ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಲಾಸಂ ನಾಟಕದ ‘ಮೂಕವಿಸ್ಮಿತ’ ರೂಪ

Last Updated 28 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಕನ್ನಡದ ಹಳೆಯ ಕಥೆ, ಕಾದಂಬರಿ ಹಾಗೂ ನಾಟಕಗಳನ್ನು ಆಧಾರವಾಗಿ ಇಟ್ಟುಕೊಂಡು ಸಿನಿಮಾ ಮಾಡುವುದು ಕಡಿಮೆ ಆಗಿಬಿಟ್ಟಿದೆ ಎಂದು ಬೇಸರಪಟ್ಟುಕೊಳ್ಳುವವರಿಗೆ ಒಂದು ಸಿಹಿ ಸುದ್ದಿ ಇಲ್ಲಿದೆ. ಟಿ.ಪಿ. ಕೈಲಾಸಂ ಅವರ ನಾಟಕವನ್ನು ಆಧಾರವಾಗಿ ಇಟ್ಟುಕೊಂಡು ಹೊಸಬರ ತಂಡವೊಂದು ಹೊಸ ಸಿನಿಮಾ ಮಾಡಿದೆ. ಸಿನಿಮಾ ಹೆಸರು ‘ಮೂಕವಿಸ್ಮಿತ’.

ಈ ಚಿತ್ರದ ನಿರ್ದೇಶನ ಸೇರಿದಂತೆ ಹಲವು ಹೊಣೆಗಳನ್ನು ಹೊತ್ತವರು ಗುರುದತ್ ಶ್ರೀಕಾಂತ್. ಅವರಿಗೆ ಈಗ 24 ವರ್ಷ ವಯಸ್ಸು. ‘ಈ ಚಿತ್ರದಲ್ಲಿ ದೊಡ್ಡ ತಾರಾಗಣ ಇಲ್ಲ. ಆದರೆ, ಈ ಸಿನಿಮಾಕ್ಕೆ ಕೈಲಾಸಂ ಅವರೇ ದೊಡ್ಡ ತಾರೆ’ ಎಂದರು ಗುರುದತ್.

ಈ ಸಿನಿಮಾ ಕಟ್ಟಲು ಗುರುದತ್ ಅವರಿಗೆ ಎರಡೂವರೆ ವರ್ಷ ಬೇಕಾಯಿತು. ಅವರು ಈ ಹಿಂದೆ ರಂಗಭೂಮಿಯಲ್ಲಿ ಕೆಲಸ ಮಾಡಿದವರು. ‘ಕೈಲಾಸಂ ಎನ್ನುವ ಹೆಸರಿನಲ್ಲೇ ಒಂದು ಮಜ ಇದೆ. ಕನ್ನಡಕ್ಕೆ ಮೊದಲು ಕಂಗ್ಲಿಷ್‌ ಪರಿಚಯಿಸಿದ್ದೇ ಕೈಲಾಸಂ. ಇಂದಿನ ಕಂಗ್ಲಿಷ್ ಯುಗದಲ್ಲಿ ನಾವು ಅವರ ನಾಟಕ ಆಧರಿಸಿ ಸಿನಿಮಾ ಮಾಡುತ್ತಿದ್ದೇವೆ. ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ಧೈರ್ಯ ಇದೆ’ ಎಂದು ಹೇಳಿಕೊಂಡರು ಗುರುದತ್.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳು ಇವೆ. ‘1920ರ ಕಾಲದ ಕಥೆಯನ್ನು ಈ ಕಾಲಕ್ಕೆ ಬ್ಲೆಂಡ್ ಮಾಡಿ, ಒಂದು ಸಸ್ಪೆನ್ಸ್‌ ಸಿನಿಮಾ ಮಾಡಿದ್ದೇವೆ. ಸಸ್ಪೆನ್ಸ್‌ಗೆ ಉತ್ತರ ಸಿಗುವುದು ಚಿತ್ರದ ಕೊನೆಯಲ್ಲಿ’ ಎಂದೂ ಗುರುದತ್ ಹೇಳಿದರು. ಅಂದಹಾಗೆ, ಚಿತ್ರತಂಡವು ಇದು ಕೈಲಾಸಂ ಅವರ ಯಾವ ನಾಟಕ ಆಧರಿಸಿದ ಸಿನಿಮಾ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ, ಚಿತ್ರದಲ್ಲಿನ ಕೆಲವು ಪಾತ್ರಗಳ ಹೆಸರು ನೋಡಿದರೆ ‘ಟೊಳ್ಳುಗಟ್ಟಿ’ ನಾಟಕ ಆಧರಿಸಿದ್ದಾಗಿರಬಹುದು ಎಂಬ ಅನುಮಾನ ಮೂಡುತ್ತದೆ.

ಸಂದೀಪ್ ಮಲಾನಿ ಅವರು ಇದರಲ್ಲಿ ಹಿರಿಯಣ್ಣ ಎನ್ನುವ ಪಾತ್ರ ನಿಭಾಯಿಸಿದ್ದಾರೆ. ಶುಭರಕ್ಷಾ ಅವರು ಇದರಲ್ಲಿ ಮೊದಲ ಬಾರಿಗೆ ಗ್ಲಾಮರ್‌ ಇಲ್ಲದೆ ಕಾಣಿಸಿಕೊಂಡಿದ್ದಾರೆ. ‘ಹಿಂದಿನ ಕಾಲದ ಕನ್ನಡವನ್ನು ಸಂಭಾಷಣೆಯಲ್ಲಿ ತರುವುದು ಕಲಾವಿದರಿಗೆ ಕಷ್ಟವಾಗದಿರಲಿ ಎಂಬ ಕಾರಣಕ್ಕೆ ನಮಗೆ ತರಬೇತಿ ನೀಡಿದ್ದರು’ ಎಂದು ವಾಣಿಶ್ರೀ ಭಟ್ ಹೇಳಿದರು.

ಸಿನಿಮಾ ತಂಡಕ್ಕೆ ಶುಭ ಹಾರೈಸಲು ಬಂದಿದ್ದ ಸಾಹಿತಿ ಡಾ. ದೊಡ್ಡರಂಗೇಗೌಡ, ‘ಶುದ್ಧ ಅಭಿರುಚಿಯ ಕನ್ನಡದ ಪಡೆಯೊಂದನ್ನು ಕಟ್ಟಿದೆ ಈ ಚಿತ್ರತಂಡ’ ಎಂದು ಖುಷಿ ವ್ಯಕ್ತಪಡಿಸಿದರು. ಈ ಸಿನಿಮಾ ಚಿತ್ರೀಕರಣ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT