ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷ್ಣ ಟಾಕೀಸ್‌’ನಲ್ಲಿ ‘ಅಪೂರ್ವ’ ಜೋಡಿ!

Last Updated 15 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

‘ಪ್ರೀತಿಯ ರಾಯಭಾರಿ’ ಎಂದೇ ಕರೆಸಿಕೊಳ್ಳುವ ನಟ ಅಜಯ್‌ ರಾವ್‌ ಜೊತೆಗೂಡಿನಟಿ ಅಪೂರ್ವ, ಹಾರರ್‌ ಥ್ರಿಲ್ಲರ್‌ ‘ಕೃಷ್ಣ ಟಾಕೀಸ್‌’ಗೆ ಹೆಜ್ಜೆ ಇಟ್ಟಿದ್ದಾರೆ.ಬಬ್ಲಿ ಬಬ್ಲಿಯಾಗೇ ಇರುವ ತಮ್ಮ ನಿಜಜೀವನವನ್ನೇ ಚಿತ್ರದಲ್ಲಿನ ಪಾತ್ರಕ್ಕೂ ಅಪೂರ್ವ ತುಂಬಿಸಿದ್ದಾರೆ. ಸಿನಿ ಪಯಣದ ಬ್ರೇಕ್‌, ಚಿತ್ರದ ಆಯ್ಕೆ, ತಮ್ಮ ಪಾತ್ರದ ಕುರಿತು ಅವರು ‘ಸಿನಿಮಾ ಪುರವಣಿ’ ಜೊತೆಗೆ ಮಾತಿಗಿಳಿದರು.

‘ಅಪೂರ್ವ’ ಚಿತ್ರದ ಬಳಿಕ ಬ್ರೇಕ್‌ ಏನಕ್ಕೆ ಆಯ್ತು ಎಂದರೆ, ಆ ವೇಳೆಯಲ್ಲಿ ನಾನು ಮೊದಲ ವರ್ಷದ ಬಿ.ಕಾಂ. ವಿದ್ಯಾರ್ಥಿನಿ. ಶಿಕ್ಷಣ ಇನ್ನೂ ಪೂರ್ಣಗೊಂಡಿರಲಿಲ್ಲ. ಈ ಸಂದರ್ಭದಲ್ಲಿ ಕುಟುಂಬದವರು, ‘ಸಿನಿಮಾ ಕ್ಷೇತ್ರಕ್ಕೆ ಹೋಗುವುದಾದರೆ ಮೊದಲು ಶಿಕ್ಷಣ ಪೂರ್ಣಗೊಳಿಸು’ ಎಂದು ಹೇಳಿದರು. ಇದನ್ನು ನಾನು ಗೌರವಿಸಿ, ಮೈಸೂರಿಗೆ ವಾಪಸ್‌ ಬಂದು ಶಿಕ್ಷಣ ಪೂರ್ಣಗೊಳಿಸಿದೆ. ನನ್ನ ಆಸಕ್ತಿಯ ಕ್ಷೇತ್ರ ನಟನೆ ಎಂದು ಕುಟುಂಬದವರಿಗೂ ಮನದಟ್ಟಾದಾಗ ಅವರು ಮತ್ತಷ್ಟು ಪ್ರೋತ್ಸಾಹ ನೀಡಿದರು ಎನ್ನುತ್ತಾರೆ ಅಪೂರ್ವ.

ಹೆಚ್ಚು ಚ್ಯೂಸಿ ಅಲ್ಲ
‘ಶಿಕ್ಷಣ ಮುಗಿಸಿದ ಬಳಿಕ ಸಿನಿಮಾದವರ ಸಂಪರ್ಕ ಇರಲಿಲ್ಲ. ಈ ಸಂದರ್ಭದಲ್ಲಿ ವಿಕ್ಟರಿ–2 ಆಫರ್‌ ಬಂತು. ನಂತರದಲ್ಲಿ ಕೃಷ್ಣ ಟಾಕೀಸ್‌, ಕಾಲಾಪತ್ಥರ್‌ ಅವಕಾಶವೂ ಬಂದಿತು. ಈಗ, ಚಿತ್ರದ ಕಥೆಯನ್ನು ನೋಡುತ್ತೇನೆ. ಏಕೆಂದರೆ ಚಂದನವನಕ್ಕೆ ನಾನು ಪ್ರವೇಶಿಸಿದ್ದು ಲೆಜೆಂಡ್‌ ಜೊತೆಗೆ ನಟನೆ ಮಾಡಿ. ಆ ಸಂದರ್ಭದಲ್ಲಿ ಚಿತ್ರದ ಕಥೆಗೆ ನನ್ನ ಆದ್ಯತೆ ಇರಲಿಲ್ಲ. ಏಕೆಂದರೆ, ರವಿಚಂದ್ರನ್‌ ಅವರ ಜೊತೆ ನಟಿಸುವ ಅವಕಾಶಕ್ಕಿಂತ ಇನ್ನೇನು ಬೇಕು? ಅದೇ ಖುಷಿ ಇತ್ತು. ಹೀಗಾಗಿ, ಮುಂದೆಯೂ ಒಳ್ಳೆಯ ನಟ, ನಿರ್ದೇಶಕರ ಜೊತೆ ಯಶಸ್ವೀ ಸಿನಿಮಾ ಮಾಡುವ ಒಂದು ಇಚ್ಛೆ ಎಲ್ಲರಿಗೂ ಇರುತ್ತದೆ. ನಂತರದಲ್ಲಿ ಒಂದು ಒಳ್ಳೆಯ ತಂಡಕ್ಕಾಗಿ ಕಾಯುತ್ತಿದ್ದೆ. ಹೀಗೆ ಸಿಕ್ಕಿದ ತಂಡ ವಿಕ್ಟರಿ–2, ಕೃಷ್ಣ ಟಾಕೀಸ್‌’ ಎಂದು ವಿವರಿಸಿದರು.

ಪ್ರೇಕ್ಷಕರ ನಿರ್ಬಂಧದ ನಡುವೆಯೇ ಚಿತ್ರ ಬಿಡುಗಡೆ ಕುರಿತು ಮಾತನಾಡಿರುವ ಅಪೂರ್ವ, ‘ಕಳೆದ ಡಿಸೆಂಬರ್‌ನಲ್ಲೇ ಚಿತ್ರದ ಬಿಡುಗಡೆ ಆಗಬೇಕಿತ್ತು. ಆದರೆ ಲಾಕ್‌ಡೌನ್‌, ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳ ಕಾರಣದಿಂದ ಮುಂದಕ್ಕೆ ಹೋಯಿತು. ಇದಾದ ನಂತರ ಸ್ಟಾರ್‌ನಟರ ಚಿತ್ರಗಳ ಬಿಡುಗಡೆಯಾಯಿತು. ಇನ್ನೇನು ನಮ್ಮ ಚಿತ್ರ ಬಿಡುಗಡೆ ಆಗಬೇಕು ಎನ್ನುವಾಗ, ಪ್ರೇಕ್ಷಕರ ಸಂಖ್ಯೆ ನಿರ್ಬಂಧ ಆದೇಶ ಹೊರಬಿದ್ದಿದೆ. ನಮ್ಮ ನಿರ್ಮಾಪಕರ ಸಾಹಸ ಮೆಚ್ಚಬೇಕು. ನಮಗೇ ಒಂದು ರೀತಿ ಹಿಂಜರಿಕೆ ಇದೆ. ಆದರೆ, ಅವರು ಚಿತ್ರದ ಮೇಲೆ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಇದು ಗೆಲ್ಲಬೇಕು. ಒಂದೂವರೆ ವರ್ಷದಿಂದ ಕಾದಿರುವ ನಿರ್ಮಾಪಕರಿಗೆ ಒಳ್ಳೆಯದಾಗಬೇಕು. ಜನರು ನಿರ್ಭಯವಾಗಿ ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.

ನಾನು ಅಜಯ್‌ ರಾವ್‌ ಫ್ಯಾನ್!
‘ಎಕ್ಸ್‌ಕ್ಯೂಸ್‌ ಮಿ ಚಿತ್ರದಿಂದ ನಾನು ಅಜಯ್‌ ಅವರ ಅಭಿಮಾನಿ. ತುಂಬಾ ಸರಳವಾಗಿ ಇರುತ್ತಾರೆ. ಅವರಿಂದ ಕಲಿಯಬೇಕಾದ ಹಲವು ವಿಷಯಗಳಿವೆ. ಅವರ ಜೊತೆಗೆ ಕೆಲಸ ಮಾಡಿರುವ ಖುಷಿ ಇದೆ. ತುಂಬಾ ಒಳ್ಳೆಯ ಸಹಕಲಾವಿದ ಎಂದು ಮೆಚ್ಚುಗೆಯಿಂದ ಹೇಳಿದರು.

ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ವಿವರಿಸಿದ ಅವರು, ‘ಚಿತ್ರದಲ್ಲಿ ಸಿಟಿ ಹುಡುಗಿಯ ಪಾತ್ರವನ್ನು ನಾನು ಮಾಡುತ್ತಿದ್ದೇನೆ. ಇವತ್ತಿನ ಟ್ರೆಂಡ್‌ನಲ್ಲಿ ಬಬ್ಲಿ ಹುಡುಗಿಯ ಪಾತ್ರ ಇದು. ನಗರದಿಂದ ಹಳ್ಳಿಗೆ ಹೋಗುವ ಹುಡುಗಿ, ಹೀರೊನಿಗೆ ಹೇಳುವ ಮಾತು ಮುಂದೆ ಯಾವ ರೀತಿ ತಿರುವುಗಳನ್ನು ಪಡೆಯುತ್ತದೆ, ಆತ ತೆಗೆದುಕೊಳ್ಳುವ ರಿಸ್ಕ್‌ ಎಂತಹದ್ದು... ಇಂತಹ ಪ್ರಶ್ನೆಗಳನ್ನು ಇಟ್ಟುಕೊಂಡು ಕಥೆ ಪ್ರಾರಂಭವಾಗುವುದೇ ನನ್ನಿಂದ. ಒಂದು ಒಳ್ಳೆಯ ಪ್ರೇಮಕಥೆ ಇದೆ. ಇದೊಂದು ಪ್ಯಾಕೆಜ್‌ ಸಿನಿಮಾ. ಹಾರರ್‌ ಥ್ರಿಲ್ಲರ್‌ ಕಥಾಹಂದರವಿರುವ ಈ ಚಿತ್ರ ಒಂದು ಒಳ್ಳೆಯ ಸಂದೇಶವನ್ನೂ ನೀಡುತ್ತದೆ. ಸಾಮಾಜಿಕ ಜಾಲತಾಣದಿಂದ ಆಗುವ ಅನಾಹುತಗಳ ಕುರಿತೂ ಇದರಲ್ಲಿ ವಿಷಯವಿದೆ. ಹಾರರ್‌ ಚಿತ್ರವಾಗಿರುವ ಕಾರಣ ಚಿತ್ರೀಕರಣದ ವೇಳೆ ನಡೆದ ಹಲವು ಅನುಭವಗಳು ಭಯ ಹುಟ್ಟಿಸುತ್ತಿದ್ದವು’ ಎಂದು ವಿವರಿಸಿದರು.

‘ವಿಕ್ಕಿ ವರುಣ್‌ ಅಭಿನಯದ ‘ಕಾಲಾಪತ್ಥರ್‌’ನಲ್ಲಿ ನಾನು ನಟಿಸಿದ್ದೇನೆ. ಇನ್ನೆರಡು ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ಇನ್ನಷ್ಟೇ ಘೋಷಣೆಯಾಗಬೇಕಿದೆ. ಇದರಲ್ಲಿ ಒಂದು ಚಿತ್ರದ ಚಿತ್ರೀಕರಣವೂ ಮುಗಿದಿದೆ. ಇನ್ನೊಂದು ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ’ ಎಂದು ತಮ್ಮ ಮುಂದಿನ ಚಿತ್ರಗಳ ವಿವರಗಳನ್ನು ಅಪೂರ್ವ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT