ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳ ತಡೆ ವ್ಯವಸ್ಥೆಯೇ ಇಲ್ಲ

Last Updated 22 ಅಕ್ಟೋಬರ್ 2018, 11:09 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಚಲನಚಿತ್ರ ಉದ್ಯಮದಲ್ಲಿಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಯಾವ ವ್ಯವಸ್ಥೆಯೂ ಇಲ್ಲ. ಕೆಲ ಸಮಯದ ಹಿಂದೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿಆಂತರಿಕ ಸಮಿತಿಯೊಂದು ಕಾರ್ಯನಿರ್ವಹಿಸುತ್ತಿತ್ತು. ನಿಧಾನವಾಗಿ ಅದೂ ಕಣ್ಮುಚ್ಚಿತು.

ನಟಿ ಶ್ರುತಿ ಹರಿಹರನ್‌ ಅವರು ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ‘ಮೀ–ಟೂ’ ಆರೋಪ ಮಾಡಿದ ನಂತರ, ‘ಸಿನಿಮಾ ನಿರ್ಮಾಣ ಕಂಪನಿ, ಸಂಸ್ಥೆಗಳಲ್ಲಿ ಮಹಿಳೆಯರಿಗೆ ದೂರು ಹೇಳಿಕೊಳ್ಳಲು ಆಂತರಿಕ ಸಮಿತಿ ಇರುವುದಿಲ್ಲವಾ’ ಎಂಬ ಪ್ರಶ್ನೆಯನ್ನು ಕೆಲವರು ಕೇಳಿದ್ದರು. ‘ಪ್ರಜಾವಾಣಿ’ ಇದೇ ಪ್ರಶ್ನೆಯನ್ನುವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರ ಮುಂದೆ ಇರಿಸಿದಾಗ, ‘ಮಂಡಳಿಯ ವ್ಯಾಪ್ತಿಯಲ್ಲಿ ಸದ್ಯಕ್ಕೆ ಆಂತರಿಕ ಸಮಿತಿ ಕಾರ್ಯ ನಿರ್ವಹಿಸುತ್ತಿಲ್ಲ’ ಎನ್ನುವ ಉತ್ತರ ಬಂತು.

‘ಇಂಥದ್ದೊಂದು ಸಮಿತಿ ಇರಬೇಕಿತ್ತಲ್ಲವೇ? ಅದರ ಔಚಿತ್ಯವೇನು?’ ಎನ್ನುವ ಪ್ರಶ್ನೆಗಳಿಗೆ ಉತ್ತರ ದೊರಕಿದ್ದು ವಕೀಲೆ ಜಯ್ನಾ ಕೊಠಾರಿ ಅವರ ಮಾತಿನಲ್ಲಿ.

ಜಯ್ನಾ ಕೊಠಾರಿ
ಜಯ್ನಾ ಕೊಠಾರಿ

‘ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ದೂರುಗಳನ್ನು ನೀಡಲು ಕೆಲಸದ ಸ್ಥಳಗಳಲ್ಲಿ ಆಂತರಿಕ ಸಮಿತಿಯೊಂದನ್ನು ಸಿನಿಮಾ ನಿರ್ಮಾಣ ಸಂಸ್ಥೆಗಳೂ ರಚಿಸಬೇಕು’ ಎಂದು ಹೇಳುತ್ತಾರೆ ಜಯ್ನಾ. ಇವರು ಬೆಂಗಳೂರಿನ ಸೆಂಟರ್‌ ಫಾರ್‌ ಲಾ ಆ್ಯಂಡ್‌ ಪಾಲಿಸಿ ರಿಸರ್ಚ್‌ನ ಸಹ–ಸಂಸ್ಥಾಪಕಿ. ಮಹಿಳೆಯರ ಹಕ್ಕುಗಳ ಪರವಾಗಿ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ಕೂಡ ನಡೆಸಿದವರು.

ಕೆಲಸದ ಸ್ಥಳಗಳಲ್ಲಿ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗದಂತೆ ತಡೆಯಲು ಇರುವ ಕಾಯ್ದೆ 2013ರ ‘ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯ್ದೆ’. ಸಂಸತ್ತು ರೂಪಿಸಿದ ಈ ಕಾಯ್ದೆ 2013ರ ಏಪ್ರಿಲ್‌ನಲ್ಲಿ ಜಾರಿಗೆ ಬಂದಿದೆ. ‘ಕೆಲಸದ ಸ್ಥಳ’ ಅಂದರೆ ಏನು ಎಂಬುದನ್ನು ಈ ಕಾಯ್ದೆಯ ಸೆಕ್ಷನ್‌ 2(ಒ)(2)ನಲ್ಲಿ ವಿವರಿಸಲಾಗಿದೆ. ಇದರ ಅನ್ವಯ, ‘ಮನರಂಜನಾ ಕ್ಷೇತ್ರದ ಖಾಸಗಿ ಸಂಸ್ಥೆಗಳು’ ಕೂಡ ಕೆಲಸದ ಸ್ಥಳಗಳು ಎನ್ನುವ ವ್ಯಾಖ್ಯಾನದ ಅಡಿಯಲ್ಲೇ ಬರುತ್ತವೆ.

‘ಹಾಗಾಗಿ, ಸಿನಿಮಾ ಉದ್ಯಮದಲ್ಲಿ ಕೂಡ ಆಂತರಿಕ ದೂರು ಸಮಿತಿಯೊಂದು ಇರಬೇಕಾಗುತ್ತದೆ. ಇದನ್ನು ರಚಿಸುವ ಹೊಣೆ ಹೊರಬೇಕಿರುವುದು ನಿರ್ಮಾಣ ಸಂಸ್ಥೆಗಳ ಮುಖ್ಯಸ್ಥರು’ ಎಂದು ಹೇಳುತ್ತಾರೆ ಜಯ್ನಾ. ಇದೇ ಕಾಯ್ದೆಯ ಸೆಕ್ಷನ್‌ 4 ಅನ್ವಯ, ಆಂತರಿಕ ದೂರು ಸಮಿತಿಯನ್ನು ರಚಿಸುವುದು ಕಡ್ಡಾಯವೇ ವಿನಾ ಐಚ್ಛಿಕ ಅಲ್ಲ. ಆದರೆ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಈ ರೀತಿಯ ದೂರು ಸಮಿತಿಗಳು ಎಷ್ಟು ಇವೆ ಎಂಬ ಪ್ರಶ್ನೆಗೆ ಸಿಗುವ ಉತ್ತರ: ‘ನಮ್ಮಲ್ಲಿ ಅಂಥದ್ದೇನೂ ಇಲ್ಲ’!

ಕಾರ್ಯನಿರ್ವಹಿಸದ ಸಮಿತಿ

‘ಈ ಹಿಂದೆ ಆಂತರಿಕ ಸಮಿತಿಯು ಕಾರ್ಯ ನಿರ್ವಹಿಸುತ್ತಿತ್ತು. ಸದಸ್ಯರನ್ನೂ ನೇಮಕ ಮಾಡಲಾ‌ಗಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಮಂಡಳಿಯ ಅಧ್ಯಕ್ಷ ಚಿನ್ನೇಗೌಡ. ‘ಲೈಂಗಿಕ ದೌರ್ಜನ್ಯ ಪ್ರಕರಣಗಳುವರದಿಯಾಗುತ್ತಿರಲಿಲ್ಲ.ಹಾಗಾಗಿ, ಸಮಿತಿಯು ದೀರ್ಘಕಾಲ ಕಾರ್ಯ ನಿರ್ವಹಿಸಿಲ್ಲ. ಈಗ ಸಮಿತಿಯ ಅಗತ್ಯವಿದೆ. ಸಂಘದ ಪದಾಧಿಕಾರಿಗಳ ಸಭೆ ಕರೆದಿದ್ದೇನೆ. ಸಭೆಯಲ್ಲಿ ಚರ್ಚಿಸಿ ಸಮಿತಿ ರಚನೆ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ನಟ ಅರ್ಜುನ್‌ ಸರ್ಜಾ ಅವರ ಮಾವ, ಹಿರಿಯ ನಟ ರಾಜೇಶ್‌ ಅವರು ನಟಿ ಶ್ರುತಿ ಹರಿಹರನ್‌ ಪ್ರಕರಣ ಸಂಬಂಧ ಮಂಡಳಿಗೆ ದೂರು ನೀಡಿದ್ದಾರೆ ಎಂದ ಅವರು, ದೂರಿನಲ್ಲಿ ಏನಿದೆ ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ‘ಈ ದೂರಿನ ಬಗ್ಗೆ ಪದಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುತ್ತೇನೆ’ ಎಂದರು.

ಸಾಮಾನ್ಯವಾಗಿ, ದೊಡ್ಡ ಸಂಸ್ಥೆಗಳಲ್ಲಿ ಮಾನವ ಸಂಪನ್ಮೂಲ ವಿಭಾಗವು ಆಂತರಿಕ ದೂರು ಸಮಿತಿಯ ರಚನೆಯ ಕೆಲಸ ಮಾಡುತ್ತದೆ. ಕನ್ನಡದ ಬಹುತೇಕ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಮಾನವ ಸಂಪನ್ಮೂಲ ವಿಭಾಗ ಎಂಬುದೇ ಇರುವುದಿಲ್ಲ ಎಂದು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಕನ್ನಡ ಸಿನಿಮಾ ನಿರ್ಮಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಫೈರ್‌’ಗೆ ದೂರು ಕೊಡಿ

ಈ ನಡುವೆ ಫಿಲಂ ಇಂಡಸ್ಟ್ರಿ ಫಾರ್‌ ಈಕ್ವಾಲಿಟಿ ಆ್ಯಂಡ್‌ ರೈಟ್ಸ್‌ (ಫೈರ್‌) ಸಂಘಟನೆ ಶ್ರುತಿ ಅವರಿಗೆ ಬೆಂಬಲ ಸೂಚಿಸಿದೆ. ಈ ಸಂಘಟನೆ ತನ್ನದೇ ಆದ ಆಂತರಿಕ ದೂರು ಸಮಿತಿಯೊಂದನ್ನು ಹೊಂದಿದೆ. ‘ಸಿನಿಮಾ ಉದ್ಯಮದ ಯಾರು ಬೇಕಿದ್ದರೂ ಈ ಸಂಘಟನೆಯ ಸದಸ್ಯರಾಗಬಹುದು. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ದೂರುಗಳನ್ನು ಸಂಘಟನೆಯಲ್ಲಿ ದಾಖಲಿಸಬಹುದು’ ಎಂದರು ವಕೀಲರಾದ ಜಯ್ನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT