ಸೋಮವಾರ, ಸೆಪ್ಟೆಂಬರ್ 23, 2019
24 °C

ಮರ್ಡರ್‌ ಮಿಸ್ಟರಿ ಕಥಾನಕ

Published:
Updated:
Prajavani

ನಿರ್ದೇಶಕ ಶ್ರೀಹರಿ ಆನಂದ್‌ ನೇತೃತ್ವದ ಚಿತ್ರತಂಡದ ಒಂದು ವರ್ಷದ ಕನಸು ಪರದೆ ಮೇಲೆ ಟೀಸರ್‌ ರೂಪ ತಳೆದಿತ್ತು. ಈ ತಂಡದ ಎಲ್ಲರೂ ಹೊಸಬರು. ಸಿನಿಮಾದ ದೃಶ್ಯಗಳು ಕಂಡಾಗ ಎಲ್ಲರಲ್ಲೂ ಹೊಸ ಹುರುಪು ಕಂಡಿತು.

ಮೈಕ್‌ ಕೈಗೆತ್ತಿಕೊಂಡ ಶ್ರೀಹರಿ ಆನಂದ್‌, ‘ನಾವು ನಮ್ಮ ಕೆಲಸವನ್ನಷ್ಟೇ ಮಾಡಬೇಕು. ಫಲಾಫಲವನ್ನು ಭಗವಂತನ ಇಚ್ಛೆಗೆ ಬಿಡಬೇಕು. ಈ ಸಿನಿಮಾದ ಸಂದೇಶವೂ ಇದೇ ಆಗಿದೆ’ ಎಂದರು.

ಮರ್ಡರ್ ಮಿಸ್ಟರಿ ಕಥೆ ಇದು. 1850ರಲ್ಲಿ ನಡೆಯುವ ಕಥೆಗೆ ಆಧುನಿಕ ಸ್ಪರ್ಶ ನೀಡಲಾಗಿದೆಯಂತೆ. ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಮುಂದಿನ ತಿಂಗಳ ಅಂತ್ಯಕ್ಕೆ ಜನರ ಮುಂದೆ ಬರುವ ಯೋಚನೆ ಚಿತ್ರತಂಡದ್ದು.

ಪ್ರತೀಕ್ ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಎಂಜಿನಿಯರಿಂಗ್‌ ಪದವಿ ಪೂರೈಸಿರುವ ಅವರಿಗೆ ಸಿನಿಮಾ ರಂಗದಲ್ಲಿಯೇ ಬದುಕು ಕಟ್ಟಿಕೊಳ್ಳುವ ಆಸೆ. ‘ಆ ಕನಸು ಅಷ್ಟು ಸುಲಭವಾಗಿ ಈಡೇರಲಿಲ್ಲ. ಅದಕ್ಕಾಗಿ ಮೂರು ವರ್ಷ ಬೆವರು ಸುರಿಸಬೇಕಾಯಿತು’ ಎಂದು ಅವರೇ ಹೇಳಿಕೊಂಡರು.

‘ಮೊದಲ ಚಿತ್ರದಲ್ಲಿಯೇ ಭಿನ್ನವಾದ ‍ಪಾತ್ರ ಮಾಡಿದ ಖುಷಿಯಿದೆ. ಬದುಕಿನಲ್ಲಿ ನನಗೆ ಖಚಿತ ನಿಲುವು ಇರುವುದಿಲ್ಲ. ಜ್ಯೋತಿಷವನ್ನು ನಂಬಿ ಬದುಕುತ್ತಿರುತ್ತೇನೆ. ಆಗ ಬದುಕು ಯಾವ ತಿರುವು ಪಡೆಯುತ್ತದೆ ಎನ್ನುವುದನ್ನು ನೀವು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು’ ಎಂದು ಕಥೆಯ ಬಗ್ಗೆ ಕುತೂಹಲ ಮೂಡಿಸಿದರು.

ನಾಯಕಿ ದಿವ್ಯಾ ಗೌಡಗೆ ಇದು ಮೂರನೇ ಚಿತ್ರ. ಚಿತ್ರದಲ್ಲಿ ಅವರು ಅತಿಥಿ ಉ‍ಪನ್ಯಾಸಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ನನ್ನ ಆಪ್ತರ ಕೊಲೆಯಾಗುತ್ತದೆ. ಅದರ ರಹಸ್ಯದ ಹುಡುಕಾಟಕ್ಕೆ ಮುಂದಾದಾಗ ನಾಯಕನ ಪರಿಚಯವಾಗುತ್ತದೆ’ ಎಂದಷ್ಟೇ ಹೇಳಿದರು.

ಶಿರಿನ್ ಡೋಮ್ಲಾ ಚಿತ್ರದ ಮತ್ತೊಬ್ಬ ನಾಯಕಿ. ಅಮೆರಿಕದಲ್ಲಿ ವೈದ್ಯರಾಗಿರುವ ಡಾ.ರಮೇಶ್ ರಾಮಯ್ಯ ಬಂಡವಾಳ ಹೂಡಿದ್ದಾರೆ. 

Post Comments (+)