ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರಂಜೀವಿ ಸರ್ಜಾ 'ಖಾಕಿ' ಖದರ್

Last Updated 16 ಜನವರಿ 2020, 19:30 IST
ಅಕ್ಷರ ಗಾತ್ರ

‘ಒಂದು ಪ್ರದೇಶದಲ್ಲಿ ನಡೆಯುವ ಕಥೆ ಇದು. ಇಡೀ ದೇಶಕ್ಕೆ ಅನ್ವಯಿಸುತ್ತದೆ’ ಎಂದು ‘ಖಾಕಿ’ ಚಿತ್ರದ ಬಗ್ಗೆ ಕುತೂಹಲದ ಬೀಜ ಬಿತ್ತಿದರು ನಾಯಕ ಚಿರಂಜೀವಿ ಸರ್ಜಾ. ‘ನನಗೆ ಸ್ಪೆಷಲ್‌ ಚಿತ್ರ ಇದು. ಒಳ್ಳೆಯ ಕಂಟೆಂಟ್‌ ಇದೆ. ಕೆಲವರು ಸಮಾಜಘಾತುಕ ಕೃತ್ಯಗಳಿಗೆ ನಮ್ಮನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ನಮಗೆ ಗೊತ್ತಾಗುವುದಿಲ್ಲ. ಅದನ್ನೇ ಚಿತ್ರದಲ್ಲಿ ಹೇಳಿದ್ದೇವೆ’ ಎಂದು ಅವರು ಸಿನಿಮಾ ಕುರಿತು ವಿವರಿಸಿದರು.

ಜ. 24ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

ಸರ್ಕಾರದ ಭ್ರಷ್ಟಾಚಾರ ಮತ್ತು ಸಾಮಾನ್ಯ ಮನುಷ್ಯನ ನಡುವೆ ನಡೆಯುವ ಕಥೆ ಇದಾಗಿದೆ. ಚಿರು ಅವರದ್ದು ಸಾಮಾನ್ಯ ಮನುಷ್ಯನ ಪಾತ್ರ. ನಾಯಕನಿಗೆ ಸಹಾಯ ಮಾಡುವ ಹುಡುಗಿಯಾಗಿ ನಟಿ ತಾನ್ಯಾ ಹೋಪ್‌ ಬಣ್ಣ ಹಚ್ಚಿದ್ದಾರಂತೆ. ಚಿತ್ರದಲ್ಲಿ ಅವರ ಹೆಸರು ಲಾಸ್ಯ. ‘ಸಿನಿಮಾ ಬಗ್ಗೆ ನನಗೆ ಎಕ್ಸೈಟ್‌ ಆಗಿದೆ. ಕೌಟುಂಬಿಕ ಚಿತ್ರ ಇದು. ಕ್ಯೂಟ್‌ ಆದ ಪ್ರೇಮಕಥೆಯೂ ಇದೆ’ ಎಂದು ಹೇಳಿಕೊಂಡರು.

ನವೀನ್‌ ರೆಡ್ಡಿ ಈ ಚಿತ್ರಕ್ಕೆ ಆ್ಯಕ್ಷನ್‌ ಹೇಳಿದ್ದಾರೆ. ಇದು ಅವರ ಮೊದಲ ಚಿತ್ರ. ‘ಎಲ್ಲ ವರ್ಗಕ್ಕೂ ಇಷ್ಟವಾಗಿರುವ ಚಿತ್ರ ಮಾಡಿದ್ದೇವೆ’ ಎಂದಷ್ಟೇ ಹೇಳಿದರು.

ತರುಣ್‌ ಶಿವಪ್ಪ ಮತ್ತು ಮಾನಸಾ ತರುಣ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಈಗಾಗಲೇ, ಬಿಡುಗಡೆಗೊಂಡಿರುವ ಎರಡು ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಜನರಿಗೆ ಒಳ್ಳೆಯ ಸಿನಿಮಾ ನೀಡುವುದೇ ನನ್ನ ಗುರಿ’ ಎಂದು ಭರವಸೆ ನೀಡಿದರು.

ಒಂದೂವರೆ ದಶಕದ ಹಿಂದೆ ‘ಖಾಕಿ’ ಹೆಸರಿನ ಚಿತ್ರ ನಿರ್ದೇಶಿಸಿದ್ದ ಶಿವಮಣಿ ಅವರು ಇದರಲ್ಲಿ ರಾಜಕಾರಣಿಯಾಗಿ ಬಣ್ಣ ಹಚ್ಚಿದ್ದಾರೆ. ‘ಪ್ರಚಲಿತ ರಾಜಕೀಯದ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ‘ವ್ಯವಸ್ಥೆಯ ಬಣ್ಣವೇ ಖಾಕಿ. ಕಥೆ ಚೆನ್ನಾಗಿದ್ದರೆ ಡೈಲಾಗ್‌ ಬರೆಯುವುದು ಸುಲಭ. ಉತ್ತಮ ಚಿತ್ರತಂಡದೊಟ್ಟಿಗೆ ಕೆಲಸ ಮಾಡಿದ ಖುಷಿಯಿದೆ’ ಎಂದು ಹೇಳಿದರು.

ಚಿತ್ರದಲ್ಲಿ ನಟಿ ಛಾಯಾ ಸಿಂಗ್‌ ಅವರದು ಪೊಲೀಸ್‌ ಅಧಿಕಾರಿಯ ಪಾತ್ರ. ಶಶಿ ಖಳನಟನಾಗಿ ಕಾಣಿಸಿಕೊಂಡಿದ್ದಾರೆ. ಋತ್ವಿಕ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಬಾಲ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT