‘ಲುಕಾ ಚುಪ್ಪಿ’ಯ ಮಲ್ಲಿಗೆ ತೂಕದ ಹೆಣ್ಣು!

ಬುಧವಾರ, ಮಾರ್ಚ್ 20, 2019
25 °C

‘ಲುಕಾ ಚುಪ್ಪಿ’ಯ ಮಲ್ಲಿಗೆ ತೂಕದ ಹೆಣ್ಣು!

Published:
Updated:
Prajavani

ಲಕ್ಷ್ಮಣ್‌ ಉಟೇಕರ್‌ ಬಾಲಿವುಡ್‌ನ ಒಬ್ಬ ಯಶಸ್ವಿ ಸಿನಿಮಾಟೊಗ್ರಾಫರ್‌. ಶಾರೂಕ್‌ ಖಾನ್‌ ಅಭಿನಯದ ‘ಡಿಯರ್‌ ಜಿಂದಗೀ’, ಶ್ರೀದೇವಿ ಅಭಿನಯದ ‘ಇಂಗ್ಲಿಷ್‌ ವಿಂಗ್ಲಿಷ್‌’ ಸೇರಿದಂತೆ ಹನ್ನೊಂದು ಸಿನಿಮಾಗಳಿಗೆ ಕ್ಯಾಮೆರಾ ನಿರ್ದೇಶಿಸಿದವರು. ‘ಟಪಾಲ್‌’, ‘ಲಾಲ್‌ಬಾಗ್‌ಚಿ ರಾಣಿ’ ಸಿನಿಮಾ ಮೂಲಕ ನಿರ್ದೇಶಕನಾಗಿಯೂ ದಾಖಲಾದವರು. ಇದೀಗ ಅವರ ನಿರ್ದೇಶನದ ‘ಲುಕಾ ಚುಪ್ಪಿ’ ಸುಂದರ ಮನರಂಜನೆಯ ಚಿತ್ರವಾಗಿ ಗಮನ ಸೆಳೆದಿದೆ.

ಸಾಂಸ್ಕೃತಿಕ ಪೊಲೀಸ್‌ಗಿರಿಯನ್ನು ಹಾಸ್ಯದೊಂದಿಗೆ ಅತ್ಯಂತ ತೀಕ್ಷ್ಣವಾಗಿ ಕೆಣಕುವ ಈ ಚಿತ್ರದ ಪ್ರಮುಖ ವಸ್ತು ಲಿವ್‌–ಇನ್‌ ರಿಲೇಶನ್‌ಶಿಪ್‌. ಸಮಕಾಲೀನ ಸಮಾಜೋ–ರಾಜಕೀಯ ಸಂದರ್ಭವನ್ನು ಈ ವಸ್ತುವಿನ ಮೂಲಕ ಲೇವಡಿ ಮಾಡಿದ ಧೈರ್ಯ ಮೆಚ್ಚುವಂಥದು. ಕೃತಿ ಸನಾನ್‌, ಕಾರ್ತಿಕ್‌ ಆರ್ಯನ್‌ರ ಅತ್ಯಂತ ಲವಲವಿಕೆಯ ಅಭಿನಯ ಚಿತ್ರವನ್ನು ರಂಜನೀಯಗೊಳಿಸಿದೆ. ಅಬ್ಬಾಸ್‌ ಪಾತ್ರದಲ್ಲಿ ಅಪಾರಶಕ್ತಿ ಖುರಾನಾ ತುಂಬ ಕೂಲ್‌. ಹಾಸ್ಯಕ್ಕೆ ಅವರು ನೀಡುವ ನವಿರು ಸ್ಪರ್ಶ ಗಮನಾರ್ಹ.

ಕೃತಿ ಸನಾನ್‌ ಮಾತ್ರ ಮಲ್ಲಿಗೆ ತೂಕದ ಹೆಣ್ಣು! ಸಪೂರ ದೇಹ, ಸುಂದರ ನಗುಮೊಗದ ಈ ಹೆಣ್ಣು ಚೂಡಿದಾರ್‌ನಲ್ಲೂ, ಸ್ಟೈಲಿಶ್‌ ಸೀರೆಯಲ್ಲೂ ಬ್ಯೂಟಿಫುಲ್‌.. ಎಂಜಿನಿಯರಿಂಗ್‌ ಪದವೀಧರೆ ಕೃತಿ ತನ್ನ ಅಭಿನಯ ಕೆರಿಯರ್‌ನಲ್ಲಿ ತುಂಬ ಜಾಗರೂಕತೆಯಿಂದ ಪಾತ್ರಗಳನ್ನು ಹೆಕ್ಕಿಕೊಳ್ಳುತ್ತಾಳೆ. ತೆಲುಗು ಸಿನಿಮಾದಲ್ಲಿ ಯಶಸ್ವಿ ನಟ ಮಹೇಶ್‌ಬಾಬು ಜೊತೆ ಅಭಿನಯದ ಮೊದಲ ಇನಿಂಗ್ಸ್ ಆಯ್ಕೆ ಮಾಡಿಕೊಂಡಿದ್ದು ಇವಳ ಬುದ್ಧಿವಂತಿಕೆಗೆ ಸಾಕ್ಷಿ.

ಬಾಲಿವುಡ್‌ನಲ್ಲಿ ಟೈಗರ್‌ ಶ್ರಾಫ್‌ ಜೊತೆ ‘ಹೀರೋಪಂತಿ’ ಮತ್ತು ಶಾರೂಕ್‌ ಖಾನ್‌ನ ‘ದಿಲ್‌ವಾಲೇ’ ಚಿತ್ರದಲ್ಲಿ ವರುಣ್‌ ಧವನ್‌ ಜೊತೆ ಚಾನ್ಸ್‌ ಗಿಟ್ಟಿಸಿಕೊಂಡ ಕೃತಿ ಈಗ ಬಾಲಿವುಡ್‌ನ ಸ್ಲಿಮ್‌ ಅಂಡ್‌ ಸಿಂಪ್ಲಿ ಬ್ಯೂಟಿಫುಲ್‌ ಲಡಕೀ. ‘ಲುಕಾ ಚುಪ್ಪಿ’ಯ ರಶ್ಮಿ ತ್ರಿವೇದಿ ಪಾತ್ರದಲ್ಲಿ ಕೃತಿಯದು ಹೆವ್ವೀ ಹೆಡ್‌, ಲವಲವಿಕೆ ಮತ್ತು ಹಾಸ್ಯ ಭರಿತ ವಿಭಿನ್ನ ಮನೋಧರ್ಮದ ಪಾತ್ರ. ಸಾಂಪ್ರದಾಯಿಕ ಮನೋಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ರಾಜಕಾರಣಿ ತಂದೆಯ ಮಗಳಾಗಿ, ಟಿ.ವಿ. ರಿಪೋರ್ಟರ್‌ ಒಬ್ಬನನ್ನು ಪ್ರೇಮಿಸುತ್ತಾಳೆ.

ಲಿವ್‌ ಇನ್‌ ರಿಲೇಶನ್‌ಶಿಪ್‌ ಆಟ ಹೂಡಿ, ಥ್ರಿಲ್‌ ಸವಿಯಬಯಸುವ ಮತ್ತು ಕಡೆಗೆ ತಂದೆಯ ರಾಜಕೀಯ ಮೊಂಡುತನಕ್ಕೆ ಪಾಠ ಕಲಿಸುವ ಗಟ್ಟಿಗಿತ್ತಿಯೂ ಆಗುತ್ತಾಳೆ. ಯುವಜನ ಅದರಲ್ಲೂ ಯುವತಿಯರ ಆಶೋತ್ತರಗಳಿಗೆ ಸಮಕಾಲೀನ ಸಾಂಸ್ಕೃತಿಕ ಮತ್ತು ರಾಜಕೀಯ ವಲಯ ಸ್ಪಂದಿಸುವಂತೆ ಮಾಡುವ ಒಂದು ಅಪರೂಪ ಎನ್ನಬಹುದಾದ ಪಾತ್ರ ನಿಭಾಯಿಸಿದ್ದಾಳೆ. ಚಿತ್ರ ಸಮಕಾಲೀನ ರಾಜಕೀಯ ಸಂದರ್ಭಕ್ಕೆ ಅತ್ಯಂತ ಸಕಾಲಿಕ ಸಟೈರ್‌. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !