ಗುರುವಾರ , ನವೆಂಬರ್ 21, 2019
24 °C

ಫುಲ್‌ಟೈಮ್‌ ಆ್ಯಕ್ಷನ್‌ಗೆ ಕೋಮಲ್‌ ಸಜ್ಜು

Published:
Updated:
Prajavani

ಈಗ ಚಿತ್ರಮಂದಿರಗಳನ್ನಷ್ಟೇ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುವ ಟೈಮ್‌ ಭಾರವಾಗಿ ಹೋಗಿದೆ. ಈಗ ಅಗಾಧವಾಗಿ ಬೆಳೆಯುತ್ತಿರುವ ಒಟಿಟಿ ಪ್ಲಾಟ್‌ಫಾರಂ ದೃಷ್ಟಿಯಲ್ಲಿಟ್ಟುಕೊಂಡೇ ಸಿನಿಮಾ ಮಾಡಬೇಕು. ನಾನು ಸಹ ಇದೇ ಹಾದಿಯನ್ನು ಹಿಡಿದಿದ್ದೇನೆ ಎನ್ನುತ್ತಾರೆ ನಟ, ನಿರ್ದೇಶಕ ಕೋಮಲ್‌.

ನಟ ಕೋಮಲ್‌ಗೆ ಕೆಂಪೇಗೌಡ 2 ಸಿನಿಮಾ ನಿರೀಕ್ಷಿತ ಯಶಸ್ಸು ತಂದುಕೊಡದಿದ್ದರೂ ಕಾಮಿಡಿ ಜಾನರ್‌ನಿಂದ ಹೊರತಂದು ಫುಲ್‌ಪ್ಯಾಕ್‌ ಆ್ಯಕ್ಷನ್‌ ಗೆಟಪ್‌ ನೀಡಿದೆ. ಇದೇ ಹುಮ್ಮಸ್ಸಿನಲ್ಲಿರುವ ಅವರು ಈಗ ಮತ್ತೆರಡು ಮೆಗಾ ಪ್ರಾಜೆಕ್ಟ್‌ಗೆ ಸದ್ದಿಲ್ಲದೆ ಕೈಹಾಕಿದ್ದಾರೆ. 

‘ಕೊಂಕಾಪಾಸ್‌‘ ಕೈಯಲ್ಲಿರುವಾಗಲೇ ಮತ್ತೊಂದು ಮೆಗಾ ಸಿನಿಮಾವನ್ನು ಐದು ಭಾಷೆಗಳಲ್ಲಿ ಮಾಡಲು ಕೋಮಲ್‌ ತಯಾರಿಯಲ್ಲಿದ್ದಾರೆ.  ಭಾರತ ಮತ್ತು ಚೀನಾ ಗಡಿಯಲ್ಲಿರುವ ಅರುಣಾಚಲಪ್ರದೇಶದಲ್ಲಿನ ಹಿಮಚ್ಛಾದಿತ ಪ್ರದೇಶ ಕೊಂಕಾಪಾಸ್‌ ಹೆಸರನ್ನೇ ಚಿತ್ರದ ಶೀರ್ಷಿಕೆಯಾಗಿಟ್ಟುಕೊಂಡು ಸೇನೆಗೆ ಮತ್ತು ಸೈನಿಕರಿಗೆ ಸಂಬಂಧಿಸಿದ ಚಿತ್ರ ‘ಕೊಂಕಾ ಪಾಸ್‌’ ಸಿನಿಮಾ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಈ ತಯಾರಿ ನಡೆಯುತ್ತಿದೆ.  ‌‘ಕೆಂಪೇಗೌಡ 2’ ಕಾರಣಕ್ಕೆ ಅದನ್ನು ಗುಟ್ಟಾಗಿ ಇಟ್ಟುಕೊಂಡಿದ್ದರು. ಈ ಸಿನಿಮಾದ ಚಿತ್ರೀಕರಣ ಶೇ 20ರಷ್ಟು ಮುಗಿದಿದೆ. ಈ ಚಿತ್ರದಲ್ಲಿ ಏಲಿಯನ್ಸ್‌ಗೆ ಸಂಬಂಧಿಸಿದ ರೋಚಕ ಸಂಗತಿಯೂ ಇರಲಿದೆಯಂತೆ ಎನ್ನುವ ಮಾಹಿತಿಯನ್ನು ಕೋಮಲ್‌ ಹೇಳಿಕೊಂಡಿದ್ದಾರೆ.

ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ಹಿಮ ಸುರಿಯುವ ಸಂದರ್ಭದಲ್ಲಿ ನಡೆಯಬೇಕಿರುವುದರಿಂದ ಚಿತ್ರೀಕರಣವನ್ನು ಮುಂದೂಡಲಾಗಿದೆ. ಪೊಲಂಡ್‌ ದೇಶದಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿದ್ದು, ಜನವರಿ ನಂತರ ಚಿತ್ರೀಕರಣ ಆರಂಭವಾಗಲಿದೆ. ಹಾಗಾಗಿ ಈ ಗ್ಯಾಪಿನಲ್ಲಿ ಮತ್ತೊಂದು ಚಿತ್ರ ಮಾಡಲು ಕೈಗೆತ್ತಿಕೊಂಡಿದ್ದೇನೆ ಎನ್ನುವುದು ಕೋಮಲ್‌ ಉವಾಚ.

ಸಿನಿಮಾಕ್ಕೆ ಸದ್ಯಕ್ಕೆ ‘ಇಕ್ಲಾಕ್‌ (IKLAK)' ಹೆಸರಿಡಲಾಗಿದ್ದು, ಇದು ಉಲ್ಟಾ ಓದಿದರೆ ಅಂದರೆ ಮಿರರ್‌ ಇಮೇಜ್‌ ಎಫೆಕ್ಟ್‌ನಲ್ಲಿ ಓದಿದರೆ ‘ಕಲ್ಕಿ’ ಎನ್ನುವ ಹೆಸರು ಬರಲಿದೆ. ಹಾಗಾಗಿ ಈ ಟೈಟಲ್‌ ಇಡಲಾಗಿದೆ. ಆದರೆ, ಈ ಟೈಟಲ್‌ಗೆ ವಾಣಿಜ್ಯ ಮಂಡಳಿಯಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಮುಂದೆ ಟೈಟಲ್‌ ಬದಲಾದರೂ ಆಗಬಹುದು ಎನ್ನುವ ಮಾತು ಸೇರಿಸಿದರು ಕೋಮಲ್‌.

‘ಇಕ್ಲಾಕ್‌ (IKLAK)' ಸಿನಿಮಾ ಕನ್ನಡ, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬರಲಿದೆ. ಇದೊಂದು ರೋಬೊ ಕಥೆ. ಸಖತ್‌ ಥ್ರಿಲ್‌ ಇರಲಿದೆ. ರಜನಿಕಾಂತ್‌ ರೋಬೊ ಆಗಿ ಸಿನಿಮಾದಲ್ಲಿ ಹವಾ ಎಬ್ಬಿಸಿದಂತೆ ಕನ್ನಡದಲ್ಲಿ ನಾನು ರೋಬೊ ಆಗಿ ನಟಿಸಲಿದ್ದೇನೆ ಎನ್ನುತ್ತಾರೆ ಈ ನಟ.

‘ಇಕ್ಲಾಕ್‌ (IKLAK)'ಗೆ ಈಗಾಗಲೇ ತಯಾರಿ ಆರಂಭಿಸಿದ್ದು, ಚಿತ್ರಕಥೆ ಸಾಕಷ್ಟು ಕಂಪ್ಯೂಟರ್‌ ಗ್ರಾಫಿಕ್‌ ಕೆಲಸವನ್ನು ಬಯಸುತ್ತಿದೆ. ಇಲ್ಲಿ ರೋಬೊ ಇರುವುದಿಲ್ಲ. ರೋಬೊ ರೀತಿ ನಾನೇ ಅಭಿನಯಿಸಬೇಕು. ಅದಕ್ಕಾಗಿ ಸಾಕಷ್ಟು ಸಿದ್ಧತೆಯಲ್ಲಿ ತೊಡಗಿದ್ದೇನೆ. ಸದ್ಯದಲ್ಲೇ ಒಂದು ಅಂದವಾದ ಪೋಸ್ಟರ್‌, ಟೀಸರ್‌ ಕೂಡ ಪ್ರೇಕ್ಷಕರ ಮುಂದೆ ಇಡಲಿದ್ದೇನೆ ಎಂದು ತಮ್ಮ ಹೊಸ ಯೋಜನೆಯ ಬಗ್ಗೆಯೂ ಕೋಮಲ್‌ ಗುಟ್ಟುಬಿಟ್ಟುಕೊಟ್ಟರು.

ಈ ಸಿನಿಮಾದಲ್ಲಿ ನಾಯಕಿ ಯಾರೆನ್ನುವ ಗುಟ್ಟು ಕಾಯ್ದುಕೊಂಡ ಕೋಮಲ್‌, ನಮ್ಮ ಪ್ರೇಕ್ಷಕರಿಗೆ ಡಾರ್ಕ್‌ ಹ್ಯೂಮರ್‌ ಕಾಮಿಡಿ ಅಷ್ಟಾಗಿ ಅರ್ಥವಾಗುವುದೂ ಇಲ್ಲ. ಅದು ರುಚಿಸುವುದೂ ಇಲ್ಲ. ನಾನು ಹತ್ತು ವರ್ಷಗಳ ಹಿಂದೆ ಮಾಡಿದ್ದ ಕಾಮಿಡಿ ಅಂದು ಟ್ರೆಂಡ್‌ ಹುಟ್ಟುಹಾಕಲಿಲ್ಲ, ಪ್ರೇಕ್ಷಕರಿಗೂ ಅರ್ಥವಾಗಲಿಲ್ಲ. ಆದರೆ, ಅಂದಿನ ಸಿನಿಮಾಗಳ ನನ್ನ ಕಾಮಿಡಿ ಡೈಲಾಗ್‌ಗಳು ಈಗ ಪ್ರೇಕ್ಷಕರಿಗೆ ಅರ್ಥವಾಗುತ್ತಿವೆ ಮತ್ತು ಅವು ಬೇಕೆನಿಸುತ್ತಿವೆ ಎನ್ನುತ್ತಾರೆ.

ಆದರೆ, ನಾನು ಮತ್ತೆ ಕಾಮಿಡಿಯತ್ತ ಹಿಂದಿರುಗಿ ನೋಡುವುದಿಲ್ಲ. ಸಿನಿಮಾದಲ್ಲಿ ಸೀಕ್ವೆನ್ಸ್‌ಗೆ ತಕ್ಕಂತೆ ಕಾಮಿಡಿ ಬಳಸಿಕೊಳ್ಳುತ್ತೇನೆ. ‘ಕೆಂಪೇಗೌಡ 2’ನಲ್ಲಿ ಕಿರುಚಾಟ, ಅರಚಾಟ ಏನೂ ಇಲ್ಲ. ಸೈಲೆಂಟ್‌ ಆ್ಯಕ್ಷನ್‌ ಇದೆ. ಈ ಸಿನಿಮಾ ಈಗ ಬೇರೆ ಭಾಷೆಗೆ ಡಬ್ಬಿಂಗ್‌, ರಿಮೇಕ್‌ ಮಾಡಲು ಹಕ್ಕು ಖರೀದಿಗೆ ಬೇಡಿಕೆ ಬಂದಿದೆ ಎಂದು ಮಾತು ವಿಸ್ತರಿಸಿದರು ಕೋಮಲ್‌.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್‌.ರಾಜಶೇಖರ ರೆಡ್ಡಿ ಹೆಲಿಕಾಪ್ಟರ್‌ ಪತನದಲ್ಲಿ ದುರಂತ ಸಾವು ಕಂಡ ಘಟನೆಗೆ ‘ಕೆಂಪೇಗೌಡ 2’  ಚಿತ್ರ ರಿಲೇಟ್‌ ಆಗಿದ್ದು, ತೆಲುಗು ರಿಮೇಕ್‌ಗೆ ತುಂಬಾ ಬೇಡಿಕೆ ಇದೆ. ಚಿತ್ರದ ಸ್ಯಾಟಲೈಟ್‌ ಹಕ್ಕು ಪಡೆದುಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ ಎಂದರು.

‘ಕುರುಕ್ಷೇತ್ರ’ದ ದಾಳಿಗೆ ಸಿಲುಕಿ ‘ಕೆಂಪೇಗೌಡ 2’ ಚಿತ್ರಮಂದಿರದಲ್ಲಿ ಅಪ್ಪಚ್ಚಿಯಾಗಿರಬಹುದು. ಆದರೆ, ಈ ಚಿತ್ರ ಟಿ.ವಿ, ಡಬ್ಬಿಂಗ್‌, ರಿಮೇಕ್‌ ರೈಟ್ಸ್‌ ಕುದುರಿಸಿಕೊಂಡಿರುವುದು ನಟ ಕೋಮಲ್‌ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿರುವುದು ಮಾತ್ರ ಸುಳ್ಳಲ್ಲ.

ಪ್ರತಿಕ್ರಿಯಿಸಿ (+)