ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಿಯೇಟರ್‌ ಪುನರಾರಂಭಿಸಿ: ಕನ್ನಡ ಚಿತ್ರರಂಗದ ನಿಯೋಗದಿಂದ ಸಿಎಂಗೆ ಮನವಿ

Last Updated 9 ಸೆಪ್ಟೆಂಬರ್ 2020, 9:41 IST
ಅಕ್ಷರ ಗಾತ್ರ

ಲಾಕ್‌ಡೌನ್‌ ಪರಿಣಾಮ ಕನ್ನಡ ಚಿತ್ರರಂಗ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದೆ. ಹಾಗಾಗಿ, ಸೂಕ್ತ ಪ್ಯಾಕೇಜ್‌ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬುಧವಾರ ಬೆಂಗಳೂರಿನಲ್ಲಿ ನಟ ಶಿವರಾಜ್‌ಕುಮಾರ್‌ ನೇತೃತ್ವದ ಕನ್ನಡ ಚಿತ್ರರಂಗದ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ನಟರಾದ ಯಶ್‌, ‘ದುನಿಯಾ’ ವಿಜಯ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಡಿ.ಆರ್‌., ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ನಟಿ ತಾರಾ ಅನುರಾಧಾ ಸೇರಿದಂತೆ ನಿರ್ದೇಶಕರು, ನಿರ್ಮಾಪಕರು ಈ ನಿಯೋಗದಲ್ಲಿದ್ದರು.

ಲಾಕ್‌ಡೌನ್‌ನಿಂದಾಗಿ ಸಿನಿಮಾ ಚಟುವಟಿಕೆ ಸ್ಥಗಿತಗೊಂಡಿದೆ. ಹಾಗಾಗಿ, ಈ ಉದ್ಯಮ ನಂಬಿಕೊಂಡಿರುವ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟಿತು.

ಇತ್ತೀಚೆಗೆ ಚಿತ್ರತಂಡದ ನಿಯೋಗವು ಸಚಿವ ಸಿ.ಟಿ. ರವಿ ಮತ್ತು ಡಿಸಿಎಂ ಡಾ.ಸಿ.ಎನ್‌. ಅಶ್ವಥ್‌ ನಾರಾಯಣ ಅವರನ್ನೂ ಭೇಟಿ ಮಾಡಿ ಚರ್ಚಿಸಿತ್ತು.

ಸಿಎಂ ನೀಡಿದ ಭರವಸೆ ಏನು?

ಸಭೆಯ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಶಿವರಾಜ್‌ಕುಮಾರ್‌, ‘ಲಾಕ್‌ಡೌನ್‌ ಪರಿಣಾಮ ಚಿತ್ರರಂಗ ಸಾಕಷ್ಟು ನಷ್ಟ ಅನುಭವಿಸಿದೆ. ಹಾಗಾಗಿ, ಚಿತ್ರಮಂದಿರಗಳ ಪುನರಾರಂಭಕ್ಕೆ ಕ್ರಮವಹಿಸುವಂತೆ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಕ್ರಮವಹಿಸುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

ನಟ ಯಶ್‌ ಮಾತನಾಡಿ, ‘ಕನ್ನಡ ಚಿತ್ರರಂಗ ಸಮೃದ್ಧವಾಗಿದೆ. ನಾಡಿನ ವಿವಿಧ ಮೂಲೆಗಳಿಂದ ಇಂಡಸ್ಟ್ರಿಯಲ್ಲಿ ದುಡಿಯಲು ಕನಸುಗಳನ್ನು ಹೊತ್ತುಕೊಂಡು ಸಾವಿರಾರು ಯುವಕರು ಬರುತ್ತಿದ್ದಾರೆ. ಆದರೆ, ಅವರಿಗೆ ಸಿನಿಮಾ ಬಗ್ಗೆ ತರಬೇತಿ ನೀಡುವ ಸಂಸ್ಥೆಯಿಲ್ಲ. ಕೂಡಲೇ, ಗುಣಮಟ್ಟದ ತರಬೇತಿ ಸಂಸ್ಥೆ ಪ್ರಾರಂಭಿಸುವಂತೆ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT