ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವತಿ ಗ್ರಾಮ ಅಭಿವೃದ್ಧಿಗೆ ಬದ್ಧ: ಸಚಿವ ಕೃಷ್ಣಭೈರೇಗೌಡ ಹೇಳಿಕೆ

ತಾಲ್ಲೂಕು ಬ್ಲಾಕ್ ಕಾಂಗ್ರೆಸ್‌ನಿಂದ ಸಚಿವರಿಗೆ ಅಭಿನಂದನೆ
Last Updated 19 ಜೂನ್ 2018, 5:31 IST
ಅಕ್ಷರ ಗಾತ್ರ

ದೇವನಹಳ್ಳಿ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ವಂಶಸ್ಥ ನಾಡಪ್ರಭು ರಣಭೈರೇಗೌಡರ ಕರ್ಮಭೂಮಿ ಆವತಿ ಗ್ರಾಮ ಮತ್ತು ಬೆಟ್ಟವನ್ನು ಸರ್ಕಾರಕ್ಕೆ ಅಭಿವೃದ್ಧಿ ಪಡಿಸುವ ಬದ್ಧತೆ ಇದೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮಿಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ‘ಕಳೆದ ವರ್ಷ ಕಾಂಗ್ರೆಸ್ ಆಡಳಿತದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ವಾರ್ಷಿಕವಾಗಿ ಆಚರಿಸಲು ಸರ್ಕಾರ ಆಸಕ್ತಿ ವಹಿಸಿತ್ತು. ಆ ಸಂದರ್ಭದಲ್ಲಿ ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಮತ್ತು ಕೃಷಿ ಸಚಿವನಾಗಿದ್ದೆ’ ಎಂದರು.

ಕಳೆದ ವರ್ಷ ನಡೆದ ಕೆಂಪೇಗೌಡರ ಜಯಂತಿ ಸಂದರ್ಭದಲ್ಲಿ ನಾಡಪ್ರಭು ರಣಭೈರೇಗೌಡರ ಕರ್ಮಭೂಮಿ ಆವತಿ ಗ್ರಾಮದಿಂದ ಜ್ಯೋತಿಗೆ ಚಾಲನೆ ನೀಡಿ ಅದು ವಿಧಾನಸೌಧಕ್ಕೆ ಬಂದ ನಂತರ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜಯಂತಿ ಆಚರಣೆಗೆ ಚಾಲನೆ ನೀಡಿದ್ದರು ಎಂದು ನೆನಪಿಸಿದರು.

ದೇವನಹಳ್ಳಿಯಲ್ಲಿ ನಡೆದ ಕೆಂಪೇಗೌಡರ ಜಯಂತಿ ಸಂದರ್ಭದಲ್ಲಿ ಆವತಿ ಗ್ರಾಮದಲ್ಲಿ ರಣಭೈರೇಗೌಡರ ನೆನಪು ಶಾಶ್ವತ ಉಳಿಯುವ ನಿಟ್ಟಿನಲ್ಲಿ ಒಂದು ಕೋಟಿ ಅನುದಾನ ಘೋಷಣೆ ಮಾಡಿ, ಬೈಪಾಸ್ ರಸ್ತೆಯಲ್ಲಿನ ವೃತ್ತಕ್ಕೆ ನಾಡಪ್ರಭು ಕೆಂಪೇಗೌಡರ ವೃತ್ತ ಎಂದು ನಾಮಕರಣ ಮಾಡಲಾಗಿತ್ತು ಎಂದರು.

‘ಈ ಅನುದಾನದ ಕ್ರಿಯಾಯೋಜನೆ ತಯಾರಿಸಲು ಕೆಲವೊಂದು ಗೊಂದಲ ಮತ್ತು ತಾಂತ್ರಿಕ ತೊಂದರೆ ಇದೆ. ರಣಭೈರೇಗೌಡ ಮತ್ತು ನಾಡಿನ ಜನತೆಗಾಗಿ ದೇಹತ್ಯಾಗ ಮಾಡಿದ ಕೆಂಪೇಗೌಡರ ಕುಲದೇವತೆ ಕೆಂಪಮ್ಮ ದೇವಿಯ ಜೀವನ ಚರಿತ್ರೆಯನ್ನು ಬಿಂಬಿಸುವ ವಸ್ತು ಸಂಗ್ರಹಾಲಯ, ಅಂದಿನ ಕಾಲದಲ್ಲಿ ಬಳಕೆ ಮಾಡುತ್ತಿದ್ದ ಯುದ್ಧ ಸಾಮಗ್ರಿ, ಜೀವನ ಚರಿತ್ರೆಯ ಪುಸ್ತಕಗಳು ಸ್ಥಳೀಯರಿಗೆ ಸಿಗಬೇಕು ಮತ್ತು ನೋಡುವಂತಾಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು.

ಕೆಲ ಯುದ್ಧ ಸಾಮಗ್ರಿಗಳು ಮೈಸೂರಿನ ವಸ್ತು ಸಂಗ್ರಹಾಲಯದಲ್ಲಿವೆ. ಒಂದು ಕೋಟಿ ಅನುದಾನ ಸಾಕಾಗದು; ಕನಿಷ್ಟ ₹5 ಕೋಟಿ ಬೇಕಾಗಬಹುದು. ಸಮ್ಮಿಶ್ರ ಸರ್ಕಾರದವಿದ್ದರೂ ಯೋಜನೆ ಪೂರ್ಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಮುನಿರಾಜು, ಮುಖಂಡರಾದ ಶಾಂತಕುಮಾರ್, ದೇವರಾಜ್, ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT