ಗುರುವಾರ , ನವೆಂಬರ್ 21, 2019
20 °C

ಅನ್ಯ ಭಾಷಿಕರಿಗೆ ಕನ್ನಡ ಪಾಠ ಮಾಡಲಿದ್ದಾರೆ ಹರಿಪ್ರಿಯಾ

Published:
Updated:
Prajavani

ಬಹುಸಂಸ್ಕೃತಿ ಮೇಳೈಸಿರುವ ಬೆಂಗಳೂರಿನಲ್ಲಿ ‘ಕನ್ನಡ್ ಗೊತ್ತಿಲ್ಲ’ ಎಂಬ ಶಬ್ದ ಹಲವು ಬಾರಿ ನಮ್ಮ ಕಿವಿಯ ಮೇಲೆ ಬಿದ್ದಿರುತ್ತದೆ. ಹೊರ ರಾಜ್ಯಗಳಿಂದ ಇಲ್ಲಿಗೆ ಬಂದವರ ಬಳಿ ಯಾವುದಾದರೊಂದು ಮಾಹಿತಿ ಕೇಳಿದರೆ ಕನ್ನಡ್‌ ಗೊತ್ತಿಲ್ಲ ಎಂದು ಥಟ್ಟನೆ ಉತ್ತರಿಸುತ್ತಾರೆ.

ಇದೇ ಶೀರ್ಷಿಕೆಯಡಿ ಮಯೂರ ರಾಘವೇಂದ್ರ ನಿರ್ದೇಶನದ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕಥೆ, ಚಿತ್ರಕಥೆಯ ಜವಾಬ್ದಾರಿಯನ್ನು ಅವರೇ ನಿಭಾಯಿಸಿದ್ದಾರೆ. ರೇಡಿಯೊ ಜಾಕಿಯಾಗಿದ್ದ ಅವರು ಈ ಚಿತ್ರದ ಮೂಲಕ ನಿರ್ದೇಶಕನಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ.

ಇಂದಿನ ಕನ್ನಡ ಭಾಷೆಯ ಸ್ಥಿತಿಯನ್ನು ಹೇಳುವ ಕಥೆ ಇದಾಗಿದೆ. ಸಿನಿಮಾದ ಕಥೆ ಮತ್ತು ಟೈಟಲ್‌ ಎರಡೂ ಪ್ರಸಕ್ತ ಪರಿಸ್ಥಿತಿಗೆ ಹೊಂದಿಕೊಳ್ಳುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ವಾಸ್ತವ ಸಂಗತಿಗಳ ಮೇಲೆ ‘ಕನ್ನಡ್‌ ಗೊತ್ತಿಲ್ಲ’ ಚಿತ್ರದ ಕಥೆ ಹೆಣೆಯಲಾಗಿದೆ. ವ್ಯಕ್ತಿಯೊಬ್ಬ ಯಾವುದೇ ರಾಜ್ಯದಲ್ಲಿ ಇದ್ದರೂ ಅಲ್ಲಿನ ಮಾತೃಭಾಷೆಗೆ ಗೌರವ ಕೊಡಬೇಕು ಎಂಬು ಸಂದೇಶವೂ ಇದರಲ್ಲಿದೆಯಂತೆ. 

ನಟಿ ಹರಿಪ್ರಿಯಾ ಈ ಚಿತ್ರದ ಮೂಲಕ ತೆರೆಯ ಮೇಲೆ ಕನ್ನಡ ಭಾಷೆಯ ಮಹತ್ವ ಸಾರಲು ಸಿದ್ಧರಾಗಿದ್ದಾರೆ. ‘ಬೆಲ್‌ ಬಾಟಂ’ ಚಿತ್ರದಲ್ಲಿ ಕುಸುಮಾಳಾಗಿ ರೆಟ್ರೊ ಶೈಲಿಯಲ್ಲಿ ಅವರು ಮಿಂಚಿದ್ದರು. ಆ ಬಳಿಕ ತೆರೆಕಂಡ ‘ಸೂಜಿದಾರ’ ಮತ್ತು ‘ಡಾಟರ್‌ ಆಫ್‌ ಪಾರ್ವತಮ್ಮ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಹಾಗಾಗಿ, ನಾಯಕಿ ಪ್ರಧಾನವಾದ ಈ ಚಿತ್ರದ ಮೇಲೆ ಅವರ ನಿರೀಕ್ಷೆ ಭಾರ ಹೆಚ್ಚಿದೆ. ವಿಭಿನ್ನವಾದ ಪಾತ್ರಕ್ಕೆ ಬಣ್ಣ ಹಚ್ಚಿರುವ ಖುಷಿಯಲ್ಲಿದ್ದಾರೆ. ಕನ್ನಡಿಗರ ಪ್ರತಿನಿಧಿಯಾಗಿಯೂ ಅವರು ಕಾಣಿಸಿಕೊಂಡಿದ್ದಾರಂತೆ.

ಇತ್ತೀಚೆಗೆ ಸಿನಿಮಾದ ಆಡಿಯೊ ಬಿಡುಗಡೆಗೊಂಡಿತು. ಕುಮಾರ ಕಂಠೀರವ ಬಂಡವಾಳ ಹೂಡಿದ್ದಾರೆ. ನಕುಲ್‌ ಅಭಯಂಕರ್ ಸಂಗೀತ ಸಂಯೋಜಿಸಿದ್ದಾರೆ. ಗಿರಿಧರ್‌ ದಿವಾನ್‌ ಅವರ ಛಾಯಾಗ್ರಹಣವಿದೆ. ಸುಧಾರಾಣಿ, ಸಿಹಿಕಹಿ ಚಂದ್ರು, ಪವನ್‌ ತಾರಾಗಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)