2018 ದ್ವಿಶತಕ ದಾಖಲೆ

7
ಈ ವರ್ಷ ಕನ್ನಡ ಚಿತ್ರಗಳ ಸಂಖ್ಯೆ 225 ದಾಟಲಿದೆಯೇ?

2018 ದ್ವಿಶತಕ ದಾಖಲೆ

Published:
Updated:
Deccan Herald

2017ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 200 ದಾಟಿದ್ದು ಸಾಕಷ್ಟು ಸುದ್ದಿಯಾಗಿತ್ತು. ಆದರೆ, ಈ ವರ್ಷ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ನವೆಂಬರ್‌ ತಿಂಗಳ ಅಂತ್ಯದೊಳಗೇ ದ್ವಿಶತಕದ ಗಡಿದಾಟುವ ಎಲ್ಲ ಲಕ್ಷಣಗಳೂ ಇವೆ. ನವೆಂಬರ್‌ 9ರ ಹೊತ್ತಿಗೆ ಬಿಡುಗಡೆಯಾದ ಚಿತ್ರಗಳ ಒಟ್ಟು ಸಂಖ್ಯೆ 189. ಅವುಗಳಲ್ಲಿ ಎಂಟು ತುಳು ಸಿನಿಮಾಗಳು. ಈ ವರ್ಷದ ಅಂತ್ಯಕ್ಕೆ ಇನ್ನೂ ಏಳು ವಾರಗಳು ಬಾಕಿಯಿವೆ. ತೆರೆ ಕಾಣಲಿರುವ ಸಿನಿಮಾಗಳ ಪಟ್ಟಿಯೂ ದೊಡ್ಡದಿದೆ.  

ಸಂಖ್ಯೆಯ ದೃಷ್ಟಿಯಲ್ಲಿ ಚಿತ್ರರಂಗ ಹೊಸ ಮೈಲಿಗಲ್ಲು ಮುಟ್ಟುವ ಹಾದಿಯಲ್ಲಿರುವುದು ದಿಟ. ಆದರೆ, ಸಿನಿಮಾ ಪಯಣದ ದಾರಿಯನ್ನು ಅವಲೋಕಿಸಿದರೆ ಹೂವಿಗಿಂತ ಮುಳ್ಳಿನ ಮೊನೆಗಳೇ ಹೆಚ್ಚು ಕಾಣಿಸುತ್ತವೆ. ತೆರೆಗೆ ಅಪ್ಪಳಿಸುತ್ತಿರುವ ಸಿನಿಮಾಗಳು ಸಾಗರದ ಹಾಗಿವೆ. ಆದರೆ, ಯಶಸ್ಸಿನ ಲೆಕ್ಕ ಹಾಕಿದರೆ ಬರಗಾಲ ಎದ್ದು ಕಾಣುತ್ತದೆ. ವಾರವೊಂದಕ್ಕೆ ಹನ್ನೊಂದು ಚಿತ್ರಗಳು ತೆರೆಕಂಡ ನಿದರ್ಶನವೂ ಇದೆ. ಚಿತ್ರಮಂದಿರದಲ್ಲಿನ ಖಾಲಿ ಖಾಲಿ ಕುರ್ಚಿಗಳನ್ನು ನೋಡಿದಾಗ ಇದರಿಂದ ಯಾರಿಗೆ ಲಾಭ ಎಂಬ ಯಕ್ಷಪ್ರಶ್ನೆ ಎದುರಾಗುವುದು ಸಹಜ. ಸದ್ಯದ ಕನ್ನಡ ಚಿತ್ರಗಳ ಯಶಸ್ಸಿನ ಮಟ್ಟ ದಿಗಿಲು ಹುಟ್ಟಿಸಿದೆ.


ಸೋನು ಗೌಡ, ನವೀನ್ ಶಂಕರ್

ಚಂದನವನದಲ್ಲಿ ಕಳೆದ ಎಂಟು ತಿಂಗಳಲ್ಲಿ ನಡೆದ ಚಟುವಟಿಕೆಯತ್ತ ತಿರುಗಿ ನೋಡಿದರೆ ಚಿತ್ರಮಂದಿರಗಳ ಎದುರಿನ ಪ್ರೇಕ್ಷಕರ ಸಂದಣಿಗಿಂತ ಬಿಡುಗಡೆಯಾದ ಚಿತ್ರಗಳ ಸಂದಣಿಯೇ ಹೆಚ್ಚಾಗಿ ಕಾಣುತ್ತದೆ. ಈ ಸಂದಣಿಯಲ್ಲಿ ಗೆಲುವಿನ ನಗೆ ಬೀರಿದ್ದು ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ. ಈ ಅವಧಿಯಲ್ಲಿ ಹಲವು ನಾಯಕ ನಟರು ಪ್ರೇಕ್ಷಕಪ್ರಭುವಿನ ಮನಸ್ಸನ್ನು ಗೆಲ್ಲುವಲ್ಲಿ ಸೋತುಹೋದರು.   

‍ಪ್ರಸಕ್ತ ವರ್ಷ‌ ಆರಂಭವಾಗಿದ್ದು, ನಟ ಮನೋರಂಜನ್ ರವಿಚಂದ್ರನ್ ನಟನೆಯ ‘ಬೃಹಸ್ಪತಿ’ ಚಿತ್ರ ತೆರೆಕಾಣುವ ಮೂಲಕ. ಜನವರಿ ತಿಂಗಳ ಮೊದಲ ವಾರ ತೆರೆಕಂಡ ಚಿತ್ರಗಳ ಸಂಖ್ಯೆ ನಾಲ್ಕು. ಆ ನಂತರ ಸಾಲು ಸಾಲು ಚಿತ್ರಗಳು ಬಂದರೂ ಚಂದನವನದ ಪಾಲಿಗೆ ಯಶಸ್ಸು ಮರೀಚಿಕೆಯಾಯಿತು. ಸೋಲಿನ ನಡುವೆ ಮಕಾಡೆ ಮಲಗಿದ್ದ ಚಿತ್ರರಂಗಕ್ಕೆ ಗೆಲುವಿನ ಮಳೆ ಸುರಿಸಿದ್ದು ‘ದುನಿಯಾ’ ಸೂರಿ ನಿರ್ದೇಶನದ ನಟ ಶಿವರಾಜ್‌ಕುಮಾರ್ ಅಭಿನಯದ ‘ಟಗರು’ ಚಿತ್ರ. ಈ ಸಿನಿಮಾ ತೆರೆಕಂಡಿದ್ದು ಫೆಬ್ರುವರಿಯಲ್ಲಿ. 

ಈ ವರ್ಷ ವ್ಯಾ‍‍ಪಾರಿ ನೆಲೆಗಟ್ಟಿನಲ್ಲಿ ಭಿನ್ನ ಕಥನಗಳನ್ನು ಹೆಣೆದು ಪ್ರೇಕ್ಷಕರನ್ನು ತಲುಪಲು ಯತ್ನಿಸಿದ ಚಿತ್ರಗಳ ಸಂಖ್ಯೆ ವಿರಳ.

ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡಿದ್ದು ಪ್ರೇಮ್‌ ನಿರ್ದೇಶನದ ‘ದಿ ವಿಲನ್’ ಚಿತ್ರ. ಉಳಿದಂತೆ ‘ಗುಳ್ಟು’, ‘ಅಯೋಗ್ಯ’, ‘ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು ಕೊಡುಗೆ– ರಾಮಣ್ಣ ರೈ’ ಚಿತ್ರಗಳು ಹಣಗಳಿಕೆಯಲ್ಲಿ ಹಿಂದೆ ಬೀಳಲಿಲ್ಲ.

ತೆರೆಕಂಡ ಚಿತ್ರಗಳ ಪೈಕಿ ಮುಕ್ಕಾಲು ಭಾಗದಷ್ಟು ಚಿತ್ರಗಳಿಗೆ ಥಿಯೇಟರ್‌ನಲ್ಲಿ ಒಂದು ವಾರವೂ ನೆಲೆಯೂರಲು ಸಾಧ್ಯವಾಗಿಲ್ಲ.


‘ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’ ಚಿತ್ರದ ದೃಶ್ಯ

₹ 750 ಕೋಟಿ ವಹಿವಾಟು
ಕನ್ನಡ ಸಿನಿಮಾ ಈ ವರ್ಷ ₹ 750 ಕೋಟಿಗೂ ಹೆಚ್ಚು ವಹಿವಾಟು ನಡೆಸಿದೆ. ಆದರೆ, ಹೂಡಿಕೆ ಮಾಡಿದ ಹಣ ನಿರ್ಮಾಪಕರ ಜೇಬು ತುಂಬಿಸಿಲ್ಲ. ಧಾರಾವಾಹಿಗಳ ಮುಂದೆ ಕುಳಿತ ಪ್ರೇಕ್ಷಕರನ್ನು ಸಿನಿಮಾ ಪರದೆಯತ್ತ ಸೆಳೆಯುವ ತಂತ್ರಗಾರಿಕೆ ನಿರ್ಮಾಪಕರು, ನಿರ್ದೇಶಕರಿಗೆ ಸಿದ್ಧಿಸಿಲ್ಲ. ಹಾಗಾಗಿಯೇ, ಕಿರುತೆರೆ ಉದ್ಯಮದ ವಹಿವಾಟು ಸಿನಿಮಾಕ್ಕಿಂತಲೂ ದುಪ್ಪಟ್ಟಾಗಿದೆ.

ಗುಣಮಟ್ಟದ ಆತಂಕ
ಗುಣಮಟ್ಟಕ್ಕೆ ಸಂಬಂಧಿಸಿದಂತೆ ಈ ವರ್ಷವೂ ಚಿತ್ರರಂಗದ್ದು ನಿರಾಶಾದಾಯಕ ಸಾಧನೆ. ವಾರಕ್ಕೆ ಏಳೆಂಟು ಚಿತ್ರಗಳು ತೆರೆಕಾಣುತ್ತಿವೆ. ಅಷ್ಟು ಚಿತ್ರಗಳನ್ನು ವೀಕ್ಷಿಸುವ ಸಾಮರ್ಥ್ಯ ಪ್ರೇಕ್ಷಕರಿಗೆ ಇದೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ.
ಜೊತೆಗೆ, ಬೆಂಗಳೂರಿನ ಮಲ್ಟಿಫ್ಲೆಕ್ಟ್‌ಗಳಲ್ಲಿ ಇಬ್ಬರು ಮಕ್ಕಳಿರುವ ಕುಟುಂಬವೊಂದು ಚಿತ್ರ ವೀಕ್ಷಿಸಲು ₹ 1,000ದಿಂದ ₹ 1,500 ವ್ಯಯಿಸಬೇಕಿದೆ. ಟಿಕೆಟ್‌ ದರವನ್ನು ಅವಲೋಕಿಸಿದರೆ ಮಧ್ಯಮ ವರ್ಗದ ಪ್ರೇಕ್ಷಕರು ಮಲ್ಟಿಫ್ಲೆಕ್ಸ್‌ಗಳಿಗೆ ತೆರಳಿ ದುಬಾರಿ ಟಿಕೆಟ್‌ ಖರೀದಿಸಿ ಚಿತ್ರ ವೀಕ್ಷಿಸುವುದು ಕಷ್ಟಕರ. ಗುಣಮಟ್ಟದ ಚಿತ್ರಗಳ ಕೊರತೆ ಪರಿಣಾಮ ಪ್ರೇಕ್ಷಕರು ಕೂಡ ಚಿತ್ರಮಂದಿರಕ್ಕೆ ತೆರಳಿ ಚಿತ್ರ ವೀಕ್ಷಿಸುವುದು ಕಡಿಮೆಯಾಗಿದೆ.


ಶಿವರಾಜ್‌ಕುಮಾರ್

‘ಹೆಬ್ಬೆಟ್‌ ರಾಮಕ್ಕ’, ‘ಪಡ್ಡಾಯಿ’ಗೆ ಪ್ರಶಸ್ತಿ’

ನಂಜುಂಡೇಗೌಡ ನಿರ್ದೇಶನದ ‘ಹೆಬ್ಬೆಟ್‌ ರಾಮಕ್ಕ’ ಚಿತ್ರ ಕನ್ನಡ ಅತ್ಯುತ್ತಮ ಪ್ರಾದೇಶಿಕ ಚಿತ್ರಕ್ಕೆ ಭಾಜನವಾಯಿತು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯ ದುರುಪಯೋಗದ ಮೇಲೆ ಚಿತ್ರ ಕನ್ನಡಿ ಹಿಡಿಯುತ್ತದೆ. ‌

ಅಭಯಸಿಂಹ ನಿರ್ದೇಶನದ ‘ಪಡ್ಡಾಯಿ’ ಚಿತ್ರ ತುಳು ಪ್ರಶಸ್ತಿಗೆ ಭಾಜನವಾಯಿತು. ಕಡಲ ತೀರದ ಮೀನುಗಾರರ ಕಥೆ ಆಧರಿಸಿದ ಚಿತ್ರ ಇದು. ಪ್ರಸಿದ್ಧ ನಾಟಕಕಾರ ಶೇಕ್ಸ್‌ಪಿಯರ್‌ನ ‘ಮ್ಯಾಕ್‌ಬೆತ್‌’ ನಾಟಕದಿಂದ ಸ್ಫೂರ್ತಿ ಪಡೆದು ಈ ಚಿತ್ರ ನಿರ್ಮಿಸಲಾಗಿದೆ. ಮೊಗವೀರ ಸಮುದಾಯದ ಬದುಕು, ಬವಣೆ ಮೇಲೆ ಚಿತ್ರ ಬೆಳಕು ಚೆಲ್ಲುತ್ತದೆ.

ಜೆ.ಎಂ. ಪ್ರಹ್ಲಾದ್‌ ಬರೆದ ‘ಮಾರ್ಚ್‌ 22’ ಚಿತ್ರ ‘ಮುತ್ತು ರತ್ನದ ‍ಪ್ಯಾಟೆ’ ಹಾಡಿಗೆ ಅತ್ಯುತ್ತಮ ಗೀತರಚನೆ ಪ್ರಶಸ್ತಿ ಲಭಿಸಿದ್ದು ವಿಶೇಷ.


Caption

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !