ಸೋಮವಾರ, ಮೇ 17, 2021
23 °C
ಶಾರುಕ್‌–ಸಲ್ಮಾನ್‌ ಜಾಗದಲ್ಲಿ ರಣವೀರ್‌–ರಣಬೀರ್?

25 ವರ್ಷದ ನಂತರ ಕರಣ್‌–ಅರ್ಜುನ್‌ ರಿಮೇಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಕೇಶ್ ರೋಶನ್‌ ನಿರ್ದೇಶನದ 90ರ ದಶಕದ ಬ್ಲಾಕ್‌ ಬಸ್ಟರ್ ಚಿತ್ರ ‘ಕರಣ್‌–ಅರ್ಜುನ್‌’ ಬಿಡುಗಡೆಯಾಗಿ ಸರಿಯಾಗಿ 25 ವರ್ಷ! ಕರಣ್‌–ಅರ್ಜುನ್‌ ಸಹೋದರರ ಪಾತ್ರದಲ್ಲಿ ನಟಿಸಿದ್ದ ಶಾರೂಕ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಚಿತ್ರದ ಹಾಡುಗಳು ಕೂಡ ಹಿಟ್‌ ಆಗಿದ್ದವು. 

ಅದಾದ 25 ವರ್ಷಗಳ ನಂತರ ಕರಣ್‌–ಅರ್ಜುನ್‌ ಮತ್ತೆ ರಿಮೇಕ್‌ ಆಗುತ್ತಿದೆ ಎಂಬ ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಚಿತ್ರವನ್ನು ರಾಕೇಶ್‌ ರೋಶನ್‌ ಅವರೇ ನಿರ್ದೇಶಿಸುತ್ತಿದ್ದು, ಕರಣ್‌– ಅರ್ಜುನ್‌ ಮಾತ್ರ ಬದಲಾಗುತ್ತಿದ್ದಾರೆ. ಸಲ್ಮಾನ್‌ ಮತ್ತು ಶಾರೂಕ್‌ ಜಾಗವನ್ನು ರಣಬೀರ್‌ ಕಪೂರ್‌ ಮತ್ತು ರಣವೀರ್‌ ಸಿಂಗ್‌ ತುಂಬಲಿದ್ದಾರೆ. ಈ ಇಬ್ಬರಲ್ಲಿ ಯಾರು ಕರಣ್‌ ಮತ್ತು ಯಾರು ಅರ್ಜುನ್‌ ಆಗಲಿದ್ದಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. 

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ರಾಕೇಶ್‌ ರೋಶನ್‌ ಚಿತ್ರದ ಬಗ್ಗೆ ಅನೇಕ ಕುತೂಹಲಕರ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಇಂದು ಈ ಚಿತ್ರ ತೆಗೆಯುವುದಾದರೆ ನಿಮ್ಮ ಆಯ್ಕೆ ಯಾರು ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ...

‘ಇಂದಿಗೂ ಶಾರೂಕ್‌ ಮತ್ತು ಸಲ್ಮಾನ್‌ ನನ್ನ ಮೊದಲ ಆಯ್ಕೆ. ಹೊಸ ಪೀಳಿಗೆಯ ನಟರಲ್ಲಿ ಹೃತಿಕ್‌ ಮತ್ತು ರಣಬೀರ್‌ ಇಲ್ಲವೇ ಹೃತಿಕ್‌ ಮತ್ತು ರಣವೀರ್‌ ಸಿಂಗ್‌ ಜೋಡಿ ಈ ಪಾತ್ರಕ್ಕೆ ಹೊಂದುತ್ತದೆ’ ಎಂದರು.

ಕರಣ್‌–ಅರ್ಜುನ್‌ ಪಾತ್ರಕ್ಕೆ ಸಲ್ಮಾನ್‌ ನನ್ನ ಆಯ್ಕೆಯಾಗಿರಲಿಲ್ಲ. ಶಾರುಕ್‌ ಮತ್ತು ಅಜಯ್‌ ದೇವಗನ್‌ ನನ್ನ ಮೊದಲ ಆಯ್ಕೆಯಾಗಿದ್ದರು ಎಂಬ ಕುತೂಹಲಕಾರಿ ವಿಷಯವನ್ನು ಅವರು ಮೊದಲ ಬಾರಿಗೆ ಬಾಯ್ಬಿಟ್ಟಿದ್ದಾರೆ.

ಪಾತ್ರಕ್ಕೆ ಯಾರು ಹೊಂದಿಕೆಯಾಗುತ್ತಾರೆ ಎಂದು ಅಜಯ್‌ ದೇವಗನ್‌, ಸನ್ನಿ ಡಿಯೋಲ್‌, ಸುನಿಲ್‌ ಶೆಟ್ಟಿ, ಅರ್ಮಾನ್‌ ಕೊಹ್ಲಿ, ಆಮೀರ್‌ ಖಾನ್‌ ಹೆಸರನ್ನು ಪಟ್ಟಿ ಮಾಡಲಾಗಿತ್ತು. ಅಮೀರ್‌ ಖಾನ್‌ ಅವರನ್ನೂ ಸಂಪರ್ಕಿಸಲಾಗಿತ್ತು. ಡೇಟ್ಸ್‌ ಹೊಂದಾಣಿಕೆಯಾಗದ ಕಾರಣ ಮತ್ತು ಕತೆ ಇಷ್ಟವಾಗದ ಕಾರಣ ಅವರು ನಿರಾಕರಿಸಿದ್ದರು. 

‘ಸಹೋದರರು ಮರುಜನ್ಮ ಪಡೆದು ಹಿಂದಿನ ಜನ್ಮದ ಸೇಡು ತೀರಿಸಿಕೊಳ್ಳುವ ಚಿತ್ರದ ಕತೆ ಯಾರಿಗೂ ಒಪ್ಪಿಗೆಯಾಗಲಿಲ್ಲ. ನನಗೆ ಈ ಕತೆ ಜನರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿತ್ತು. ಕತೆಯಲ್ಲಿ ಬದಲಾವಣೆ ಮಾಡಿಕೊಳ್ಳಲು ನನಗೂ ಇಷ್ಟವಿರಲಿಲ್ಲ. ಕೊನೆಗೆ ಶಾರೂಕ್‌ ಮತ್ತು ಸಲ್ಮಾನ್‌ ಹಾಕಿಕೊಂಡು ಚಿತ್ರ ನಿರ್ಮಿಸಲಾಯಿತು. ಚಿತ್ರ ಸೂಪರ್ ಹಿಟ್‌ ಆಗುತ್ತದೆ ಎಂಬ ನಂಬಿಕೆ  ಶಾರೂಕ್‌ಗೂ ಇರಲಿಲ್ಲ’ ಎಂದು ರಾಕೇಶ್ ರೋಶನ್‌ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು