ಸೋಮವಾರ, ಆಗಸ್ಟ್ 8, 2022
23 °C

‘ನ್ಯಾನೊ ನಾರಾಯಣಪ್ಪ’ನಾದ ಕೆ.ಜಿ.ಎಫ್‌ ತಾತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಕೃಷ್ಣ ಜಿ.ರಾವ್‌ ನಿಮಗೆ ಗೊತ್ತಿದ್ದಾರಾ?!..ಹೀಗೆ ಪ್ರಶ್ನೆ ಕೇಳಿದರೆ ಉತ್ತರ ಸಿಗದು. ‘ಕೆಜಿಎಫ್‌ ತಾತ’ ಗೊತ್ತೇ? ಎಂದು ಕೇಳಿದರೆ ತಕ್ಷಣ ಎಲ್ಲರೂ ‘ಗೊತ್ತು’ ಎನ್ನುತ್ತಾರೆ. ಹೌದು, ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಕೆ.ಜಿ.ಎಫ್‌ ಮೊದಲ ಹಾಗೂ ಎರಡನೇ ಚಾಪ್ಟರ್‌ನಲ್ಲಿ ದೃಷ್ಟಿಹೀನ ವೃದ್ಧನ ಪಾತ್ರಕ್ಕೆ ಬಣ್ಣಹಚ್ಚಿದ್ದ ನಟ ಕೃಷ್ಣ ಜಿ. ರಾವ್, ‘ಕೆಜಿಎಫ್‌ ತಾತ’ ಎಂದೇ ಖ್ಯಾತಿಪಡೆದವರು.

ಕೆಜಿಎಫ್‌ ತಾತ ಇದೀಗ ಹೀರೊ ಆಗಿದ್ದಾರೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾದ ನಿರ್ದೇಶಕ ಕುಮಾರ್ ನಿರ್ದೇಶನದ ಹೊಸ ಸಿನಿಮಾ ‘ನ್ಯಾನೊ ನಾರಾಯಣಪ್ಪ’ ಚಿತ್ರದಲ್ಲಿ ಕೃಷ್ಣ ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದೆ.

ಹತ್ತು ತಲೆಯುಳ್ಳ ರಾವಣನ ಅವತಾರದಲ್ಲಿ ಕೃಷ್ಣ ಅವರು ಇಲ್ಲಿ ಕಾಣಿಸಿಕೊಂಡಿದ್ದು, ಕಿರೀಟ, ಕೂಲಿಂಗ್‌ ಗ್ಲಾಸ್ ಹಾಕಿ ಪೋಸ್‌ ನೀಡಿದ್ದಾರೆ. ಜೊತೆಗೆ ನ್ಯಾನೊ ಕಾರು ಕೂಡ ಇಲ್ಲಿ ಹೈಲೈಟ್‌ ಆಗಿದ್ದು, ಹಾಸ್ಯ ಕಲಾವಿದರ ದಂಡೇ ಚಿತ್ರದಲ್ಲಿದೆ. ‘ಕಾಕ್ರೋಚ್’ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಆನಂತು, ಅಪೂರ್ವ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಮನರಂಜನೆ ಉಣಬಡಿಸಿದ್ದ ಕುಮಾರ್, ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾದಲ್ಲಿ ಬೆಟ್ಟಿಂಗ್ ಧಂದೆಯ ಕರಾಳತೆಯನ್ನು ಕಟ್ಟಿಕೊಟ್ಟಿದ್ದರು. ‘ನ್ಯಾನೊ ನಾರಾಯಣಪ್ಪ’ ಸಿನಿಮಾಗೆ ಕುಮಾರ್ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಬಂಡವಾಳ ಕೂಡ ಹಾಕಿದ್ದಾರೆ. ‘ಇದೊಂದು ಕಾಮಿಡಿ ಎಮೋಷನಲ್ ಡ್ರಾಮ, ತುಂಬಾ ಕಾಡುವ ಕಥೆ ಇದರಲ್ಲಿದೆ’ ಎನ್ನುತ್ತಾರೆ ಕುಮಾರ್.

ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಆಗಸ್ಟ್‌ನಲ್ಲಿ ಸಿನಿಮಾ ಬಿಡುಗಡೆಗೊಳಿಸುವ ಯೋಚನೆಯಲ್ಲಿದೆ ಚಿತ್ರತಂಡ. ಸಿನಿಮಾಗೆ ರಾಜಶಿವಶಂಕರ ಛಾಯಾಗ್ರಾಹಣ, ಆಕಾಶ್ ಪರ್ವ ಸಂಗೀತ, ಸಿದ್ದು ಅವರ ಸಂಕಲನವಿದೆ. ಶೀಘ್ರದಲ್ಲೇ ಟೀಸರ್‌ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು