ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಯರ್ ಕಣ್ಮಣಿ’ ಚಿತ್ರಕ್ಕೆ ಕಿಚ್ಚ ಸುದೀಪ್ ಕ್ಲ್ಯಾಪ್‌

Last Updated 15 ಫೆಬ್ರುವರಿ 2021, 14:22 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‍ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಹಾಗೂ ಕ್ರಿಕೆಟ್‌ ಆಟಗಾರ ಪ್ರವೀಣ್‌ ಗೌಡ ‘ಡಿಯರ್ ಕಣ್ಮಣಿ’ ಚಿತ್ರದ ಮೂಲಕ ನಾಯಕ ನಟರಾಗಿ ಚಂದನವನಕ್ಕೆ ಕಾಲಿಡುತ್ತಿದ್ದು, ನಟ ಕಿಚ್ಚ ಸುದೀಪ್‌ ಗುಟ್ಟೆ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಈ ಚಿತ್ರೀಕರಣಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು.

ಹಿರಿಯ ನಟಿ ರೇಖಾದಾಸ್ ಅವರ ಮಗಳು ಸಾತ್ವಿಕಾ ಈ ಸಿನಿಮಾದ ನಾಯಕಿ. ವಿಸ್ಮಯ ಫಿಲ್ಮ್ಸ್‌ನ ಈ ಚಿತ್ರವನ್ನು ವಿಸ್ಮಯಾ ಗೌಡ ಅವರು ನಿರ್ಮಾಣ ಹಾಗೂ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾಕ್ಕೆ ಚಾಲನೆ ನೀಡಿದ ಬಳಿಕ ಸುದೀಪ್ ಶೀರ್ಷಿಕೆಯನ್ನೂ ಬಿಡುಗಡೆಗೊಳಿಸಿದರು. ‘ಈ ಸಿನಿಮಾದಲ್ಲಿ ಪ್ರವೀಣ್ ಗೌಡ ನಟನೆ ಮಾಡುತ್ತಿದ್ದಾರೆ. ಅವರಿಗೋಸ್ಕರ ನಾನು ಈ ಕಾರ್ಯಕ್ರಮಕ್ಕೆ ಬಂದೆ. ವಿಸ್ಮಯಾ ಹಾಗೂ ಅವರ ತಂಡ ತುಂಬಾ ಶ್ರಮವಹಿಸಿ ಕೆಲಸ ಮಾಡುತ್ತಿದೆ. ಖಂಡಿತಾ ನಾನು ಇಲ್ಲಿ ಯಾರಿಗೂ ನನ್ನ ಅನುಭವ ಹೇಳಿ ಮಾರ್ಗದರ್ಶನ ಮಾಡುವ ಉದ್ದೇಶದಿಂದ ಬಂದಿಲ್ಲ. ಅವರು ಸರಿ-ತಪ್ಪುಗಳ ಜೊತೆಗೆ ಸ್ವಂತ ಅನುಭವದಿಂದ ಒಳ್ಳೆಯ ಸಿನಿಮಾ ಮಾಡಲಿ ಎಂದು ಹಾರೈಸುತ್ತೇನೆ’ ಎಂದು ಸುದೀಪ್ ಹೇಳಿದರು.

‘ಮಡಿಕೇರಿ ಹಾಗೂ ಮೈಸೂರಿನಲ್ಲಿ ಸಿನಿಮಾ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ. ‘ಲವ್’ ಜಾನರ್ ಸಿನಿಮಾ ಇದು. ಮೂವರು ಇದ್ದ ಮಾತ್ರಕ್ಕೆ ಇದು ತ್ರಿಕೋನ ಪ್ರೇಮ ಕಥೆ ಎಂದುಕೊಳ್ಳಬೇಕಿಲ್ಲ. ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೇನರ್. ತುಂಬಾ ಚೆಂದದ ಕಥೆ ಈ ಸಿನಿಮಾಕ್ಕಿದೆ. ನಾವೆಲ್ಲರೂ ಸ್ನೇಹಿತರೇ ಆದರೂ ಸ್ಕ್ರಿಪ್ಟ್ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದೇವೆ’ ಎಂದು ವಿಸ್ಮಯಾ ಗೌಡ ಸಿನಿಮಾ ಕುರಿತು ವಿವರಿಸಿದರು.

ನಟ ಕಿಶನ್ ಮಾತನಾಡಿ, ‘ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ. ಲವರ್ ಬಾಯ್ ಪಾತ್ರ ನನಗೆ ಹೊಂದುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಇದನ್ನು ತೆರೆಮೇಲೆ ಸಾಧ್ಯವಾಗಿಸಬೇಕಿದೆ’ ಎಂದರು.

ನಟಿ ಸಾತ್ವಿಕಾ ಮಾತನಾಡಿ, ‘ನನಗೂ ಈ ಸಿನಿಮಾದಲ್ಲಿ ಭಿನ್ನವಾದ ಪಾತ್ರವೊಂದರಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಲವರ್ ಬಾಯ್ ಜೊತೆ ರೊಮ್ಯಾನ್ಸ್ ದೃಶ್ಯಗಳು ಕೂಡ ಇವೆ. ಸಿನಿಮಾದಲ್ಲಿ ಅಭಿನಯಿಸಲು ಕಾತುರಳಾಗಿದ್ದೇನೆ. ಇದು ಎಲ್ಲರ ಕನಸಿನ ಸಿನಿಮಾ. ನನಗೂ ಇದು ವೃತ್ತಿಜೀವನದಲ್ಲಿ ಬೇರೆ ರೀತಿಯಲ್ಲಿ ಬೆಳೆಯಲು ಸಹಾಯ ಆಗಲಿದೆ’ ಎಂದರು.

‘ಸುದೀಪ್ ಅವರು ನನಗೆ ಮೊದಲಿನಿಂದಲೂ ಬೆಂಬಲ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಬಂದು ಹರಿಸಿದ್ದಾರೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಎಲ್ಲರಿಗೂ ಇಷ್ಟ ಆಗುತ್ತದೆ. ಇದಕ್ಕಾಗಿ ಈಗಾಗಲೇ ತಯಾರಿ ನಡೆಸಿದ್ದೇನೆ. ಕ್ರಿಕೆಟ್ ಅಂಗಳದಿಂದ ಸಿನಿಮಾ ಹೇಗೆ ಎಂದು ಎಲ್ಲರೂ ಕೇಳುತ್ತಾರೆ. ಆದರೆ ಇವೆರಡೂ ಕ್ಷೇತ್ರದಲ್ಲೂ ನನಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಇದೇ ನನ್ನನ್ನು ಸಿನಿಮಾ ರಂಗದವರೆಗೂ ಕರೆದುಕೊಂಡು ಬಂದಿದೆ’ ಎಂದು ಪ್ರವೀಣ್‌ ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT