ಸೃಜನಶೀಲವೂ ಆಗಿರಬೇಕು, ಮಾರುಕಟ್ಟೆಯೂ ಗೊತ್ತಿರಬೇಕು

7
‘ಸಮ್ಮರ್ ಹಾಲಿಡೇಸ್’ ನೆವದಲ್ಲಿ ಕವಿತಾ ಮಾತು

ಸೃಜನಶೀಲವೂ ಆಗಿರಬೇಕು, ಮಾರುಕಟ್ಟೆಯೂ ಗೊತ್ತಿರಬೇಕು

Published:
Updated:

ನಿರ್ದೇಶಕಿ ಕವಿತಾ ಲಂಕೇಶ್ ಅವರು ಮಕ್ಕಳಿಗಾಗಿ ಮಾಡಿರುವ ಸಿನಿಮಾ ‘ಸಮ್ಮರ್ ಹಾಲಿಡೇಸ್‌’ನ ಇಂಗ್ಲಿಷ್‌ ಆವೃತ್ತಿ ಶುಕ್ರವಾರ (ಆಗಸ್ಟ್‌ 3) ತೆರೆಗೆ ಬರುತ್ತಿದೆ. ಇನ್ನು ಕೆಲವು ದಿನಗಳಲ್ಲಿ ಇದರ ಕನ್ನಡದ ಆವೃತ್ತಿ ಕೂಡ ಸಿನಿಮಾ ಮಂದಿರಗಳಲ್ಲಿ ಕಾಣಿಸಿಕೊಳ್ಳಲಿದೆ.

ಭಾರತದ ಮಕ್ಕಳು ಹಾಲಿವುಡ್‌ನವರು ಸಿದ್ಧಪಡಿಸುವ ಚಿತ್ರಗಳನ್ನು ಮಾತ್ರ ಏಕೆ ವೀಕ್ಷಿಸಬೇಕು, ಅವರಿಗೆ ಭಾರತದ್ದೇ ಆದ ಮಕ್ಕಳ ಚಿತ್ರಗಳು ಬೇಡವೇ ಎಂಬ ಮೂಲ ಆಲೋಚನೆಯೊಂದಿಗೆ ಈ ಸಿನಿಮಾ ಕಟ್ಟಿದ್ದಾರೆ ಕವಿತಾ. ಇಂಥದ್ದೊಂದು ಸಿನಿಮಾ ಮಾಡುವ ಮೊದಲು ತಮ್ಮ ಮನಸ್ಸಿನಲ್ಲಿ ಹುಟ್ಟಿಕೊಂಡಿದ್ದ ಆಲೋಚನೆಗಳ ಬಗ್ಗೆ ಅವರು ‘ಚಂದನವನ’ದ ಜೊತೆ ಮಾತನಾಡಿದ್ದಾರೆ.

ಕವಿತಾ ಅವರಿಗೆ ಈ ಸಿನಿಮಾ ಮಾಡುವ ಆಲೋಚನೆ ಹೊಳೆದಿದ್ದು ಕಳೆದ ವರ್ಷ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಇದ್ದಾಗ. ‘ನಮ್ಮ ಮುಂದೆ ಪ್ರಶಸ್ತಿ ಬಯಸಿ ನೂರಕ್ಕೂ ಹೆಚ್ಚು ಸಿನಿಮಾಗಳು ಬಂದಿದ್ದವು. ಹಾಗೆ ಬಂದ ಸಿನಿಮಾಗಳಲ್ಲಿ ಅಂದಾಜು ಇಪ್ಪತ್ತು ಸಿನಿಮಾಗಳು ಮಕ್ಕಳಿಗೆ ಸಂಬಂಧಿಸಿದ್ದವು. ಮಕ್ಕಳಿಗಾಗಿ ಮಾಡಿದ ಬಹುತೇಕ ಸಿನಿಮಾಗಳಲ್ಲಿ ಇದ್ದಿದ್ದು ಬೋಧನೆ. ಎರಡು–ಮೂರು ಸಿನಿಮಾಗಳು ಅದ್ಭುತವಾಗಿ ಇದ್ದವು ಎಂಬುದೂ ನಿಜ. ಆದರೆ, ಬಹುತೇಕ ಸಿನಿಮಾಗಳಲ್ಲಿ ಗೋಳು, ಕಷ್ಟಗಳೇ ಕಥೆಯ ರೂಪದಲ್ಲಿ ಇದ್ದವು. ಇವನ್ನೆಲ್ಲ ಮಕ್ಕಳು ನೋಡುತ್ತಾರಾ ಎಂದು ನಾನು ಆಲೋಚಿಸಿದೆ’ ಎಂದರು ಕವಿತಾ.

‘ಕೆಲವು ಸಿನಿಮಾಗಳಲ್ಲಿ ಬರೀ ಸಂದೇಶ ಇತ್ತು. ಮಕ್ಕಳಿಗೆ ಮನರಂಜನೆ ಕೂಡ ಬೇಕು ಎಂದು ನಾನು ಆಲೋಚಿಸಿದೆ. ನಾನು ಚಿಕ್ಕವಳಾಗಿದ್ದಾಗ ಓದುತ್ತಿದ್ದ ಅಮರ ಚಿತ್ರಕಥಾ, ಎನಿಡ್‌ ಬ್ಲೈಟನ್‌ ಅವರ ಕಥೆಗಳು ಬಹಳ ಖುಷಿ ಕೊಡುತ್ತಿದ್ದವು. ಮಕ್ಕಳು ಆಲೋಚಿಸುವ ಮಟ್ಟದಲ್ಲೇ ಸಿನಿಮಾ ಇರಬೇಕು ಎಂದು ನನಗೆ ಅನಿಸಿತು. ಸಾಮಾಜಿಕ ಸಂದೇಶ ಎಂಬುದು ಸಿನಿಮಾದಲ್ಲಿ ಅಂತರ್ ವಾಹಿನಿಯ ರೂಪದಲ್ಲಿ ಇದ್ದರೆ ಅಡ್ಡಿಯಿಲ್ಲ. ಆದರೆ, ಇಡೀ ಸಿನಿಮಾವನ್ನು ಅದೊಂದೇ ಆವರಿಸಬಾರದು ಎಂದು ತೀರ್ಮಾನಿಸಿಕೊಂಡಿದ್ದೆ’ ಎಂದೂ ಅವರು ಹೇಳಿಕೊಂಡರು.

ಕವಿತಾ ಅವರು ತಮ್ಮ ಸಿನಿಮಾವನ್ನು ತೆರೆಗೆ ತರಲು ಸಿದ್ಧವಾಗುವ ಮುನ್ನ, ಐನೂರು ಮಕ್ಕಳಿಗೆ ಅದನ್ನು ತೋರಿಸಿದ್ದರು. ಅವರೆಲ್ಲರಿಂದ ಅಭಿಪ್ರಾಯ ಪಡೆದು ಒಂದು ದೃಶ್ಯವನ್ನು ಕತ್ತರಿಸಿದ್ದಾರೆ. ಈ ಚಿತ್ರದಲ್ಲಿ ಪುಟ್ಟದಾದ ಒಂದು ಸಂದೇಶ ಕೂಡ ಇದೆಯಂತೆ. ಅದು ‘ಭೂ ಮಾಫಿಯಾಕ್ಕೆ ಸಂಬಂಧಿಸಿದ್ದು’ ಎಂದರು ಕವಿತಾ. ಚಿತ್ರದಲ್ಲಿ ಮಕ್ಕಳನ್ನು ಹೀರೊ ರೀತಿಯಲ್ಲಿ ತೋರಿಸಿಲ್ಲ. ಸಹಜವಾಗಿ ತೋರಿಸಲಾಗಿದೆ. ಈ ಚಿತ್ರದ ಮಕ್ಕಳು ಸ್ವಲ್ಪ ಮಟ್ಟಿಗೆ ಅಡ್ವೆಂಚರಸ್‌ ಆಗಿರುತ್ತಾರೆ.

‘ಈಗಿನ ಮಕ್ಕಳಿಗೆ 13–14ನೇ ವಯಸ್ಸಿಗೇ ತುಸು ಪ್ರಬುದ್ಧತೆ ಬರುತ್ತದೆ. ನಮ್ಮ ಸಿನಿಮಾದಲ್ಲಿ ಇರುವ ಮಕ್ಕಳು ಕೂಡ ಅಂಥವರೇ. ಅವರ ನಡುವೆ ಮುಗ್ಧ ಮಗು ಕೂಡ ಇದೆ. ಹಾಗೆಯೇ, ಇಲ್ಲಿನ ಮಕ್ಕಳ ಪಾತ್ರಗಳು ಬೇರೆ ಬೇರೆ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯವು. ಸಿನಿಮಾದಲ್ಲಿ ದೊಡ್ಡವರಿಗೆ ಅಷ್ಟೇನೂ ಪ್ರಾಮುಖ್ಯ ಇಲ್ಲ’ ಎಂದರು.

‘ಕನ್ನಡದಲ್ಲಿ ಇಂತಹ ಸಿನಿಮಾವನ್ನು ₹ 40 ಲಕ್ಷ ಅಥವಾ ₹ 50 ಲಕ್ಷ ಖರ್ಚಿನಲ್ಲಿ ಸಿದ್ಧಪಡಿಸಿ, ಕನ್ನಡದ ಮಾರುಕಟ್ಟೆಯನ್ನು ಮಾತ್ರ ನಂಬಿಕೊಂಡು, ಲಾಭ ಮಾಡಿಕೊಳ್ಳುವ ಅವಕಾಶ ಇದೆಯಾ’ ಎಂದು ಪ್ರಶ್ನಿಸಿದಾಗ, ‘ಕನ್ನಡದಲ್ಲಿ ಅಂತಹ ಸಿನಿಮಾಗಳಿಗೆ ಮಾರುಕಟ್ಟೆ ಇದೆ. ನಿರ್ಮಾಪಕ ಹೂಡಿದ ಹಣ ವಾಪಸ್‌ ಗಳಿಸಿಕೊಳ್ಳುವ ಸಾಧ್ಯತೆ ಖಂಡಿತ ಇದೆ’ ಎಂದರು. ‘ಮಕ್ಕಳ ಸಿನಿಮಾಗಳ ಪ್ರಚಾರದ ಕೆಲಸವನ್ನು ಎಲ್ಲರೂ ಚೆನ್ನಾಗಿ ಮಾಡುವುದಿಲ್ಲ. ಇಂದು ಸಾಮಾಜಿಕ ಮಾಧ್ಯಮಗಳ ಮೂಲಕವೂ ಜನರನ್ನು ತಲುಪಬೇಕು. ನಾವು ರಸ್ತೆಗಳಲ್ಲಿ ಪೋಸ್ಟರ್‌ ಅಂಟಿಸುವುದಕ್ಕಿಂತ ಹೆಚ್ಚಾಗಿ ಶಾಲೆಗಳ ಮೂಲಕವೂ ಮಕ್ಕಳನ್ನು ತಲುಪುವ ಯತ್ನ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಹಾಗೆಯೇ ಅಮೆಜಾನ್‌, ನೆಟ್‌ಫ್ಲಿಕ್ಸ್‌ನಂತಹ ವೇದಿಕೆಗಳಿಗೆ ಕನ್ನಡದಲ್ಲಿ ಕೂಡ ಒಳ್ಳೆಯ ಕಂಟೆಂಟ್‌ ಸಿಗುತ್ತದೆ ಎಂಬ ವಿಶ್ವಾಸ ಮೂಡಿಸಬೇಕು. ಈಗ ವಿಮಾನಗಳಲ್ಲೂ ಕನ್ನಡ ಸಿನಿಮಾ ವೀಕ್ಷಿಸುವ ಅವಕಾಶ ಇದೆ. ‘ನಾವು ಒಳ್ಳೆಯ ಸಿನಿಮಾ ಮಾಡಬೇಕು. ಹಾಗಂತ, ಸೃಜನಶೀಲರಾಗಿ ಇದ್ದಮಾತ್ರಕ್ಕೆ ಸಾಕಾಗುವುದಿಲ್ಲ. ಮಾರುಕಟ್ಟೆಯ ದೃಷ್ಟಿಯಿಂದಲೂ ಆಲೋಚಿಸಬೇಕು’ ಎಂದು ಕಿವಿಮಾತು ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !