ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2018ರ ಹಿನ್ನೋಟ: ನಟಿಮಣಿಯರ ಏಳುಬೀಳು

Last Updated 28 ಡಿಸೆಂಬರ್ 2018, 4:59 IST
ಅಕ್ಷರ ಗಾತ್ರ

ಕ ನ್ನಡ ಚಿತ್ರರಂಗ ಈ ವರ್ಷ ಸಂಖ್ಯೆಯ ದೃಷ್ಟಿಯಲ್ಲಿ ಹೊಸ ಮೈಲಿಗಲ್ಲು ಮುಟ್ಟಿರುವುದು ದಿಟ. ಈ ಸಿನಿ ಪಯಣದ ಹಾದಿಯಲ್ಲಿ ಕನ್ನಡದ ನಟಿಯರು ಸೇರಿದಂತೆ ಪರಭಾಷಾ ನಟಿಯರೂ ಏಳುಬೀಳು ಕಂಡಿದ್ದಾರೆ. ಕೆಲವರ ಯಶಸ್ಸಿನ ಮಟ್ಟ ಅಚ್ಚರಿ ಹುಟ್ಟಿಸಿದರೆ, ಮತ್ತೆ ಕೆಲವರು ಜನಮಾನಸದಲ್ಲಿ ಗಟ್ಟಿಯಾಗಿ ನೆಲೆಯೂರಿದರು.

ಚಿತ್ರರಂಗಕ್ಕೆ ಹೊಸ ಮುಖಗಳ ಪರಿಚಯವಾಯಿತು. ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದು ಅದೃಷ್ಟ ಪರೀಕ್ಷೆಗೆ ಇಳಿದವರೂ ಉಂಟು. ಮತ್ತೊಂದೆಡೆ ಹಿರಿತೆರೆಯ ಸಹವಾಸ ಸಾಕೆಂದು ಧಾರಾವಾಹಿಯ ಮೊರೆಹೊಕ್ಕಿದ್ದ ನಟಿಯರೂ ಮತ್ತೆ ಗಾಂಧಿನಗರದಲ್ಲಿ ಹೆಜ್ಜೆಯ ಸಪ್ಪಳ ಮೂಡಿಸಿದರು. ಅವರೆಲ್ಲರಿಗೂ ಯಶಸ್ಸು ಮರೀಚಿಕೆಯಾಗಿಯೇ ಉಳಿಯಿತು.

ಹಾಲಿವುಡ್‌ ನಟಿ ಆ್ಯಮಿ ಜಾಕ್ಸನ್ ‘ವಿಲನ್‌’ನಲ್ಲಿ ಕುಣಿದುಹೋದರು. ಈ ನಡುವೆಯೇ ಪಂಜಾಬ್‌, ಕೇರಳ, ಮುಂಬೈ ಬೆಡಗಿಯರು ಕಾಲಿಟ್ಟರು. ಬಹುತೇಕರು ಸದ್ದೇ ಇಲ್ಲದಂತೆ ಕಳೆದು ಹೋಗಿದ್ದು ಹಳೆಯ ಸುದ್ದಿ. ಇವರ ನಡುವೆ ಕನ್ನಡತಿಯರಾದ ಹರಿಪ್ರಿಯಾ, ರಚಿತಾ ರಾಮ್, ಮಾನ್ವಿತಾ ಹರೀಶ್‌, ಆಶಿಕಾ ರಂಗನಾಥ್‌ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

ಈ ವರ್ಷ ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ಮಾನ್ವಿತಾ ಹರೀಶ್‌. ‘ಟಗರು’ ಚಿತ್ರ ಅವರ ವೃತ್ತಿಬದುಕಿಗೆ ಹೊಸ ಹುರುಪು ನೀಡಿತು. ‘ಮೆ ಮೆಂಟಲ್ ಓ ಜಾವಾ’ ಹಾಡಿನಲ್ಲಿ ಮೈಮರೆತು ಕುಣಿದರು. ಈ ಹಾಡು ವೈರಲ್‌ ಆಯಿತು. ಉಳಿದಂತೆ ‘ಕನಕ’, ‘ತಾರಕಾಸುರ’ ಚಿತ್ರ ಅವರಿಗೆ ಅಷ್ಟೇನು ಯಶಸ್ಸು ತಂದುಕೊಡಲಿಲ್ಲ.

ಹರಿಪ್ರಿಯಾ ‘ಕನಕ’, ‘ಸಂಹಾರ’, ‘ಲೈಫ್‌ ಜೊತೆ ಒಂದು ಸೆಲ್ಫಿ’ ಚಿತ್ರದಲ್ಲಿ ನಟಿಸಿದರು. ಆದರೆ, ಈ ಚಿತ್ರಗಳು ಅವರಿಗೆ ನಿರೀಕ್ಷಿತ ಹೆಸರು ತಂದುಕೊಡಲಿಲ್ಲ. ಆದರೆ, ಹಲವು ಚಿತ್ರಗಳಿಗೆ ಸಹಿ ಮಾಡಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ರಚಿತಾ ರಾಮ್‌ ಪಾಲಿಗೆ ‘ಅಯೋಗ್ಯ’ ಕೈಹಿಡಿದ. ‘ಏನಮ್ಮಿ ಏನಮ್ಮಿ...’ ಹಾಡು ಚಿತ್ರರಂಗದಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿತು. ಯುವಜನರ ಮೊಬೈಲ್‌ಗಳಲ್ಲಿ ರಿಂಗ್‌ಟೋನ್‌ ಆಗಿ ಮಾರ್ದನಿಸಿತು. ‘ಜಾನಿ ಜಾನಿ ಎಸ್‌ ಪಪ್ಪಾ’ ಎಂದು ಜಾನಿಯ ಗ್ಯಾರೇಜ್‌ನಿಂದ ದಿಕ್ಕೆಟ್ಟಿದ್ದ ಅವರಿಗೆ ಈ ಚಿತ್ರ ಚೇತೋಹಾರಿ ನೀಡಿತು. ದೊಡ್ಡ ಬಜೆಟ್‌ ಚಿತ್ರ ‘ವಿಲನ್‌’ನ ಹಾಡೊಂದರಲ್ಲಿ ಹೆಜ್ಜೆಹಾಕಿದರು.

‘ರಾಜು ಕನ್ನಡ ಮೀಡಿಯಂ’ ಚಿತ್ರದ ಮೂಲಕ ಈ ವರ್ಷದ ವೃತ್ತಿಬದುಕು ಆರಂಭಿಸಿದ ಆಶಿಕಾ ರಂಗನಾಥ್‌. ‘ರ‍್ಯಾಂಬೊ 2’ನಲ್ಲಿಚುಟು ಚುಟು ಅಂತಾ ಚುಮು ಚುಮು ಕಥೆ ಹೇಳಿದರು. ಬಳಿಕ ಅವರು ‘ತಾಯಿಗೆ ತಕ್ಕ ಮಗ’ನಿಗೆ ಜೋಡಿಯಾದರು. ಆದರೆ, ಈ ಸಿನಿಮಾ ಅವರಿಗೆ ನಿರೀಕ್ಷಿಸಿದಷ್ಟು ಯಶಸ್ಸು ತಂದುಕೊಡಲಿಲ್ಲ.

ಸೋನುಗೌಡ ಪಾಲಿಗೆ ಈ ವರ್ಷ ಆಶಾದಾಯಕವಾಗಿತ್ತು. ಅವರು ನಟಿಸಿದ ‘ಗುಳ್ಟು’ ಚಿತ್ರ ಯಶಸ್ಸು ಕಂಡಿದ್ದು ಅವರಿಗೆ ಚಿತ್ರರಂಗದಲ್ಲಿ ಮತ್ತಷ್ಟು ಅವಕಾಶಗಳ ಬಾಗಿಲು ತೆರೆಯಲು ಸಹಕಾರಿಯಾಯಿತು. ನಂತರ ಅವರು ನಟಿಸಿದ ‘ಕಾನೂರಾಯಣ’, ‘ಒಂಥರ ಬಣ್ಣಗಳು’ ಹೊಸ ಹುರುಪು ತಂದುಕೊಡಲಿಲ್ಲ.

ಗಡಿ ದಾಟಿದವರು

ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ಶ್ರದ್ಧಾ ಶ್ರೀನಾಥ್‌ ಗಡಿ ದಾಟಿ ನೆರೆಯ ಭಾಷೆಗಳಲ್ಲಿ ಸದ್ದು ಮಾಡಿದರು. ಎರಡು ವರ್ಷದ ಹಿಂದೆ ‘ಕಿರಿಕ್‌ ಪಾರ್ಟಿ’ ಸಿನಿಮಾ ಮೂಲಕ ಹರೆಯದವರ ಎದೆಯೊಳಗೆ ಕಚಗುಳಿ ಇಟ್ಟಿದ್ದ ರಶ್ಮಿಕಾ ನಟನೆಯ ಒಂದು ಚಿತ್ರವೂ ಈ ವರ್ಷ ತೆರೆಕಾಣಲಿಲ್ಲ. ಶ್ರದ್ಧಾ ಶ್ರೀನಾಥ್‌ ‘ವಿಲನ್‌’ ಚಿತ್ರದ ಹಾಡೊಂದರಲ್ಲಿ ಕುಣಿದಿದ್ದು ಬಿಟ್ಟರೆ ತಮಿಳು, ತೆಲುಗು ಚಿತ್ರಗಳಲ್ಲಿಯೇ ಕಳೆದುಹೋದರು.

ಪರಭಾಷಾ ನಟಿಯರ ಅಬ್ಬರ

ಅದು ದಶಕದ ಹಿಂದಿನ ಮಾತು. ಚಂದನವನದಲ್ಲಿ ಚಿತ್ರವೊಂದು ಸೆಟ್ಟೇರಿತು ಎಂದರೆ ‘ಹೀರೊಯಿನ್‌ ಬಾಂಬೆಯವರು’ ಎಂಬ ಮಾತು ಜನಜನಿತವಾಗಿತ್ತು. ದಶಕದ ಅವಧಿಯಲ್ಲಿ ಕನ್ನಡ ಚಿತ್ರರಂಗ ಹಲವು ಸ್ಥಿತ್ಯಂತರ ಕಂಡಿದ್ದರೂ ಇಂದಿಗೂ ಪರಭಾಷಾ ನಟಿಯರ ಮೇಲಿನ ಮೋಹ ಮಾತ್ರ ಕಡಿಮೆಯಾಗಿಲ್ಲ. ಮುಂದಿನ ವರ್ಷ ಬಿಡುಗಡೆಗೆ ಸಿದ್ಧವಾಗುತ್ತಿರುವ ಸ್ಟಾರ್‌ ನಟರ ಚಿತ್ರಗಳಲ್ಲೂ ಪರಭಾಷಾ ನಟಿಯರಿಗೇ ಅಗ್ರಸ್ಥಾನ.

ಪುನೀತ್‌ ರಾಜ್‌ಕುಮಾರ್‌ ನಟನೆಯ ‘ನಟಸಾರ್ವಭೌಮ’ ಚಿತ್ರದ ನಾಯಕಿ ಅನುಪಮಾ ಪರಮೇಶ್ವರನ್‌ ಮೂಲ ಕೇರಳ. ಶಿವರಾಜ್‌ಕುಮಾರ್‌ ಅಭಿನಯದ ‘ದ್ರೋಣ’ನ ನಾಯಕಿ ಇನಿಯಾ ಕೂಡ ಕೇರಳದವರು. ಸುದೀಪ್‌ ನಟನೆಯ ‘ಪೈಲ್ವಾನ್’ಗೆ ನಾಯಕಿ ಆಕಾಂಕ್ಷಾ ಸಿಂಗ್‌. ಹಿಂದಿ ಭಾಷೆಯ ಕಿರುತೆರೆಯಲ್ಲಿ ಮಿಂಚಿರುವ ಈ ನಟಿಯ ಮೂಲ ರಾಜಸ್ಥಾನ.

‘ಕೋಟಿಗೊಬ್ಬ 3’ ಚಿತ್ರಕ್ಕೆ ಬಾಲಿವುಡ್‌ನ ಶ್ರದ್ಧಾದಾಸ್‌ ಹೀರೊಯಿನ್. ನಟ ಗಣೇಶ್‌ ಅವರ ಹೊಸ ಚಿತ್ರಕ್ಕೆ ಪಂಜಾಬಿನ ಬೆಡಗಿ ರೋನಿಕಾ ಸಿಂಗ್‌ ನಾಯಕಿ. ಸ್ಟಾರ್‌ ನಟರ ಜೊತೆಗೆ ಹೆಜ್ಜೆಹಾಕಲು‍ಪರಭಾಷಾ ನಟಿಯರೇ ಸೂಕ್ತವೆಂಬ ನಿಲುವು ನಿರ್ಮಾಪಕ, ನಿರ್ದೇಶಕರ ವಲಯದಲ್ಲಿ ಮೂಡಿದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT