ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷ್ಣಾ’ ಸುಂದರಿ ಕನ್ನಡ ಸಿನಿಮಾ 'ಸವರ್ಣಧೀರ್ಘ ಸಂಧಿ'

Last Updated 17 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಚಿತ್ರರಂಗದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಎದುರು ನೋಡುತ್ತಿರುವ ನವ ನಟಿ ಕೃಷ್ಣಾ ಬಿ. ನಾಯಕಿಯಾಗಿ ನಟಿಸುವ ಅವರ ಮೊದಲ ಚಿತ್ರ ‘ಸವರ್ಣಧೀರ್ಘ ಸಂಧಿ’ ಇದೇ 18ರಂದು ತೆರೆ ಕಾಣುತ್ತಿದೆ. ಅವರು ತಮ್ಮ ಬಣ್ಣದ ಬದುಕಿನ ಕನಸುಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ.

ಚಿತ್ರರಂಗಕ್ಕೂ ಕರಾವಳಿಯ ಬೆಡಗಿಯರಿಗೂ ಎಲ್ಲಿಲ್ಲದ ನಂಟು. ಈಗ ಕರಾವಳಿ ಮೂಲದ ಮತ್ತೊಬ್ಬ ಬೆಡಗಿಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ನಟನೆಯ ವ್ಯಾಕರಣ ಕಲಿಯುವ ಉಮೇದಿನಲ್ಲಿರುವ ಈ ‘ಕೃಷ್ಣಾ’ ಸುಂದರಿ ‘ಸವರ್ಣದೀರ್ಘ ಸಂಧಿ’ ಚಿತ್ರದ ಮೂಲಕ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.ಇದಕ್ಕೂ ಮೊದಲು ಅವರು ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚಿದ ರೂಪದರ್ಶಿಯಾಗಿದ್ದರು.

ಕಿರುತೆರೆ ಮತ್ತು ಹಿರಿತೆರೆಯಲ್ಲೂ ಪೋಷಕ ನಟನಾಗಿ ಗಮನ ಸೆಳೆದಿರುವ ರವಿ ಭಟ್ ಅವರ ಪುತ್ರಿ ಕೃಷ್ಣಾ ಬಿ. ಇವರುಹುಟ್ಟಿ ಬೆಳೆದಿದ್ದು ಉಡುಪಿಯಲ್ಲಿ.ಇವರ ಸೋದರತ್ತೆ ಹಾಗೂ ನಟಿ‌ ವಿನಯಾ‌ ಪ್ರಸಾದ್ ಅವರ ಸಲಹೆ ಮತ್ತು ಮಾರ್ಗದರ್ಶನದಿಂದಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿರುವುದಾಗಿ ವಿನಮ್ರವಾಗಿ ಹೇಳಿಕೊಳ್ಳುತ್ತಾರೆ ಈ ಯುವ ನಟಿ. ತುಳು ಚಿತ್ರರಂಗದ ಉಷಾ ಭಂಡಾರಿ ಬಳಿ ಅಭಿನಯ ಕಲೆ ಕಲಿತಿರುವುದನ್ನೂಅಷ್ಟೇ ವಿನಮ್ರತೆಯಿಂದನೆನೆಯುತ್ತಾರೆ. ಉಷಾ ಅವರ ‘ಆ್ಯಪ್ ಆ್ಯಕ್ಟ್ ಇನ್ಸ್ಟಿಟ್ಯೂಟ್‌’ನಲ್ಲಿ ಆರು ತಿಂಗಳು ಅಭಿನಯ ಕಲಿತು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ‘ಬರೀ ಚೆಂದ ಕಾಣಿಸುವುದಷ್ಟೇ ಅಲ್ಲ, ಚೆನ್ನಾಗಿ ಅಭಿನಯಿಸುವುದೂ ಮುಖ್ಯ’ ಎಂದು ಉಷಾ ಹೇಳಿಕೊಟ್ಟಿರುವ ಮಾತನ್ನು ಸದಾ ನೆನಪಿಸಿಕೊಳ್ಳುತ್ತಾರೆ ಕೃಷ್ಣಾ.

‘ಸಿನಿಮಾ ರಂಗಕ್ಕೆ ನಾನು ಬರಲು ಮೂಲ ಕಾರಣ ನನ್ನ ಸೋದರತ್ತೆ ನಟಿ ವಿನಿಯಾ ಪ್ರಸಾದ್‌’ ಎಂದು ಮಾತಿಗೆ ಇಳಿದ ಕೃಷ್ಣಾ,ಸಿನಿಮಾ ರಂಗಕ್ಕೆ ಬರಬೇಕೆಂಬ ಕನಸುಗಳು ಚಿಕ್ಕಂದಿನಿಂದ ಇರಲಿಲ್ಲ. ಆದರೆ, ನಾನು ಮತ್ತು ನನ್ನ ಸ್ನೇಹಿತೆ ಏಳನೇ ತರಗತಿಯಲ್ಲಿ ಇರುವಾಗಲೇ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕಲಿತು ರೆಸ್ಟೋರೆಂಟ್ ನಡೆಸುವ ಕನಸು ಕಟ್ಟಿದ್ದೆವು. ಅದರಂತೆ ಹೋಟೆಲ್ ಮ್ಯಾನೇಜ್‌ಮೆಂಟ್‌ ಪದವಿ ಮುಗಿಸಿದೆ. ಬ್ಯುಸಿನೆಸ್ ಆರಂಭಿಸುವ ಆಲೋಚನೆಗಳುತಲೆಯಲ್ಲಿ ಇದ್ದವು. ಆದರೆ, ಹಣ ಇರಲಿಲ್ಲ. ಹಾಗಾಗಿಅದು ಕೈಗೂಡಲಿಲ್ಲ. ಒಂದಷ್ಟು ಸಮಯ ಯಾವುದಾದರೂ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಆಲೋಚನೆಯೂ ಇತ್ತು. ಕೊನೆಗೆಅತ್ತೆಯ ಸಲಹೆಯಂತೆಯೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟೆ. ಪದವಿ ಓದುತ್ತಿರುವಾಗಲೇ ನಾಲ್ಕು ವರ್ಷ ಮಾಡೆಲಿಂಗ್ ಮಾಡಿದೆ. ಅತ್ತೆಯ ಜತೆಗೆ ಆಭರಣ ಕಂಪನಿಯೊಂದಕ್ಕೆ ಪ್ರಚಾರ ರಾಯಭಾರಿಯಾಗಿದ್ದೆ. ಎರಡು ಕಂಪನಿಗಳ ಆಭರಣಗಳಿಗೆ ರೂಪದರ್ಶಿಯಾಗಿಯೂ ಕೆಲಸ ಮಾಡಿದ್ದೇನೆ ಎಂದು ಮಾತು ವಿಸ್ತರಿಸಿದರು.

ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಅವರು ತುಳುವಿನಲ್ಲಿ ನಿರ್ದೇಶಿಸಿದ್ದ'ಚಾಲಿ ಪೋಲಿಲು' ಚಿತ್ರ ಹಿಟ್ ಆಗಿತ್ತು. ಅದು ಮಂಗಳೂರಿನಲ್ಲಿ ಸುಮಾರು 511 ದಿನಗಳ ಕಾಲ ಪ್ರದರ್ಶನ ಕಂಡು ದಾಖಲೆಯನ್ನೇ ನಿರ್ಮಿಸಿತ್ತು. ಇಂತಹ ವೀರೇಂದ್ರ ಶೆಟ್ಟಿಯವರು ‘ಸವರ್ಣ ಧೀರ್ಘ ಸಂಧಿ’ ಚಿತ್ರಕ್ಕೆ ಹೀರೊಯಿನ್‌ಗಾಗಿಆಡಿಷನ್‌ ನಡೆಸುತ್ತಿರುವುದು ಉಷಾ ಭಂಡಾರಿಯವರಿಂದ ತಿಳಿಯಿತು. ಆಗ ಆಡಿಷನ್‌ ಕೊಟ್ಟುಬಂದಿದ್ದೆ. ನಟಿಸುವ ಅವಕಾಶವೂ ಸಿಕ್ಕಿತು. ನಾನು ಕಲಾವಿದರ ಕುಟುಂಬದಿಂದ ಬಂದವಳಾದರೂ ನನಗೆ ಅಭಿನಯ ಕಲೆ ಕಲಿಸಿದವರು ಉಷಾ ಭಂಡಾರಿಯವರು. ಹೇಗೆ ಆಡಿಷನ್ ನೀಡಬೇಕು, ಕ್ಯಾಮೆರಾ ಮುಂದೆ ಹೇಗೆ ನಿಲ್ಲಬೇಕು, ಹೇಗೆ ಅಭಿನಯಿಸಬೇಕು ಹೀಗೆ ಎಲ್ಲವನ್ನೂ ಕಲಿಸಿದ ಗುರು ಅವರು ಎಂದರು ಕೃಷ್ಣಾ.

ಚಿತ್ರದಲ್ಲಿನನ್ನ ಪಾತ್ರದ ಹೆಸರು ಅಮೃತ ವರ್ಷಿಣಿ. ವತ್ತಿಪರ ಹಾಡುಗಾರ್ತಿ, ಬೆಂಗಳೂರಿನಲ್ಲಿ ನೆಲೆಸಿದ ಬಿಂದಾಸ್ ಹುಡುಗಿ. ಜನಪ್ರಿಯ ಸಂಗೀತಗಾರನ ಮಗಳು, ತನ್ನ ಕೆರಿಯರ್ ಮೇಲೆ ಗಮನ ಹರಿಸುವಂತಹ ಹುಡುಗಿ ಅವಳು. ಚಿತ್ರದ ನಾಯಕ ಅನಕ್ಷರಸ್ಥ ಜತೆಗೆ ರೌಡಿ, ಶಾಲೆಯ ಮೆಟ್ಟಿಲು ಹತ್ತಿರುವುದಿಲ್ಲ. ಆದರೆ ಅವನು ವ್ಯಾಕರಣದಲ್ಲಿ ಮಾತ್ರ ಪಂಟರ್ ಆಗಿರುವುದು ಚಿತ್ರದ ಕಥನ ಕುತೂಹಲ. ಸುಸಂಸ್ಕೃತ ಮನೆಯ ನಾಯಕಿ ಮತ್ತು ಅನಕ್ಷರಸ್ಥ ರೌಡಿ ನಡುವೆ ಸಂಬಂಧ ಹೇಗೆ ಬೆಳೆಯುತ್ತದೆ, ಮುಂದೇನಾಗುತ್ತದೆ ಎನ್ನುವುದು ಕಥೆಯ ಹೂರಣ.ಕಾಮಿಡಿ, ರೊಮಾನ್ಸ್‌, ಫ್ಯಾಮಿಲಿ ಸೆಂಟಿಮೆಂಟ್ ಎಲ್ಲವೂ ಇದೆ. ಹಾಸ್ಯದ ಸೆಲೆ ಚಿತ್ರದಲ್ಲಿ ಅಂತರ್ಗತವಾಗಿಯೇ ಇದ್ದು,ಇಡೀ ಸಿನಿಮಾ ಕಾಮಿಡಿ ಟ್ರ್ಯಾಕಿನಲ್ಲಿ ಸಾಗುತ್ತದೆ ಎಂದು ತಮ್ಮ ಚೊಚ್ಚಿಲ ಸಿನಿಮಾದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕೃಷ್ಣಾ ತೆರೆದಿಟ್ಟರು.

ವೀರೇಂದ್ರ ಶೆಟ್ಟಿ ಈ ಚಿತ್ರದ ನಾಯಕನಾಗಿ ನಟಿಸುವ ಜತೆಗೆ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಿರ್ಮಾಣದನೊಗವನ್ನೂ ಹೊತ್ತಿದ್ದಾರೆ. ಚಿತ್ರದಲ್ಲಿನನ್ನ ಪಾತ್ರಕ್ಕೂ ತುಂಬಾನೇ ಸ್ಕೋಪ್ಇದೆ. ಒಂದೆರಡು ಹಾಡಿನಲ್ಲಿಹೀರೊ ಜತೆಗೆ ಹಾಗೆ ಬಂದು ಹೀಗೆ ಹೋಗುವಂತದ್ದಲ್ಲ.‌ಮರ ಸುತ್ತುವ ಪಾತ್ರವೂ ಅಲ್ಲ, ಬಹಳ ಧೈರ್ಯಗಾತಿ ಮತ್ತು ಗಟ್ಟಿಗಿತ್ತಿ ಯುವತಿಯ ಪಾತ್ರವದು. ನನ್ನ ನಿಜ ಬದುಕಿಗೂ ಈ ಪಾತ್ರ ತುಂಬಾ ರೀಲೇಟ್‌ ಆಗುತ್ತಿದ್ದರಿಂದ ಪಾತ್ರವಾಗಿ ಜೀವಿಸಿದ್ದೇನೆ. ಚಿತ್ರದ ಪ್ರೀಮಿಯರ್ ಶೋ ನೋಡಿದ ಮೇಲೆ ಸಾಕಷ್ಟು ಖುಷಿ ಕೊಟ್ಟಿದೆ. ಬಹಳಷ್ಟು ಒಳ್ಳೆಯ ಪ್ರತಿಕ್ರಿಯೆಗಳೂ ಬಂದಿವೆ. ಕನ್ನಡ ಚಿತ್ರರಂಗಕ್ಕೆ ಇಂತಹ ಗ್ರ್ಯಾಂಡ್ ಎಂಟ್ರಿ ನಿರೀಕ್ಷಿಸಿರಲಿಲ್ಲ ಎನ್ನುವ ಈ ನಟಿ, ಭವಿಷ್ಯದಲ್ಲಿ ಸುವರ್ಣಾವಕಾಶ ಗಿಟ್ಟಿಸುವ ಭರವಸೆಯಲ್ಲಿದ್ದಾರೆ.

ತಮ್ಮ ಎದುರಿಗಿರುವ ಅವಕಾಶಗಳ ಬಗ್ಗೆಯೂ ಮಾತು ಹೊರಳಿಸಿದ ಕೃಷ್ಣಾ,ಸೀರಿಯಲ್, ಸಿನಿಮಾಗಳಲ್ಲಿ ಅವಕಾಶಗಳು ಅರಸಿ ಬರುತ್ತಿವೆ. ಸದ್ಯಕ್ಕೆ ಸಿನಿಮಾ ಮೇಲೆ ಗಮನ ಹರಿಸಿದ್ದೇನೆ.ಹೊಸ ಸಿನಿಮಾವೊಂದರಲ್ಲಿ ನಟಿಸಲು ಮಾತುಕತೆ ನಡೆಯುತ್ತಿದೆ. ‌ಈಗಷ್ಟೇ ಸಿನಿರಂಗಕ್ಕೆ ಕಾಲಿಟ್ಟಿದ್ದೀನಿ. ಹಾಗಾಗಿ ಇಂತಹದ್ದೇ ಪಾತ್ರಬೇಕೆನ್ನುವ ಹಟ ನನ್ನಲ್ಲಿಲ್ಲ. ನಟನೆಯ ಹಸಿವು ಸಾಕಷ್ಟು ಇದೆ. ಈ ರಂಗದಲ್ಲಿ ತುಂಬಾ ಕೆಲಸ ಮಾಡುವ ಹಂಬಲವಿದೆ. ಯಾವ ಪಾತ್ರವಾದರೂ ಸೈ, ಕಥೆ, ಪಾತ್ರ ಚೆನ್ನಾಗಿದ್ದರೆ ನಟಿಸಲು ಅಭ್ಯಂತರವಿಲ್ಲ ಎನ್ನುವ ಅವರ ಮಾತಿನಲ್ಲಿ ಆತ್ಮವಿಶ್ವಾಸದ ಖನಿಯೇ ಕಾಣಿಸುತ್ತದೆ.

ಭಾವನಾ ಕೃಷ್ಣಾ ಆದಾಗ...

ನಾನು ಮಾಡೆಲಿಂಗ್‌ ಕ್ಷೇತ್ರದಲ್ಲಿರುವಾಗಲೂ ನನ್ನ ಹೆಸರು ಭಾವನಾ ಆಗಿತ್ತು. ನನ್ನ ಮೊದಲ ಚಿತ್ರದ ಮೊದಲ ದೃಶ್ಯವೇ ‘ಕೃಷ್ಣ ಕೊಳಲಾದೆ ನಿನ್ನ ಕೈಯಲಿ’ಹಾಡಿನ ಮೂಲಕ ಎಂಟ್ರಿ ಕೊಡುವುದಾಗಿತ್ತು. ಆ ಹಾಡನ್ನುಶ್ರೇಯಾ ಘೋಷಾಲ್ ಕಂಠದಲ್ಲಿಹಾಡುತ್ತಿರುವಾಗ ನನ್ನ ಅಜ್ಜ ಕೃಷ್ಣ ಭಟ್‌ ತೀರಿಕೊಂಡ ಸುದ್ದಿ ಬಂತು. ಸಾಮಾನ್ಯವಾಗಿ ಅಜ್ಜನ ಹೆಸರನ್ನು ಮೊಮ್ಮಗನಿಗೆ ಇಡುವುದು ರೂಢಿ. ಆ ಸಂಪ್ರದ್ರಾಯ ಮುರಿದು ಅಜ್ಜನ ಹೆಸರು ಉಳಿಸಿಕೊಳ್ಳಲು ಮತ್ತು ಕೃಷ್ಣ ಭಕ್ತೆಯಾಗಿ ಹೆಸರನ್ನು ‘ಕೃಷ್ಣಾ’ ಎಂದು ಬದಲಿಸಿಕೊಂಡೆ ಎನ್ನುತ್ತಾರೆ ಈ ನಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT