ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ಪಿ.ಅರ್ಜುನ್ ನಿರ್ದೇಶನದ ಹೊಸ ಸಿನಿಮಾ 'ಕಿಸ್‌'

Last Updated 12 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಮೂಕಿ ಚಿತ್ರಗಳ ಕಾಲದಿಂದ ಹಿಡಿದು ಟಾಕಿ ಸಿನಿಮಾದವರೆಗೂ ಪರದೆ ಮೇಲೆ ಪ್ರಣಯ, ಚುಂಬನ ದೃಶ್ಯಗಳು ಸರ್ವೇ ಸಾಮಾನ್ಯ. ಇತ್ತೀಚೆಗೆ ಹಸಿ ಹಸಿಯಾದ ಚುಂಬನ ತುಣುಕುಗಳು ತೆರೆಯನ್ನು ಆವರಿಸುತ್ತಿವೆ. ಅಂದಹಾಗೆ ‘ಕಿಸ್‌’ ಚಿತ್ರದಲ್ಲಿ ಅಶ್ಲೀಲ ದೃಶ್ಯಗಳಿಲ್ಲ. ಕುಟುಂಬ ಸಮೇತ ಎಲ್ಲಾ ವಯೋಮಾನದವರು ಈ ಸಿನಿಮಾ ವೀಕ್ಷಿಸಬಹುದು ಎಂದು ಚಿತ್ರತಂಡ ಹೇಳಿಕೊಂಡಿದೆ.

ಹೊಸ ತಲೆಮಾರಿನ ಪ್ರೇಮಿಗಳ ಲವ್‌ಸ್ಟೋರಿ ಇದರಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರೇಮ ಕಥನಗಳಿವೆ. ಆ ಪೈಕಿ ಸತ್ಯವಾಗಿರುವ ಒಂದು ಲವ್‌ಸ್ಟೋರಿಯೇ ‘ಕಿಸ್’ ಚಿತ್ರದ ಕಥಾಹಂದರ. ತುಂಟ ತುಟಿಗಳ ಆಟೊಗ್ರಾಫ್‌ ಎಂಬ ಅಡಿಬರಹವೂ ಈ ಚಿತ್ರಕ್ಕಿದೆ.ಈ ಸಿನಿಮಾ ನಿರ್ದೇಶಿಸಿರುವುದು ಎ.ಪಿ. ಅರ್ಜುನ್‌. ಈ ಹಿಂದೆ ಅವರು ‘ಅಂಬಾರಿ’, ‘ಅದ್ದೂರಿ’, ‘ರಾಟೆ’ ಮತ್ತು ‘ಮಿಸ್ಟರ್ ಐರಾವತ’ ಸಿನಿಮಾ ನಿರ್ದೇಶಿಸಿದ್ದರು. ದರ್ಶನ್‌ ನಟನೆಯ ಐರಾವತ ಹೊರತು‍ಪಡಿಸಿದರೆ ಉಳಿದ ಮೂರೂ ಚಿತ್ರಗಳಲ್ಲೂ ಹೊಸಬರೇ ಹೀರೊ ಆಗಿದ್ದರು.

ಸೆ. 27ರಂದು ತೆರೆಗೆ ಬರುತ್ತಿರುವ ‘ಕಿಸ್‌’ ಚಿತ್ರದ ಹೀರೊ ಮೈಸೂರಿನ ವಿರಾಟ್‌. ಇದು ಅವರ ಮೊದಲ ಚಿತ್ರ. ಕಿರುತೆರೆಯಲ್ಲಿ ಮಿಂಚಿರುವ ಅವರಿಗೆ ಹಿರಿತೆರೆಯಲ್ಲಿನ ನಟನೆ ಹೊಸದು. ಸಿನಿಮಾದಲ್ಲಿ ಅವರದು ಶ್ರೀಮಂತ ಹುಡುಗನ ಪಾತ್ರವಂತೆ. ಬಯಸಿದ್ದನ್ನು ಪಡೆಯಲೇಬೇಕು ಎಂಬ ಸ್ವಭಾವ ಅವರದು. ಬೆಳ್ಳಿತೆರೆಯ ಪ್ರವೇಶಕ್ಕಾಗಿ ಅವರು ಎಂಟು ತಿಂಗಳು ನಟನೆಯ ತರಬೇತಿ ಪಡೆದ ಬಳಿಕವಷ್ಟೇ ಅಖಾಡಕ್ಕೆ ಇಳಿದಿರುವುದು ವಿಶೇಷ.

ನಾಯಕಿ ಶ್ರೀಲೀಲಾ ‘ಕಿಸ್‌’ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಅವರ ಪಾತ್ರದ ಹೆಸರು ನಂದಿನಿ. ಬಬ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣವಿದೆ. ಅಪೂರ್ವಾ ಗೌಡ, ಚಿಕ್ಕಣ್ಣ, ಸಾಧುಕೋಕಿಲ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT