ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಬೋದರನಲ್ಲಿ ಏನುಂಟು, ಏನಿಲ್ಲ...

Last Updated 28 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ರಾಜ್ ಸೂರ್ಯ ನಿರ್ದೇಶನದ ಮೊದಲ ಚಿತ್ರ ‘ಲಂಡನ್ನಲ್ಲಿ ಲಂಬೋದರ’. ಹೊಸ ನಟ ಸಂತೋಷ್ ಅವರು ಇದರಲ್ಲಿ ಕಥಾನಾಯಕ. ಕರ್ನಾಟಕ ಮತ್ತು ಲಂಡನ್‌ ಈ ಕಥೆಯ ಕೇಂದ್ರಬಿಂದುಗಳು. ಇದು ಶುಕ್ರವಾರ ತೆರೆಗೆ ಬರುತ್ತಿದೆ. ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕಾತರದಲ್ಲಿದ್ದರು ರಾಜ್‌. ಅದರ ನಡುವೆಯೇ ‘ಸಿನಿಮಾ ಪುರವಣಿ’ ಜೊತೆ ಮಾತನಾಡಿದರು. ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ:

* ಈ ಸಿನಿಮಾದಲ್ಲಿ ಪ್ರಧಾನವಾಗಿರುವ ರಸ ಯಾವುದು?
ಇದರಲ್ಲಿ ಹಾಸ್ಯರಸವೇ ಪ್ರಧಾನ. ನಮ್ಮಲ್ಲಿ ಸಿದ್ಧವಾಗಿದ್ದ ಕಥೆಯನ್ನು ಹೇಳಲು ಹಾಸ್ಯರಸವನ್ನೇ ಪ್ರಧಾನವಾಗಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣಗಳಿವೆ. ಸಿನಿಮಾ ನೋಡಲು ಬರುವ ಪ್ರತಿ ಹತ್ತು ಮಂದಿಯಲ್ಲಿ ಎಂಟು ಅಥವಾ ಒಂಬತ್ತು ಜನರಿಗೆ ಹಾಸ್ಯ ಇಷ್ಟವಾಗುತ್ತದೆ. ಹೆಚ್ಚಿನ ಜನ ಹಾಸ್ಯವನ್ನು ಸ್ವೀಕರಿಸುತ್ತಾರೆ. ಹಾಗಾಗಿ ಇದನ್ನೇ ಪ್ರಧಾನವಾಗಿ ಆಯ್ಕೆ ಮಾಡಿಕೊಂಡೆವು. ಅದರ ಜೊತೆಯಲ್ಲಿ ಸಸ್ಪೆನ್ಸ್‌, ರೊಮ್ಯಾನ್ಸ್ ಇರುತ್ತವೆ.

* ಬೇರೆ ದೇಶಗಳಲ್ಲಿ ಚಿತ್ರೀಕರಣ ಆಗಿರುವ ಸಿನಿಮಾಗಳಲ್ಲಿ ಸಸ್ಪೆನ್ಸ್‌, ಮರ್ಡರ್‌ ಮಿಸ್ಟರಿಯಂತಹ ಕಥಾಹಂದರ ಇರುವುದಿದೆ. ಆದರೆ, ನೀವು ಹಾಸ್ಯವನ್ನು ಪ್ರಧಾನವಾಗಿ ಆಯ್ಕೆ ಮಾಡಿಕೊಂಡಿದ್ದೇಕೆ?
ವಿದೇಶಗಳಲ್ಲಿ ನಡೆಯುವ ಕಥೆ ಇಟ್ಟುಕೊಂಡು ಮೊದಲ ಬಾರಿ ಸಿನಿಮಾ ಮಾಡುವವರು ಸಸ್ಪೆನ್ಸ್‌ನಂತಹ ಕಥಾವಸ್ತುವನ್ನು ಆಯ್ಕೆ ಮಾಡಿಕೊಳ್ಳುವುದು ಇದ್ದೇ ಇದೆ. ಆದರೆ, ನಮ್ಮಿಂದ ಸಾಧ್ಯವಾಗುವುದನ್ನೇ ತೆರೆಯ ಮೇಲೆ ತರುವ ಕೆಲಸ ಮಾಡಬೇಕು. ನಾನು ಹಿಂದೆ ಕೆಲಸ ಮಾಡಿದ ಅನುಭವ ಇಟ್ಟುಕೊಂಡು ಹೇಳುವುದಾದರೆ, ನನ್ನಿಂದ ಆಗುವುದು ಹಾಸ್ಯವಸ್ತು ಇರುವ ಸಿನಿಮಾ ಮಾಡುವ ಕೆಲಸ. ಹಾಸ್ಯ ಎಂಬುದು ನನ್ನ ಯುಎಸ್‌ಪಿ ಕೂಡ ಹೌದು. ನಾನು ಮಾಡುವ ಸಿನಿಮಾವನ್ನು ಜನ ವೀಕ್ಷಿಸಬೇಕು. ನಾನು ಮರ್ಡರ್‌ ಮಿಸ್ಟರಿ ಅಥವಾ ಸಸ್ಪೆನ್ಸ್‌ ಪ್ರಧಾನವಾಗಿರುವ ಸಿನಿಮಾ ಮಾಡಿ ಅದು ಜನಕ್ಕೆ ಇಷ್ಟವಾಗದಿದ್ದರೆ? ಆದರೆ, ಹಾಸ್ಯವನ್ನು ನಾನು ರುಚಿಕರವಾಗಿ ಜನರ ಮುಂದಿರಿಸಬಲ್ಲೆ. ಅದರ ಜೊತೆಯಲ್ಲೇ ಎಷ್ಟು ಬೇಕೋ ಅಷ್ಟು ಸಸ್ಪೆನ್ಸ್‌, ರೊಮ್ಯಾನ್ಸ್‌ ಹಾಗೂ ಬೇರೆ ಅಂಶಗಳನ್ನು ಬೆರೆಸಿದ್ದೇನೆ. ಈ ಸಿನಿಮಾ ನೋಡಲು ಬರುವವರು ಎರಡು ಗಂಟೆ ಕಾಲ ಕಥೆಯೊಳಗೆ ಸೇರಿಕೊಳ್ಳಬಹುದು.

* ಈ ಸಿನಿಮಾ ಮಾಡಲು ಸಿನಿಮಾ ಕ್ಷೇತ್ರಕ್ಕೆ ಸಂಪೂರ್ಣ ಹೊಸಬರಾದ ಸಂತೋಷ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ?
ಈ ಸಿನಿಮಾದಲ್ಲಿ ನಾಯಕ ನಟನನ್ನು ವೈಭವೀಕರಿಸಿ ತೋರಿಸುವ ಕೆಲಸ ಮಾಡಿಲ್ಲ. ಜನರಿಗೆ ಮನರಂಜನೆ ಕೊಡುವ ಸಿನಿಮಾ ಮಾಡಬೇಕು ಎಂಬುದೇ ನನ್ನ ಗುರಿ. ನನಗೆ ಯಾವುದೇ ಮಿತಿಗಳನ್ನು ಇರಿಸಿಕೊಂಡು ಸಿನಿಮಾ ಮಾಡುವುದು ಬೇಕಿರಲಿಲ್ಲ. ಇದು ನನ್ನ ಮೊದಲ ಸಿನಿಮಾ ಕೂಡ ಆಗಿರುವ ಕಾರಣ, ನಾನು ಅಂದುಕೊಂಡಂತೆ ನಾಯಕನ ಪಾತ್ರವನ್ನು ಕಟ್ಟಬೇಕಿತ್ತು. ಅದಕ್ಕೆ ಸೂಕ್ತ ಅನಿಸಿದ್ದು ಸಂತೋಷ್. ಅವರಿಗೆ ನಮ್ಮ ಚಿತ್ರಕಥೆಯ ಅಗತ್ಯಗಳಿಗೆ ತಕ್ಕಂತೆ ತರಬೇತಿ ಕೂಡ ನೀಡಿದ್ದೆವು.

ಸಂತೋಷ್ ಅವರ ಮುಖ ನೋಡಿದರೆ ಒಂದಿಷ್ಟು ಲವಲವಿಕೆ, ತಮಾಷೆ ಕೂಡ ಕಾಣಿಸುತ್ತದೆ. ನನ್ನ ಕಥೆಗೆ ಅವರು ಹೊಂದಿಕೆ ಆಗುತ್ತಿದ್ದರು. ಏನು ಹೇಳಿದರೂ ಅಭಿನಯಿಸಿ ತೋರಿಸುವೆ ಎಂಬ ಬದ್ಧತೆ ಕೂಡ ಅವರಲ್ಲಿ ಇತ್ತು. ಸಿನಿಮಾ ಕೆಲಸ ಆರಂಭ ಆದಾಗಿನಿಂದ ಕೊನೆಯವರೆಗೂ ಅವರು ಅದೇ ಬದ್ಧತೆ ತೋರಿಸಿದ್ದಾರೆ. ಸಂತೋಷ್ ಅವರು ನಮಗೆ ಪರಿಚಿತ ಆಗಿದ್ದು ಸಂಗೀತ ನಿರ್ದೇಶಕ ಪ್ರಣವ್ ಅವರ ಮೂಲಕ. ಸಂತೋಷ್ ಅವರನ್ನು ನಾವು ರಸ್ತೆ ಮಧ್ಯೆ ನಿಲ್ಲಿಸಿ ಅಭಿನಯ ಮಾಡುವಂತೆ ಹೇಳಿದ್ದೂ ಇದೆ!

* ಇದು ಜನರಲ್ಲಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿ, ಕುರ್ಚಿಯ ಅಂಚಿಗೆ ತರಿಸುತ್ತದೆಯಾ? ಅಥವಾ ಕಥೆಯನ್ನು ಸಹಜವಾಗಿ, ತಣ್ಣನೆಯ ಧಾಟಿಯಲ್ಲಿ ಹೇಳುತ್ತದೆಯಾ?
ಇದರಲ್ಲಿ ಥ್ರಿಲ್‌ ಆಗಿಸುವ ಅಂಶಗಳು ಅಥವಾ ವೀಕ್ಷಕರನ್ನು ಭಾವುಕಗೊಳಿಸುವ ಅಂಶಗಳು ಹೆಚ್ಚೇನೂ ಇಲ್ಲ. ಹಾಸ್ಯ ಕೂಡ ಸಂದರ್ಭಕ್ಕೆ ತಕ್ಕ ಹಾಗೆ ಬರುತ್ತದೆ. ಮೊದಲಾರ್ಧ ಮುಗಿದ ನಂತರವೂ ಕಥೆ ಏನು ಎಂಬುದು ಗೊತ್ತಾಗುವುದಿಲ್ಲ. ಅದು ಜನರನ್ನು ಚಿತ್ರದ ಜೊತೆ ಎಂಗೇಜ್‌ ಮಾಡಿಸುತ್ತದೆ.

* ಈ ಸಿನಿಮಾದಲ್ಲಿ ಇರುವ ಹೂರಣವನ್ನು ಇಷ್ಟಪಟ್ಟು ವೀಕ್ಷಿಸುವ ಜನ ಕನ್ನಡದಲ್ಲಿ ಎಷ್ಟಿರಬಹುದು?
ಸಿನಿಮಾ ವೀಕ್ಷಕರಲ್ಲಿ ಹಲವು ಬಗೆಗಳಿವೆ. ನಮ್ಮ ಸಿನಿಮಾವನ್ನು ಯಾವ ರೀತಿಯ ವೀಕ್ಷಕರು ಹೆಚ್ಚು ಇಷ್ಟಪಡಬಲ್ಲರು ಎಂದು ಖಚಿತವಾಗಿ ಹೇಳಲಾರೆ. ಆದರೆ ನಮ್ಮದು ನಗರವಾಸಿಗಳು, ಎ ಸೆಂಟರ್‌ ವೀಕ್ಷಕರು ಹೆಚ್ಚು ನೋಡಬಹುದು ಎಂದು ನಂಬಿದ್ದೇನೆ. ಹಾಗಂತ ಇದನ್ನು ವೀಕ್ಷಿಸುವವರು ಅವರು ಮಾತ್ರ ಎಂದು ನಾನು ಹೇಳಲಾರೆ. ಮಾಸ್‌ ವೀಕ್ಷಕರು ಕೂಡ ಇದರತ್ತ ಆಕರ್ಷಿತರಾಗಬಹುದು. ಕನ್ನಡದ ಸಿನಿಮಾ ವೀಕ್ಷಕರನ್ನು ಸ್ಪರ್ಶಿಸುವ ಅಂಶಗಳು ಇದರಲ್ಲಿವೆ.

* ಮಕ್ಕಳನ್ನು ಚೆನ್ನಾಗಿ ಓದಿಸಿ, ಅವರನ್ನು ವಿದೇಶಕ್ಕೆ ಕಳುಹಿಸಿ, ನಂತರ ಪರಿತಪಿಸುವ ಅಪ್ಪ–ಅಮ್ಮನ ಸಂಕಟ ನಿಮ್ಮ ಸಿನಿಮಾ ಮೇಲೆ ಪ್ರಭಾವ ಬೀರಿದೆಯಾ?
ಅದರ ಪ್ರಭಾವ ಖಂಡಿತ ಇದೆ. ನನ್ನ ಸ್ನೇಹಿತನೊಬ್ಬ ವಿದೇಶಕ್ಕೆ ಹೋದ. ಆಗ ಅವರ ಅಪ್ಪ–ಅಮ್ಮ ಖುಷಿಪಟ್ಟಿದ್ದರು. ಆದರೆ, ನಂತರದ ದಿನಗಳಲ್ಲಿ ಅವರು ಖಿನ್ನತೆಗೆ ಒಳಗಾದರು. ಅವರ ಊರು, ಅವರ ಹೆಸರು ಬಹಿರಂಗಪಡಿಸುವುದಿಲ್ಲ. ಅವರು ಸಂಕಪಡುತ್ತಿದ್ದರು ಎಂಬುದು ನಿಜ. ಸಿನಿಮಾದಲ್ಲಿ ಸಂಕಟ ಇಲ್ಲದಿದ್ದರೂ, ಅವರು ಪಟ್ಟ ಪಾಡು ತುಸು ಪ್ರಭಾವ ಬೀರಿದೆ. ಟ್ರೇಲರ್‌ನಲ್ಲಿನ ಒಂದು ಸಂಭಾಷಣೆಯನ್ನು ಗಮನಿಸಿದರೆ ನಿಮಗೆ ಅದು ಗೊತ್ತಾಗುತ್ತದೆ.

ರಾಜ್ ಸೂರ್ಯ
ರಾಜ್ ಸೂರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT