ಗುರುವಾರ , ಅಕ್ಟೋಬರ್ 17, 2019
24 °C
ಜೀ5 ಮೂಲಕ ‘ಭಿನ್ನ’ ತೆರೆಗೆ

ಸಿನಿಮಾ ಬಿಡುಗಡೆ: ಹೊಸ ಶಕೆ!

Published:
Updated:
Prajavani

ಸಿನಿಮಾ ಬಿಡುಗಡೆ ಆದ ದಿನ ಮೊದಲ ಪ್ರದರ್ಶನವನ್ನು ಮನೆಯಲ್ಲೇ ಕುಳಿತು ವೀಕ್ಷಿಸುವ ಸೌಲಭ್ಯ ನೀಡುವ ‘ಫಸ್ಟ್‌ ಡೇ ಫಸ್ಟ್‌ ಶೋ’ ಘೋಷಣೆ ಮಾಡಿ ರಿಲಯನ್ಸ್ ಜಿಯೊ ಕಂಪನಿಯು ಕೆಲವು ತಿಂಗಳುಗಳ ಹಿಂದೆ, ಸಿನಿಮಾ ಪ್ರದರ್ಶನ ವ್ಯವಸ್ಥೆಯಲ್ಲಿ ಕಂಪನವೊಂದನ್ನು ಸೃಷ್ಟಿಸಿತ್ತು. ದೇಶದಲ್ಲಿ ವ್ಯಾಪಕವಾಗಿ ನೆಲೆ ಕಂಡುಕೊಳ್ಳುತ್ತಿರುವ ಒಟಿಟಿ ವೇದಿಕೆಗಳಲ್ಲಿ ಒಂದಾದ ಜೀ5 ಈಗ ಕನ್ನಡದ ‘ಭಿನ್ನ’ ಸಿನಿಮಾವನ್ನು ವೆಬ್‌ ಮೂಲಕವೇ ಬಿಡುಗಡೆ ಮಾಡಲು ಮುಂದಾಗಿದ್ದು, ಸಿನಿಮಾ ಪ್ರದರ್ಶನ ವ್ಯವಸ್ಥೆಯಲ್ಲಿ ಹೊಸ ಶಕೆಯೊಂದು ಆರಂಭವಾಗುವ ಸೂಚನೆ ನೀಡಿದೆ.

‘ಭಿನ್ನ’ ಸಿನಿಮಾ ನಿರ್ದೇಶಿಸಿದವರು ಆದರ್ಶ್ ಈಶ್ವರಪ್ಪ. ‘ಶುದ್ಧಿ’ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಛಾಪು ಮೂಡಿಸಿದ ವ್ಯಕ್ತಿ ಇವರು. ‘ಭಿನ್ನ– ಕನ್ನಡದ ಮೊದಲ ವೆಬ್ ಒರಿಜಿನಲ್ ಸಿನಿಮಾ’ ಎಂದು ಜೀ5 ಹೇಳಿದೆ.

‘ಭಿನ್ನ ಸಿನಿಮಾ ಹೇಗೆ ಭಿನ್ನ’ ಎಂಬ ಪ್ರಶ್ನೆಯನ್ನು ಆದರ್ಶ್ ಅವರ ಮುಂದೆ ಇರಿಸಿದಾಗ, ‘ಇದರಲ್ಲಿ ತಾರಾ ನಟ–ನಟಿಯರು ಇಲ್ಲ. ಸಿನಿಮಾ ಕಥೆಯೇ ವಿಶೇಷ. ಎರಡು ಮನೆಗಳಲ್ಲಿ ನಡೆಯುವ ಸಿನಿಮಾ ಇದು. ಇಂತಹ ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾಗಳು ತೆರೆಗೆ ಬಂದಿದ್ದು ಬಹಳ ಕಡಿಮೆ’ ಎಂದರು.

ಮಾತು ಮುಂದುವರಿಸಿ ಆದರ್ಶ್ ಅವರು, ‘ಇದು ಮಹಿಳಾ ಕೇಂದ್ರಿತ ಸಿನಿಮಾ ಕೂಡ ಹೌದು. ಹಿಂದೆ ನಾನೇ ನಿರ್ದೇಶಿಸಿದ್ದ ಶುದ್ಧಿ ಸಿನಿಮಾಗಿಂತಲೂ ಇದು ಒಂದು ಹಂತ ಮೇಲ್ಮಟ್ಟದಲ್ಲಿದೆ ಎಂದು ಕೆಲವರು ಹೇಳಿದ್ದಾರೆ. ನನಗೆ ಕೂಡ, ಶುದ್ಧಿ ಸಿನಿಮಾ ಮಾಡಿದ್ದ ಸಂದರ್ಭಕ್ಕಿಂತಲೂ ನಾನು ಇನ್ನಷ್ಟು ಪ್ರಬುದ್ಧನಾಗಿದ್ದೇನೆ ಎಂದು ಅನಿಸಿದೆ. ಈ ಸಿನಿಮಾವನ್ನು ನಾನು, ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸುವ ಗೌರವ ಎಂದು ಕೂಡ ಭಾವಿಸಿದ್ದೇನೆ’ ಎಂದರು.

ಚಿತ್ರದ ನಾಯಕಿಯು ತಾನೊಬ್ಬಳು ನಟಿಯಾಗಬೇಕು ಎಂಬ ಬಯಕೆ ಹೊಂದಿರುತ್ತಾಳೆ. ಅವಳು ತಾನು ಅಭಿನಯಿಸುವ ಸಿನಿಮಾದ ಚಿತ್ರಕಥೆಯನ್ನು ತೆಗೆದುಕೊಂಡು, ಊರಿನಿಂದ ಆಚೆಗೆ ಬಂದು ಓದಲು ಆರಂಭಿಸುತ್ತಾಳೆ. ಆಗ ಅವಳಿಗೆ, ತನ್ನ ಜೀವನದಲ್ಲೇ ನಡೆದಿರುವ ಒಂದಿಷ್ಟು ಘಟನೆಗಳು ಆ ಚಿತ್ರಕಥೆಯಲ್ಲಿ ಕಾಣಿಸಲು ಆರಂಭವಾಗುತ್ತದೆ. ಇದು ‘ಭಿನ್ನ’ ಸಿನಿಮಾ ಕಥೆಯ ಒಂದು ಎಳೆ. ತನ್ನದೇ ಜೀವನದ ಕಥೆಯನ್ನು ಚಿತ್ರಕಥೆಯಲ್ಲಿ ಕಂಡ ಆಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾಳೆ ಎಂಬುದು ಚಿತ್ರದ ಇನ್ನೊಂದು ಎಳೆ ಎನ್ನುತ್ತಾರೆ ಆದರ್ಶ್.

‘ಭಿನ್ನ’ ಚಿತ್ರದ ಬಹುಪಾಲು ಭಾಗಗಳ ಚಿತ್ರೀಕರಣ ನಡೆದಿರುವುದು ಬೆಂಗಳೂರಿನಲ್ಲಿ. ಒಂದಿಷ್ಟು ಭಾಗ ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರಿನಲ್ಲಿ ನಡೆದಿದೆ. 23 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದೆ. ಇದರಲ್ಲಿ, ಸಿಂಕ್ ಸೌಂಡ್ ತಂತ್ರಜ್ಞಾನ ಬಳಕೆಯಾಗಿದ್ದು, ಡಬ್ಬಿಂಗ್ ಕೆಲಸ ಇಲ್ಲ.


ಪಾಯಲ್ ರಾಧಾಕೃಷ್ಣ

ವೆಬ್ ಬಿಡುಗಡೆ ಏಕೆ?: ಚಿತ್ರಮಂದಿರಗಳ ಮೂಲಕ ಸಿನಿಮಾ ಬಿಡುಗಡೆ ಕಾಣುವುದು ಕನ್ನಡದಲ್ಲಿ ಇಲ್ಲಿಯವರೆಗೆ ನಡೆದುಬಂದಿರುವ, ಬೆಳೆದುಬಂದಿರುವ ಸಂಪ್ರದಾಯ. ‘ಸಿನಿಮಾ ಬಿಡುಗಡೆ’ ಅಂದರೆ, ಅದು ಚಿತ್ರಮಂದಿರದಲ್ಲೇ ಆಗಬೇಕು ಎಂಬುದು ಸಿನಿಮಾ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚೊತ್ತಿರುವ ನಂಬಿಕೆಯೂ ಹೌದು. ಆದರೆ, ‘ಭಿನ್ನ’ ತಂಡವು ಈ ವಿಚಾರದಲ್ಲಿ ಭಿನ್ನವಾಗಿ ಆಲೋಚಿಸಿ, ವೆಬ್‌ ವೇದಿಕೆಯ (ಜೀ5) ಮೂಲಕ ಸಿನಿಮಾ ಬಿಡುಗಡೆ ಮಾಡುತ್ತಿದೆ. ‘ಭಿನ್ನ’ ಚಿತ್ರದ ಬಿಡುಗಡೆ ಯಾವುದೇ ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ ಮೂಲಕ ಆಗುವುದಿಲ್ಲ.

‘ಏಕೆ ಈ ತೀರ್ಮಾನ’ ಎಂದು ಆದರ್ಶ್ ಅವರಲ್ಲಿ ಕೇಳಿದಾಗ, ‘ಇದು ನನ್ನೊಬ್ಬನ ತೀರ್ಮಾನ ಅಲ್ಲ. ನಿರ್ಮಾಪಕರೆಲ್ಲ ಸೇರಿ ಈ ತೀರ್ಮಾನ ತೆಗೆದುಕೊಂಡರು. ಕನ್ನಡದಲ್ಲಿ ಈಗ ಆರು ತಿಂಗಳಿಗೆ 140ರಿಂದ 150 ಸಿನಿಮಾಗಳು ಬಿಡುಗಡೆ ಆಗುತ್ತವೆ. ಇದರಿಂದಾಗಿ, ಒಳ್ಳೆಯ ಸಿನಿಮಾ ಮಾಡಿದರೂ ನಮಗೆ ಬೇಕಿರುವ ಚಿತ್ರಮಂದಿರಗಳು ಹಾಗೂ ನಮಗೆ ಬೇಕಿರುವ ಪ್ರದರ್ಶನದ ವೇಳೆ ದೊರೆಯುವುದು ಸವಾಲಿನದ್ದಾಗಿದೆ. ನಮ್ಮ ಸಿನಿಮಾದಲ್ಲಿ ಸಿದ್ಧಮಾದರಿಯ ಕೆಲವು ವಾಣಿಜ್ಯ ಸೂತ್ರಗಳು ಇಲ್ಲ. ಹೀಗಿರುವಾಗ, ನಮ್ಮ ಸಿನಿಮಾವನ್ನು ಹೆಚ್ಚು ಜನರಿಗೆ ತಲುಪಿಸುವ ಬಗೆ ಹೇಗೆ ಎಂಬ ಬಗ್ಗೆ ಆಲೋಚನೆಯಲ್ಲಿದ್ದಾಗ, ನಿರ್ಮಾಪಕರೆಲ್ಲ ಸೇರಿ, ವೆಬ್ ಮೂಲಕ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದರು. ಜೀ5ನವರು ನಮ್ಮ ಸಿನಿಮಾ ಖರೀದಿಸಿದ್ದಾರೆ. ಜೀ5 ಒಟಿಟಿ ವೇದಿಕೆಯು 173ಕ್ಕೂ ಹೆಚ್ಚಿನ ದೇಶಗಳಲ್ಲಿ ಲಭ್ಯವಿದೆ. ಬಿಡುಗಡೆ  ಆದ ದಿನವೇ ಎಲ್ಲರೂ ಈ ಸಿನಿಮಾ ನೋಡಬಹುದು’ ಎನ್ನುವ ವಿವರಣೆ ನೀಡಿದರು.

ತೆಲುಗಿನ ‘ಸೈರಾ’ ಸಿನಿಮಾ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಆಗಿದೆ. ಅದು ದೊಡ್ಡ ಸಿನಿಮಾ. ‘ಹೀಗಿದ್ದರೂ ನಾವು ಯಾವ ಭಯವೂ ಇಲ್ಲದೆ ನಮ್ಮ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಇದಕ್ಕೆ ಕಾರಣ ಡಿಜಿಟಲ್ ವೇದಿಕೆ. ಕನ್ನಡದ ಸಿನಿಮಾ ಸಂಪೂರ್ಣವಾಗಿ ಡಿಜಿಟಲ್ ವೇದಿಕೆಯ ಮೂಲಕವೇ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ಇದು ನಮ್ಮ ಉದ್ಯಮದ ಪಾಲಿಗೆ ಹೊಸದೊಂದು ಅವಕಾಶದ ಬಾಗಿಲು ತೆರೆದಂತೆ’ ಎಂದು ಆದರ್ಶ್ ಹೇಳಿದರು.

ಅಷ್ಟೇ ಅಲ್ಲ, ಸಿನಿಮಾದಲ್ಲಿ ನಿರ್ದಿಷ್ಟ ಗುಣಮಟ್ಟ ಇದ್ದರೆ ಇಂತಿಷ್ಟು ಹಣ ಖಂಡಿತವಾಗಿ ಸಿಗುತ್ತದೆ ಎಂಬ ಧೈರ್ಯ ಆದರ್ಶ್ ಅವರಿಗೆ ಬಂದಿದೆ. ಈ ಸಿನಿಮಾವನ್ನು ಜೀ5ನವರು ಬೇರೆ ಭಾಷೆಗಳಿಗೆ ಡಬ್ ಕೂಡ ಮಾಡಲಿದ್ದಾರೆ ಎಂಬ ಸುದ್ದಿ ಇದೆ.

ಪಾಯಲ್ ರಾಧಾಕೃಷ್ಣ, ಸೌಮ್ಯಾ ಜಗನ್ಮೂರ್ತಿ, ಸಿದ್ಧಾರ್ಥ ಮಾಧ್ಯಮಿಕ ಮತ್ತು ಶಶಾಂಕ್ ಪುರುಷೋತ್ತಮ್ ಈ ಚಿತ್ರದ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಚಿತ್ರವು ಅಕ್ಟೋಬರ್ 8ರಂದು ಜೀ5 ಮೂಲಕ ತೆರೆಗೆ ಬರಲಿದೆ.

‘ಕನ್ನಡಿಗರನ್ನು ಅರ್ಥ ಮಾಡಿಕೊಳ್ಳುತ್ತಿದ್ದೇವೆ’

‘ಉತ್ತಮ ಕಥಾಹಂದರ ಇರುವ ಕನ್ನಡ ವೆಬ್‌ ಒರಿಜಿನಲ್‌ಗಳಿಗಾಗಿ (ವೆಬ್ ಮೂಲಕವೇ ಬಿಡುಗಡೆ ಆಗುವ ಸಿನಿಮಾ) ನಾವು ಹುಡುಕಾಟ ನಡೆಸುತ್ತಿದ್ದೇವೆ. ಬೇರೆ ಪ್ರಾದೇಶಿಕ ಭಾಷೆಗಳಲ್ಲಿ ನಾವು ಈಗಾಗಲೇ ವೆಬ್ ಒರಿಜಿನಲ್‌ಗಳನ್ನು ಪ್ರಸಾರ ಮಾಡಿದ್ದೇವೆ. ಡಿಜಿಟಲ್‌ ಮಾಧ್ಯಮದಲ್ಲಿ ಕನ್ನಡದ ವೀಕ್ಷಕರಿಗೆ ಬೇಕಿರುವುದು ಏನು ಎಂಬುದನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಜೀ5 ಸಂಸ್ಥೆಯ ಪ್ರೊಗ್ರಾಮಿಂಗ್ ಮುಖ್ಯಸ್ಥೆ ಅಪರ್ಣಾ ಅಚರೇಕರ್.

‘ಸಿನಿಮಾ ಪುರವಣಿ’ ಜೊತೆ ಮಾತನಾಡಿದ ಅವರು, ‘ಕೆಲವು ಕನ್ನಡ ಸಿನಿಮಾಗಳು ಟಿ.ವಿ.ಯಲ್ಲಿ ಪ್ರಸಾರ ಆಗುವ ಮೊದಲೇ ನಾವು ಅವುಗಳ ಡಿಜಿಟಲ್ ಪ್ರೀಮಿಯರ್ ಮಾಡಿದ್ದು ಇದೆ. ಈಗ ‘ಭಿನ್ನ’ ಸಿನಿಮಾವನ್ನು ವೆಬ್ ಒರಿಜಿನಲ್ ಆಗಿ ನಾವು ಬಿಡುಗಡೆ ಮಾಡುತ್ತಿರುವುದು ಕ್ರಾಂತಿಕಾರಿ ಬದಲಾವಣೆಯೊಂದಕ್ಕೆ ಮುನ್ನುಡಿ ಆಗಬಹುದು’ ಎಂದು ಹೇಳಿದರು.

Post Comments (+)