ಬುಧವಾರ, ಮಾರ್ಚ್ 29, 2023
32 °C

ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದ ಚಿತ್ರದಲ್ಲಿ ಉಪೇಂದ್ರ: ದೀಪಾವಳಿಗೆ ಕಬ್ಜ ಟೀಸರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡ ಸೇರಿದಂತೆ ಭಾರತದ ಒಟ್ಟು ಏಳು ಭಾಷೆಗಳಲ್ಲಿ ತೆರೆಯ ಮೇಲೆ ಬರಲು ಸಜ್ಜಾಗುತ್ತಿರುವ ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘ಕಬ್ಜ’ದ ಟೀಸರ್‌ ದೀಪಾವಳಿಯಂದು ಬಿಡುಗಡೆಯಾಗಲಿದೆ.

ಉಪೇಂದ್ರ ಅವರ ಜನ್ಮದಿನದಂದು(ಸೆ.18) ನಿರ್ದೇಶಕ ಆರ್‌.ಚಂದ್ರು ಅವರು ಈ ಮಾಹಿತಿಯನ್ನು ‘ಪ್ರಜಾವಾಣಿ’ ಜೊತೆಗೆ ಹಂಚಿಕೊಂಡಿದ್ದು, ‘ಕಬ್ಜದ ಟೀಸರ್‌ ಯಾವಾಗ ಬಿಡುಗಡೆ ಎಂದು ಜನರು ಕೇಳುತ್ತಲೇ ಇದ್ದಾರೆ. ಹೀಗಾಗಿ ದೀಪಾವಳಿಯಂದು ಉಪೇಂದ್ರ ಅವರ ಹೊಸ ಲುಕ್‌ ಅನ್ನು ಜನ ನೋಡಬಹುದು’ ಎಂದಿದ್ದಾರೆ. ಉಪೇಂದ್ರ ಜನ್ಮದಿನದ ಹಿನ್ನೆಲೆಯಲ್ಲಿ ‘ಕಬ್ಜ’ ಚಿತ್ರದ ಕಾನ್ಸೆಪ್ಟ್‌ ಮೋಷನ್‌ ಪೋಸ್ಟರ್‌ ಕೂಡಾ ಬಿಡುಗಡೆಯಾಗಲಿದೆ.

ಅಭಿಮಾನಿಗಳಿಗೆ ಕೊಂಚ ನಿರಾಸೆ, ಹೊಸ ನಿರೀಕ್ಷೆ 

ಸೆ.18ರಂದು ತಾನು ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಟ್ವೀಟ್‌ ಮೂಲಕ ಮಾಹಿತಿ ನೀಡಿರುವ ಉಪೇಂದ್ರ, ‘ಅಭಿಮಾನಿಗಳು ತಾವು ಇರುವಲ್ಲಿಯೇ ಜನ್ಮದಿನವನ್ನು ಸರಳವಾಗಿ ಆಚರಿಸಿ’ ಎಂದು ಈ ಹಿಂದೆಯೇ ಕರೆ ನೀಡಿದ್ದರು. ಇದರಿಂದ  ಅಭಿಮಾನಿಗಳಿಗೆ ಕೊಂಚ ನಿರಾಸೆಯಾದರೂ ಹಲವು ಪ್ರೊಜೆಕ್ಟ್ಸ್‌ಗಳಿಗೆ ಅವರು ಕಾತುರದಿಂದ ಕಾದಿದ್ದಾರೆ. ಕಿಚ್ಚ ಸುದೀಪ್, ಪ್ರಿಯಾಂಕ ಉಪೇಂದ್ರ ಸೇರಿದಂತೆ ಚಂದನವನದ ಹಲವು ಕಲಾವಿದರು ಉಪೇಂದ್ರ ಅವರಿಗೆ ಟ್ವಿಟರ್‌, ಇನ್‌ಸ್ಟಾಗ್ರಾಂ ಮುಖಾಂತರವೇ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಆರ್‌ಜಿವಿ ಜೊತೆಗೆ ಉಪ್ಪಿ

ಉಪೇಂದ್ರ ಅವರ ಜನ್ಮದಿನದಂದೇ ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ(ಆರ್‌ಜಿವಿ) ಅವರು ಉಪ್ಪಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ‘ನಾನು ಹಾಗೂ ಉಪೇಂದ್ರ ಅವರು ಜೊತೆಗೂಡಿ ಶೀಘ್ರದಲ್ಲೇ ಒಂದು ಆ್ಯಕ್ಷನ್‌ ಸಿನಿಮಾವನ್ನು ಮಾಡಲಿದ್ದೇವೆ. ಉಪೇಂದ್ರ ಅವರಿಗೆ ಜನ್ಮದಿನದ ಶುಭಾಶಯಗಳು’ ಎಂದು ಆರ್‌ಜಿವಿ ಟ್ವೀಟ್‌ ಮಾಡಿದ್ದಾರೆ.

ಇದರ ಜೊತೆಗೆ ಉಪೇಂದ್ರ ನಿರ್ದೇಶನದ ಹೊಸ ಚಿತ್ರದ ಘೋಷಣೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನಟನಾಗುವುದಕ್ಕೂ ಮುನ್ನ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಉಪೇಂದ್ರ ಅವರು ‘ಓಂ’, ‘ಶ್‌’ ನಂತಹ ಹಿಟ್‌ ಚಿತ್ರಗಳನ್ನು ನಿರ್ದೇಶಿಸಿದ್ದರು. ಇದೀಗ ಮತ್ತೆ ನಿರ್ದೇಶನದತ್ತ ಉಪೇಂದ್ರ ಮುಖ ಮಾಡಿದ್ದಾರೆ. ಹೊಸ ಚಿತ್ರದ ಕುರಿತು ಉಪೇಂದ್ರ ಅವರು ಇನ್ನಷ್ಟೇ ಮಾಹಿತಿ ನೀಡಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು