ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರ ವಾಣಿಜ್ಯ ಮಂಡಳಿಗೆ ಜೈರಾಜ್ ಸಾರಥ್ಯ

ಮೂರೂ ವಲಯದ ಹಿತಕಾಯುವೆ: ನೂತನ ಅಧ್ಯಕ್ಷರ ಭರವಸೆ
Last Updated 29 ಜೂನ್ 2019, 15:35 IST
ಅಕ್ಷರ ಗಾತ್ರ

ಬೆಂಗಳೂರು:ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಜೈರಾಜ್ ಡಿ.ಆರ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಬಾರಿ ಪ್ರದರ್ಶಕ ವಲಯಕ್ಕೆ ಅಧ್ಯಕ್ಷ ಸ್ಥಾನ‌‌‌ ಮೀಸಲಾಗಿತ್ತು. ಮಂಗಳವಾರ ಮಂಡಳಿಯ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆಯಿತು. ಗುಬ್ಬಿಯ ಶ್ರೀಚನ್ನಬಸವೇಶ್ವರ ಟಾಕೀಸ್ ಮಾಲೀಕರಾದ ಜೈರಾಜ್ ಅವರನ್ನು ಹೊರತುಪಡಿಸಿದರೆ ಯಾರೊಬ್ಬರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರಲಿಲ್ಲ. ಹಾಗಾಗಿ, ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ಉಮೇಶ್ ಬಣಕಾರ್, ವಿತರಕ ವಲಯದಿಂದ ನಾಗರಾಜ್ ಬಿ.ಎಲ್.(ನಾಗಣ್ಣ) ಮತ್ತು ಪ್ರದರ್ಶಕ ವಲಯದಿಂದ ವೆಂಕಟರಮಣ(ಬಾಜ್ಜಿ) ಆಯ್ಕೆಯಾದರು. ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ಸುರೇಶ್ ಎನ್.ಎಂ., ವಿತರಕ ವಲಯದಿಂದ ಗಣೇಶ್ ಎ. ಮತ್ತು ಪ್ರದರ್ಶಕ ವಲಯದಿಂದ ನರಸಿಂಹಲು ಎಂ. ಚುನಾಯಿತರಾದರು. ಖಜಾಂಚಿಯಾಗಿ ವೆಂಕಟೇಶ್ ಕೆ.ವಿ. ಆಯ್ಕೆಯಾದರು.

ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಭಾನುವಾರ ಬೆಳಿಗ್ಗೆ 11ಗಂಟೆಗೆ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ನಡೆಯಲಿದೆ.

ಒಳ್ಳೆಯ ಚಿತ್ರಗಳಿಗೆ ಒತ್ತು

‘ಪ್ರಸ್ತುತ ವಾರಕ್ಕೆ 10ಕ್ಕೂ ಹೆಚ್ಚು ಚಿತ್ರಗಳು ತೆರೆ ಕಾಣುತ್ತಿವೆ. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಸೋಲುತ್ತಿವೆ. ಜನರಿಗೆ ಗುಣಮಟ್ಟದ ಸಿನಿಮಾ ನೀಡುವ ನಿಟ್ಟಿನಲ್ಲಿ ಒತ್ತು ನೀಡಲಾಗುವುದು’ ಎಂದು ಅಧ್ಯಕ್ಷ ಜೈರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಎಲ್ಲರೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಬಗೆಹರಿಸಲು ಮೊದಲ ಆದ್ಯತೆ‌ ನೀಡಲಾಗುವುದು’ ಎಂದರು.

‘ರಾಜ್ ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ಕಾಲದಲ್ಲಿ ಕನ್ನಡ ಚಿತ್ರರಂಗ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಮತ್ತೆ ಅಂತಹ ವಾತಾವರಣ ಸೃಷ್ಟಿಸಬೇಕಿದೆ. ಪದಾಧಿಕಾರಿಗಳು ಸೇರಿದಂತೆ ಎಲ್ಲರ ಸಹಕಾರ ಪಡೆದು ಚಿತ್ರರಂಗದ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ಅವರು ಭರವಸೆ‌ ನೀಡಿದರು.

ಪ್ರಸ್ತುತ ಏಕಪರದೆ ಚಿತ್ರಮಂದಿರಗಳು ತೊಂದರೆ ಎದುರಿಸುತ್ತಿವೆ. ‌ಪ್ರದರ್ಶಕನಾಗಿ ಇದರ ಅನುಭವ ನನಗಿದೆ. ಒಳ್ಳೆಯ ಸಿನಿಮಾಗಳು ತೆರೆಕಂಡರೆ‌‌ ಜನರು ಕೂಡ ಚಿತ್ರಮಂದಿರಗಳಿಗೆ ಬರುತ್ತಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT