ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾತ್ವಿಕ ಪಾತ್ರಧಾರಿ ಬಿಟ್ಟು ಹೋದ ನೆನಪಿನ ಬುತ್ತಿ...

Last Updated 18 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಈ ಕೃಷ್ಣ ನಾಡಿಗರು 1987ರಿಂದ ನನಗೆ ಪರಿಚಯ. ಆಗ ನಾನು ನಮ್ಮ ತಂದೆಯವರ ಮಾತಿಗೆ ಕಟ್ಟುಬಿದ್ದು ಸಿನೆಮಾ ರಂಗ ಬಿಟ್ಟು ಕಿರಾಣಿ ಅಂಗಡಿ ಇಟ್ಟಿದ್ದೆ. ಶ್ರೀನಗರದಲ್ಲಿ ನನ್ನ ಅಂಗಡಿಯಿತ್ತು. ಈ ನಾಡಿಗರ ಮನೆಯೂ ಅಲ್ಲೆ ಇದ್ದಿದ್ದು. ಆಗಾಗ ಸಿಗರೇಟ್‌ ಸೇದಲು ಅಂಗಡಿಗೆ ಬರೋರು. ನನ್ನ ರಂಗಭೂಮಿಯ ಗೆಳೆಯರಾದ ದೇವರಾಜ್‌, ಅವಿನಾಶ್‌, ಸಂಕೇತ್‌ ಕಾಶಿ, ಲಂಬೂ ನಾಗೇಶ... ಇನ್ನೂ ಅನೇಕರು ಕೂಡ ಆಗಾಗ ಬರುತ್ತಿದ್ದರು. ಅವರೆಲ್ಲ ಸಿನೆಮಾರಂಗಕ್ಕೆ ಆಗ ತಾನೆ ಪದಾರ್ಪಣೆ ಮಾಡ್ತಿದ್ರು. ಒಂದು ದಿನ ಅವಿನಾಶ್‌ ನಮ್ಮ ಅಂಗಡಿಯಲ್ಲಿದ್ದಾಗ ಈ ನಾಡಿಗರು ಬಂದು ಅವನನ್ನು ಅಂಗಡಿಯಲ್ಲಿ ನೋಡಿ ಆಶ್ಚರ್ಯಪಟ್ರು. ‘ಇವರು ನಿಮಗೆ ಹೇಗೆ ಪರಿಚಯ’ ಅಂತ ಕೇಳಿದ್ರು! ಆಗ ನಾನು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದುದ್ದಾಗಿ ಹೇಳಿದೆ.

ನಾಡಿಗರು ಅದಾಗಲೆ ಪ್ರೊಡಕ್ಷನ್‌ ಮ್ಯಾನೇಜರ್‌ ಆಗಿ ‘ಅನುಭವ’ ಕಾಶಿನಾಥ್‌ ಬಳಿ ಕೆಲಸ ಮಾಡ್ತಿದ್ರು. ಆಗೆಲ್ಲ ಯಾವುದೇ ಸಣ್ಣ ಬಜೆಟ್‌ನ ಸಿನೆಮಾಗಳಿದ್ರೂ ಇವರನ್ನೆ ಪ್ರೊಡಕ್ಷನ್‌ ಮ್ಯಾನೇಜರ್‌ ಕೆಲಸಕ್ಕೆ ಕರೆಯುತ್ತಿದ್ರು. ಏಕೆಂದರೆ ಇವರಿಗೆ ದೊಡ್ಡ ನಟರ ಪರಿಚಯ ಚೆನ್ನಾಗಿತ್ತು. ನಾಡಿಗರು ಕಡಿಮೆ ದುಡ್ಡಿಗೆ ದೊಡ್ಡ ನಟರ ಕಾಲ್‌ಶೀಟ್‌ ಹೊಂದಿಸುತ್ತಿದ್ದರು. ಆಮೇಲೆ ಆ ಸಿನೆಮಾ ಮಂದಿ ಇವರನ್ನೇ ಮರೆತು ಮುನ್ನಡೆಯುತ್ತಿದ್ದರು.

ನಮ್ಮ ತಂದೆಯವರು ಹೋದ ನಂತರ ನಾನು ಮತ್ತೆ ಚಿತ್ರರಂಗದ ಕಡೆಗೆ ಹೊರಳಿದೆ. ಆಗ ಈ ನಾಡಿಗರು ಕಥೆ, ಚಿತ್ರಕಥೆ ಬರೆಯುತ್ತಿದ್ದರು. ಬರೀತಿದ್ದಿದ್ದು ಇವರಾದ್ರೂ ಅದರಲ್ಲಿ ಹೆಸರು ಬೇರೆಯವರದು ಇರುತ್ತಿತ್ತು! ಕಾಸೂ ಅಷ್ಟಕ್ಕಷ್ಟೆ ಸಿಗ್ತಿದ್ದಿದ್ದು ನಾಡಿಗರಿಗೆ. ಆಗೆಲ್ಲಾ ಸಿನೆಮಾ ಕೆಲಸಗಳು ಅಂದ್ರೆ ಗಾಂಧಿನಗರದಲ್ಲಿ ಪ್ರದಕ್ಷಣೆ ಹಾಕಲೇಬೇಕಿತ್ತು. ಅಲ್ಲಿ ಸಿಕ್ತಿದ್ರು ನಾಡಿಗರು. ಅಂಗಡಿ ಬಂದ್‌ ಮಾಡಿ ನಾನು ಮರಳಿ ಇಲ್ಲಿಗೆ ಬಂದಿದ್ದಕ್ಕೆ ಬಾಯಿಗೆ ಬಂದಂಗೆ ಬೈದಿದ್ರು.

ನಂತರ ಚಿತ್ರರಂಗದಿಂದ ಟಿ.ವಿ.ಗೆ ಹೊರಳಿದ ಅವರು ನಟರಾಗಿಬಿಟ್ಟರು. ನಾನು ನಿರ್ದೇಶಕ, ಬರಹಗಾರ, ಕಲಾವಿದನಾದೆ. ಇವರೊಂಥರ ಸಾತ್ವಿಕ ಪಾತ್ರಗಳಿಗಾಗಿಯೆ ಹುಟ್ಟಿದ್ದಾರೇನೋ ಅನ್ನುವಂತೆ ಇವರಿಗೆ ಜ್ಯೋತಿಷಿ, ಅರ್ಚಕ, ವೇದಾಂತಿ, ಶಿಕ್ಷಕ, ಆದರ್ಶ ತಂದೆ... ಇಂತಹ ಪಾತ್ರಗಳೇ ಇವರನ್ನು ಅರಸಿ ಬರುತ್ತಿದ್ದವು.

‘ಮಹಾದೇವಿ’ ಧಾರಾವಾಹಿಗೆ ನಾನು ಸಂಭಾಷಣೆ ಬರೆಯುವಾಗ ಇವರದು ಅದರಲ್ಲಿ ಲೋಕಜ್ಞಾನಿಯ ಪಾತ್ರ. ಇವರ ಪಾತ್ರದ ಸಂಭಾಷಣೆ ಬರೆಯುವಾಗ ಒಂದು ರೀತಿಯ ಬದುಕಿನ ತಾದ್ಯಾತ್ಮತೆ ಮೂಡುತ್ತಿತ್ತು. ಡಬ್ಬಿಂಗ್‌ ದರ್ಬಾರ್‌ ಶುರುವಾದ ಕಾಲಕ್ಕೆ ಇವರ ಕಂಚಿನ ಕಂಟಕ್ಕೆ ಬಹಳ ಬೇಡಿಕೆ ಬಂತು. ಅನೇಕ ಸಿನೆಮಾಗಳಿಗೆ, ಧಾರಾವಾಹಿಗಳಿಗೆ ಧ್ವನಿ ನೀಡಲು ಬೇಡಿಕೆ ಇವರಿಗೆ. ‘ನಟನೆಗೆ ಇಂತಿಷ್ಟು ಸಂಭಾವನೆ ಫಿಕ್ಸ್‌ ಆಗಿದೆ ನನಗೆ. ಆದರೆ ಈ ಡಬ್ಬಿಂಗ್‌ಗೆ ಎಷ್ಟು ಕೇಳೋದು ಅಂತ ಗೊತ್ತಾಗ್ತಿಲ್ಲ ನನಗೆ’ ಅಂತ ಪೇಚಾಡೋರು.

ಎಲ್ಲರಿಗೂ ಆತ್ಮೀಯರಾಗಿ, ನಿರುಪದ್ರವಿಯಾಗಿ ತಮ್ಮ ಅನುಭವದ ಧಾರೆಯೆರಿತಾ... ಎಲ್ಲರೊಳಗೊಂದಾಗಿದ್ದ ಕೃಷ್ಣ ನಾಡಿಗರು ಸಿನೆಮಾ ರಂಗದ ವಿಕಿಪೀಡಿಯ ಆಗಿದ್ದರು. ಅವರು ಮರೆಯಾದರೂ ಅವರ ಚಿತ್ರ, ಅವರ ಸೀನ್‌ಗಳು ಆಗಾಗ ಕಣ್ಮುಂದೆ ಹಾಯುತ್ತಲೆ ಇರುತ್ತವೆ.

(ಲೇಖಕರು: ಕೃಷ್ಣಮೂರ್ತಿ ನಾಡಿಗ್‌ ಅವರ ಒಡನಾಡಿ, ನಿರ್ದೇಶಕ ಹಾಗೂ ನಟ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT