ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಹೆಚ್ಚಾಯ್ತು ಟಿಕೆಟ್‌ ದರ; ಮಲ್ಟಿಪ್ಲೆಕ್ಸ್‌ಗಳಲ್ಲೂ ಸೋಲ್ಡ್‌ ಔಟ್‌

Last Updated 20 ಡಿಸೆಂಬರ್ 2018, 11:39 IST
ಅಕ್ಷರ ಗಾತ್ರ

ಬೆಂಗಳೂರು: ನಟ ಯಶ್‌ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್‌–ಚಾಪ್ಟರ್‌ 1 ಶುಕ್ರವಾರ(ಡಿ.21) ಜಗತ್ತಿನಾದ್ಯಂತ ಸುಮಾರು ಎರಡು ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ರಾಜ್ಯದಲ್ಲಿ 350 ಚಿತ್ರಮಂದಿರಗಳಲ್ಲಿ ಬಿಡುಯಾಗುತ್ತಿದ್ದು, ಬೆಂಗಳೂರಿನಲ್ಲಿ ಬೆಳಗಿನ ಜಾವ 4 ಗಂಟೆಗೆ ಮೊದಲ ಪ್ರದರ್ಶನ ನಿಗದಿಯಾಗಿದೆ. ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ಗೆ ಬಾರೀ ಬೇಡಿಕೆ ಉಂಟಾಗಿದೆ.

ಕನ್ನಡ ಸಿನಿಮಾವೊಂದು ನಾಲ್ಕು(ಹಿಂದಿ, ತೆಲುಗು, ತಮಿಳು, ಮಲಯಾಳ) ಭಾಷೆಗಳಲ್ಲಿ ತೆರೆಕಾಣುತ್ತಿರುವುದು ಸಹ ಕೆಜಿಎಫ್‌ ವಿಶೇಷತೆಗಳಲ್ಲೊಂದು. ಭಾನುವಾರದಿಂದಲೇ ಟಿಕೆಟ್‌ ಬುಕ್ಕಿಂಗ್‌ ಅವಕಾಶ ಕಲ್ಪಿಸಲಾಗಿದ್ದು, ಶುಕ್ರವಾರ ಪ್ರದರ್ಶನಗಳಿಗೆ ಬಹುತೇಕ ಸೀಟ್‌ಗಳು ಭರ್ತಿಯಾಗಿವೆ.

ಹೆಚ್ಚಾಯ್ತು ಟಿಕೆಟ್‌ ದರ

ಬೆಂಗಳೂರಿನ ಚಿತ್ರಮಂದಿರಗಳಲ್ಲಿ ₹110–₹120 ಇದ್ದ ಸೆಕೆಂಡ್‌ ಕ್ಲಾಸ್‌(ಸ್ಟಾಲ್‌) ಟಿಕೆಟ್‌ಗಳ ಬೆಲೆ ₹150–180 ಹಾಗೂ ₹150 ಇದ್ದ ಬಾಲ್ಕನಿ ಟಿಕೆಟ್‌ ₹200 ಆಗಿದೆ. ಇನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ಕನಿಷ್ಠ ಟಿಕೆಟ್‌ ದರ ₹256. ಬೆಳಿಗ್ಗೆ 4 ಮತ್ತು 6 ಗಂಟೆಗೆ ವಿಶೇಷ ಪ್ರದರ್ಶನಗಳನ್ನು ಚಿತ್ರಮಂದಿರಗಳು ಪ್ರದರ್ಶಿಸುತ್ತಿವೆ. ಕೆಲವು ಮಲ್ಟಿಪ್ಲೆಕ್ಸ್‌ಗಳು ಸಹ 6 ಗಂಟೆಗೆ ಪ್ರದರ್ಶನ ಪ್ರಾರಂಭಿಸಲಿದ್ದು, ಕೆಜಿಎಫ್‌ ಬಿಡುಗಡೆಯಾಗಿರುವ ಬಹುತೇಕ ಎಲ್ಲ ಸ್ಕ್ರೀನ್‌ಗಳಲ್ಲಿಯೂ ಬೆಳಿಗ್ಗೆ 8 ರಿಂದ ಪ್ರದರ್ಶನ ನಡೆಯಲಿದೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ಕೆಲವು, ಒಂದೇ ದಿನ 19–20 ಪ್ರದರ್ಶನಗಳಿಗೆ ಅವಕಾಶ ನೀಡಿರುವುದು ಈ ಸಿನಿಮಾದ ಬಗೆಗಿನ ಕುತೂಹಲಕ್ಕೆ ಸಾಕ್ಷಿಯಂತಿದೆ. ಶುಕ್ರವಾರದ ಟಿಕೆಟ್‌ ಬುಕ್ಕಿಂಗ್‌ಗೆ ಹೋಲಿಸಿದರೆಶನಿವಾರ ಮತ್ತು ಭಾನುವಾರ ಪ್ರದರ್ಶನಗಳಿಗೆ ಶೇ 40–50ರಷ್ಟು ಟಿಕೆಟ್‌ಗಳು ಬುಕ್‌ ಆಗಿವೆ. ಆದರೆ, ಮಲ್ಟಿಪ್ಲೆಕ್ಸ್‌ಗಳಲ್ಲಿ ವಾರಾಂತ್ಯದ ಎರಡೂ ದಿನಗಳು ಟಿಕೆಟ್‌ ಬೆಲೆ ₹300ಕ್ಕೂ ಅಧಿಕ ತೋರುತ್ತಿವೆ.

ಆನ್‌ಲೈನ್‌ನಲ್ಲಿ ಕಾಣುತ್ತಿಲ್ಲ ಕೆಜಿಎಫ್‌ ತಮಿಳು

ಗಾಂಧಿನಗರದ ಭೂಮಿಕಾದಲ್ಲಿ ತೆಲುಗು ಮತ್ತು ಹಿಂದಿ ಆವೃತ್ತಿ ಪ್ರದರ್ಶನಗೊಳ್ಳಲಿವೆ. ಉಳಿದಂತೆ 2–4 ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ಹಿಂದಿ, ತೆಲುಗು, ಮಲಯಾಳ ಭಾಷೆಯಲ್ಲಿ ಕೆಜಿಎಫ್‌ ಪ್ರದರ್ಶನ ಕಾಣುತ್ತಿವೆ. ಶುಕ್ರವಾರದಿಂದ ಭಾನುವಾರದವರೆಗೂಈ ಭಾಷೆಗಳಲ್ಲಿನ ಪ್ರದರ್ಶನಗಳಿಗೆ ಟಿಕೆಟ್‌ ಬಹುತೇಕ ಲಭ್ಯವಿದೆ. ಚೆನ್ನೈನಲ್ಲಿ ಕೆಜಿಎಫ್‌ ತಮಿಳು ಆವೃತ್ತಿ ಸುಮಾರು 15 ಚಿತ್ರಮಂದಿರಗಳಲ್ಲಿ ಆನ್‌ಲೈನ್‌ ಬುಕ್ಕಿಂಗ್‌ ಮಾಡಬಹುದಾಗಿದೆ. ಹೈದರಾಬಾದ್‌ನಲ್ಲಿ ತೆಲುಗು ಆವೃತ್ತಿಗೆ ಬೇಡಿಕೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT