‘ಖೊಟ್ಟಿ ಪೈಸೆ’ ಸುತ್ತ ಮುತ್ತ

7

‘ಖೊಟ್ಟಿ ಪೈಸೆ’ ಸುತ್ತ ಮುತ್ತ

Published:
Updated:

‘ಖೊಟ್ಟಿ’ ಎಂದರೆ ಉತ್ತರ ಕರ್ನಾಟಕದ ಕಡೆಯಲ್ಲಿ ಉಪಯೋಗ ಇಲ್ಲದಿರುವುದು ಎಂಬ ಅರ್ಥವಿದೆ. ಖೊಟ್ಟಿ ನಾಣ್ಯ ಎಂದರೆ ಚಲಾವಣೆಯಲ್ಲಿ ಇಲ್ಲದ ನಾಣ್ಯ. 

ಹತ್ತು ಪೈಸೆಗೆ ಪೆಪ್ಪರ್‌ಮೆಂಟ್‌ ತೆಗೆದುಕೊಂಡು ತಿಂದ ನೆನಪು ಹಲವರ ಮನಸಲ್ಲಿ ಅಚ್ಚೊತ್ತಿರುತ್ತದೆ. ಹಿರಿಯರ ಬದುಕಿನ ಹರೆಯದ ಕಥೆಯನ್ನು ಕೆದಕಿದರೂ ಐದು, ಹತ್ತು, ಇಪ್ಪತ್ತೈದು ಪೈಸೆ ನಾಣ್ಯಗಳಿಗೆ ಅಲ್ಲಿ ಜಾಗ ಇದ್ದೇ ಇರುತ್ತದೆ. ಆದರೆ ಈ ನಾಣ್ಯಗಳೆಲ್ಲ ಚಲಾವಣೆ ಕಳೆದುಕೊಂಡು ಬಹುಕಾಲವೇ ಆಯ್ತು. ಇದೇ ಪರಿಕಲ್ಪನೆ ಇಟ್ಟುಕೊಂಡು ‘ಖೊಟ್ಟಿ ಪೈಸೆ’ ಎಂಬ ಹೆಸರಿನ ಸಿನಿಮಾ ಮಾಡಿದ್ದಾರೆ ಕಿರಣ್ ಕೆ.ಆರ್. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.

ಚಲಾವಣೆಯಲ್ಲಿಲ್ಲದ ಹಣ ಎಂದಾಕ್ಷಣ ಇತ್ತೀಚೆಗೆ ನಡೆದ ನೋಟು ರದ್ದತಿ ಘಟನೆಗೂ ಇದಕ್ಕೂ ಸಂಬಂಧವಿದೆ ಅಂದುಕೊಳ್ಳಬೇಡಿ. ಇದು ಏನಿದ್ದರೂ ಪೈಸೆಗಳ ವಿಷಯ. ಐದು ಪೈಸೆ, ಹತ್ತು ಪೈಸೆ ನಾಣ್ಯಗಳು ರದ್ದಾದ ಸಮಯದ್ದೇ ಕಥೆಯನ್ನು ಹೇಳಹೊರಟಿದ್ದಾರೆ ನಿರ್ದೇಶಕರು. ‘ಉತ್ತರ ಕರ್ನಾಟಕದ ಸೊಗಡಿನ ಕಥೆಯನ್ನು ಇಟ್ಟುಕೊಂಡು ಈ ನಾಣ್ಯರದ್ದತಿಗೂ ಮನುಷ್ಯ ಬದುಕಿಗೂ ಇರುವ ಸಂಬಂಧವನ್ನು ಹೇಳಹೊರಟಿದ್ದೇವೆ. ಕಮರ್ಷಿಯಲ್ ಅಂಶಗಳನ್ನು ಇಟ್ಟುಕೊಂಡೇ ಗಟ್ಟಿಯಾದ ಹೂರಣವನ್ನು ಕಟ್ಟಿದ್ದೇವೆ. ಆಗಿನ ಕಾಲದ ಭಾಷೆಯನ್ನೇ ಬಳಿಸಿದ್ದೇವೆ. ಬಾಗಲಕೋಟೆ ಜಿಲ್ಲೆಯ ಭಿಮನಾಳ ಗ್ರಾಮದಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ’ ಎಂದು ವಿವರಣೆ ನೀಡುತ್ತಾರೆ ನಿರ್ದೇಶಕ ಕಿರಣ್.

ವೈಜನಾಥ್ ಬಿರಾದರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚೇತನ್ ಹಾಗು ಸಹನಾ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಮ ಚೇತನ್, ಅಣ್ಣಯ್ಯ, ಪುಟ್ಟಮಲ್ಲಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ‘ಧಾರಾವಾಹಿಗಳಲ್ಲಿ ನನ್ನ ಅಭಿನಯ ನೋಡಿ ನನಗೆ ಈ ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟಿದ್ದಾರೆ ನಿರ್ದೇಶಕರು. ಬೀರಾದಾರ್ ಅವರ ಪಾತ್ರಕ್ಕೆ ಬೆಂಬಲವಾಗಿ ನಿಲ್ಲುವ ಪಾತ್ರದಲ್ಲಿ ನಾನು ನಟಿಸಿದ್ದೇನೆ’ಎ ಂದರು ರಾಮ್‌ ಚೇತನ್. ಸಹನಾ ಯಾರಿಗೂ ಕೇರ್ ಮಾಡದ ದಿಟ್ಟ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ವೀರಪ್ಪ.ವಿ.ಶಿರಗಣ್ಣ ಹಣ ಹೂಡಿದ್ದಾರೆ. ‘ನಿರ್ದೇಶಕರು ಹೇಳಿದ ಬಜೆಟ್‌ ಅನ್ನು ಕೊಟ್ಟಿದ್ದೇನೆ’ ಎಂದರು ನಿರ್ಮಾಪಕರು.

ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನೂ ಚಿತ್ರತಂಡ ಹಾಕಿಕೊಂಡಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !