ಸೋಮವಾರ, ಮಾರ್ಚ್ 1, 2021
28 °C

ಅಜ್ಞಾತ ವಿಲನ್ ‘ಕೆ.ಕೆ’

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

ನಾಯಕ ನಟರೇ ಸಿನಿಮಾದ ಕೇಂದ್ರಬಿಂದುವಾಗಿದ್ದ ಕಾಲವೊಂದಿತ್ತು. ಆಗೊಮ್ಮೆ ಈಗೊಮ್ಮೆ ಖಳನಟರೇ ಚಿತ್ರದ ಕೇಂದ್ರಬಿಂದುವಾಗುವುದೂ ಉಂಟು. ಅದು ಪಾತ್ರದ ಮೌಲ್ಯಕ್ಕಿಂತಲೂ ಖಳ ನಟರು ತಮ್ಮ ನಟನಾ ಸಾಮರ್ಥ್ಯದಿಂದ ದಕ್ಕಿಸಿಕೊಡುವ ಮೌಲ್ಯ ಎನ್ನಬಹುದು.

ಬಹುಭಾಷಾ ಚಿತ್ರಗಳಲ್ಲಿ ಖಳ ನಟ, ಪೋಷಕ ನಟರಾಗಿ ಮಿಂಚಿರುವ ಕೆ.ಕೆ.ಮೆನನ್‌ (ಕೃಷ್ಣ ಕುಮಾರ್ ಮೆನನ್‌) ಅಂತಹ ನಟರಲ್ಲೊಬ್ಬರು.

ಅಬ್ಬರಿಸುವ, ತಣ್ಣನೆ ಕ್ರೌರ್ಯದ ಮೂಲಕ ಬೆಚ್ಚಿ ಬೀಳಿಸುವ, ತಾನೇ ವಿಲನ್ ಎಂಬುದನ್ನು ಕೊನೆ ಕ್ಷಣದವರೆಗೂ ಗುಟ್ಟು ಬಿಟ್ಟುಕೊಡದಂತೆ ಮನೋಜ್ಞವಾಗಿ ನಟಿಸುವ ಖಳ ನಟರ ಪೈಕಿ ಮೆನನ್ ಪ್ರಮುಖರು. ಚಿತ್ರರಂಗದಲ್ಲಿ ಅವರು ‘ಕೆ.ಕೆ.’ ಎಂದೇ ಪರಿಚಿತರು.

ನಟನೆಗೂ ಸಂಭಾಷಣೆಗೂ ಸೈ

ಇತರ ವಿಲನ್‌ಗಳಂತೆ ಇಡೀ ಚಿತ್ರ ಆವರಿಸಿಕೊಳ್ಳದೆ ಆಗಾಗ್ಗೆ ಬರುವ ಸಣ್ಣಪುಟ್ಟ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಕೆ.ಕೆ.ಮೆನನ್ ಹರಿತ ಡೈಲಾಗ್‌ಗಳ ಮೂಲಕ ಎದುರಿಗಿದ್ದವರನ್ನು ನಿಂತಲ್ಲೇ ತಣ್ಣಗಾಗಿಸುತ್ತಾರೆ. ಸದಾ ಸಿಡುಕಿನ, ಕೆಡಕು ಬಯಸುವ ಮತ್ತು ಮಾನಸಿಕ ಒತ್ತಡದಲ್ಲಿರುವ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡವರು ಮೆನನ್. ಹಿಂದಿ, ಗುಜರಾತಿ ಮತ್ತು ತೆಲುಗು ಚಿತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಪೋಷಕ ನಟರಾಗಿಯೂ ಗಮನ ಸೆಳೆದಿದ್ದಾರೆ.

ಕೃಷ್ಣಕುಮಾರ್ ಮೆನನ್ ಕೇರಳದಲ್ಲಿ ಜನಿಸಿದರೂ ಬಾಲ್ಯ ಕಳೆದಿದ್ದು ಮತ್ತು ಶಿಕ್ಷಣ ಪಡೆದಿದ್ದು ಮಹಾರಾಷ್ಟ್ರದಲ್ಲಿ. ಪುಣೆ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಅವರು ತಮ್ಮ ಶೈಕ್ಷಣಿಕ ಅರ್ಹತೆ ಆಧರಿಸಿ ಕೆರಿಯರ್‌ನತ್ತ ಸಂಪೂಣರ್ವಾಗಿ ಕೇಂದ್ರೀಕರಿಸಿದ್ದರೆ ಈ ವೇಳೆಗೆ ಜಾಹೀರಾತು ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕಿತ್ತು. ಆದರೆ ಅದಕ್ಕೆ ಅವರ ಮನಸ್ಸು ಒಪ್ಪಲಿಲ್ಲ.

ತಮ್ಮ ಭವಿಷ್ಯದ ಬಗ್ಗೆ ನಿರ್ಧರಿಸಲು ಅವರು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಪಕ್ವ ನಟನೆಯ ಫಲವಾಗಿ ಉತ್ತಮ ಅವಕಾಶಗಳು ಸಿಗತೊಡಗಿದವು. ಹಿರಿಯ ನಟ ನಾಸೀರುದ್ಧೀನ್ ಶಾ ಜೊತೆ ‘ಮಹಾತ್ಮ ವರ್ಸಸ್ ಗಾಂಧಿ’ ಎಂಬ ನಾಟಕದಲ್ಲಿ ಅಭಿನಯಿಸಿದರು. ವರ್ಷಗಳು ಕಳೆದಂತೆ ಅಭಿನಯದ ಚಾತುರ್ಯದಿಂದ ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳತೊಡಗಿದರು. ‘ಪ್ರೈಮ್ ಮಿನಿಸ್ಟರ್’ ಎಂಬ ಧಾರಾವಾಹಿಯಲ್ಲಿ ಅವರ ಪ್ರಧಾನಮಂತ್ರಿ ಪಾತ್ರ ಅವಿಸ್ಮರಣೀಯ.

ಕಿರುತೆರೆಯಲ್ಲಿ ಭೇಷ್‌ ಅನಿಸಿಕೊಳ್ಳುತ್ತಲೇ ಬಾಲಿವುಡ್ ನಿರ್ದೇಶಕರು ಕೆ.ಕೆ.ಮೆನನ್ ಅವರಿಗೆ ಅವಕಾಶ ನೀಡಿದರು. ಆದರೆ ಯಾವುದೂ ಬೇಗನೇ ಯಶಸ್ಸು ತಂದು ಕೊಡಲಿಲ್ಲ. ಅನುರಾಗ್ ಕಶ್ಯಪ್ ನಿರ್ದೇಶನದ ‘ಪಾಂಚ್’ ಸೆನ್ಸಾರ್‌ಶಿಪ್‌  ಕಾರಣದಿಂದ ಬಿಡುಗಡೆಯಾಗಲಿಲ್ಲ. ‘ಹಜಾರೋ ಖ್ವಾಹಿಶೋಂ ಐಸಿ’ ಮತ್ತು ‘ಬ್ಲ್ಯಾಕ್ ಫ್ರೈಡೇ’ ಬಹಳ ತಡವಾಗಿ ತೆರೆಕಂಡವು.

2007ರಲ್ಲಿ ಶಿಲ್ಪಾ ಶೆಟ್ಟಿ, ಇರ್ಫಾನ್ ಖಾನ್ ಅಭಿನಯದ ‘ಲೈಫ್ ಇನ್ ಎ ಮೆಟ್ರೊ’ ಚಿತ್ರದಲ್ಲಿ ಕೆ.ಕೆ, ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. 2014ರಲ್ಲಿ ತೆರೆ ಕಂಡ ‘ಹೈದರ್’ ಚಿತ್ರದಲ್ಲಿ ಮೀರ್ ಪಾತ್ರವು ಅವರಿಗೆ ಫಿಲಂಫೇರ್ ಪ್ರಶಸ್ತಿ ತಂದುಕೊಟ್ಟಿತು. ಅವರ ಅಭಿನಯದ ಮೊದಲ ಚಿತ್ರ ‘ನಸೀಮ್’ ಅಲ್ಲದೇ ‘ಭೋಪಾಲ್ ಎಕ್ಸ್‌ಪ್ರೆಸ್‌’, ‘ವೋಡ್ಕಾ ಡೈರೀಸ್’, ‘ಸರ್ಕಾರ’, ‘ಕಾರ್ಪೊರೇಟ್‌’, ‘ದಿ ಘಾಜಿ ಅಟ್ಯಾಕ್’, ‘ಸಿಂಗ್ ಈಸ್ ಬ್ಲಿಂಗ್’ ಮುಂತಾದ ಚಿತ್ರಗಳಲ್ಲಿನ ನಟನೆ ಗಮನಾರ್ಹವಾದುದು.

ಶ್ರದ್ಧೆ, ಬದ್ಧತೆಯ ಮಂತ್ರ

‘ಕೆಲ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಖ್ಯಾತಿ ತರದಿರಬಹುದು ಅಥವಾ ಪಾತ್ರ ಗಮನ ಸೆಳೆಯದಿರಬಹುದು. ಆದರೆ ನಮಗೆ ವಹಿಸಿದ ಕಾರ್ಯವನ್ನು ಶ್ರದ್ಧೆ ಮತ್ತು ಬದ್ಧತೆಯಿಂದ ನಿಭಾಯಿಸಬೇಕು. ಒಂದಿಲ್ಲೊಂದು ದಿನ ನಮ್ಮನ್ನೂ ಗುರುತಿಸುತ್ತಾರೆ. ನಂಬಿಕೆ ಮತ್ತು ಆಶಾಭಾವ ಮುಖ್ಯ’ ಎಂಬುದು ಕೆ.ಕೆ. ಮೆನನ್ ತಾಳ್ಮೆಯ ಮಾತು.

ಕೆ.ಕೆ.ಮೆನನ್ ಕೆಲ ಚಿತ್ರಗಳಲ್ಲಿ ಅವರು ನಿಷ್ಠಾವಂತ ಪೊಲೀಸ್‌ ಅಧಿಕಾರಿಯಾಗಿ, ನೌಕರನಾಗಿ, ಸಾಮಾನ್ಯ ವ್ಯಕ್ತಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಪಾತ್ರ ಯಾವುದೇ ಆದರೂ ಅದಕ್ಕೆ ಜೀವ ತುಂಬುವುದು ತಮ್ಮ ವೃತ್ತಿಧರ್ಮ ಎಂಬ ನಂಬಿಕೆ ಅವರದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.