2 ಸಾವಿರ ಥಿಯೇಟರ್‌ಗೆ ‘ಕೆಜಿಎಫ್‌’; ಫೇಸ್‌ಬುಕ್‌ ಲೈವ್‌ ಮೇಲೆ ಹದ್ದಿನಕಣ್ಣು

7

2 ಸಾವಿರ ಥಿಯೇಟರ್‌ಗೆ ‘ಕೆಜಿಎಫ್‌’; ಫೇಸ್‌ಬುಕ್‌ ಲೈವ್‌ ಮೇಲೆ ಹದ್ದಿನಕಣ್ಣು

Published:
Updated:
Deccan Herald

ಬೆಂಗಳೂರು: ನಟ ಯಶ್‌ ನಟನೆಯ ಬಹುನಿರೀಕ್ಷಿತ ‘ಕೆಜಿಎಫ್‌’ ಚಿತ್ರ ಇದೇ 21ರಂದು ವಿಶ್ವದಾದ್ಯಂತ ಏಕಕಾಲಕ್ಕೆ 2 ಸಾವಿರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. 

ಅಂದು ಮುಂಜಾನೆ 4ಗಂಟೆಗೆ ಬೆಂಗಳೂರಿನಲ್ಲಿ ಮೊದಲ ಪ್ರದರ್ಶನ ನಿಗದಿಯಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಿದೆ. ಸಿನಿಮಾದ ಹಿಂದಿ ಅವತರಣಿಕೆಯು ಒಂದು ಸಾವಿರ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. 

ಥಿಯೇಟರ್‌ನಲ್ಲಿ ಮೊಬೈಲ್‌ ಮೂಲಕ ಸಿನಿಮಾ ಚಿತ್ರೀಕರಿಸುವವರು, ಫೇಸ್‌ಬುಕ್‌ ಲೈವ್‌ ಮಾಡುವವರ ಮೇಲೆ ಹದ್ದಿನಕಣ್ಣು ನೆಡಲಾಗಿದೆ. ತೀವ್ರ ನಿಗಾ ಇಡಲು ಖಾಸಗಿ ಏಜೆನ್ಸಿಯೊಂದನ್ನು ನೇಮಿಸಲಾಗಿದೆ. ಎಲ್ಲ ಭಾಷೆಯ ಅವತರಣಿಕೆಗಳಿಗೂ ಕೋಡ್‌ ನೀಡಲಾಗಿದೆ. ಇದರಿಂದ ಯಾವುದೇ ಚಿತ್ರಮಂದಿರದಲ್ಲಿ ಸಿನಿಮಾದ ತುಣುಕುಗಳು ಸೋರಿಕೆಯಾದರೂ ತಕ್ಷಣವೇ ಪತ್ತೆಹಚ್ಚಲು ಚಿತ್ರತಂಡಕ್ಕೆ ಸುಲಭವಾಗಲಿದೆ.‌

‘ಕನ್ನಡ ಚಿತ್ರವೊಂದು ಜಾಗತಿಕಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇದು ಕನ್ನಡ ಚಿತ್ರೋದ್ಯಮಕ್ಕೆ ಸಲ್ಲುತ್ತಿರುವ ಗೌರವವೂ ಹೌದು. ಒಳ್ಳೆಯ ವಸ್ತು ಇದ್ದಾಗ ನಾವು ಯಾವ ಭಾಷೆಯ ಚಿತ್ರರಂಗಕ್ಕೂ ಬೇಕಾದರೂ ನುಗ್ಗಿ ಹೊಡೆಯಬಹುದು. ಕೆಜಿಎಫ್‌ ಇದಕ್ಕೊಂದು ಉದಾಹರಣೆ’ ಎಂದು ನಟ ಯಶ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಥಿಯೇಟರ್‌ನಲ್ಲಿ ಸಿನಿಮಾವನ್ನು ಚಿತ್ರೀಕರಿಸುವುದು ಅಪರಾಧ. ಯಾರೊಬ್ಬರು ಕಾನೂನು ಉಲ್ಲಂಘನೆ ಮಾಡಬಾರದು. ತಪ್ಪು ಎಸಗಿದರೆ ಶಿಕ್ಷೆ ಕಟ್ಟಿಟ್ಟಬುತ್ತಿ. ತಪ್ಪು ಮಾಡಿದ ಬಳಿಕ ಅಣ್ಣಾ ನಾನು ನಿಮ್ಮ ಅಭಿಮಾನಿ ಎಂದರೆ ಪೊಲೀಸರು ಸುಮ್ಮನಿರುವುದಿಲ್ಲ’ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದರು.

‘ನನ್ನ ಜೀವನದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆದ ಘಟನೆಗಳನ್ನು ನಾನೆಂದಿಗೂ ಮರೆಯಲಾರೆ. ಸುಖ, ದುಃಖ ಎರಡನ್ನೂ ಅನುಭವಿಸಿದ್ದೇನೆ. ಮನುಷ್ಯ ನಿರ್ಲಿಪ್ತನಾಗಿರಬೇಕು. ಆಗ ಮಾತ್ರ ಒತ್ತಡವನ್ನು ಸಹಿಸಿಕೊಳ್ಳಬಹುದು ಎಂದ ಅವರು, ಕೆಜಿಎಫ್‌ ಸಿನಿಮಾಕ್ಕಿಂತ ನನಗೆ ಮಗಳು ಜನಿಸಿದ್ದೇ ರೋಮಾಂಚನ ನೀಡಿದೆ. ಅದೊಂದು ಭಾವನಾತ್ಮಕ ವಿಚಾರ. ಸಿನಿಮಾವನ್ನೂ ನಾನು ಅಷ್ಟೇ ಪ್ರೀತಿಸುತ್ತೇನೆ. ಆದರೆ, ಮಗಳಿಗೆ ನನ್ನ ಪ್ರಥಮ ಆದ್ಯತೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಟ ಶಾರೂಕ್‌ ಖಾನ್‌ ಅವರು ಕೆಜಿಎಫ್ ಟ್ರೇಲರ್‌ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಬೆಂಗಳೂರಿಗೆ ಬಂದಾಗ ನನ್ನನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ. ಸಮಯ ಸಿಕ್ಕಿದಾಗ ನಾನೇ ಖುದ್ದಾಗಿ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.

ನಿರ್ಮಾಪಕ ವಿಜಯ್‌ ಕಿರಗಂದೂರು ಮಾತನಾಡಿ, ‘ಮೊದಲ ಹಂತದಲ್ಲಿ ಅಮೆರಿಕ, ಕೆನಡಾ ಮತ್ತು ಇಂಗ್ಲೆಂಡ್‌ನಲ್ಲಿ ಚಿತ್ರ ತೆರೆಕಾಣುತ್ತಿದೆ. ಹಂತ ಹಂತವಾಗಿ ಯುರೋಪ್‌ ರಾಷ್ಟ್ರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸಾಮಾನ್ಯ ದಿನಗಳಲ್ಲಿ ಟಿಕೆಟ್‌ ದರ ಹೆಚ್ಚಿಸಲು ಕಾನೂನಿನಡಿ ಅವಕಾಶವಿಲ್ಲ. ವಾರಾಂತ್ಯದಲ್ಲಿ ದರ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 40

  Happy
 • 1

  Amused
 • 3

  Sad
 • 0

  Frustrated
 • 7

  Angry

Comments:

0 comments

Write the first review for this !