‘ಕತ್ತಲ ಕೋಣೆ’ಯ ನಿಗೂಢ ಲೋಕ

7

‘ಕತ್ತಲ ಕೋಣೆ’ಯ ನಿಗೂಢ ಲೋಕ

Published:
Updated:
Deccan Herald

ಸೈನಿಕನಾಗಿ ದೇಶ ಸೇವೆ ಮಾಡಬೇಕೆಂಬ ಆ ಹುಡುಗನ ಕನಸು ಕಮರಿ ಹೋಗುತ್ತದೆ. ವ್ಯವಸ್ಥೆ ಆತನ ಕನಸನ್ನು ದಾಳವಾಗಿ ಮಾಡಿಕೊಂಡಾಗ ಆತ ಸೈಕೊ ಆಗುತ್ತಾನೆ. ಇದನ್ನೇ ‘ಕತ್ತಲ ಕೋಣೆ’ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ ಸಂದೇಶ್‌ ಶೆಟ್ಟಿ ಅಜ್ರಿ.

ಇದು ತೊಂಬತ್ತರ ದಶಕದ ಆರಂಭದಲ್ಲಿ ಮಲೆನಾಡಿನ ತಗ್ಗು ಪ್ರದೇಶದಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ. ನಿರ್ದೇಶನದ ಜೊತೆಗೆ ಸಂದೇಶ್‌ ಶೆಟ್ಟಿ ಅಜ್ರಿ ಅವರು ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಪತ್ರಕರ್ತನಾಗಿಯೂ ಬಣ್ಣಹಚ್ಚಿದ್ದಾರೆ. ಅವರು ಈ ಕತೆ ಬರೆಯಲು ಎರಡು ವರ್ಷ ತೆಗೆದುಕೊಂಡರಂತೆ.

ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ‘ಸೈಕಲಾಜಿಕಲ್ ಹಾರರ್, ಥ್ರಿಲ್ಲರ್‌ ಕತೆ ಇರುವ ಚಿತ್ರ ಇದು.  ಸಿನಿಮಾದಲ್ಲಿ ಒಂದು ಕುಟುಂಬದ ಐಷಾರಾಮಿ ಜೀವನ, ವಿದ್ಯಾರ್ಥಿಯ ಕನಸು ಇದೆ. ವ್ಯವಸ್ಥೆಯನ್ನು ದುಷ್ಟಶಕ್ತಿಗಳು ಹೇಗೆ ಬಳಸಿಕೊಳ್ಳುತ್ತವೆ ಎನ್ನುವುದನ್ನು ತೆರೆಯ ಮೇಲೆ ತೋರಿಸಿದ್ದೇವೆ’ ಎಂದರು ಸಂದೇಶ್‌ ಶೆಟ್ಟಿ ಅಜ್ರಿ.

ಹನ್ನಿಕಾ ರಾವ್ ಈ ಚಿತ್ರದ ನಾಯಕಿ. ಇದು ಅವರಿಗೆ ಮೊದಲ ಚಿತ್ರ. ಎರಡು ಶೇಡ್‌ಗಳಿರುವ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ವೈಶಾಖ್‌ ಅಮೀನ್, ರತಿಕ್‌ ಮುರುಡೇಶ್ವರ್, ಅಶ್ವಥ್‌ ಆಚಾರ್ಯ, ಶ್ರೀನಿವಾಸ್‌ ಪೈ, ಮಂಜುನಾಥ್‌ ಸಾಲಿಯಾನ್, ನಾಗರಾಜ್‌ ರಾವ್ ತಾರಾಗಣದಲ್ಲಿದ್ದಾರೆ.

ಸರಿಗಮಪ ಖ್ಯಾತಿಯ ಮೆಹಬೂಬ್‌ ಸಾಬ್‌ ಒಂದು ಗೀತೆಗೆ ಕಂಠದಾನ ಮಾಡಿದ್ದಾರೆ. ಜೊತೆಗೆ, ಚಿತ್ರದ ಪರಿಚಯ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಶ್ವಿಮಘಟ್ಟದ ದಟ್ಟವಾದ ಕಾಡಿನಲ್ಲಿ ರಾತ್ರಿವೇಳೆ ಚಿತ್ರೀಕರಣ ನಡೆಸಿರುವುದು ಈ ಚಿತ್ರದ ವಿಶೇಷ. ಅರುಣ್‌ರಾಜ್ ಸಂಗೀತ ಸಂಯೋಜಿಸಿದ್ದಾರೆ. ಪುರುಷೋತ್ತಮ್‌ ಅಮೀನ್‌ ಮತ್ತು ಶ್ರೀನಿವಾಸ ಶಿವಮೊಗ್ಗ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !