ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಪ್ಲಾಪ್ ಸಂಕಷ್ಟ

Last Updated 18 ಜುಲೈ 2019, 19:30 IST
ಅಕ್ಷರ ಗಾತ್ರ

ತಮಿಳು ಚಿತ್ರರಂಗದಲ್ಲಿ ದಿಗ್ಗಜರ ಸಿನಿಮಾಗಳು ಸೇರಿದಂತೆ ಸಾಕಷ್ಟು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಆದರೆ ಬಹುನಿರೀಕ್ಷಿತ ಸಿನಿಮಾಗಳು ನಿರೀಕ್ಷಿತ ಯಶಸ್ಸು ಕಾಣದೆ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ. ಕೆಲವು ಚಿತ್ರಗಳು ಪ್ರಶಂಸೆಗೆ ಪಾತ್ರವಾದರೂ ಗಲ್ಲಾಪೆಟ್ಟಿಗೆ ತುಂಬುವಲ್ಲಿ ವಿಫಲವಾಗಿವೆ.

ರಜನೀಕಾಂತ್ ಅಭಿನಯದ ‘ಪೆಟ್ಟಾ’, ಅಜಿತ್ ಅಭಿನಯದ ‘ವಿಶ್ವಾಸಂ’, ರಾಘವ ಲಾರೆನ್ಸ್ ನಿರ್ದೇಶಿಸಿ, ನಟಿಸಿದ ‘ಕಾಂಚನ 3’, ‘ದಿಲ್ಲುಕು ದುಡ್ಡು 2’, ‘ಎಲ್‌ಕೆಜಿ’, ‘ತಾಡಂ’ ಇಂತಹ ಬೆರಳೆಣಿಕೆಯ ಸಿನಿಮಾಗಳಷ್ಟೆ 2019ರಲ್ಲಿ ಇದುವರೆಗೆ ಭರ್ಜರಿ ಹಿಟ್ ಆದ ಸಿನಿಮಾಗಳು‌‌.

ವಿಶ್ವಕಪ್ ಕ್ರಿಕೆಟ್, ಚೆನ್ನೈನಲ್ಲಿ ನೀರಿನ ಸಮಸ್ಯೆ, ಪೈರಸಿ ಮೊದಲಾದ ಸಮಸ್ಯೆಗಳೇ ಬಿಗ್ ಬಜೆಟ್‌ನ ಸಿನಿಮಾಗಳು ಕೂಡ ಮೇಲೇಳದಿರಲು ಕಾರಣ ಎಂದು ಕಾಲಿವುಡ್ ಮೂಲಗಳು ಹೇಳುತ್ತಿವೆ.

ಇನ್ನು ಮಲಯಾಳ ಚಿತ್ರರಂಗದಲ್ಲಿ ಕೂಡ ನಿವಿನ್ ಪೌಲಿ ಅಭಿನಯದ ‘ಮಿಖಾಯಿಲ್’ ಫಹದ್ ಫಾಸಿಲ್ ಅಭಿನಯದ ‘ಅತಿರನ್’, ದುಲ್ಖರ್ ಸಲ್ಮಾನ್ ಅಭಿನಯದ ‘ಒರು ಯಮಂಡನ್ ಪ್ರೇಮ ಕಥಾ’ ಮೊದಲಾದ ಬಹುನಿರೀಕ್ಷಿತ ಸಿನಿಮಾಗಳು ಹೆಚ್ಚು ಸದ್ದು ಮಾಡದೆ ತೆರೆಯ ಹಿಂದೆ ಸರಿದಿವೆ.

ಆದರೆ ಮೇರುನಟರ ಸಿನಿಮಾಗಳನ್ನು ಹೊರತುಪಡಿಸಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದವರು ನಟಿಸಿದ ‘ಇಷ್ಕ್‘,‘ಕುಂಬಳಂಗಿ ನೈಟ್ಸ್’ ಮೊದಲಾದ ಚಿತ್ರಗಳು ಹಿಟ್ ಆಗಿರುವುದು ಮಾಲಿವುಡ್‌ನಲ್ಲಿ ಕೊಂಚ ಸಮಾಧಾನ ತಂದಿದೆ.
ಫಹದ್ ಫಾಸಿಲ್ ಅಭಿನಯಿಸಿದ್ದ ‘ಸೂಪರ್ ಡಿಲಕ್ಸ್’ ಮತ್ತು ಮಮ್ಮಟ್ಟಿ ನಟನೆಯ ‘ಪೇರನ್ಬು’ ತಮಿಳು ಚಿತ್ರಗಳಿಗೆ ಪ್ರೇಕ್ಷಕರರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆದರೆ, ಇವುಗಳು ನಿರೀಕ್ಷಿತಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಗಳಿಕೆಯಲ್ಲೂ ಹಿಂದೆ ಬಿದ್ದಿದ್ದವು.

ಹಾಸ್ಯನಟ ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ವಾಚ್ ಮ್ಯಾನ್’ ಮತ್ತು ‘ಧರ್ಮಪ್ರಭು’ ಸಿನಿಮಾಗಳು ಕೂಡ ಪ್ಲಾಪ್ ಪಟ್ಟಿಗೆ ಸೇರಿವೆ. ಈ ಚಿತ್ರಗಳು ಪ್ರೇಕ್ಷಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾಗಳಾಗಿದ್ದವು.
ಇನ್ನು ತಮಿಳಿನ ಹಲವು ಸ್ಟಾರ್ ನಟರ ಸಿನಿಮಾಗಳು ಕೂಡ ಮುಗ್ಗರಿಸಿವೆ. ಇಂತವುಗಳಲ್ಲಿ ಜೀವಾ ಅಭಿನಯದ ‘ಕೀ’, ಕಾರ್ತಿ, ರಾಕುಲ್ ಪ್ರೀತ್ ಸಿಂಗ್ ಮುಖ್ಯಭೂಮಿಕೆಯಲ್ಲಿದ್ದ ‘ದೇವ್’, ವಿಶಾಲ್ ನಟನೆಯ ‘ಅಯೋಗ್ಯ’, ವಿಜಯ್ ಸೇತುಪತಿ ಅಭಿನಯದ ‘ಸಿಂದುಬಾದ್’ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಕಾಣಲಿಲ್ಲ.

ಇನ್ನು ಸೂರ್ಯ ಹಾಗೂ ಸಾಯಿ ಪಲ್ಲವಿ ನಟಿಸಿದ್ದ ‘ಎನ್‌ಜಿಕೆ’ ಸಿನಿಮಾದ್ದೂ ಇದೇ ಕಥೆ. ಬಿಡುಗಡೆಗೆ ಮುನ್ನ ಈ ಚಿತ್ರ ಬಾರಿ ಸದ್ದು ಮಾಡಿತ್ತು. ಆದರೆ ಈ ಸಿನಿಮಾ ಕೂಡ ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಸೋತು ಹೋಯಿತು.

ಕಾಲಿವುಡ್‌ನಲ್ಲಿ ಹಾರರ್, ಥ್ರಿಲ್ಲರ್ ಸಿನಿಮಾಗಳು ಈಚೆಗೆ ಹೆಚ್ಚಾಗಿ ನಿರ್ಮಾಣವಾಗುತ್ತಿವೆ. ಈ ವರ್ಷವೂ ಸಾಕಷ್ಟು ಇಂತಹ ಸಿನಿಮಾಗಳು ಬಿಡುಗಡೆಯಾಗಿವೆ.

ನಯನ್ ತಾರಾ ಅಭಿನಯದ ‘ಐರಾ’, ವಡಿವುದಯನ್ ನಿರ್ದೇಶನದ ‘ಪೊಟ್ಟು’, ಪ್ರಭುದೇವ, ತಮನ್ನಾ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದ ‘ದೇವಿ 2’, ‘ಲಿಸಾ’, ‘ನೀಯಾ 2’ ಸಿನಿಮಾಗಳಿಗೂ ದೊಡ್ಡ ಮಟ್ಟದ ಯಶಸ್ಸು ಸಿಗಲಿಲ್ಲ. ಹಾರರ್ ಸಿನಿಮಾಗಳ ಸೀಕ್ವೆಲ್‌ಗಳು ಕೂಡ ಸಾಕಷ್ಟು ನಿರ್ಮಾಣವಾಗಿವೆ. ಆದರೆ ಅವುಗಳು ಕೂಡ
ಸದ್ದು ಮಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT