ಮಂಗಳವಾರ, ಸೆಪ್ಟೆಂಬರ್ 22, 2020
25 °C

‘ಕೃಷ್ಣ ಟಾಕೀಸ್‌’ ಸಿನಿಮಾಕ್ಕೆ ಸಿಕ್ತು ಯು/ಎ ಪ್ರಮಾಣ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕೃಷ್ಣ ಟಾಕೀಸ್‌’ ನಿರ್ದೇಶಕ ವಿಜಯಾನಂದ್‌ ಹಾಗೂ ನಟ ಕೃಷ್ಣ ಅಜೇಯ್ ರಾವ್‌ ಅವರ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ಚಿತ್ರ. ವಿಜಯಾನಂದ್‌ ಅವರೇ ಇದರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾನಕ ಇದಾಗಿದೆ. ಕೃಷ್ಣನ ಹೆಸರಿನ ಸರಣಿ ಸಿನಿಮಾಗಳಲ್ಲಿ ನಟಿಸಿದ್ದ ಅಜೇಯ್‌ ರಾವ್‌ ಇದರಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೋವಿಡ್‌–19 ಸೋಂಕು ಕಾಣಿಸಿಕೊಳ್ಳುವುದಕ್ಕೂ ಮೊದಲೇ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಪೂರ್ಣಗೊಳಿಸಿದ್ದ ಚಿತ್ರತಂಡ, ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮುಂದೆ ಹೋಗಿತ್ತು. ಚಿತ್ರ ವೀಕ್ಷಿಸಿದ ಮಂಡಳಿಯು ಯು/ಎ ಪ್ರಮಾಣ ಪತ್ರ ನೀಡಿದೆ.

‘ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದೇ ಚಿತ್ರದ ಸೆನ್ಸಾರ್ ಆಗಿರುವುದು ಸಂತಸ ತಂದಿದೆ’ ಎನ್ನುತ್ತಾರೆ ನಿರ್ದೇಶಕ ವಿಜಯಾನಂದ್.

ರಾಜ್ಯದಲ್ಲಿ ಚಿತ್ರಮಂದಿರಗಳ ಆರಂಭಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿದ ಬಳಿಕ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. ಗೋಕುಲ್ ಎಂಟರ್‌ಟೈನರ್ ಲಾಂಛನದಡಿ ಗೋವಿಂದರಾಜು ಎ.ಎಚ್. ಇದಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ, ಈ ಚಿತ್ರದ ಟೀಸರ್ ಹಾಗೂ ಲಿರಿಕಲ್ ವಿಡಿಯೊ ಬಿಡುಗಡೆಯಾಗಿದ್ದು, ಜನರಿಂದ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಗೆ ಚಿತ್ರತಂಡ ಖುಷಿಯಾಗಿದೆ.

ಇದಕ್ಕೆ ಸಂಗೀತ ಸಂಯೋಜಿಸಿರುವುದು ಶ್ರೀಧರ್‌ ಸಂಭ್ರಮ್. ಅಭಿಷೇಕ್ ಜಿ. ಕಾಸರಗೋಡು ಅವರ ಛಾಯಾಗ್ರಹಣವಿದೆ. ಶ್ರೀಕಾಂತ್ ಸಂಕಲನ ನಿರ್ವಹಿಸಿದ್ದಾರೆ. ವಿಕ್ರಂ ಅವರ ಸಾಹಸ ನಿರ್ದೇಶನವಿದೆ. ಮೋಹನ್ ಬಿ. ಕೆರೆ ಅವರ ಕಲಾ ನಿರ್ದೇಶನವಿದೆ.

ಇದರಲ್ಲಿ ಅಜೇಯ್‌ ರಾವ್‌ಗೆ ಅಪೂರ್ವಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರದು ಎರಡು ವಿಭಿನ್ನ ಶೇಡ್‌ನಲ್ಲಿರುವ ಪಾತ್ರವಂತೆ. ಸಿಂಧೂ ಲೋಕನಾಥ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಶೋಭರಾಜ್, ಮಂಡ್ಯ ರಮೇಶ್, ನಿರಂತ್, ಯಶ್ ಶೆಟ್ಟಿ, ಉಮೇಶ್, ಶ್ರೀನಿವಾಸ ಪ್ರಭು, ಶಾಂಭವಿ, ಲಕ್ಷ್ಮಿಗೌಡ, ಯಮುನಾ, ಧರ್ಮೇಂದ್ರ ಅರಸ್ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು