ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಸೋಲು–ಗೆಲುವಿನ ಲೆಕ್ಕಾಚಾರ

Last Updated 14 ಮೇ 2018, 11:33 IST
ಅಕ್ಷರ ಗಾತ್ರ

ಹೂವಿನಹಡಗಲಿ: ಹಡಗಲಿ ಮೀಸಲು ವಿಧಾನಸಭಾ ಕ್ಷೇತ್ರದ ಮತದಾನ ಪೂರ್ಣಗೊಳ್ಳುತ್ತಿದ್ದಂತೆ, ಈಗ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ನಡೆದಿದೆ. ಫಲಿತಾಂಶ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳ ಎದೆಯಲ್ಲಿ ತಳಮಳ ಶುರುವಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ, ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕ್ಷೇತ್ರದಲ್ಲಿ ಮಳೆ ಬಂದು ನಿಂತ ಅನುಭವ ಆಗಿದೆ. ತಿಂಗಳ ಕಾಲ ಪ್ರಚಾರದಲ್ಲಿ ತೊಡಗಿ ದಣಿದಿರುವ ಅಭ್ಯರ್ಥಿಗಳು ಭಾನುವಾರ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದರೆ, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರು ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಚಹಾ ಅಂಗಡಿ, ಹೋಟೆಲ್, ಡಾಬಾ, ರೆಸ್ಟೋರೆಂಟ್‌ಗಳಲ್ಲಿ ಈಗ ಬರೀ ರಾಜಕೀಯದ್ದೇ ಚರ್ಚೆಗಳು ನಡೆಯುತ್ತಿವೆ.

ಈ ಚುನಾವಣೆಯಲ್ಲಿ ಯಾರ ಮತಬುಟ್ಟಿಯನ್ನು ಯಾರು ಕಸಿದಿದ್ದಾರೆ. ಯಾವ ಯಾವ ಸಮುದಾಯಗಳು ಯಾರಿಗೆ ಬೆಂಬಲ ಸೂಚಿಸಿವೆ ಎಂಬ ಚರ್ಚೆಗಳು ಒಂದೆಡೆಯಾಗಿದ್ದರೆ, ಮಲ್ಲಿಗೆ ನಾಡಿನ ವಿಜಯಮಾಲೆ ಯಾರ ಕೊರಳಿಗೆ ಬೀಳಬಹುದು, ಎರಡು, ಮೂರನೇ ಸ್ಥಾನಕ್ಕೆ ಯಾರ್‍ಯಾರು ಬರಬಹುದು ಎಂಬ ಕುತೂಹಲದ ಪ್ರಶ್ನೆಗಳನ್ನು ಕಾರ್ಯಕರ್ತರು ತಮ್ಮ ತಮ್ಮಲ್ಲೇ ಹಾಕಿಕೊಳ್ಳುತ್ತಿದ್ದಾರೆ. ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್ ಕೂಡ ನಡೆಯುತ್ತಿದೆ.

ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ನೋಡಲು ಕ್ಷೇತ್ರದ ಕುರುಬ ಮತ್ತು ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿವೆ. ಹೀಗಾಗಿ ಮತ್ತೆ ಪರಮೇಶ್ವರನಾಯ್ಕ ಗೆದ್ದು ಇತಿಹಾಸ ದಾಖಲಿಸುತ್ತಾರೆ ಎಂದು ಆ ಪಕ್ಷದ ಕಾರ್ಯಕರ್ತರು ತಾರ್ಕಿಕವಾಗಿ ವಾದಿಸುತ್ತಿದ್ದಾರೆ.

ಕ್ಷೇತ್ರದೆಲ್ಲೆಡೆ ‘ಮಡಿಕೆ’ ಹೆಚ್ಚು ಸದ್ದು ಮಾಡಿದೆ. ಬಹುಸಂಖ್ಯಾತ ಪಂಚಮಸಾಲಿ ಸಮಾಜದ ಜತೆಗೆ ಇತರೆ ಸಮಾಜಗಳು ಕೂಡ ಪಕ್ಷೇತರ ಅಭ್ಯರ್ಥಿಯ ಬೆಂಬಲಕ್ಕೆ ನಿಂತಿರುವುದರಿಂದ ಓದೋ ಗಂಗಪ್ಪ ನಿರಾಯಸವಾಗಿ ಗೆದ್ದುಬರಲಿದ್ದಾರೆ ಎಂದು ಗಂಗಪ್ಪ ಬೆಂಬಲಿಗರು ಮತದಾನೋತ್ತರ ಲೆಕ್ಕಾಚಾರವನ್ನು ತೆರೆದಿಡುತ್ತಿದ್ದಾರೆ.

ಕ್ಷೇತ್ರದ ಬಹುತೇಕ ತಾಂಡಾಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಜನರು ಬಿಜೆಪಿ ಪರ ಒಲವು ತೋರಿರುವುದರಿಂದ ಈ ಬಾರಿ ಅಚ್ಚರಿಯ ಫಲಿತಾಂಶ ಹೊರ ಬೀಳಲಿದೆ. ಬಿಜೆಪಿಯ ಬಿ.ಚಂದ್ರನಾಯ್ಕ ಗೆಲುವು ಸಾಧಿಸಲಿದ್ದಾರೆ ಎಂದು ಆ ಪಕ್ಷದ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಕೆ.ಪುತ್ರೇಶ್ ಪರವಾಗಿ ಅಸ್ಪೃಶ್ಯರು ಒಗ್ಗಟ್ಟು ಪ್ರದರ್ಶಿರುವುದರಿಂದ ಅವರು ಕೂಡ ದೊಡ್ಡ ಪ್ರಮಾಣದಲ್ಲಿ ಮತ ಗಳಿಸಲಿದ್ದಾರೆ ಎಂಬ ಮಾತುಗಳು ಅವರ ಬೆಂಬಲಿಗರಿಂದ ಕೇಳಿಬರುತ್ತಿವೆ.

ಒಮ್ಮೆ ಎಂ.ಪಿ.ಪ್ರಕಾಶರು ಉಪ ಚುನಾವಣೆಯಲ್ಲಿ ಸತತ ಗೆಲುವು ಕಂಡಿದ್ದು ಬಿಟ್ಟರೆ ಹೂವಿನಹಡಗಲಿ ಕ್ಷೇತ್ರದ ಪ್ರಬುದ್ಧ ಮತದಾರರು ಯಾವ ಶಾಸಕರನ್ನೂ ಮರು ಆಯ್ಕೆ ಮಾಡಿಲ್ಲ. ಕ್ಷೇತ್ರ ಚುನಾವಣಾ ಇತಿಹಾಸದಲ್ಲಿ ಪಕ್ಷೇತರರೂ ಆಯ್ಕೆಯಾಗಿಲ್ಲ. ಆದರೆ, ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿರುವುದರಿಂದ ಪಕ್ಷೇತರ ಅಭ್ಯರ್ಥಿ ಓದೋ ಗಂಗಪ್ಪ ರಾಷ್ಟ್ರೀಯ ಪಕ್ಷಗಳಿಗೆ ತೀವ್ರ ಪೈಪೋಟಿವೊಡ್ಡಿ ಮುಂಚೂಣಿಗೆ ಬಂದಿದ್ದಾರೆ.

ಪುರಾಯ್ಕೆಗೊಳ್ಳುವ ವಿಶ್ವಾಸದಲ್ಲಿರುವ ಕಾಂಗ್ರೆಸ್‌ನ ಪರಮೇಶ್ವರನಾಯ್ಕ ಅಥವಾ ಪಕ್ಷೇತರ ಓದೋ ಗಂಗಪ್ಪ ಇವರಲ್ಲಿ ಯಾರು ಗೆಲುವು ಸಾಧಿಸಿದರೂ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಒಂದು ವೇಳೆ ಬಿಜೆಪಿಯ ಚಂದ್ರನಾಯ್ಕ ವಿಜಯಿಯಾದರೆ, ಒಮ್ಮೆ ಸೋಲು ಇನ್ನೊಮ್ಮೆ ಗೆಲುವು ನೀಡುವ ಕ್ಷೇತ್ರದ ಪರಂಪರೆ ಮುಂದುವರಿದಂತಾಗುತ್ತದೆ. ಈ ಬಾರಿ ಹಡಗಲಿಯ ಜಾಣ ಮತದಾರ ಯಾರ ಪರ ಒಲವು ತೋರಿದ್ದಾನೆ ಎಂಬುದನ್ನು ತಿಳಿಯಲು ಮೇ 15ರವರೆಗೆ ಕಾಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT