ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶಕ್ಕೆ ಕೈಚಾಚಿದ ಕೈರಾ

Last Updated 25 ಜೂನ್ 2019, 20:13 IST
ಅಕ್ಷರ ಗಾತ್ರ

ದಕ್ಷಿಣ ಮುಂಬೈನ ಭವ್ಯ ಮನೆ. ಅಪ್ಪ ದೊಡ್ಡ ವ್ಯಾಪಾರಿ. ಅಮ್ಮ ಅರ್ಧ ಮುಸ್ಲಿಂ–ಅರ್ಧ ಬ್ರಿಟಿಷ್. ಇಬ್ಬರ ಗುಣಗಳೂ ಬೆರೆತ ವಂಶವಾಹಿಯ ಮಗಳು. ಡೈನಿಂಗ್ ಟೇಬಲ್ ಎದುರು ಎಲ್ಲರೂ ಊಟಕ್ಕೆ ಕುಳಿತಾಗ ದಿನದಲ್ಲಿ ನಡೆದ ಘಟನೆಗಳದ್ದಷ್ಟೇ ಅಲ್ಲ, ಕನಸುಗಳ ಕುರಿತ ಚರ್ಚೆಗಳೂ ಗರಿಗೆದರುತ್ತಿದ್ದವು.

ಕೆಥೆಡ್ರಲ್‌ ಶಾಲೆಯಲ್ಲಿ ಕಲಿಯುತ್ತಿದ್ದ ಆ ಮಗಳಿಗೆ ಕನ್ನಡಿ ಎಂದರೆ ಇಷ್ಟ. ಅದರ ಮುಂದೆ ನಿಂತು ತನ್ನ ಮುದ್ದುಮುಖವನ್ನು ತಾನೇ ಮುದ್ದಿಸುತ್ತಾ, ಎಲ್ಲಾದರೂ ಸಣ್ಣ ಮಚ್ಚೆ ಕಂಡರೆ, ಅದರ ಮೇಲೆ ಬೆರಳಾಡಿಸುತ್ತಾ ತನ್ನ ಮೋಹದಲ್ಲಿ ತಾನೇ ಪರವಶಳಾಗುತ್ತಿದ್ದ ಕಾಲವೊಂದು ಇತ್ತು.

ನಟಿ ಕೈರಾ ಅಲಿಯಾ ಅಡ್ವಾಣಿಯ (ಅಲಿಯಾ ಮೂಲ ಹೆಸರು. ಕೈರಾ ಎನ್ನುವುದನ್ನು ಆಮೇಲೆ ಸೇರಿಸಿಕೊಂಡದ್ದು) ಬಾಲ್ಯ ಇದ್ದುದು ಹಾಗೆ. ‘ಕಬೀರ್ ಸಿಂಗ್’ ಸಿನಿಮಾದಲ್ಲಿ ತಣ್ಣಗಿನ ಸ್ವಭಾವದ ನಾಯಕಿಯಾಗಿ ಅಭಿನಯಿಸಿರುವ ಅವರ ಫೋಟೊಗಳನ್ನು ಈಗ ಅನೇಕ ನಿರ್ಮಾಪಕರು ನೋಡತೊಡಗಿದ್ದಾರೆ.

ಪ್ರೌಢಾವಸ್ಥೆಯಲ್ಲಿ ಕೈರಾ ಕುಡುಮಿ. ತಾನು ಓದುತ್ತಿದ್ದ ಶಾಲೆಯಲ್ಲಿ 12ನೇ ತರಗತಿ ಪಾಸಾದ ಮೇಲೆ ಬಹುತೇಕರು ಉನ್ನತ ಅಧ್ಯಯನಕ್ಕೆ ವಿದೇಶಗಳಿಗೆ ಹಾರುತ್ತಿದ್ದರು. ಆ ಶಾಲೆಯಲ್ಲಿ ಕಲಿಯುತ್ತಿದ್ದವರಲ್ಲಿ ಹೆಚ್ಚಿನವರು ಶ್ರೀಮಂತರೇ.

12ನೇ ತರಗತಿಯಲ್ಲಿ ಶೇ 92 ಅಂಕ ಗಳಿಸಿ, ಮಾರ್ಕ್ಸ್‌ಕಾರ್ಡನ್ನು ಅಪ್ಪ–ಅಮ್ಮನ ಎದುರಲ್ಲಿ ಇಟ್ಟ ಹುಡುಗಿ, ‘ನಾನು ನಟಿಯಾಗುವೆ’ ಎಂದು ಹೇಳಿದ್ದು ಸಿನಿಮೀಯವಾಗಿಯೇ ಇತ್ತು.

ಖುದ್ದು ಪ್ಲೇಹೋಮ್‌ ನಡೆಸುತ್ತಿದ್ದ ಅಮ್ಮನಿಗೆ ಮಗಳು ಅಷ್ಟು ಚಿಕ್ಕಪ್ರಾಯದಲ್ಲಿಯೇ ನಟಿಯಾಗುವುದು ಇಷ್ಟವಿರಲಿಲ್ಲ. ಕನಿಷ್ಠ ಒಂದು ಪದವಿಯಾದರೂ ಇರಬೇಕು ಎನ್ನುವ ಕಾಳಜಿ. ಅಮ್ಮ ಹಾಕಿದ ಗೆರೆಯನ್ನು ಕೈರಾ ದಾಟಲಿಲ್ಲ. ಹಾಗೆಂದು ಓದಲು ವಿದೇಶಕ್ಕೆ ಹೋಗಲಿಲ್ಲ. ಸಮೂಹ ಸಂವಹನದ ಕಾಲೇಜು ಸೇರಿಕೊಂಡರು. ಅಪ್ಪ ‘ಥ್ರೀ ಈಡಿಯಟ್ಸ್‌’ ಸಿನಿಮಾ ನೋಡಿದ್ದೇ, ಮಗಳ ಕನಸಿನಲ್ಲಿ ಅರ್ಥವಿದೆ ಎಂದು ಭಾವಿಸಿದರು.

‘ನೀನು ಬಯಸಿದಂತೆಯೇ ನಟಿಯಾಗು’ ಎಂದು ಆಶೀರ್ವದಿಸಿದರು. ಮಗಳಿಗೆ ಆಕಾಶಕ್ಕೆ ಮೂರೇ ಗೇಣು. ಸಂಬಂಧದಲ್ಲಿ ಅಶೋಕ್‌ ಕುಮಾರ್‌ ಮರಿ ಮೊಮ್ಮಗಳು ಕೈರಾ. ಜಾವೆದ್ ಜಾಫ್ರಿ ಕೂಡ ಬಂಧುವೇ. ಕೈರಾ ತಾಯಿ ಒಂದು ಕಾಲದಲ್ಲಿ ಸಲ್ಮಾನ್‌ ಖಾನ್ ಜತೆ ಸೈಕ್ಲಿಂಗ್‌ ಮಾಡುತ್ತಿದ್ದವರು.

ಇಂಥ ಹಿನ್ನೆಲೆ ಇದ್ದರೂ ತಟ್ಟೆಯಲ್ಲಿ ಅವಕಾಶದ ವೀಳ್ಯವನ್ನಿಟ್ಟು ಯಾರೂ ‘ಅಭಿನಯಿಸಲು ಬಾರಮ್ಮ’ ಎಂದು ಕರೆಯಲಿಲ್ಲ. ನಿರ್ದೇಶಕ ಕಬೀರ್ ಸದಾನಂದ್ ‘ಫಗ್ಲಿ’ ಸಿನಿಮಾ ಮಾಡಲು ಹೊರಟಾಗ ಹೊಸಮುಖದ ಶೋಧದಲ್ಲಿದ್ದರು. ಆಗ ಕೈರಾ ಅಡ್ವಾಣಿ ತಮ್ಮ ಫೋಟೊ ಹಾಗೂ ಸ್ವವಿವರ ಕಳುಹಿಸಿಕೊಟ್ಟಿದ್ದು.

ಸ್ಕ್ರೀನ್‌ ಟೆಸ್ಟ್‌ಗೆಂದು ಆಹ್ವಾನ ಬಂದಾಗ ಕನ್ನಡಿಯ ಎದುರೇ ಮತ್ತೆ ಮತ್ತೆ ನಿಂತ ಕೈರಾ, ಮುಖವನ್ನು ಮುದ್ದಿಸುವುದಕ್ಕಿಂತ ಹೆಚ್ಚಾಗಿ ಭಾವಗಳನ್ನು ಮೂಡಿಸಲು ಹೆಣಗಾಡಿದರು. 2014ರಲ್ಲಿ ಅವರು ಹಿಂದಿ ಸಿನಿಮಾದಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದೇನೋ ಆಯಿತು. ಮತ್ತೊಂದು ಅವಕಾಶ ಸಿಕ್ಕಿದ್ದು ಎರಡು ವರ್ಷಗಳ ನಂತರ. ನಡುವೆ ಕೆಲವು ಜಾಹೀರಾತುಗಳಲ್ಲಿ ಅಭಿನಯಿಸಿ, ಅಸ್ತಿತ್ವ ಉಳಿಸಿಕೊಂಡ ಅವರು, ತೆಲುಗು ಚಿತ್ರರಂಗದಲ್ಲಿ ಬುಲಾವು ಬಂದಾಗ ಒಲ್ಲೆ ಎನ್ನಲಿಲ್ಲ.

‘ಮಚ್ಚಿನೆ’, ‘ಭರತ್ ಅನೆ ನೇನು’, ‘ವಿನಯಾ ವಿಧೇಯ ರಾಮ’ ಅವರು ಬಣ್ಣ ಹಚ್ಚಿದ ತೆಲುಗು ಸಿನಿಮಾಗಳು. ‘ಎಂ. ಎಸ್. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಅದಕ್ಕೂ ಮೊದಲು ಅಭಿನಯಿಸಿದ ಹಿಂದಿ ಚಿತ್ರ.

ನೆಟ್‌ಫ್ಲಿಕ್ಸ್‌ನಲ್ಲಿ ‘ಲಸ್ಟ್ ಸ್ಟೋರೀಸ್’ನಲ್ಲಿ ನಟನೆಯ ಛಾಪು ಮೂಡಿಸಿದ ಅವರು ‘ಲಜ್ಜಾ’ ಚಿತ್ರದ ಸಣ್ಣ ಅವಕಾಶಕ್ಕೂ ತೆರೆದುಕೊಂಡವರು.‘ಕಬೀರ್ ಸಿಂಗ್’ ಗಲ್ಲಾಪೆಟ್ಟಿಗೆಯಲ್ಲಿ ಹಣ ಮಾಡುತ್ತಿರುವ ಹೊತ್ತಿಗಾಗಲೇ ಕೈರಾ ಕೈಯಲ್ಲಿ ಇನ್ನೂ ನಾಲ್ಕು ಸಿನಿಮಾಗಳಿವೆ. ಈಗಲೂ ಅವರಿಗೆ ಕನ್ನಡಿ ಎಂದರೆ ಇಷ್ಟ.

–ಎನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT