ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ ನಕ್ಷೆಯಲ್ಲಿ ಬೆಂಗಳೂರಿನ ಶಾಸನಗಳ ಗುರುತುಗಳು

ಶಾಸನ ಸಂರಕ್ಷಣಾ ಅಭಿಯಾನ
Last Updated 17 ಜುಲೈ 2018, 10:41 IST
ಅಕ್ಷರ ಗಾತ್ರ

ಬೆಂಗಳೂರು: ಆಸಕ್ತರ ಶ್ರಮದಿಂದಾಗಿ ಬೆಂಗಳೂರಿನಲ್ಲಿ ಶಿಲಾ ಶಾಸನಗಳಿರುವ ಸ್ಥಳಗಳು ಗೂಗಲ್‌ ನಕ್ಷೆಯಲ್ಲಿ ಕಾಣಿಕೊಂಡಿವೆ.

ಶಾಸನ ಇರುವ ಸ್ಥಳ ಮಾತ್ರವಲ್ಲ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅವುಗಳ ಸಂಪೂರ್ಣ ಸಾರಾಂಶ, ಶಾಸನದ ಸದ್ಯದ ಸ್ಥಿತಿ, ಕಲ್ಲಿನ ಅಳತೆ, ರಚಿಸಲಾದ ವರ್ಷ, ಆಕರ ದಾಖಲೆಗಳು ಇಲ್ಲಿವೆ. ಕೆಲವು ಶಾಸನಗಳ ಚಿತ್ರ, ವಿಡಿಯೊಗಳನ್ನು ಸಹ ಈ ನಕ್ಷೆಯೊಂದಿಗೆ ನೋಡಬಹುದು. ಈ ಶಾಸನಗಳು ಇರುವ ಪ್ರದೇಶ ತಲುಪಿಸುವ ದಾರಿಯನ್ನು ಇಲ್ಲಿ ಸುಲಭವಾಗಿ ಕಂಡುಕೊಳ್ಳಬಹುದು.

ಬೆಂಗಳೂರು ನಗರ ಪ್ರದೇಶದ 150, ಹೊಸಕೋಟೆಯ 80 ಮತ್ತು ಮಾಗಡಿ ತಾಲ್ಲೂಕಿನ 20 ಶಿಲಾ ಶಾಸನಗಳ ಮಾಹಿತಿ ನಕ್ಷೆಯಲ್ಲಿ ಸದ್ಯ ಇದೆ. ಇವುಗಳಲ್ಲಿ 32 ಶಾಸನಗಳು ಸುಸ್ಥಿತಿಯಲ್ಲಿವೆ. ಅವಸಾನದ ಅಂಚಿನಲ್ಲಿ ಇರುವ ಉಳಿದ ಶಾಸನದ ಸ್ಥಳಗಳನ್ನು ಅಪಾಯಕಾರಿ ಸೂಚನಾ ಚಿಹ್ನೆ ಹಾಗೂ ಕೆಂಪು ಬಣ್ಣದಿಂದ ಗುರುತಿಸಲಾಗಿದೆ.

‘ಬೆಂಗಳೂರು ಗ್ರಾಮಾಂತರದ ಹೊಸಕೋಟೆ, ದೇವನಹಳ್ಳಿ, ಆನೇಕಲ್‌ ಮತ್ತು ರಾಮನಗರ, ಮಾಗಡಿಯಲ್ಲಿನ ಎಲ್ಲ ಶಾಸನಗಳ ಮಾಹಿತಿಯನ್ನು ನಕ್ಷೆಯಲ್ಲಿ ಸೇರಿಸುವ ಪ್ರಯತ್ನ ಜಾರಿಯಲ್ಲಿದೆ’ ಎನ್ನುತ್ತಾರೆ ಶಾಸನಗಳ ಸಂರಕ್ಷಣೆಯ ಅಭಿಯಾನ ಆರಂಭಿಸಿರುವ ಪಿ.ಎಲ್‌.ಉದಯ್‌ ಕುಮಾರ್‌.

ಈ ಶಾಸನಗಳು ಐತಿಹಾಸಿಕ ಮಾಹಿತಿಯೊಂದಿಗೆ, ಭಾಷೆಯ ಬೆಳವಣಿಗೆ ಮತ್ತು ಆಯಾ ಪ್ರದೇಶದ ವಿಕಸನವನ್ನು ತಿಳಿಯಲು ನೆರವಾಗುತ್ತಿವೆ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಯ ಸಾಲುಗಳು ಇವುಗಳಲ್ಲಿ ಇವೆ.

ನಕ್ಷೆಯೊಂದಿಗೆ ಕನ್ನಡ ಶಾಸನಗಳ ಮೂಲ ಸಾಲುಗಳನ್ನು ಹಾಕಲಾಗಿದೆ. ತಮಿಳು ಮತ್ತು ತೆಲುಗು ಶಾಸನಗಳ ಸಾರವನ್ನು ಕಲೆಹಾಕುವ ಪ್ರಯತ್ನ ಜಾರಿಯಲ್ಲಿದೆಯಂತೆ.

‘ಶಾಸನಗಳ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಇವುಗಳನ್ನು ನಕ್ಷೆಯಲ್ಲಿ ಗುರುತಿಸಿ, ಮಾಹಿತಿ ನೀಡುತ್ತಿದ್ದೇವೆ. ಶಾಸನಗಳಿರುವ ಸ್ಥಳಗಳಿಗೆ ಜನರು ಹೋಗಲಿ, ತಿಳಿಯಲಿ ಹಾಗೂ ಅಧ್ಯಯನ ಮಾಡಲಿ ಎಂಬುದು ನಮ್ಮ ಆಶಯ’ ಎನ್ನುತ್ತಾರೆ ಉದಯ್‌ ಕುಮಾರ್‌.

ಈ ಶಾಸನಗಳ ಕುರಿತು ವಿಕಿಪಿಡಿಯಾ ಪುಟಗಳು, ವಿಡಿಯೊಗಳು ಮತ್ತು ಲೇಖನಗಳನ್ನು ಸಿದ್ಧಪಡಿಸಲು ಉದಯ್‌ ಅವರ ತಂಡ ಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT