ಮಂಗಳವಾರ, ಮಾರ್ಚ್ 21, 2023
20 °C

ಹಿಂದಿಯಲ್ಲಿ ಶತದಿನ ಪೂರೈಸಿದ ಕಾಂತಾರ ಸಿನಿಮಾ: ರಿಷಭ್ ಶೆಟ್ಟಿ ಸಂತಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಚಿತ್ರ ಜಾಗತಿಕ ಮಟ್ಟದಲ್ಲಿ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 

ದೇಶದಾದ್ಯಂತ 2022ರ ಸೆ.30ರಂದು ತೆರೆಕಂಡಿದ್ದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಕಾಂತಾರ ಹಿಂದಿ ಅವತರಣಿಕೆ ಸಿನಿಮಾ ಶತದಿನ ಪೂರೈಸಿದೆ.

ಈ ಕುರಿತು ರಿಷಭ್ ಶೆಟ್ಟಿ ಅವರು ಟ್ವಿಟರ್‌ನಲ್ಲಿ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಹಿಂದಿಯಲ್ಲಿ ಕಾಂತಾರ 100 ದಿನಗಳನ್ನು ಪೂರೈಸಿದೆ ಎಂದು ಹೇಳಲು ನಾವು ಸಂಭ್ರಮಿಸುತ್ತೇವೆ. ಹಿಂದಿ ಚಿತ್ರರಂಗದ ಬೆಂಬಲಕ್ಕಾಗಿ ನಾವು ಪ್ರೇಕ್ಷಕರಿಗೆ ವಿನಯಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತೇವೆ ಎಂದಿದ್ದಾರೆ.

ಕೆಜಿಎಫ್‌ –1, ಕೆಜಿಎಫ್‌–2 ನಿರ್ಮಿಸಿರುವ ಹೊಂಬಾಳೆ ಫಿಲಂಸ್‌ ಕಾಂತಾರ ಚಿತ್ರವನ್ನು ನಿರ್ಮಿಸಿದೆ. ಕೆಜಿಎಫ್‌ ವ್ಯಾಪಕ ಯಶಸ್ಸಿನ ನಂತರ ಹೊಂಬಾಳೆ , ಕೆಜಿಎಫ್‌–2 ನಿರ್ಮಿಸಿ ಸಾವಿರ ಕೋಟಿಗಿಂತ ಹೆಚ್ಚು ಹಣ ಬಾಚಿತ್ತು. 

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದೆ. ಈ ಚಿತ್ರದಲ್ಲಿ ರಿಷಬ್‌ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ಚಿತ್ರ ತಂಡದ ಪ್ರತಿ ನಡೆಯನ್ನು ಜನ ಕುತೂಹಲದಿಂದ ನೋಡುತ್ತಿದ್ದಾರೆ. ಇತ್ತೀಚೆಗೆ ದೈವಕ್ಕೆ ಹರಕೆ ತೀರಿಸಿದ ಸಿನಿಮಾ ತಂಡದ ವಿಡಿಯೊ ಕೂಡ ಗಮನ ಸೆಳೆದಿದೆ. ಇದರ ಬೆನ್ನಲ್ಲೇ ಕಾಂತಾರ-2 ಚಿತ್ರದ ವಿಷಯವೂ ಮುನ್ನೆಲೆಗೆ ಬಂದಿದ್ದು, ಟ್ವಿಟರ್‌ನಲ್ಲಿ #Kantara2 ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು