ಮಂಗಳವಾರ, ಸೆಪ್ಟೆಂಬರ್ 28, 2021
23 °C

ಕತ್ರೀನಾ ನನ್ನ ಸೊಸೆಯಾಗಲಿ: ಸಲ್ಮಾನ್ ಖಾನ್ ಅಮ್ಮನ ಆಸೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಮದುವೆ ಕುರಿತ ಸುದ್ದಿಗಳು ನಿನ್ನೆ–ಮೊನ್ನೆಯದಲ್ಲ. ಸಲ್ಲೂ ಯಾವಾಗ ಮದುವೆಯಾಗ್ತಾರೆ? ಯಾರನ್ನು ಮದುವೆಯಾಗ್ತಾರೆ? ಅನ್ನೋದು ಬಹುತೇಕರ ಕುತೂಹಲದ ಕೇಂದ್ರ ಬಿಂದು.

ಮದುವೆಯ ವಯಸ್ಸು ಮೀರಿದ್ದರೂ ಸಲ್ಮಾನ್ ಮಾತ್ರ ಗೆಳತಿಯರನ್ನು ಬದಲಿಸುತ್ತಾ ಒಂದರ ಮೇಲೊಂದರಂತೆ ಸಿನಿಮಾ ಮಾಡುವುದರಲ್ಲಿ ಬ್ಯುಸಿ. ಇದನ್ನು ಅರಿತ ಸಲ್ಲೂ ಅವರ ತಾಯಿ ಸಲ್ಮಾ ಖಾನ್ ‘ಕತ್ರೀನಾ ಕೈಫ್ ನನ್ನ ಸೊಸೆಯಾಗಿ ಬರಬೇಕು’ ಎಂದು ಹೇಳಿದ್ದಾರೆ. ಇದನ್ನು ಸ್ವತಃ ಕತ್ರೀನಾ ಕೈಫ್ ಕೂಡಾ ‘ಹೌದು ಸಲ್ಮಾನ್ ಅವರ ತಾಯಿ ನನ್ನನ್ನು ಸೊಸೆಯ ರೂಪದಲ್ಲಿ ನೋಡಲು ಬಯಸುತ್ತಿದ್ದಾರೆ’ ಎಂದು ಸಂದರ್ಶನವೊಂದರಲ್ಲಿ ದೃಢ ಪಡಿಸಿದ್ದಾರೆ. 

ಇದೇ ವೇಳೆಗೆ ಸಲ್ಮಾ ಮತ್ತು ಕತ್ರೀನಾ ಪರಸ್ಪರ ಅಪ್ಪಿಕೊಂಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿ ಹರಿದಾಡುತ್ತಿದೆ. 

ಈ ನಡುವೆ ‘ಭಾರತ್’ ಸಿನಿಮಾ ಪ್ರಚಾರಕ್ಕಾಗಿ ಸಲ್ಮಾನ್ ಖಾನ್ ‘ಕಾಮಿಡಿ ವಿತ್ ಕಪಿಲ್ ಷೋ’ನಲ್ಲಿ ಭಾಗವಹಿಸಿದ್ದಾಗ, ‘ಸಲ್ಲೂ ಮದುವೆ ಯಾವಾಗ?’ ಅಂತ ಕಪಿಲ್ ಕಾಲೆಳೆದಿದ್ದಾರೆ. ‘ನೋಡಿ ಭಾರತ್ ಸಿನಿಮಾದ ನಾಯಕ ತನ್ನ 72ನೇ ವಯಸ್ಸಿನ ತನಕ ಮದುವೆಯಾಗಲ್ಲ ಅನ್ನುವ ಸಿದ್ಧಾಂತದವನು. ನಾನೂ ಕೂಡಾ ಅದನ್ನೇ ಅನುಸರಿಸಬೇಕೆಂದಿದ್ದೇನೆ’ ಎಂದು ಸಲ್ಮಾನ್ ನಗುತ್ತಲೇ ಉತ್ತರಿಸಿದ್ದಾರೆ. 

ಒಟ್ಟಿನಲ್ಲಿ ಸಲ್ಮಾನ್ ಮದುವೆ ಯಾವಾಗ ಅನ್ನುವವರಿಗೆ ಸಲ್ಲೂ 72ನೇ ವಯಸ್ಸಿನವರೆಗೆ ಕಾಯಬೇಕಷ್ಟೇ!

ರಣಬೀರ್ ಜೊತೆಗೆ ಬ್ರೇಕಪ್: ದೃಢಪಡಿಸಿದ ಕತ್ರೀನಾ

ಹಾಲು–ಜೇನಿನಂತಿದ್ದ ರಣಬೀರ್ ಕಪೂರ್ ಮತ್ತು ಕತ್ರೀನಾ ಕೈಫ್ ಸಂಬಂಧ ಹಳಸಿರುವುದು ಹಳೆಯ ವಿಚಾರವೇ. ಆದರೆ, ಈ ಸುದ್ದಿಯನ್ನು ಈಚೆಗೆ ಕತ್ರೀನಾಳೇ ದೃಢಪಡಿಸಿದ್ದಾಳೆ.

 ಆರು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ಕತ್ರೀನಾ–ರಣಬೀರ್ ಸದ್ದಿಲ್ಲದೇ ಪರಸ್ಪರರಿಂದ ದೂರವಾಗಿದ್ದಾರೆ. ಕತ್ರೀನಾ ತಮ್ಮ ಪಾಡಿಗೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೆ, ಇತ್ತ ರಣಬೀರ್, ಹೊಸ ಗೆಳತಿ ಆಲಿಯಾ ಭಟ್ ಜೊತೆಗೆ ವಿದೇಶಗಳಲ್ಲಿ ಸುತ್ತಾಡುತ್ತಾ, ಸಿನಿಮಾ ಸಮಾರಂಭಗಳಲ್ಲಿ ಜೋಡಿಯಾಗಿ ಭಾಗಿಯಾಗುತ್ತಿರುವುದು ಈಗ ರಹಸ್ಯವೇನಲ್ಲ. 

ಈಚೆಗೆ ಸಂದರ್ಶನವೊಂದರಲ್ಲಿ ಕತ್ರೀನಾಗೆ ರಣಬೀರ್ ಜತೆಗಿನ ಸಂಬಂಧ ಬ್ರೇಕಪ್ ಆಗಲು ಕಾರಣವೇನೆಂದು ಪ್ರಶ್ನಿಸಿದಾಗ ‘ಪರಿಸ್ಥಿತಿ ನನ್ನ ನಿಯಂತ್ರಣ ಮೀರಿ ಹೋಗಿತ್ತು’ಎಂದಷ್ಟೇ ಉತ್ತರಿಸಿದ್ದಾರೆ. 

‘ಒಡೆದು ಹೋದ ಹಾಲಿಗಾಗಿ ಅತ್ತು ಪ್ರಯೋಜನವಿಲ್ಲ. ಅದರ ಬದಲು ಇರುವ ಜೀವನವನ್ನು ಹೇಗೆ ವೃತ್ತಿಪರವಾಗಿ ರೂಪಿಸಿಕೊಳ್ಳಬೇಕು. ಆಗಿದ್ದೆಲ್ಲವೂ ಒಳಿತೇ ಆಯಿತು’ ಎಂದು ಕತ್ರೀನಾ ಬೋಲ್ಡ್ ಆಗಿಯೇ ಹೇಳಿಕೊಂಡಿದ್ದಾರೆ. 

ಸದ್ಯಕ್ಕೆ ಕತ್ರೀನಾ, ಸಲ್ಮಾನ್ ಖಾನ್ ಜೊತೆಗೆ ‘ಭಾರತ್’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು