ಮಂಗಳವಾರ, ಆಗಸ್ಟ್ 16, 2022
29 °C

‘ಕಿಲಾಡಿಗಳು’ ಚಿತ್ರದ ಟ್ರೇಲರ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನಂದ್ ಸಿನಿಮಾಸ್ ಅರ್ಪಿಸುವ ಪೂರ್ವಿಕಾಮೃತ ಕ್ರಿಯೇಷನ್ಸ್ ಲಾಂಛನದ ಅಡಿಯಲ್ಲಿ ನಿರ್ಮಾಣವಾಗಿರುವ ‘ಕಿಲಾಡಿಗಳು’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರವು ಡಿಸೆಂಬರ್‌ 17ರಂದು ರಾಜ್ಯಾದಾದ್ಯಂತ ಬಿಡುಗಡೆ ಆಗಲಿದೆ. ಆ ನಿಮಿತ್ತ ಚಿತ್ರತಂಡ ಓರಾಯನ್ ಮಾಲ್‌ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪರಮಾತ್ಮ ಸ್ಡುಡಿಯೋಸ್‌ನಲ್ಲಿ ಟ್ರೇಲರ್ ಅನ್ನು ವೀಕ್ಷಿಸಬಹುದು.

ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟರೆ ಏನಾಗುತ್ತದೆ ಎಂಬುದನ್ನೇ ಪ್ರಧಾನವಾಗಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಬಿ.ಪಿ ಹರಿಹರನ್. ಚಿತ್ರದಲ್ಲಿ ಮಹೇಂದ್ರ ಮಣೋತ್ ನಾಯಕನಾಗಿದ್ದಾರೆ, ನಿರ್ಮಾಣದ ಹೊಣೆಯೂ ಅವರದ್ದೆ.

ವಿಶೇಷ ಏನೆಂದರೆ, ಈ ಚಿತ್ರದಲ್ಲಿ ಮೂರು ಹಾಡುಗಳನ್ನು ಪೊಲೀಸ್ ಇಲಾಖೆಗೆ ಅರ್ಪಿಸಲಾಗಿದೆ. ಮಕ್ಕಳ ಅಪಹರಣದ ಹಿನ್ನೆಲೆಯಲ್ಲಿಯೂ ಕಥೆ ತೆರೆದುಕೊಳ್ಳಲಿದ್ದು, ಪೊಲೀಸ್ ಇಲಾಖೆ ಅಪಹರಣಕಾರರನ್ನು ಹೇಗೆ ಹಿಡಿಯುತ್ತಾರೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ನಿರ್ದೇಶಕ ಹರಿಹರನ್ ಸಿನಿಮಾಕ್ಕೆ ಕಥೆ ಬರೆದು ಚಿತ್ರಕಥೆ–ಸಂಭಾಷಣೆ ರಚಿಸಿದ್ದಾರೆ.

ಅಮೆರಿಕದಲ್ಲಿ ಚಿತ್ರದ ಡಿಟಿಎಸ್ ಮತ್ತು ಮಿಕ್ಸಿಂಗ್ ಕೆಲಸ ಮಾಡಲಾಗಿದೆ. ಮೂರು ತಿಂಗಳ ಕಾಲ ಹಾಲಿವುಡ್ ತಂತ್ರಜ್ಞ ವಾಲ್ಟರ್ ಅವರೊಂದಿಗೆ ಕೆಲಸ ಮಾಡಿದ್ದಾಗಿಯೂ ಹೇಳಿದ್ದಾರೆ ನಿರ್ದೇಶಕ ಹರಿಹರನ್.

ಬೆಂಗಳೂರು ಸೇರಿ ವಿವಿದೆಡೆ 81 ದಿನಗಳ ಕಾಲ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಡಾ. ವಿ. ನಾಗೇಂದ್ರ ಪ್ರಸಾದ್, ಹೃದಯ ಶಿವ, ಅಜಯ್ ಆರ್. ವೇದಾಂತಿ, ಲೆಮೊನ್ ಪರಶುರಾಮ್ ಈ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ. ಎ.ಟಿ. ರವೀಶ್ ಸಂಗೀತ ನೀಡಿದ್ದು, ನಿರಂಜನ್ ಬೋಪಣ್ಣ, ಜಾನ್ ಅರ್ನಾಲ್ಡ್ ಛಾಯಾಗ್ರಾಹಕರಾಗಿದ್ದಾರೆ.

ಮಜಾ ಭಾರತ ಸೀತಾರಾಮ್, ಮಹೇಂದ್ರ ಮಣೋತ್, ಗುರುರಾಜ್ ಹೊಸಕೋಟೆ, ಹರಿಹರನ್ ಬಿ.ಪಿ., ಭಾಗ್ಯಶ್ರೀ, ಚಿತ್ರ ಹರಿಹರನ್, ಮಿಲಿಟರಿ ಮಂಜು, ಶೇಷಗಿರಿ ಬಸವರಾಜ್, ಅಮೃತಿ ರಾಜೇಶ್ ಮೈಸೂರು, ಸಿಲ್ಲಿ ಲಲ್ಲಿ ರಂಗನಾಥ್, ಮಾಸ್ಟರ್ ಕಿರಣ್, ಮಾಸ್ಟರ್ ಗುರು ತೇಜಸ್, ಮಾಸ್ಟರ್ ಸಮರ್ಥ್ ತಾರಾಬಳಗದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು