದು ಸ್ಥಳೀಯರು ತಿಳಿಸಿದರು.
ಜಿಲ್ಲೆಯ ಅಥಣಿಯಲ್ಲಿ ಅಭಿಮಾನಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಹುಲ್ ಗಾಡಿವಡ್ಡರ (26) ಮೃತ. ಪುನೀತ್ ರಾಜ್ಕುಮಾರ್ ಫೋಟೊಗೆ ಪೂಜೆ ಸಲ್ಲಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುನೀತ್ ಸಾವಿನಿಂದ ಅವರು ನೊಂದಿದ್ದರು ಎಂದು ತಿಳಿದುಬಂದಿದೆ.
ಮಾತು ಬಾರದ ತಮ್ಮನನ್ನು ಕಂಡು ಮರುಗಿದ್ದ ಪುನೀತ್: ಜಗ್ಗೇಶ್ ನೆನಪು
ಅಂತಿಮ ದರ್ಶನ ಪಡೆಯಲು ಕಂಠೀರವ ಕ್ರೀಡಾಂಗಣಕ್ಕೆ ಹೋಗುವವರ ಗಮನಕ್ಕೆ...
ಪುನೀತ್ ನಿಧನದಿಂದ ದುಃಖವಾಗಿದೆ: ಕನ್ನಡದಲ್ಲಿ ಟ್ವೀಟ್ ಮಾಡಿ ಅಮಿತ್ ಶಾ ಕಂಬನಿ
ಬೆಂಗಳೂರು: ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿಧನದಿಂದ ದುಃಖವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಂಬನಿ ಮಿಡಿದಿದ್ದಾರೆ.
ಕನ್ನಡದಲ್ಲಿ ಟ್ವೀಟ್ ಮಾಡಿರುವ ಅವರು, 'ಪ್ರತಿಭಾನ್ವಿತ ನಟ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿಧನದಿಂದ ದುಃಖವಾಗಿದೆ. ತಮ್ಮ ಬಹುಮುಖ ನಟನೆಯಿಂದ ಲಕ್ಷಾಂತರ ಹೃದಯಗಳನ್ನು ಗೆದ್ದ ಪುನೀತ್ ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಹಲವು ಅಮೋಘ ನೆನಪುಗಳನ್ನು ನೀಡಿದ್ದಾರೆ. ಅವರ ಕುಟುಂಬ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ನನ್ನ ಸಂತಾಪಗಳು' ಎಂದು ಹೇಳಿದ್ದಾರೆ.
ಗುರುಕಿರಣ್ ಜನ್ಮದಿನವೇ ಕೊನೆಯ ಕಾರ್ಯಕ್ರಮ
‘ಕಂಠೀರವ’ದಲ್ಲಿ ಪುನೀತ; ಅಂತಿಮ ದರ್ಶನಕ್ಕೆ ಜನಸಾಗರ
ತ್ರಿವರ್ಣ ಧ್ವಜ ಹೊದಿಸಿ ಗೌರವ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ಅವರ ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜ ಹೊದಿಸಿ ಗೌರವ ಸಲ್ಲಿಸಿದರು.
ಮೌನಕ್ಕೆ ಜಾರಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಬೆಂಗಳೂರು: ಪಾರ್ಥಿವ ಶರೀರದ ಎದುರು ಕುಳಿತಿದ್ದ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ, ಮೌನಕ್ಕೆ ಜಾರಿದ್ದರು. ಅಂತಿಮ ದರ್ಶನಕ್ಕೆ ಬಂದಿದ್ದ ಆಪ್ತರು ತಮ್ಮನ್ನು ಸಂತೈಸಲು ಬಂದಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.
ಅಭಿಮಾನಿಗಳು ಅಪ್ಪು, ಅಪ್ಪು...ಎಂದು ರೋಧಿಸಿದಾಗ ಅಶ್ವಿನಿ ಅವರ ಕಣ್ಣುಗಳೂ ಹನಿಗೂಡುತ್ತಿದ್ದವು.
ಅವರ ಪಕ್ಕದಲ್ಲೇ ಕುಳಿತಿದ್ದ ರಾಘವೇಂದ್ರ ರಾಜ್ಕುಮಾರ್ ಪತ್ನಿ ಮಂಗಳಾ ಅವರು ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆದುಕೊಂಡು ಅಶ್ವಿನಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು.
ಪುನೀತ್ ರಾಜ್ಕುಮಾರ್ ಪಾರ್ಥಿವ ಶರೀರ ಅಂತಿಮ ದರ್ಶನ: ಪ್ರಜ್ಞೆತಪ್ಪಿದ ಅಭಿಮಾನಿ
ಪುನೀತ್ ರಾಜ್ಕುಮಾರ್ ಪಾರ್ಥಿವ ಶರೀರ ದರ್ಶನದ ವೇಳೆ ಪ್ರಜ್ಞೆತಪ್ಪಿದ ಅಭಿಮಾನಿಯೊಬ್ಬನನ್ನು ಪೊಲೀಸರು ಹೊತ್ತೊಯ್ದರು.
ಪುನೀತ್ಗೆ ಅಂತಿಮ ನಮನ: ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರ ಪಾರ್ಥೀವ ಶರೀರದ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.
ಮಲ್ಯ ಆಸ್ಪತ್ರೆ ಎದುರಿನ ದ್ವಾರದಿಂದ ಕ್ರೀಡಾಂಗಣ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿತ್ತು. ಅಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಅನೇಕರು ಬ್ಯಾರಿಕೇಡ್ಗಳನ್ನು ಏರಿ ಕ್ರೀಡಾಂಗಣ ಪ್ರವೇಶಿಸಲು ಮುಂದಾದರು. ನೂಕು ನುಗ್ಗಲಿನಿಂದಾಗಿ ನೆಲಕ್ಕೆ ಬಿದ್ದು ಅಸ್ವಸ್ಥರಾದ ಕೆಲವರನ್ನು ಪೊಲೀಸರೇ ಕರೆತಂದು ಆರೈಕೆ ಮಾಡುತ್ತಿದ್ದ ದೃಶ್ಯ ಕಂಡುಬಂತು.
ಅಭಿಮಾನಿಗಳ ಕೂಗಾಟ, ಚೀರಾಟ ಮುಗಿಲುಮುಟ್ಟಿತ್ತು. ಮಹಿಳೆಯರೂ ನೂಕು ನುಗ್ಗಲಿನಲ್ಲಿ ಸಿಲುಕಿ ಹೈರಾಣಾದರು.
ಕಂಠೀರವ ಸ್ಟುಡಿಯೊದಲ್ಲಿ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆಗೆ ನಿರ್ಧಾರ
ನಗರದ ಕಂಠೀರವ ಸ್ಟುಡಿಯೊ ಆವರಣದಲ್ಲಿ ಡಾ.ರಾಜ್ ಕುಮಾರ್ ಪ್ರತಿಷ್ಠಾನದ ಸ್ವಾಮ್ಯದಲ್ಲಿರುವ ಜಮೀನಿನಲ್ಲಿ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ವಾಪಸು ಬರುವುದಿದ್ದರೆ ಅಪ್ಪು ಸಿನಿಮಾದಲ್ಲೇ ಮಾಡಬೇಕು ಅಂತಿದ್ದೆ: ರಮ್ಯಾ ಕಣ್ಣೀರು
ಕಂಠೀರವ ಕ್ರೀಡಾಂಗಣದಲ್ಲಿ ಅಪ್ಪು ಅಭಿಮಾನಿಗಳ ಆಕ್ರಂದನ
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುವ ವೇಳೆ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತು. ಮಹಿಳೆಯರು ಪಾರ್ಥಿವ ಶರೀರ ಕಂಡೊಡನೆ ಅಯ್ಯೋ ದೇವರೆ.. ಅಯ್ಯೋ.. ಎಂದು ರೋಧಿಸಿದರು.
ಪವರ್ ಸ್ಟಾರ್ಗೆ ಜೈ... ಅಪ್ಪು ಬಾಸ್ಗೆ ಜೈ, ಡಾ.ರಾಜ್ಕುಮಾರ್ಗೆ ಜೈ ಎನ್ನುತ್ತಾ ಅಭಿಮಾನ ಮೆರೆದರು. ಕೆಲವರು ಸಾಷ್ಟಾಂಗ ನಮಸ್ಕಾರ ಹಾಕಿದರೆ, ಇನ್ನು ಹಲವರು ಕೈಮುಗಿದು 'ಅಪ್ಪು'ಗೆ ಗೌರವ ಸಲ್ಲಿಸಿದರು.
ಪಾರ್ಥಿವ ಶರೀರದ ಚಿತ್ರ ಸೆರೆಹಿಡಿಯಲು, ವಿಡಿಯೋ ಚಿತ್ರೀಕರಿಸಲು ಅಭಿಮಾನಿಗಳು ಮುಂದಾದರು. ಅವರನ್ನು ಸಾಗಹಾಕಲು ಪೊಲೀಸರು ಹರಸಾಹಸಪಟ್ಟರು.
ಅಪ್ಪು ಅಂತಿಮ ದರ್ಶನ ಪಡೆದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಟ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಸಚಿವರಾದ ಡಾ.ಅಶ್ವತ್ಥನಾರಾಯಣ, ಬಿ.ಸಿ.ನಾಗೇಶ್, ಕಂದಾಯ ಸಚಿವ ಆರ್.ಅಶೋಕ, ಕೆ.ಸಿ.ನಾರಾಯಣಗೌಡ ಜೊತೆಗಿದ್ದರು.
ಪೊಲೀಸ್ ಗೌರವಗಳೊಂದಿಗೆ ಪುನೀತ್ ಅಂತ್ಯಕ್ರಿಯೆಗೆ ಆದೇಶ
ಸರ್ಕಾರಿ (ಪೊಲೀಸ್) ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ಸರ್ಕಾರದ ಆದೇಶ. ಕೋವಿಡ್–19 ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಿದೆ.
ಕಂಠೀರವ ಕ್ರೀಡಾಂಗಣಕ್ಕೆ ಪುನೀತ್ ಪಾರ್ಥಿವ ಶರೀರ
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣಕ್ಕೆ ತರಲಾಗಿದ್ದು ಅಭಿಮಾನಿಗಳು ಹಾಗೂ ಗಣ್ಯರ ಅಂತಿಮ ದರ್ಶನಕ್ಕೆ ಇಡಲಾಗಿದೆ.
ರಾಘವೇಂದ್ರ ರಾಜ್ಕುಮಾರ್ ಅವರ ಪುತ್ರರಾದ ವಿನಯ್ ಹಾಗೂ ಯುವ ರಾಜ್ಕುಮಾರ್ ಹಾಗೂ ಕುಟುಂಬದವರು ಪಾರ್ಥಿವ ಶರೀರ ಹೊತ್ತು ತಂದರು. ಪಾರ್ಥಿವ ಶರೀರ ಕ್ರೀಡಾಂಗಣ ಪ್ರವೇಶಿಸುವಾಗ ಅಭಿಮಾನಿಗಳು ಜಯಕಾರ ಮೊಳಗಿಸಿದರು.
ನಿರ್ಮಾಪಕ ರಾಕಲೈನ್ ವೆಂಕಟೇಶ್, ವಿಜಯ ರಾಘವೇಂದ್ರ, ದುನಿಯಾ ವಿಜಯ್, ರಂಗಾಯಣ ರಘು, ಶ್ರೀಮುರುಳಿ ಸೇರಿ ಹಲವು ಕಲಾವಿದರು ಇದ್ದಾರೆ.
ನೇರ ಪ್ರಸಾರ: ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ಪಾರ್ಥಿವ ಶರೀರ
ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ
ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ
ರಾಯರ ಸ್ಮರಿಸುತ್ತಿದ್ದ ಪುನೀತ್ ರಾಜಕುಮಾರ್
ರಾಯಚೂರು: ಚಲನಚಿತ್ರ ನಟ ಪುನೀತ್ ರಾಜಕುಮಾರ್ ಅವರು ಪ್ರತಿವರ್ಷ ಮಂತ್ರಾಲಯಕ್ಕೆ ಬರುವುದು, ರಾಘವೇಂದ್ರ ಸ್ವಾಮಿಗಳ ಸಾನಿಧ್ಯದಲ್ಲಿ ಭಕ್ತಿಭಾವದಿಂದ ಸ್ವಲ್ಪ ಸಮಯ ಕಳೆಯುವುದನ್ನು ಚಿಕ್ಕಂದಿನಿಂದಲೂ ರೂಢಿಸಿಕೊಂಡು ಬಂದಿದ್ದರು.
ಕಳೆದ ಏಪ್ರಿಲ್ನಲ್ಲಿ ಮಂತ್ರಾಲಯಕ್ಕೆ ಬಂದಿದ್ದ ಪುನೀತ್ ರಾಜಕುಮಾರ್ ಅವರೊಂದಿಗೆ ನಟ ಜಗ್ಗೇಶ್ ಇದ್ದರು. ಬಿಳಿ ಪಂಚೆ ಧರಿಸಿ ಜನಸಾಮಾನ್ಯರ ರೀತಿಯಲ್ಲೇ ರಾಯರ ಮಠದ ಪ್ರಾಕಾರದಲ್ಲಿ ಸಂಚರಿಸುವುದು ವಿಶೇಷವಾಗಿರುತ್ತಿತ್ತು.
ನೋಡಿ: ಟ್ವೀಟ್ಗಳಲ್ಲಿ ಅಪ್ಪು ನೆನಪು...ಸಂತಾಪ...
ತಲೆಮಾಂಸ, ಚಿಬ್ಲು ಇಡ್ಲಿ ಪ್ರಿಯ ಅಪ್ಪು
ಮಂಡ್ಯ: ಮೈಸೂರು– ಬೆಂಗಳೂರು ನಡುವೆ ಪ್ರಯಾಣಿಸುವಾಗ ಶ್ರೀರಂಗಪಟ್ಟಣಕ್ಕೂ ಮೊದಲು ಸಿಗುವ ಬಾಬುರಾಯನಕೊಪ್ಪಲು ಜೈಭುವನೇಶ್ವರಿ ಹೋಟೆಲ್ಗೆ ಪುನೀತ್ ರಾಜ್ಕುಮಾರ್ ಆಗಾಗ ಭೇಟಿ ಕೊಡುತ್ತಿದ್ದರು. ತಲೆಮಾಂಸ ಹಾಗೂ ಕಾಲು ಸೂಪ್ ರುಚಿ ನೋಡಿಯೇ ಅವರು ಮುಂದಕ್ಕೆ ತೆರಳುತ್ತಿದ್ದರು.
ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲೇ ಶೂಟಿಂಗ್ ನಡೆದರೂ ಜೈಭುವನೇಶ್ವರಿ ಹೋಟೆಲ್ನಿಂದ ತಲೆಮಾಂಸ ತರಿಸಿಕೊಂಡು ಸವಿಯುತ್ತಿದ್ದರು. ಬಾಬುರಾಯನಕೊಪ್ಪಲಿನ ಹೋಟೆಲ್ ಜೊತೆಗಿನ ಸಂಬಂಧ ಡಾ.ರಾಜ್ಕುಮಾರ್ ಅವರ ಕಾಲದಿಂದಲೂ ಇತ್ತು.
ಚಿಬ್ಲು ಇಡ್ಲಿ ರುಚಿ: ಹಲಗೂರು ಪಟ್ಟಣದಲ್ಲಿರುವ ಬಾಬು ಹೋಟೆಲ್ನ ಚಿಬ್ಲು ಇಡ್ಲಿ ಕೂಡ ಪುನೀತ್ಗೆ ಅಚ್ಚುಮೆಚ್ಚಾಗಿತ್ತು. ಶಿವರಾಜ್ಕುಮಾರ್ ಈ ಹೋಟೆಲ್ಗೆ ಹಲವು ಬಾರಿ ಬಂದಿದ್ದರು, ಬಂದಾಗಲೆಲ್ಲಾ ಪುನೀತ್ಗಾಗಿ ಇಡ್ಲಿ ಕಟ್ಟಿಸಿಕೊಂಡು ಹೋಗುತ್ತಿದ್ದರು. ಹೋಟೆಲ್ ಮಾಲೀಕ ಕೃಷ್ಣ ಅವರೇ ಹಲವು ಬಾರಿ ಚಿಬ್ಲು ಇಡ್ಲಿಯನ್ನು ಪುನೀತ್ಗೆ ಕೊಂಡೊಯ್ದು ಕೊಟ್ಟಿದ್ದರು.
ನಾನು ಎತ್ತಿ ಆಡಿಸಿದ ಮಗು.. ಸ್ನಾನ ಮಾಡಿಸಿದ್ದೆ.. ಜಯಮಾಲ ಕಂಬನಿ..…
ನಾನು ಎತ್ತಿ ಆಡಿಸಿದ ಮಗು.. ಸ್ನಾನ ಮಾಡಿಸಿದ್ದೆ.. ಜಯಮಾಲ ಕಂಬನಿ..…
ಕಂಠೀರವ ಕ್ರೀಡಾಂಗಣಕ್ಕೆ ನಟ ಯಶ್ ಭೇಟಿ
ಬೆಂಗಳೂರು: ನಟ ಯಶ್, ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ಕೆಜಿಎಫ್ ಚಲನಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಜೊತೆಗಿದ್ದರು.
ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು ಸಿಟಿ ಯೂನಿವರ್ಸಿಟಿಯ ಪರೀಕ್ಷೆ ಮುಂದೂಡಿಕೆ
ಬೆಂಗಳೂರು ಸಿಟಿ ಯೂನಿವರ್ಸಿಟಿಯ ಪರೀಕ್ಷೆಗಳ ಮುಂದೂಡಿಕೆ. ಪರೀಕ್ಷೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.
ಕಾಡು, ಕಡಲತೀರದಲ್ಲಿ ‘ಅಪ್ಪು’ ಹೆಜ್ಜೆ ಗುರುತು
ಕಾರವಾರ: ನಟ ಪುನೀತ್ ರಾಜಕುಮಾರ್ ಉತ್ತರ ಕನ್ನಡದೊಂದಿಗೆ ವಿಶೇಷ ನಂಟು ಹೊಂದಿದ್ದರು. ಜೊಯಿಡಾದ ಕಾಡು ಸುತ್ತಾಡಿದ್ದರು. ಬುಡಕಟ್ಟು ಜನರ ಮನೆಯಂಗಳದಲ್ಲಿ ನೆಲದಲ್ಲಿ ಕುಳಿತು ಊಟ ಮಾಡಿದ್ದರು. ಸಮುದ್ರದಲ್ಲಿ ಹಿಂದಕ್ಕೆ ಜಿಗಿದು ಸಾಹಸ ಮಾಡಿ ಅಚ್ಚರಿ ಮೂಡಿಸಿದ್ದರು.
ನಟನ ಸರಳತೆ, ಚುರುಕುತನ, ಜಿಲ್ಲೆಯ ಬಗ್ಗೆಯ ಅಭಿಮಾನವನ್ನು ಕಂಡವರು, ‘ಅಪ್ಪು’ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗದೇ ಕಣ್ಣೀರಿಡುತ್ತಿದ್ದಾರೆ.
ಪುನೀತ್, ಕಳೆದ ವರ್ಷ ನವೆಂಬರ್ ಮೊದಲ ವಾರದಲ್ಲಿ ಸಾಕ್ಷ್ಯಚಿತ್ರವೊಂದರ ಚಿತ್ರೀಕರಣಕ್ಕೆಂದು ಜೊಯಿಡಾಕ್ಕೆ ಬಂದಿದ್ದರು. ಕಾರ್ಟೋಳಿ ಹಾಗೂ ಪಾತಾಗುಡಿ ಗುಡ್ಡವನ್ನು ಏರಿ ಪ್ರಕೃತಿ ಸೌಂದರ್ಯವನ್ನು ಸವಿದಿದ್ದರು. ಕಾಳಿ ನದಿ ಉಗಮ ಸ್ಥಾನ ಡಿಗ್ಗಿಯಲ್ಲಿರುವ ಗ್ರಾಮ ದೇವತೆ ಚಾಪಲಾದೇವಿ ದೇಗುಲಕ್ಕೆ ಭೇಟಿ ನೀಡಿದ್ದರು.
ನಟ ಪುನೀತ್ ರಾಜ್ಕುಮಾರ್ ಕಾಫಿನಾಡಿನ ಅಳಿಯ
ಚಿಕ್ಕಮಗಳೂರು: ನಟ ಪುನೀತ್ ರಾಜ್ಕುಮಾರ್ ಅವರು ಕಾಫಿನಾಡಿನ ಅಳಿಯ, ಅವರ ಪತ್ನಿ ಅಶ್ವಿನಿ ಅವರು ಈ ಜಿಲ್ಲೆಯ ಭಾಗಮನೆ ಗ್ರಾಮದವರು. ಕಾಫಿನಾಡಿಗೂ ಪುನೀತ್ ಅವರಿಗೂ ಅವಿನಾಭಾವ ನಂಟು ಇತ್ತು.
ಅಶ್ವಿನಿ ಅವರ ತಂದೆ ರೇವನಾಥ್ ಮತ್ತು ತಾಯಿ ವಿಜಯಾ. ಮೂಲತಃ ಚಿಕ್ಕಮಗಳೂರಿನ ಭಾಗಮನೆ ಗ್ರಾಮದ ಈ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ.
ವರ್ಷಕ್ಕೊಮ್ಮೆ ಸ್ವಗ್ರಾಮಕ್ಕೆ ಭೇಟಿ ನೀಡುತ್ತಾರೆ. ಪುನೀತ್ ಅವರು ಕಾಫಿನಾಡಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ‘ಮಿಲನ’, ಬಾಲನಟನಾಗಿದ್ದಾಗ ಅಭಿನಯಿಸಿದ್ದ ‘ಬೆಟ್ಟದ ಹೂವು’ ಸಹಿತ ಹಲವಾರು ಸಿನಿಮಾಗಳ ಚಿತ್ರೀಕರಣಗಳು ಇಲ್ಲಿ ನಡೆದಿದ್ದವು.
ನನ್ನ ತಮ್ಮ ಪುನೀತ್....– ಕಮಲ್ ಟ್ವೀಟ್
ನನ್ನ ತಮ್ಮ ಪುನೀತ್ ರಾಜ್ಕುಮಾರ್ ಅಗಲಿಕೆಯು ತೀರಾ ಅನಿರೀಕ್ಷಿತವಾದುದು. ನಮ್ಮಿಬ್ಬರಿಗೂ ಒಬ್ಬರನ್ನೊಬ್ಬರು ಕಂಡರೆ ಅತೀವ ಪ್ರೀತಿ ಇತ್ತು....
–ಕಮಲ್ ಹಾಸನ್, ನಟ
ಯಾಕಿಷ್ಟು ಬೇಗ....ಅಪ್ಪೂ...
ಯಾಕಿಷ್ಟು ಬೇಗ....ಅಪ್ಪೂ...
ಅಪ್ಪು ಇನ್ನಿಲ್ಲ...
ಕನ್ನಡ ಚಿತ್ರರಂಗದ ಅಪ್ಪು ಇನ್ನಿಲ್ಲ....
ಪುನೀತ್ ರಾಜ್ಕುಮಾರ್ ನಿಧನ: ಎಂ.ಜಿ.ರಸ್ತೆಯಲ್ಲಿ ಬಾಗಿಲು ಮುಚ್ಚಿದ ಹಲವು ಅಂಗಡಿಗಳು
ಪುನೀತ್ ರಾಜ್ಕುಮಾರ್ ನಿಧನದ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆಯಲ್ಲಿ ಹಲವು ಅಂಗಡಿಗಳು ಸ್ವಯಂ ಪ್ರೇರಣೆಯಿಂದ ಬಾಗಿಲು ಮುಚ್ಚಿವೆ.
ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದರೆ ಕಠಿಣ ಕ್ರಮ: ಕಮಲ್ ಪಂತ್
ಬೆಂಗಳೂರು: 'ನಟ ಪುನೀತ್ ರಾಜ್ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಗಣ್ಯರಿಗೆ ಪ್ರತ್ಯೇಕ ದ್ವಾರದ ಮೂಲಕ ಪ್ರವೇಶ ನೀಡಲಾಗುತ್ತದೆ. ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳಿಗೂ ಅವಕಾಶ ನೀಡಲಾಗುತ್ತದೆ' ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.
'ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಎಚ್ಚರಿಸಿದರು.
ಕನ್ನಡಿಗರ ಮನೆಯ ರಾಜಕುಮಾರ ಇನ್ನಿಲ್ಲ– ವಿಜಯ್ ಪ್ರಕಾಶ್
ಪ್ರತಿಯೊಬ್ಬ ಕನ್ನಡಿಗ, ಅವರ ಮನೆಯ ರಾಜಕುಮಾರನನ್ನು ಕಳೆದುಕೊಂಡಿದ್ದಾರೆ.
–ವಿಜಯ್ ಪ್ರಕಾಶ್, ಗಾಯಕ
ವದಂತಿಗಳನ್ನು ನಂಬಬೇಡಿ, ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ: ಬೆಂಗಳೂರು ಪೊಲೀಸ್
ನೋಡಿ | ಪುನೀತ್ ರಾಜ್ಕುಮಾರ್ ಇನ್ನಿಲ್ಲ; ಅಭಿಮಾನಿಗಳ ಆಕ್ರಂದನ
ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿಷೇಧ
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ನಿಧನದಿಂದಾಗಿ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಆದೇಶ ಹೊರಡಿಸಿದ್ದಾರೆ.
‘ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಅ. 29ರಿಂದ ಅ.31ರ ರಾತ್ರಿ 12 ಗಂಟೆಯವರೆಗೆ ಎಲ್ಲಾ ಬಾರ್ ಹಾಗೂ ರೆಸ್ಟೋರೆಂಟ್, ಮದ್ಯದಂಗಡಿ ಹಾಗೂ ಇತರೆಡೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾರಾದರೂ ಮದ್ಯ ಮಾರಾಟಕ್ಕೆ ಯತ್ನಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.
ಪುನೀತ್ ಇನಿಲ್ಲ... ಪ್ರಧಾನಿ ನರೇಂದ್ರ ಮೋದಿ ಸಂತಾಪ
ಕಂಠೀರವ ಕ್ರೀಡಾಂಗಣದಲ್ಲಿ 'ಅಪ್ಪು' ಅಂತಿಮ ದರ್ಶನಕ್ಕೆ ಸಿದ್ಧತೆ
ಕಂಠೀರವ ಕ್ರೀಡಾಂಗಣದಲ್ಲಿ 'ಅಪ್ಪು' ಅಂತಿಮ ದರ್ಶನಕ್ಕೆ ಸಿದ್ಧತೆ
ನೋಡಿ: ಪುನೀತ್ ರಾಜ್ಕುಮಾರ್ ಅಂತಿಮ ದರ್ಶನ; ಅಭಿಮಾನಿಗಳಿಗಾಗಿ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ
ಅಪ್ಪು ನೀವು ಎಂದೆಂದಿಗೂ ಮಾಸದ ನೆನಪು– ನಟಿ ರಮ್ಯಾ
ಭಾವನೆಗಳು ಕೆಲವು ವೈಯಕ್ತಿಕ. ಅವುಗಳನ್ನು ಪದಗಳಲ್ಲಿ ಹೇಳಲಾಗದು. RIP ಎಂದು ಹೇಳಿ ಮುಗಿಸಲಾಗದು. ದೇಹ ಮನಸ್ಸಿಗೂ ಮೀರಿದ್ದು ಭಾವನೆ. ಕೆಲವು ಬಾಂಧವ್ಯ ವರ್ಣನೆಗೂ ಮೀರಿದ್ದು. ಬೇರೇನನ್ನೂ ಹೇಳಲಾಗದ ಸಂದರ್ಭ ಇದು. ಸಿನಿಮಾ ರಂಗದಲ್ಲಿ ಆತ ನನಗೆ ಅತ್ಯಂತ ಆಪ್ತ ಸ್ನೇಹಿತ. ಅಪ್ಪು ನೀವು ಎಂದೆಂದಿಗೂ ಮಾಸದ ನೆನಪು. ಸದಾ ನನ್ನ ನೆನಪಿನಲ್ಲಿ ಎಂದೆಂದೂ ಇರುವಿರಿ ಅಪ್ಪು.
–ರಮ್ಯಾ, ನಟಿ.
ಆತುರದಲ್ಲಿ ಅಂತ್ಯಕ್ರಿಯೆ ಮಾಡುವುದಿಲ್ಲ; ಅಭಿಮಾನಿಗಳಿಗೆ ದರ್ಶನ ಸಿಗಲಿದೆ– ರಾಘವೇಂದ್ರ ರಾಜ್ಕುಮಾರ್
ಆತುರ ಪಡುವುದಿಲ್ಲ. ತಂದೆಯವರದ್ದು ಹಾಗಾಯಿತು...ಅವನು ಚಿಕ್ಕವನು, ನನ್ನ ಮಗ ಇದ್ದ ಹಾಗೆ. ನನ್ನ ಮೇಲೆ ಬಿಟ್ಟು ಹೋಗಿದ್ದಾನೆ. ಎಲ್ಲ ಅಭಿಮಾನಿಗಳಿಗೂ ದರ್ಶನ ಸಿಗುತ್ತದೆ. ಎಲ್ಲರೂ ನೋಡಿದ ನಂತರವೇ ನಿಧಾನವಾಗಿ ಅಂತ್ಯಕ್ರಿಯೆ ನಡೆಯಲಿದೆ.
– ರಾಘವೇಂದ್ರ ರಾಜ್ಕುಮಾರ್, ನಟ, ಪುನೀತ್ ಅಣ್ಣ
ಪುನೀತ್ ರಾಜ್ಕುಮಾರ್ ನಾಯಕನಾಗಿ ಅಭಿನಯಿಸಿರುವ ಚಿತ್ರಗಳ ಪಟ್ಟಿ ಇಲ್ಲಿದೆ
ಪುನೀತ್ ರಾಜ್ಕುಮಾರ್ ನಾಯಕನಾಗಿ ಅಭಿನಯಿಸಿರುವ ಚಿತ್ರಗಳ ಪಟ್ಟಿ ಇಲ್ಲಿದೆ
ಚಾಮರಾಜನಗರದ ಭಾಷೆ ಅಚ್ಚುಮೆಚ್ಚು, ತಂದೆಯ ಹುಟ್ಟೂರು ಗಾಜನೂರಿಗೆ ಬಿಡುವಾದಾಗಲೆಲ್ಲ ಭೇಟಿ
ಚಾಮರಾಜನಗರ: ‘ಅಪ್ಪು’, ನಟ ಪುನೀತ್ರಾಜ್ಕುಮಾರ್ ಅವರು ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿಯ ಗಾಜನೂರಿನ ‘ಮೊಮ್ಮಗ’.
ತಮ್ಮ ತಂದೆ, ವರನಟ ಡಾ.ರಾಜ್ಕುಮಾರ್ ಅವರ ಹುಟ್ಟೂರು ಗಾಜನೂರಿನ ಬಗ್ಗೆ ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ಮಮತೆ ಇತ್ತು. ತಮಗೆ ಬಿಡುವಾದಾಗಲೆಲ್ಲ ಕುಟುಂಬ ಸಮೇತರಾಗಿ ಗಾಜನೂರಿಗೆ ಬರುತ್ತಿದ್ದರು. ತಮ್ಮ ಸೋದರತ್ತೆ (ಡಾ.ರಾಜ್ ಅವರ ತಂಗಿ ನಾಗಮ್ಮ) ಹಾಗೂ ಅವರ ಕುಟುಂಬದ ಸದಸ್ಯರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು.
ಡಾ.ರಾಜ್ ಅವರು ಜನಿಸಿದ ದೊಡ್ಡ ಗಾಜನೂರಿನ ಹಳೆಯ ಮನೆಗೆ ಭೇಟಿ ನೀಡುತ್ತಿದ್ದರು. ತಮ್ಮ ತಂದೆಯವರು ಓಡಾಡುತ್ತಿದ್ದ ಸ್ಥಳಗಳು, ತೋಟಗಳಲ್ಲಿ ಓಡಾಡಿ ಖುಷಿ ಪಡುತ್ತಿದ್ದರು. ಡಾ.ರಾಜ್ ಅವರು ಹೆಚ್ಚು ಹಚ್ಚಿಕೊಂಡಿದ್ದ ದೊಡ್ಡ ಆಲದ ಮರದ ಅಡಿಯಲ್ಲಿ ಕುಳಿತು ಸಮಯವನ್ನೂ ಕಳೆಯುತ್ತಿದ್ದರು.
ಗಾಜನೂರಿಗೆ ಬಂದ ತಕ್ಷಣ, ಮನೆಯ ಸುತ್ತಮುತ್ತ ಸೇರುತ್ತಿದ್ದ ಅಭಿಮಾನಿಗಳು ಹಾಗೂ ಸಾರ್ವಜನಿಕರೊಂದಿಗೆ ಆತ್ಮೀಯವಾಗಿ ಬೆರೆತು ತಾವೂ ಖುಷಿ ಪಡುತ್ತಿದ್ದರು.
ಕಳೆದ ಜುಲೈ ತಿಂಗಳ 30ರಂದು ಪುನೀತ್ ಅವರು ತಮ್ಮ ಪತ್ನಿ ಮಕ್ಕಳೊಂದಿಗೆ ಗಾಜನೂರಿಗೆ ಭೇಟಿ ನೀಡಿದ್ದರು.
ಅಣ್ಣಾವ್ರ ಬಯೋಪಿಕ್ಗೆ ನಿರ್ಧರಿಸಿದ್ದ ಅಪ್ಪು
ಬೆಂಗಳೂರು: ಕನ್ನಡ ಚಿತ್ರರಂಗ ಅಭಿವೃದ್ಧಿ ಕಾಣಬೇಕಾದರೆ ಹೊಸಬರು ಚಿತ್ರರಂಗ ಪ್ರವೇಶಿಸಬೇಕು ಎಂಬುದು ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರ ಹಂಬಲವಾಗಿತ್ತು. ಒಳ್ಳೆಯ ಸ್ಕ್ರಿಪ್ಟ್ಗಳಿದ್ದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆಲ್ಲುತ್ತದೆ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು.
ಕನ್ನಡ ಚಿತ್ರರಂಗದಲ್ಲಿ ವರ್ಷವೊಂದಕ್ಕೆ ನಿರ್ಮಾಣವಾಗುತ್ತಿರುವ ಸಿನಿಮಾಗಳ ಸಂಖ್ಯೆ 200 ದಾಟುತ್ತಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಹೊಸಬರು ಪ್ರವೇಶಿಸುತ್ತಿದ್ದಾರೆ. ಅವರಿಗೆ ಭೂಮಿಕೆ ಒದಗಿಸಲು ಪುನೀತ್ ಅವರು ಪಿಆರ್ಕೆ ಪ್ರೊಡಕ್ಷನ್ (ಪಾರ್ವತಮ್ಮ ರಾಜ್ಕುಮಾರ್ ಪ್ರೊಡಕ್ಷನ್) ಸ್ಥಾಪಿಸಿದ್ದರು. ಅವರ ಪತ್ನಿ ಅಶ್ವಿನಿ ಇದರ ಉಸ್ತುವಾರಿ ಹೊತ್ತಿದ್ದರು.
‘ಅಪ್ಪಾಜಿಯ ಬಯೋಪಿಕ್ ಮಾಡುವ ಆಸೆ ಇದೆ. ಅದೊಂದು ದೊಡ್ಡ ಪ್ರಾಜೆಕ್ಟ್. ಸೂಕ್ತ ಕಲಾವಿದರು ಬೇಕು. ಅದಕ್ಕೊಂದು ಯೋಜನೆ ರೂಪುಗೊಳ್ಳಬೇಕು. ಅಂತಹ ಅವಕಾಶ ಲಭಿಸಿದರೆ ಖಂಡಿತ ಹಿಂದೆ ಸರಿಯುವುದಿಲ್ಲ’ ಎಂದು ಅಪ್ಪು ಹೇಳಿದ್ದರು.
ಭಟ್ಕಳ ತಾಲ್ಲೂಕಿನ ಮುರುಡೇಶ್ವರದ ನೇತ್ರಾಣಿಯಲ್ಲಿ ಪುನೀತ್ ರಾಜ್ಕುಮಾರ್ ದೋಣಿಯಿಂದ ಜಿಗಿದ ಸಂದರ್ಭ
ಕಂಠೀರವ ಕ್ರೀಡಾಂಗಣದಲ್ಲಿ 'ಅಪ್ಪು' ಅಂತಿಮ ದರ್ಶನಕ್ಕೆ ಸಿದ್ಧತೆ
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಕಂಠೀರವ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಹೊರಾಂಗಣ ಕ್ರೀಡಾಂಗಣದಲ್ಲಿ ಪೆಂಡಾಲ್ ಹಾಕಲಾಗುತ್ತಿದ್ದು, ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದ ದೃಶ್ಯ ಕಂಡುಬಂತು.
ಅಭಿಮಾನಿಗಳನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದ್ದು, ಯಾವುದೇ ಅಹಿತಕರ ಘಟನೆ ನಡೆಯಂತೆ ತಡೆಯುವ ಸಲುವಾಗಿ ಕ್ರೀಡಾಂಗಣದ ಸುತ್ತಲೂ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಪುನೀತ್ ರಾಜ್ಕುಮಾರ್ ಅವರ ಈಡೇರದ ಕನಸು ಇದು!
ಒಮ್ಮೆಲೆ ಕಾರಿನ ಹಾರನ್ ಶಬ್ದವಾಯಿತು. ಕಾರಿನಿಂದ ಇಳಿದು ಕಚೇರಿ ಪ್ರವೇಶಿಸಿದ ಪುನೀತ್ ಗೋಡೆಯ ಮೇಲಿದ್ದ ವರನಟ ರಾಜ್ಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ನಮಿಸಿದರು. ಬಳಿಕ ಅಭಿಮಾನಿಗಳು, ಸಂದರ್ಶಕರತ್ತ ತಿರುಗಿ ಮುಗುಳ್ನಕ್ಕರು.
ಅವರ ಮುಂದೆ ಸಂದರ್ಶನಕ್ಕೆ ಕುಳಿತಾಗ ಮನದ ಮೂಲೆಯಲ್ಲಿದ್ದ ಸಿನಿಮಾ ನಿರ್ದೇಶನ ಮಾಡಬೇಕೆಂಬ ತನ್ನ ಆಸೆಯನ್ನು ತೆರೆದಿಟ್ಟಿದ್ದರು.
‘ಮೊದಲಿನಿಂದಲೂ ಸಿನಿಮಾ ನಿರ್ದೇಶಿಸಬೇಕೆಂಬ ಆಸೆ ಮನದಲ್ಲಿ ಗಟ್ಟಿಯಾಗಿ ಕೂತಿದೆ. ಇನ್ನೊಂದೆಡೆ ಕೆಲಸದ ಒತ್ತಡವೂ ಹೆಚ್ಚುತ್ತಿದೆ. ನಾನು ಸಿನಿಮಾ ನಿರ್ದೇಶಿಸುವುದಾದರೆ ಶಿವಣ್ಣ (ಶಿವರಾಜ್ಕುಮಾರ್)ನ ಸಿನಿಮಾವನ್ನೇ ಮೊದಲು ನಿರ್ದೇಶಿಸುತ್ತೇನೆ. ಕಾಲ ಕೂಡಿ ಬಂದರೆ ಅಣ್ಣನ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತೇನೆ’ ಎಂದು ಹೇಳಿದ್ದರು.
ವಿಕ್ರಂ ಆಸ್ಪತ್ರೆಯಿಂದ ಸದಾಶಿವನಗರದ ಮನೆಗೆ ಪುನೀತ್ ಪಾರ್ಥಿವ ಶರೀರ
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರವನ್ನು ವಿಕ್ರಮ್ ಆಸ್ಪತ್ರೆಯಿಂದ ಮನೆಯತ್ತ ಕೊಂಡೊಯ್ಯಲಾಗುತ್ತಿದೆ. ಪೊಲೀಸರ ಕಾವಲಿನಲ್ಲಿ ಆಂಬುಲೆನ್ಸ್ನಲ್ಲಿ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತಿದೆ.
ಬಿಡದಿ ಬಳಿಯ ಫಾರ್ಮ್ ಹೌಸ್ನಲ್ಲಿ ಪರಿಶೀಲನೆ
ರಾಮನಗರ: ಬಿಡದಿ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಪುನೀತ್ ರಾಜಕುಮಾರ್ ಅವರಿಗೆ ಸೇರಿದ ಫಾರ್ಮ್ ಹೌಸ್ ಇದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.
ದಶಕಗಳ ಹಿಂದೆಯೇ ರಾಜಕುಮಾರ್ ಕುಟುಂಬ ಇದನ್ನು ಖರೀದಿ ಮಾಡಿತ್ತು. ಪುನೀತ್ ಸಹ ಆಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದರೆ ಈಚಿನ ದಿನಗಳಲ್ಲಿ ತೋಟವನ್ನು ಸರಿಯಾಗಿ ನಿರ್ವಹಣೆ ಮಾಡದೇ ಹಾಗೆಯೇ ಬಿಡಲಾಗಿದೆ.
ಕೊನೆಯ ಟ್ವೀಟ್: ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಸಿನಿಮಾಗೆ ಶುಭಕೋರಿದ್ದ ಪುನೀತ್..
ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಸಿನಿಮಾ ಪ್ರದರ್ಶನ ಸ್ಥಗಿತ
ರಾಜ್ಯದಲ್ಲಿ ಎಲ್ಲ ಚಿತ್ರಮಂದಿರಗಳಲ್ಲಿ ನಟ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಚಿತ್ರದ ಪ್ರದರ್ಶನ ಶುಕ್ರವಾರದಂದು ಸ್ಥಗಿತಗೊಂಡಿದೆ.
ಕನ್ನಡ ಚಿತ್ರರಂಗದ ಎಲ್ಲ ಕಾರ್ಯಚಟುವಟಿಕೆಗಳು ಇಂದು ಸ್ಥಗಿತಗೊಂಡಿವೆ.
ವಿಡಿಯೊ: ಕನ್ನಡ ಚಿತ್ರರಂಗದ ‘ಅಪ್ಪು’ ಪುನೀತ್ ರಾಜ್ಕುಮಾರ್ ಇನ್ನಿಲ್ಲ...
ಪುನೀತ್ ಅವರ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ
ಮೊದಲ ಸದಾಶಿವನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ. ಅನಂತರ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಕಂಠೀರವ ಸ್ಟೇಡಿಯಂ ಸುತ್ತಮುತ್ತ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಸ್ಟೇಡಿಯಂ ಸಮೀಪ ಹೆಚ್ಚುವರಿ ಭದ್ರತೆ ಮತ್ತು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಬಿಬಿಎಂಪಿ ಮತ್ತು ಪೊಲೀಸ್, ಗೃಹ ರಕ್ಷಕ ಇಲಾಖೆಯ ಹಿರಿಯ ಅಧಿಕಾರಿಗಳು ಸಿದ್ಧತೆಯ ಪರಿಶೀಲನೆ ನಡೆಸಿದ್ದಾರೆ.
ಪುನೀತ್ ರಾಜ್ಕುಮಾರ್ ನೇತ್ರದಾನ
ಹೃದಯಾಘಾತದಿಂದ ಶುಕ್ರವಾರ ನಿಧನರಾದ ನಟ ಪುನೀತ್ ರಾಜ್ಕುಮಾರ್ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಕನ್ನಡದ ಮೇರುನಟ ರಾಜ್ಕುಮಾರ್ ಕೂಡ ನೇತ್ರದಾನ ಮಾಡುವ ಮಾದರಿಯಾಗಿದ್ದರು. ಇದೀಗ 'ಅಪ್ಪು' ಪುನೀತ್ ರಾಜ್ಕುಮಾರ್ ಕೂಡ ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಅಪ್ಪನ ಜೊತೆ ಕಳೆದ ಮಧುರ ಕ್ಷಣಗಳನ್ನು ಇತ್ತೀಚೆಗಷ್ಟೇ ಪುನೀತ್ ಟ್ವೀಟ್ ಮೂಲಕ ಹಂಚಿಕೊಂಡಿದ್ದರು
'ಬೆಟ್ಟದ ಹೂವು' ಚಿತ್ರದ ರಾಮು...
ಬಾಲನಟನಾಗಿ ಬೆಳ್ಳಿತೆರೆ ಪ್ರವೇಶಿಸಿದ್ದ ಪುನೀತ್, 2002ರಲ್ಲಿ ‘ಅಪ್ಪು’ ಸಿನಿಮಾ ಮುಖಾಂತರ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು.
‘ಬೆಟ್ಟದ ಹೂವು’ ಚಿತ್ರದ ರಾಮು ಪಾತ್ರಕ್ಕಾಗಿ ಪುನೀತ್ ರಾಷ್ಟ್ರಪ್ರಶಸ್ತಿ ಪಡೆದಿದ್ದರು.
ನಟನಾಗಿ, ಗಾಯಕನಾಗಿ ಗುರುತಿಸಿಕೊಂಡಿದ್ದ ಪುನೀತ್ ‘ಪಿಆರ್ಕೆ ಪ್ರೊಡಕ್ಷನ್’ ಹೆಸರಿನ ಸಂಸ್ಥೆಯಡಿಯಲ್ಲಿ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದರು.
ಬಾಲನಟನಾಗಿ ‘ವಸಂತ ಗೀತಾ’, ‘ಚಲಿಸುವ ಮೋಡಗಳು, ‘ಎರಡು ನಕ್ಷತ್ರ’, ‘ಬೆಟ್ಟದ ಹೂವು’, ‘ಭಕ್ತ ಪ್ರಹ್ಲಾದ’ ಸಿನಿಮಾಗಳಲ್ಲಿ ಬಾಲ ನಟನಾಗಿ ಪುನೀತ್ ನಟಿಸಿದ್ದರು.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ಧತೆ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ಧತೆ
ಅಭಿಮಾನಿಗಳ ಪ್ರೀತಿಯ 'ಅಪ್ಪು' ಪುನೀತ್ ರಾಜ್ ಕುಮಾರ್ ಇನ್ನಿಲ್ಲ..
ಕನ್ನಡ ಚಿತ್ರರಂಗದ ‘ಅಪ್ಪು’ ಖ್ಯಾತಿಯ ನಟ ಪುನೀತ್ ರಾಜ್ಕುಮಾರ್ (46) ಇನ್ನಿಲ್ಲ..
ಶುಕ್ರವಾರ ಅ.29ರಂದು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ನಂತರ ಅವರನ್ನು ರಮಣಶ್ರೀ ಕ್ಲಿನಿಕ್ಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು.
ಹೃದಯಾಘಾತಕ್ಕೆ ಒಳಗಾಗಿದ್ದ ಪುನೀತ್ರನ್ನು ತಕ್ಷಣವೇ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪುನೀತ್ ಅವರಿಗೆ ತಜ್ಞ ವೈದ್ಯರ ತಂಡ ತೀವ್ರ ನಿಗಾ ಘಟಕದಲ್ಲಿ ತುರ್ತು ಚಿಕಿತ್ಸೆ ನೀಡಿತ್ತು.
ಆಸ್ಪತ್ರೆ ಸುತ್ತಲೂ ಪೊಲೀಸ್ ಕಾವಲು
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರು ಚಿಕಿತ್ಸೆಗಾಗಿ ದಾಖಲಾಗಿರುವ ವಿಕ್ರಮ್ ಆಸ್ಪತ್ರೆ ಸುತ್ತಲೂ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಆಸ್ಪತ್ರೆಯೊಳಗೆ ಜನರ ಓಡಾಟವನ್ನು ನಿಷೇಧಿಸಿದ್ದಾರೆ.
ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸಂಬಂಧಿಕರನ್ನು ದಾಖಲೆ ಪರಿಶೀಲನೆ ನಡೆಸಿ ಒಳಗೆ ಬಿಡುತ್ತಿದ್ದಾರೆ. ವಿಕ್ರಮ್ ಆಸ್ಪತ್ರೆಯ ಎರಡೂ ಗೇಟ್ಗಳಲ್ಲಿ ಬಿಗಿ ಭದ್ರತೆ ಇದೆ.
ಪುನೀತ್ ರಾಜ್ಕುಮಾರ್ ಸಂಬಂಧಿಕರು, ಪರಿಚಯಸ್ಥರು, ಚಿತ್ರರಂಗದ ಪ್ರಮುಖರನ್ನು ಮಾತ್ರ ಒಳಗೆ ಬಿಡಲಾಗುತ್ತಿದೆ. ಕೆಎಸ್ಆರ್ಪಿ ಸಿಬ್ಬಂದಿ ಸಹ ಸ್ಥಳದಲ್ಲಿ ಜಮಾಯಿಸಿದ್ದಾರೆ. ಜನರನ್ನು ನಿಯಂತ್ರಿಸಲು ಸಿದ್ಧರಾಗಿದ್ದಾರೆ.