ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಕ್ಷಕರ ನೂರು ರೂಪಾಯಿಗೆ ಮೋಸವಿಲ್ಲ: ಪೂರ್ಣಚಂದ್ರ ಖಾತ್ರಿ

Last Updated 24 ಏಪ್ರಿಲ್ 2019, 11:42 IST
ಅಕ್ಷರ ಗಾತ್ರ

‘ನೂರು ರೂಪಾಯಿ‌ ಕೊಟ್ಟು ಟಿಕೆಟ್ ಪಡೆದು ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರಿಗೆ ಖಂಡಿತ ಮೋಸವಾಗುವುದಿಲ್ಲವೆಂದು ಗ್ಯಾರೆಂಟಿ ಕೊಡ್ತಿನಿ. ನಾನು ದಿಢೀರ್ ಬೆಳೆಯಬೇಕು, ಹೆಸರು‌‌ ಮಾಡಬೇಕು ಎನ್ನುವ ಹಂಬಲದಿಂದ ಸಿನಿಮಾ ರಂಗಕ್ಕೆ ಬಂದಿಲ್ಲ. ನನಗೆ ಪ್ರೇಕ್ಷಕರ ಹಾರ್ಟ್ ಬೀಟ್ ಚೆನ್ನಾಗಿ ಗೊತ್ತಿದೆ. ಪ್ರೇಕ್ಷಕರ ಪರವಾಗಿ ಸಿನಿಮಾ ಮಾಡಿದ್ದೇನೆ’

–ಹೀಗೆ ಅಪರಿಮಿತ ವಿಶ್ವಾಸದಲ್ಲಿ ಮಾತು ಆರಂಭಿಸಿದರು ‘ಕೃಷ್ಣ ಗಾರ್ಮೆಂಟ್ಸ್‌’ ಚಿತ್ರದ ನಿರ್ದೇಶಕ ಸಿದ್ದು ಪೂರ್ಣಚಂದ್ರ.

ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಗೆ ಸಿದ್ಧವಾಗಿರುವ ‘ಕೃಷ್ಣ ಗಾರ್ಮೆಂಟ್ಸ್’ ಟ್ರೇಲರ್‌ ತೋರಿಸಲು ಮತ್ತು ಹಾಡುಗಳ ಧ್ವನಿ ಸುರಳಿ ಬಿಡುಗಡೆಗೆ ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಬಂದಿದ್ದರು.

ಚಿತ್ರ ಬಿಡುಗಡೆಗೆ ಸೆನ್ಸಾರ್ ಮಂಡಳಿಯ ಅನುಮತಿಗೆ ಕಾಯುತ್ತಿರುವ ನಿರ್ದೇಶಕರು, ಸಿನಿಮಾಕ್ಕಾಗಿ ದುಡಿದಿರುವ ಪ್ರತಿಯೊಬ್ಬರ ಶ್ರಮವನ್ನು ಮತ್ತು ಅಭಿನಯಿಸಿರುವ ಕಲಾವಿದರ ಕೊಡುಗೆ ಹಾಗೂ ವ್ಯಕ್ತಿತ್ವವನ್ನು ಸಿನಿಮಾ ನಿರೂಪಣೆ ಶೈಲಿಯಲ್ಲೇ ಸವಿಸ್ತಾರವಾಗಿ ವಿವರಿಸಿದರು.

ಚಿತ್ರದ ಟ್ರೇಲರ್‌ ನೋಡಿದವರಿಗೆ ಇದು ಗಾರ್ಮೆಂಟ್ಸ್‌ ಒಳಗೆ ನಡೆಯುವ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಎನಿಸುವುದು ಸುಸ್ಪಷ್ಟ.

‘ಎರಡು ವರ್ಷಗಳಿಂದ ಸ್ಕ್ರಿಪ್ಟ್ ಮಾಡಿ, ಸಿನಿಮಾ ಮಾಡಿದ್ದೇ‌ನೆ. ಇದು ನನ್ನ ಕನಸಿನ ಸಿನಿಮಾ. ಮೊದಲ ಬಾರಿಗೆ ಕಮರ್ಷಿಯಲ್‌ ಸಿನಿಮಾ ಮಾಡಿದ್ದೇನೆ. ಈ ಚಿತ್ರಕ್ಕೆ ಷಣ್ಮುಖ ಜಿ.ಬೆಂಡಿಗೇರಿ ಅವರು ಆರ್ಥಿಕ ಇಂಧನ ಒದಗಿಸಿ ನನ್ನ ಕನಸು ನನಸುಗೊಳಿಸಿದ್ದಾರೆ. ಅವರ ಧಾರಾಳತನದಿಂದ ಸಿನಿಮಾ ಕೂಡ ಅದ್ದೂರಿಯಾಗಿ‌ ಮೂಡಿ ಬಂದಿದೆ’ ಎಂದು ಸುಧೀರ್ಘವಾಗಿ ಮಾತು ಪೋಣಿಸುತ್ತಾ ಹೋದರು ಪೂರ್ಣಚಂದ್ರ.

ಇದನ್ನು ಇಂತಹ ಜಾನರ್ ಸಿನಿಮಾ ಎಂದು ಊಹಿಸಲು ಆಗದು. ಸಿನಿಮಾ ನೋಡಿದ ನಂತರ ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಮೂವಿ ಎನ್ನುವ ನಿರ್ಧಾರಕ್ಕೆ ಬರಬಹುದು. ಇದರಲ್ಲಿ ಎಲ್ಲ ರೀತಿಯ ಮನರಂಜನೆ ಇದೆ. ಆರಂಭದ ದೃಶ್ಯದಿಂದ ಕೊನೆಯ ದೃಶ್ಯದವರೆಗೂ ಹೊಸ ಪಾತ್ರಗಳು ಪರಿಚಯವಾಗುತ್ತಾ ಹೋಗುತ್ತವೆ.ಇದು ಈ ಸಿನಿಮಾದ ವಿಶೇಷವೆಂದು ಬಣ್ಣಿಸಿದರು.

ರಾಜೇಶ್ ನಟರಂಗ ಅವರು ‘ಕೃಷ್ಣ ಗಾರ್ಮೆಂಟ್ಸ್’ ಕಿರೀಟ. ಅವರಿಂದ ಮನೋಜ್ಞ ಅಭಿನಯ ಮೂಡಿಬಂದಿದೆ. ಚಿತ್ರಕ್ಕೆ ಗ್ಲಾಮರ್ ಅಥವಾ ದೊಡ್ಡ ನಟಿ ಬೇಕಿರಲಿಲ್ಲ. ಪಾತ್ರಕ್ಕೆ ಸೂಟ್ ಆಗುವ ಸಾಧಾರಣ ವ್ಯಕ್ತಿ ಬೇಕಾಗಿತ್ತು. ಪಾತ್ರಕ್ಕೆ ರಶ್ಮಿತಾ ಸೂಟ್‌ ಆಗಿದ್ದರಿಂದ ಅವರನ್ನೇ ಆಯ್ಕೆ ಮಾಡಿದೆವು. ನಾಯಕನಾಗಿ ನಟಿಸಿರುವ ಭಾಸ್ಕರ್ ನೀನಾಸಂ ‘ಹೆಮ್ಮರ’ದಲ್ಲಿ ಚಿಕ್ಕ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ಅವರ ನಟನೆ ಸೂಪರ್‌ ಆಗಿದೆ.ಇನ್ನೂ ಲಕ್ಷ್ಮಿ ಬಾರಮ್ಮ‌ ಸೀರಿಯಲ್‌ನ ನಾಯಕ ಚಂದುಗೌಡ ಮೊದಲ ಬಾರಿಗೆ ವಿಲನ್ ಆಗಿ ಕಾಣಿಸಿದ್ದಾರೆ.ಹನುಮಂತ ರಾಜು, ಜಯಂತಿ, ಯಮುನಾ, ನಾಗಶ್ರೀ, ಪೂಜಾ, ಲಕ್ಷ್ಮಿನರಸಿಂಹ, ಪ್ರಸಾದ್, ವರ್ಧನ್ ತೀರ್ಥಹಳ್ಳಿ, ರಜನಿಕಾಂತ್ ತಾರಾಗಣದಲ್ಲಿದ್ದಾರೆ.ಚಿದಾನಂದ್ ಅವರ ಛಾಯಾಗ್ರಹಣವಿದೆ ಎಂದರು.

‘ಚಿತ್ರರಂಗಕ್ಕೆ ನಾನು ಹೊಸಬಳು. ಹಿರಿತೆರೆಯಲ್ಲಿ‌ ಅಭಿನಯಿಸಬೇಕೆಂಬ ಕನಸು ಹೊತ್ತು ಬಂದವಳಿಗೆಸಿದ್ದು ಸರ್ ಅವರಿಂದ ನನ್ನ ಕನಸುಸಾಕಾರಗೊಂಡಿದೆ’ ಎಂದು ‘ಬ್ರಹ್ಮಾಸ್ತ್ರ’ ಧಾರಾವಾಹಿ ‌ಖ್ಯಾತಿಯ ನಟಿ ರಶ್ಮಿತಾ ಕೃತಜ್ಞತೆ ಹೇಳುವುದನ್ನು ಮರೆಯಲಿಲ್ಲ.

‘ಕಿರುತೆರೆಯಲ್ಲಿ ಹೀರೊ ಆಗಿದ್ದವನು ಈ ಚಿತ್ರದಲ್ಲಿ ಕ್ರೂರವಾದ ವಿಲನ್‌ ಪಾತ್ರದಲ್ಲಿಅಭಿನಯಿಸಿದ್ದೇನೆ. ಸಿನಿಮಾ ನೋಡಿದ ಮೇಲೆ ನಮ್ಮ ತಾಯಿ ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೊ ಎನ್ನುವ ಟೆನ್ಶನ್‌ ಶುರುವಾಗಿದೆ’ ಎಂದು ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ಚಂದುಗೌಡ ಅಳುಕು ತೋಡಿಕೊಳ್ಳುವ ಜತೆಗೆ, ತಮ್ಮ ಪಾತ್ರದ ಬಗ್ಗೆ ಕುತೂಹಲ ಹೆಚ್ಚು ಮಾಡಿದರು.

‘ಮನೆಮಗಳು’, ಯಶೋಧರ’ ಸೇರಿದಂತೆ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ಸಿದ್ದು ಪೂರ್ಣಚಂದ್ರ ಅವರಿಗೆ ಇದು ಎರಡನೇ ಚಿತ್ರ. ಅವರ ಮೊದಲ ಚಿತ್ರ ‘ಹೆಮ್ಮರ’ 2015-16ನೇ ಸಾಲಿನ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು.

ಧ್ವನಿ ಸುರಳಿ ಬಿಡುಗಡೆ
‘ಕೃಷ್ಣ ಗಾರ್ಮೆಂಟ್ಸ್‌’ ಸಿನಿಮಾದ ಹಾಡುಗಳ ಧ್ವನಿ‌ಸುರುಳಿಯನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎ.ಎಸ್.ಚಿನ್ನೇಗೌಡ ಅವರು ಬಿಡುಗಡೆ ಮಾಡಿದರು. ಗಾರ್ಮೆಂಟ್ಸ್‌ ಒಳಗೆ ನಡೆಯುವ ಶೋಷಣೆ, ದೌರ್ಜನ್ಯ, ಕೊಲೆಗಳನ್ನು ಧೈರ್ಯವಾಗಿ ಸಿನಿಮಾ ಮೂಲಕ ಹೊರಗೆಳೆಯುವ ಧೈರ್ಯ ಮಾಡಿರುವುದು ಮೆಚ್ಚುಗೆಗೆ ಅರ್ಹವಾಗಿದೆ ಎಂದು ಚಿನ್ನೇಗೌಡರು, ನಿರ್ದೇಶಕರ ಬೆನ್ನು ತಟ್ಟಿದರು.

ಆನಂದ್ ಆಡಿಯೊದಿಂದ ಹೊರ ತಂದಿರುವ ಈ ಧ್ವನಿ‌ಸುರಳಿಯಲ್ಲಿ ‘ಹಾಯಾದ ಹಾದಿಗೆ ಹಾಳಾದ ಕನಸಿನ ಪುಟಗಳು’, ‘ಈ ಪ್ರೀತಿಗೆ’, ‘ಹೃದಯಾ ಹೃದಯಾ’ ಹಾಡುಗಳು ಕೇಳಲು ಇಂಪಾಗಿವೆ.

ಹಂಸಲೇಖ ಅವರ ಗರಡಿಯಲ್ಲಿ‌ ಪಳಗಿರುವ ರಘು ಧನ್ವಂತರಿ ಸಂಗೀತ ಸಂಯೋಜಿಸಿರುವ ಈ ಹಾಡುಗಳನ್ನು ರಾಜೇಶ್‌ ಕೃಷ್ಣನ್‌, ದೇಸಿ ಮೋಹನ್‌, ಶ್ವೇತಾ ದೇವನಹಳ್ಳಿ, ದಿವಾಕರ್ ಹಾಡಿದ್ದಾರೆ.ಹಾಡುಗಳ ಸಾಹಿತ್ಯವನ್ನು ಪೂರ್ಣಚಂದ್ರ ಅವರೇ ಬರೆದಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಹೊಣೆಯನ್ನೂ ಅವರೇ ನಿಭಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT