ಬದುಕಿಗಾಗಿ ಹೋರಾಟ

7

ಬದುಕಿಗಾಗಿ ಹೋರಾಟ

Published:
Updated:
Deccan Herald

ಮನುಷ್ಯನ ಹುಟ್ಟಿನಿಂದ ಬದುಕಿನ ಮೇಲೆ ಶಿಕ್ಷಣ, ಧರ್ಮ, ಜೀವನ ಪದ್ಧತಿ, ಆರ್ಥಿಕ ಪರಿಸ್ಥಿತಿ ಮತ್ತು ಸಮಾಜ ಪ್ರಭಾವ ಬೀರುತ್ತದೆ. ನಾಲ್ವರು ಅನಾಥ ಮಕ್ಕಳ ಮೇಲೆ ಈ ಅಂಶಗಳು ಹೇಗೆ ಪರಿಣಾಮ ಬೀರುತ್ತವೆ ಎನ್ನುವುದೇ ‘Gವನ ಯಜ್ಞ’ ಚಿತ್ರದ ಕಥಾಸಾರ. ‘ಬರಲಿದೆ ಒಂದೊಳ್ಳೆ ಧೂಮ’ ಎಂದು ಅಡಿಬರಹವೂ ಇದೆ.

ಶಿವು ಸರಳೇಬೆಟ್ಟು ಇದರ ನಿರ್ದೇಶಕ. ಕಥೆ ಕೇಳಿದ ಸ್ನೇಹಿತರಾದ ರಂಜನ್‌ ಶೆಟ್ಟಿ ಮತ್ತು ಕಿರಣ್‌ ರೈ ಬಂಡವಾಳ ಹೂಡಿದ್ದಾರೆ. ‘ನಾವು ಒಂದು ಪುಸ್ತಕ ಓದುತ್ತೇವೆ. ಯಾವ ದೃಷ್ಟಿಕೋನದಲ್ಲಿ ಅಧ್ಯಯನ ಮಾಡುತ್ತೇವೆಯೋ ಅದರಂತೆ ಅದರಲ್ಲಿರುವ ವಿಚಾರಗಳು ನಮಗೆ ಅರ್ಥವಾಗುತ್ತವೆ. ಐದು ದೃಷ್ಟಿಕೋನದಲ್ಲಿ ಮಾಡಿರುವ ಚಿತ್ರ ಇದು. ಭೂತಕಾಲ ಮತ್ತು ವರ್ತಮಾನ ಕಾಲಗಳ ನಡುವೆ ನಡೆಯುವ ಜೀವನ ಹೋರಾಟದ ಚಿತ್ರಣವೇ ಸಿನಿಮಾದ ಹೂರಣ’ ಎಂದು ವಿವರಿಸಿದರು.

ಹಿರಿಯ ನಟ ರಮೇಶ್‌ ಭಟ್‌ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ‘ನನಗೆ ಸಂಭಾವನೆ ಕಡಿಮೆ ಕೊಡಿ. ಆದರೆ, ಪೋಸ್ಟರ್‌ನಲ್ಲಿ ನನ್ನ ಚಿತ್ರ ಹಾಕಬೇಕು ಎಂದು ನಿರ್ದೇಶಕರಿಗೆ ಕೋರಿದ್ದೆ. ಅದರಂತೆ ದೊಡ್ಡದಾಗಿ ಚಿತ್ರ ಹಾಕಿದ್ದಾರೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

‘ಕೆಲವರ ಬದುಕು ಭ್ರಮೆಯಲ್ಲಿ ಸಾಗುತ್ತಿರುತ್ತದೆ. ಜೀವನದ ದಾರಿಯಲ್ಲಿ ಭ್ರಮೆಯನ್ನು ಪಕ್ಕಕ್ಕೆ ಸರಿಸಿ ಸತ್ಯದ ಹಾದಿಯಲ್ಲಿ ಸಾಗುವುದನ್ನು ಚಿತ್ರ ಕಟ್ಟಿಕೊಡುತ್ತದೆ. ಜವಾಬ್ದಾರಿಯುತ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ಹೇಳಿದರು.

ಮಂಗಳೂರು ಬಳಿಯ ಎಂಟುನೂರು ವರ್ಷಗಳಷ್ಟು ಹಳೆಯದಾದ ಮನೆಯೊಂದರಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ. ಇಲ್ಲಿ ಶೂಟಿಂಗ್‌ ನಡೆಸಲು ಕುಟುಂಬದ ಸದಸ್ಯರು ಹಲವು ಷರತ್ತು ವಿಧಿಸಿದರಂತೆ. ಮಲಯಾಳ ಚಿತ್ರದ ಶೂಟಿಂಗ್‌ ಆ ಸ್ಥಳದಲ್ಲಿ ನಡೆದಿತ್ತು. ಆಗ ಅಲ್ಲಿನ ಸಂಪ್ರದಾಯಕ್ಕೆ ಅಡಚಣೆಯಾಗಿತ್ತಂತೆ. ನಾವು ಕುಟುಂಬಸ್ಥರ ಅನುಮತಿ ಪಡೆಯಲು ಕಸರತ್ತು ನಡೆಸಬೇಕಾಯಿತು ಎಂದು ಚಿತ್ರತಂಡ ಹೇಳಿಕೊಂಡಿತು.

ಮನೋಜ್‌ ಕುಮಾರ್‌ ಈ ಚಿತ್ರದ ನಾಯಕ. ‘ಚಿತ್ರದಲ್ಲಿ ನಾಲ್ಕು ಕಥೆಗಳು ಸಾಗುತ್ತವೆ. ಮಧ್ಯದಲ್ಲಿ ಅಂತರ ಕಳೆದುಕೊಳ್ಳುತ್ತವೆ. ಕೊನೆಯಲ್ಲಿ ಯಾವ ರೀತಿ ಕನೆಕ್ಟ್‌ ಆಗುತ್ತವೆ ಎನ್ನುವುದೇ ಕಥಾಹಂದರ’ ಎಂದು ಹೇಳಿದರು.‌

ಸುರೇಂದ್ರ ಪಣೆಯೂರು ಅವರ ಛಾಯಾಗ್ರಹಣವಿದೆ. ಚಿತ್ರದ ಒಂಬತ್ತು ಹಾಡುಗಳಿಗೆ ಆಶ್ಲೇ ಮೈಕಲ್‌ ಸಂಗೀತ ಸಂಯೋಜಿಸಿದ್ದಾರೆ. ಆದ್ಯಾ ಆರಾಧನ್‌, ಬಿ. ಜಯಶ್ರೀ, ಅನ್ವಿತಾ ಸಾಗರ್, ಸಂದೀಪ್‌ ಶೆಟ್ಟಿ ತಾರಾಗಣದಲ್ಲಿದ್ದಾರೆ. ನವೆಂಬರ್‌ ಎರಡರಂದು ಚಿತ್ರ ತೆರೆಕಾಣುತ್ತಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !