ಮೈಸೂರು: ‘ಈಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಚಲನಚಿತ್ರ ನಿರ್ಮಾಪಕಿ ದಿವಂಗತ ಪಾರ್ವತಮ್ಮ ರಾಜ್‌ಕುಮಾರ್ ಅವರ ಕಿರಿಯ ಸಹೋದರ ಎಸ್.ಎ.ಶ್ರೀನಿವಾಸ್ ಅವರ ಪುತ್ರ, ಉದಯೋನ್ಮುಖ ನಟ ಸೂರಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಮಣಿಪಾಲ ಆಸ್ಪತ್ರೆಯ ಮೂಳೆಚಿಕಿತ್ಸೆ ವಿಭಾಗದ ಡಾ.ಅಜಯ್ ಹೆಗ್ಡೆ ತಿಳಿಸಿದರು.
‘ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಬಲಗಾಲಿನಲ್ಲಿ ತೀವ್ರ ರಕ್ತಸ್ರಾವ ಉಂಟಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿ, ಬಲ ಮೊಣಕಾಲಿನ ಕೆಳಭಾಗವನ್ನು ಕತ್ತರಿಸಿ ತೆಗೆಯಲಾಗಿದೆ. ಚಿಕಿತ್ಸೆ ಮುಂದುವರಿದಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.
‘ಈ ಆಘಾತದಿಂದ ಹೊರಬರುವ ಆತ್ಮಸ್ಥೈರ್ಯ ಅವರಲ್ಲಿದೆ. ಅಪಘಾತವಾದ ದಿನ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಕಾಲಿನಲ್ಲಿ 6 ಇಂಚಿನಷ್ಟು ಜಾಗದಲ್ಲಿ ಮೂಳೆ ಹಾಗೂ ನರಗಳೇ ಇರಲಿಲ್ಲ. ಜಜ್ಜಿ ಹೋಗಿದ್ದವು. 4–5 ಗಂಟೆಗಳ ಶಸ್ತ್ರಚಿಕಿತ್ಸೆ ಮೂಲಕ ‘ಕಸಿ’ ಪ್ರಕ್ರಿಯೆ ನಡೆಸಿದ್ದೇವೆ. ಇದಕ್ಕೆ ಪ್ಲಾಸ್ಟಿಕ್ ಸರ್ಜರಿ ತಜ್ಞ ಡಾ.ವಿಜಯ್ ಸಹಕರಿಸಿದರು. ಸೋಂಕು ಹರಡದಿರಲು ಎಚ್ಚರಿಕೆ ವಹಿಸುತ್ತಿದ್ದೇವೆ’ ಎಂದರು.
‘ಕಾಲಿನ ಭಾಗ ಕತ್ತರಿಸಿ ತೆಗೆದಿದ್ದನ್ನು ಸೂರಜ್ ಅವರಿಗೆ 4 ದಿನಗಳ ಬಳಿಕ ತಿಳಿಸಿದೆವು. ಘಟನೆಯನ್ನು ಶಾಂತವಾಗಿ ಸ್ವೀಕರಿಸಿದ್ದಾರೆ. ಇನ್ನೂ ಕೆಲವು ತಿಂಗಳ ಚಿಕಿತ್ಸೆಯ ಅಗತ್ಯವಿದೆ. ಪ್ರಸ್ತುತ ಹಿಮೋಗ್ಲೋಬಿನ್ ಕೊರತೆಯಿದೆ’ ಎಂದು ತಿಳಿಸಿದರು.
ಸೂರಜ್ ಅವರ ಅಕ್ಕ ವರಲಕ್ಷ್ಮಿ ಮಾತನಾಡಿ, ‘ತಮ್ಮ ಊಟಿಗೆ ಹೊರಟಿದ್ದಾಗ ಅಪಘಾತ ನಡೆದಿದೆ. ಸ್ಥಳೀಯರು ಸರಿಯಾದ ಸಮಯಕ್ಕೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅವನನ್ನು ಉಳಿಸಿಕೊಳ್ಳಲು ಶಸ್ತ್ರಚಿಕಿತ್ಸೆಗೆ ನಾವು ಒಪ್ಪಿದೆವು. ವೈದ್ಯರ ಚಿಕಿತ್ಸೆ ಹಾಗೂ ಜನರ ಹಾರೈಕೆಯಿಂದ ಆತ ಅಪಾಯದಿಂದ ಪಾರಾಗಿದ್ದಾನೆ. ಅಪಘಾತಕ್ಕೆ ಸಂಬಂಧಿಸಿದ ವಿಚಾರಗಳನ್ನು ಕುಟುಂಬದ ವಕೀಲರ ತಂಡ ನೋಡಿಕೊಳ್ಳುತ್ತಿದೆ. ಆಘಾತದಿಂದ ಕುಟುಂಬ ಇನ್ನೂ ಚೇತರಿಸಿಕೊಂಡಿಲ್ಲ’ ಎಂದು ತಿಳಿಸಿದರು.
ಆಸ್ಪತ್ರೆಯ ನಿರ್ದೇಶಕ ಪ್ರಮೋದ್ ಕುಂದರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.