4

ಕನ್ನಡದಲ್ಲಿಯೇ ‘ಧನ್ಯ’ಳಾಗುವೆ

Published:
Updated:
ಧನ್ಯಾ ಬಾಲಕೃಷ್ಣ

‘ರಕ್ತಚಂದನ’ ವೆಬ್‌ ಸರಣಿಯಿಂದ ನನಗೆ ಕನ್ನಡದಲ್ಲಿ ಅವಕಾಶಗಳ ಬಾಗಿಲು ತೆರೆಯಲಿದೆ ಎಂಬ ನಂಬಿಕೆ ಇದೆ. ಯಾಕೆಂದರೆ ಅದರಲ್ಲಿನ ನನ್ನ ಪಾತ್ರವೇ ಹಾಗಿದೆ’ ಎಂದು ವಿಶ್ವಾಸದಿಂದಲೇ ನುಡಿದರು ಧನ್ಯಾ ಬಾಲಕೃಷ್ಣ.

ಕನ್ನಡ ಚಿತ್ರರಂಗಕ್ಕೆ ಧನ್ಯಾ ಎನ್ನುವುದು ಹೊಸ ಹೆಸರು. ಆದರೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಪರಿಚಿತ. ಹಾಗೆಂದು ಇವರೇನೂ ಬೇರೆ ಭಾಷೆಯಿಂದ ಕನ್ನಡಕ್ಕೆ ಬಂದಿರುವ ಹುಡುಗಿಯಲ್ಲ. ಧನ್ಯಾ ಕನ್ನಡದ ಹುಡುಗಿಯೇ. 2011ರಲ್ಲಿಯೇ ತಮಿಳಿನ ಎ.ಆರ್. ಮುರುಗದಾಸ್ ಅವರ ನಿರ್ದೇಶನದ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಅಡಿಯಿಟ್ಟ ಈ ಬೆಡಗಿ ನಂತರ ತೆಲುಗು ಚಿತ್ರರಂಗಕ್ಕೂ ಜಿಗಿದರು.

ಈ ಎರಡೂ ಭಾಷೆಗಳಲ್ಲಿ ಧನ್ಯಾ ನಟಿಸಿರುವ ಸಿನಿಮಾಗಳ ಸಂಖ್ಯೆ ಇಪ್ಪತ್ತು. ಆದರೆ ಸೂಕ್ತ ಅವಕಾಶ ಸಿಗದೆ ಕನ್ನಡದಲ್ಲಿ ನಟಿಸಿಲ್ಲ. ಇದೀಗ ಬಿ.ಎಂ. ಗಿರಿರಾಜ್ ನಿರ್ದೇಶನದ ‘ರಕ್ತಚಂದನ’ ವೆಬ್ ಸರಣಿಯಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ.

ಮಲಯಾಳಂನ ‘ಲವ್ ಆ್ಯಕ್ಷನ್ ಡ್ರಾಮಾ’ ಎಂಬ ಸಿನಿಮಾದಲ್ಲಿ ದ್ವಿತೀಯ ನಾಯಕಿಯಾಗಿ ನಟಿಸುವ ಅವಕಾಶವೂ ಅವರಿಗೆ ಸಿಕ್ಕಿದೆ. ನಯನತಾರಾ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ನವಿನ್ ಪೌಲ್ ನಾಯಕ. ಧ್ಯಾನ್ ಶ್ರೀನಿವಾಸ್ ನಿರ್ದೇಶಿಸುತ್ತಿದ್ದಾರೆ. 

ಮೌಂಟ್ ಕಾರ್ಮೆಲ್‌ ಕಾಲೇಜಿನಲ್ಲಿ ಸೈಕಾಲಾಜಿ ವಿದ್ಯಾರ್ಥಿನಿಯಾಗಿದ್ದ ಧನ್ಯಾ ಅವರಿಗೆ ನಟನೆಯ ದೀಕ್ಷೆ ನೀಡಿದ್ದೂ ಗಿರಿರಾಜ್‌ ಅವರೇ.

‘ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಒಮ್ಮೆ ಗಿರಿರಾಜ್ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಅಲ್ಲಿ ಅವರ ಪರಿಚಯವಾಯಿತು. ನಂತರ ಅವರ ಮೂಲಕವೇ ‘ಏವಂ’ ಎಂಬ ಇಂಗ್ಲಿಷ್ ರಂಗಭೂಮಿ ತಂಡವನ್ನು ಸೇರಿಕೊಂಡೆ.

ಒಂದು ವರ್ಷ ಆ ತಂಡದಲ್ಲಿದ್ದುಕೊಂಡು ರಂಗಭೂಮಿಯಲ್ಲಿ ತೊಡಗಿಕೊಂಡೆ. ಆ ಸಮಯದಲ್ಲಿಯೇ ಒಂದು ತಮಿಳು ಜಾಹೀರಾತಿನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಜಾಹೀರಾತಿನಲ್ಲಿ ನನ್ನನ್ನು ನೋಡಿದ ತಮಿಳಿನ ಜನಪ್ರಿಯ ನಿರ್ದೇಶಕ ಎ.ಆರ್. ಮುರುಗದಾಸ್ ಅವರು ಆಡಿಷನ್‌ಗೆ ಕರೆದು ಅವರ ಸಿನಿಮಾದಲ್ಲಿ ಪಾತ್ರ ಕೊಟ್ಟರು’ ರಂಗಭೂಮಿಯಿಂದ ತಮಿಳು ಚಿತ್ರರಂಗಕ್ಕೆ ದಾಟಿಕೊಂಡಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ.

ವೆಬ್ ಸರಣಿ ಕೂಡ ಧನ್ಯಾ ಅವರಿಗೆ ಹೊಸದಲ್ಲ. ಕಳೆದ ವರ್ಷ ತಮಿಳಿನ ಒಂದು ವೆಬ್‌ ಸರಣಿಯಲ್ಲಿ ಅವರು ಅಭಿನಯಿಸಿದ್ದಾರೆ. ಜತೆಗೆ ಅದಕ್ಕೆ ಸಹಬರಹಗಾರರಾಗಿಯೂ ಕೆಲಸ ಮಾಡಿದ ಅನುಭವ ಅವರಿಗಿದೆ.

‘ತಮಿಳು ಸಿನಿಮಾಗಳಲ್ಲಿ ನಟಿಸಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಅಭಿಮಾನಿಗಳು ವೆಬ್‌ಸರಣಿಯಿಂದ ನನಗೆ ಸಿಕ್ಕರು. ಅದೊಂದು ಪ್ರಭಾವಶಾಲಿ ಮಾಧ್ಯಮ’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

‘ನನಗೆ ವೆಬ್‌ ಸರಣಿಯ ನಾಡಿಮಿಡಿತ ಗೊತ್ತಿದೆ. ಸಿನಿಮಾವನ್ನು ನಾವು ಒಂದು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಜಾಗಕ್ಕೆ ಹೋಗಿ ನೋಡಬೇಕು. ಆದರೆ ವೆಬ್‌ ಸರಣಿ ಹಾಗಲ್ಲ. ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ನೋಡಬಹುದು.

ಆದ್ದರಿಂದಲೇ ಅದು ಹೆಚ್ಚು ಜನರಿಗೆ ತಲುಪುತ್ತದೆ. ಅಲ್ಲದೆ ವೆಬ್ ಸರಣಿಯನ್ನು ಎಲ್ಲರೂ ಖಾಸಗಿಯಾಗಿಯೇ ನೋಡುತ್ತಾರೆ. ಹಾಗಾಗಿ ಆ ಸರಣಿಯ ಜತೆಗೆ– ಪಾತ್ರಗಳ ಜತೆಗೆ ಆಪ್ತ ಸಂಬಂಧವನ್ನೂ ಬೆಳೆಸಿಕೊಳ್ಳುತ್ತಾರೆ. ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ’ ಎಂದು ಸಿನಿಮಾ ಮತ್ತು ವೆಬ್ ಸರಣಿಗಳ ನಡುವಿನ ವ್ಯತ್ಯಾಸಗಳನ್ನು ಪಟ್ಟಿಮಾಡುವ ಧನ್ಯಾ, ‘ಟೀವಿ ಧಾರಾವಾಹಿಗಳಿಗೂ ಈ ಮಟ್ಟಿಗೆ ಪ್ರೇಕ್ಷಕನ ಜತೆಗಿನ ಬಾಂಧವ್ಯ ಸಾಧ್ಯವಾಗುವುದಿಲ್ಲ’ ಎಂದೂ ಹೇಳುತ್ತಾರೆ.

ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿನಿಯಾಗಿರುವ ಅವರಿಗೆ ನಟನೆಯ ಜತೆಗೆ ಓದು ಮತ್ತು ಬರವಣಿಗೆಯಲ್ಲಿಯೂ ವಿಶೇಷ ಆಸಕ್ತಿ ಇದೆ. ಈಗಲೂ ಅವರು ಬಿಡುವು ಸಿಕ್ಕಾಗಲೆಲ್ಲ ಒಂದೋ ಜಿಮ್‌ಗೆ ಹೋಗಿ ಮೈ ದಂಡಿಸುತ್ತಿರುತ್ತಾರೆ ಇಲ್ಲವೇ ಓದಿನಲ್ಲೋ ಬರವಣಿಗೆಯಲ್ಲೋ ತೊಡಗಿಕೊಂಡಿರುತ್ತಾರೆ.

‘ಬರೆಯುವುದೆಂದರೆ ನನಗೆ ಇಷ್ಟ. ಈಗಲೂ ಹಲವು ಚಿತ್ರಕಥೆಗಳನ್ನು ಬರೆಯುತ್ತಿದ್ದೇನೆ. ಇನ್ನೊಂದೆರಡು ವರ್ಷಗಳಲ್ಲಿ ಸಿನಿಮಾ ನಿರ್ದೇಶಿಸುವ ಯೋಚನೆಯೂ ಇದೆ’ ಎನ್ನುವ ಧನ್ಯಾಗೆ ತಮ್ಮ ನಿರ್ದೇಶನದ ಮೊದಲ ಸಿನಿಮಾ ಕನ್ನಡದ್ದೇ ಆಗಿರಬೇಕು ಎಂಬ ಆಸೆ. ‘ನಾನು ಯೋಚಿಸುವುದಂತೂ ಕನ್ನಡದಲ್ಲಿಯೇ.

ಆದರೆ ನನಗೆ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗಳು ಚೆನ್ನಾಗಿಯೇ ಬರುತ್ತವೆ. ನಿರ್ದೇಶನ ಯಾವ ಭಾಷೆಯಲ್ಲಿ ಮಾಡಲು ಸಾಧ್ಯವಾಗುತ್ತದೆಯೋ ಗೊತ್ತಿಲ್ಲ. ನಿರ್ಮಾಪಕರು ಎಲ್ಲಿ ಸಿಗುತ್ತಾರೆಂಬುದರ ಮೇಲೆ ಅದು ಅವಲಂಬಿಸಿದೆ’ ಎನ್ನುತ್ತಾರೆ ಅವರು.

ಇದುವರೆಗೆ ಕನ್ನಡದಲ್ಲಿ ನಟಿಸದಿರಲು ಕಾರಣ ಏನು ಎಂದು ಕೇಳಿದರೆ ‘ನನಗೆ ಮೊದಲಿನಿಂದಲೂ ಕನ್ನಡ ಚಿತ್ರರಂಗದ ಜತೆ ಅಷ್ಟೊಂದು ಸಂಪರ್ಕ ಇರಲಿಲ್ಲ. ತಮಿಳು, ತೆಲುಗಿನಲ್ಲಿ ಅವಕಾಶಗಳು ಸಿಗುತ್ತ ಹೋದವು. ಅಲ್ಲದೆ ನನ್ನ ಮಾತೃಭಾಷೆಯ ಸಿನಿಮಾದಲ್ಲಿ ನಟಿಸಬೇಕು ಎಂದರೆ ನಾಯಕಿಯಾಗಿಯೇ ನಟಿಸಬೇಕು ಎಂದು ನಿರ್ಧರಿಸಿದ್ದೆ. ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುವುದು ನನಗೆ ಇಷ್ಟವಿರಲಿಲ್ಲ. ಅಂಥ ಮುಖ್ಯ ಪಾತ್ರಗಳಲ್ಲಿ ನಟಿಸುವ ಅವಕಾಶ ಸಿಗಲಿಲ್ಲ’ ಎನ್ನುತ್ತಾರೆ.

ಹಾಗೆಂದು ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳಲ್ಲಿ ನಟಿಸಬೇಕು. ಒಳ್ಳೆಯ ನಟಿ ಎನಿಸಿಕೊಳ್ಳಬೇಕು ಎನ್ನುವ ಹಂಬಲವಂತೂ ಅವರಿಗೆ ಇದ್ದೇ ಇದೆ. ‘ಒಂದು ಗಟ್ಟಿಯಾದ, ಸತ್ವಯುತ ಪಾತ್ರಕ್ಕಾಗಿ ಕಾಯುತ್ತಿದ್ದೇನೆ.  ಖಂಡಿತ ಸದ್ಯವೇ ಅಂಥದ್ದೊಂದು ಅವಕಾಶ ಸಿಕ್ಕಿ ಕನ್ನಡ ಸಿನಿಮಾದಲ್ಲಿ ನಟಿಸುವಂತಾಗುತ್ತದೆ’ ಎಂಬ ಆಶಾವಾದ ಅವರದು. ಈ ಆಶಾವಾದಕ್ಕೆ ‘ರಕ್ತಚಂದನ’ ವೆಬ್‌ ಸರಣಿ ಒಂದು ಚಿಮ್ಮುಹಲಗೆಯಾಗುತ್ತದೆ ಎಂಬ ವಿಶ್ವಾಸವೂ ಧನ್ಯಾ ಅವರಿಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !