ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಪ್ರತಿಯೊಂದು ಸಿನಿಮಾವೂ ಚಿತ್ರಮಂದಿರಗಳಲ್ಲೇ ಬಿಡುಗಡೆಗೆ ಅರ್ಹ: ಸುದೀಪ್‌

Last Updated 23 ಜೂನ್ 2022, 15:47 IST
ಅಕ್ಷರ ಗಾತ್ರ

ಮುಂಬೈ:ಒಟಿಟಿ ವೇದಿಕೆಯು ವಿವಿಧ ರಾಜ್ಯಗಳ ಸಿನಿಮಾಗಳ ನಡುವಿದ್ದ ಗಡಿಯನ್ನು ಅಳಿಸಿ ಹಾಕಿದೆ ಎಂದು ಶ್ಲಾಘಿಸಿರುವ ನಟ ಸುದೀಪ್‌, ದೇಶದ ಪ್ರತಿಯೊಂದು ಸಿನಿಮಾವೂ ಚಿತ್ರಮಂದಿರಗಳಲ್ಲೇ ಬಿಡುಗಡೆಗೆ ಅರ್ಹವಾಗಿದೆ ಎಂದಿದ್ದಾರೆ.

ಗುರುವಾರ ಇಲ್ಲಿ ನಡೆದ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಸುದೀಪ್‌ ಮಾತನಾಡಿದರು. ಪ್ಯಾನ್‌ ಇಂಡಿಯಾ ಸಿನಿಮಾಗಳ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸುದೀಪ್‌, ‘ಪ್ರತಿಯೊಬ್ಬರೂ ತಮ್ಮ ಕಥೆಗಳನ್ನು ಹೇಳಲಿಚ್ಛಿಸುತ್ತಿದ್ದಾರೆ. ಹೀಗಾಗಿ ತೆಲುಗು ಚಿತ್ರರಂಗದವರೊಬ್ಬರು ನಾವು ಪ್ಯಾನ್‌ ಇಂಡಿಯಾ ಸಿನಿಮಾವೊಂದನ್ನು ಮಾಡುತ್ತಿದ್ದೇವೆ ಎಂದರೆ, ನಾವ್ಯಾರೂ ಅದನ್ನು ಸ್ಪರ್ಧೆಯಾಗಿ ತೆಗೆದುಕೊಳ್ಳುತ್ತಿಲ್ಲ. ಬೇರೆಯವರು ಏನು ಮಾಡುತ್ತಿದ್ದಾರೆ ಎನ್ನುವುದನ್ನೂ ನಾವು ನೋಡುತ್ತಿಲ್ಲ. ಕನ್ನಡ ಚಿತ್ರರಂಗವು ಇಂದು ಇಲ್ಲಿ ಕಥೆ ಹೇಳುತ್ತಾ ಬಂದಿದೆ. ಕೇವಲ ದಕ್ಷಿಣ ಭಾರತದ ಸಿನಿಮಾಗಳಷ್ಟೇ ಅಲ್ಲ, ಪ್ರತಿಯೊಂದು ಸಿನಿಮಾವೂ ತಮ್ಮ ಸಾಮರ್ಥ್ಯದಲ್ಲಿ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗುವ ಅರ್ಹತೆ ಹೊಂದಿವೆ’ ಎಂದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಒಟಿಟಿ ವೇದಿಕೆಗಳಲ್ಲಿದ್ದ ಸಿನಿಮಾಗಳನ್ನು ನೋಡಿ ಪ್ರೇಕ್ಷಕರು ಹಲವು ಶೈಲಿಯ ಸಿನಿಮಾ ನಿರ್ಮಾಣಕ್ಕೆ ತೆರೆದುಕೊಂಡರು. ಎಲ್ಲ ರಾಜ್ಯಗಳಲ್ಲೂ ಸಿನಿಮಾಗಳಿಗೆ ಮಾರುಕಟ್ಟೆ ಇದೆ. ಇದು ಹಲವರಿಗೆ ತಿಳಿದಿಲ್ಲವಷ್ಟೇ. ಕೋವಿಡ್‌–19 ಸಾಂಕ್ರಮಿಕ ಬರದೇ ಹೋಗಿದ್ದರೆ, ನಮಗೆ ಕೊರಿಯನ್‌ ಮತ್ತು ಥಾಯ್‌ ಸಿನಿಮಾಗಳು ಮತ್ತು ವೆಬ್‌ಸಿರೀಸ್‌ಗಳು ಗಮನಕ್ಕೆ ಬರುತ್ತಿರಲಿಲ್ಲ. ಅತ್ಯುತ್ತಮ ಚಿತ್ರಗಳನ್ನು ಹಲವರು ಮಾಡುತ್ತಿದ್ದಾರೆ ಎನ್ನುವುದು ಏಕಾಏಕಿ ನಮಗೆ ಅರ್ಥವಾಯಿತು’ ಎಂದರು.

‘ಕೆ.ಜಿ.ಎಫ್‌– ಚಾಪ್ಟರ್‌–2’ ಸಿನಿಮಾದ ದಾಖಲೆಯ ಯಶಸ್ಸನ್ನು ‘ವಿಕ್ರಾಂತ್‌ ರೋಣ’ ಮೂಲಕ ಮರುಸೃಷ್ಟಿಸುವ ನಿರೀಕ್ಷೆ ಹೊಂದಿದ್ದೀರಾ ಎನ್ನುವ ಪ್ರಶ್ನೆಗೆ, ‘₹1,000 ಕೋಟಿಯು ವ್ಯಕ್ತಿಯೊಬ್ಬನಿಗೆ ಖುಷಿ ನೀಡಿದರೆ, ನಾನು ₹2 ಸಾವಿರ ಕೋಟಿ ಮಾಡುತ್ತೇನೆ’ ಎಂದು ಸುದೀಪ್‌ ಉತ್ತರಿಸಿದರು.

ಅನೂಪ್‌ ಭಂಡಾರಿ ನಿರ್ದೇಶನದ ವಿಕ್ರಾಂತ್‌ ರೋಣ ಸಿನಿಮಾವನ್ನು, ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರು ತಮ್ಮ ‘ಸಲ್ಮಾನ್‌ ಖಾನ್‌ ಫಿಲ್ಮ್ಸ್‌–ಎಸ್‌ಕೆಫ್‌’ ಮೂಲಕ ಉತ್ತರ ಭಾರತದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಜಾಕ್‌ ಮಂಜುನಾಥ್‌ ನಿರ್ಮಾಣದ ಈ ಸಿನಿಮಾವು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಜುಲೈ 28ರಂದು 3ಡಿಯಲ್ಲಿ ತೆರೆಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT